ಭಾರತದಲ್ಲಿ ಕರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಮತ್ತೊಂದು ಲಸಿಕೆಯ ಸೇರ್ಪಡೆಯಾಗಿದೆ. ಅಮೆರಿಕಾ ಮೂಲದ ಜಾನ್ಸನ್ ಅಂಡ್ ಜಾನ್ಸನ್ ತನ್ನ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಆಗಸ್ಟ್ 5 ರಂದು ಅರ್ಜಿ ಸಲ್ಲಿಸಿತ್ತು. ಅರ್ಜಿ ಸಲ್ಲಿಸಿದ್ದ ಎರಡೇ ದಿನದಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ನೀಡಲಾಗಿದೆ.
ಜಾನ್ಸನ್ ಅಂಡ್ ಜಾನ್ಸನ್ (Johnson and Johnson) ಕಂಪನಿಯ ಸಿಂಗಲ್ ಡೋಸ್ ಲಸಿಕೆಯಾದ ಜಾನಸಿನ್ ಲಸಿಕೆಯ (janssen vaccine) ತುರ್ತು ಬಳಕೆಗೆ ಭಾರತದ ಡಿಸಿಜಿಐ ಒಪ್ಪಿಗೆ ನೀಡಿದೆ.
ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲಸಿಕೆಯು ಅಮೆರಿಕಾದ ಎಫ್‌ಡಿಐ ಒಪ್ಪಿಗೆ ಪಡೆದಿರುವುದರಿಂದ ಭಾರತದ ಡಿಸಿಜಿಐ ಬ್ರಿಡ್ಜ್ ಪ್ರಯೋಗ ಇಲ್ಲದೆಯೇ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲಸಿಕೆಗೆ ಒಪ್ಪಿಗೆ ನೀಡಿದೆ. ಅಮೆರಿಕಾದ FDA, ಇಂಗ್ಲೆಂಡ್‌ನ MHRA, ಯೂರೋಪ್ ಮೆಡಿಕಲ್ ಏಜೆನ್ಸಿ, ಜಪಾನ್ ಡ್ರಗ್ಸ್ ರೆಗ್ಯುಲೇಟರ್ ಗಳಿಂದ ಒಪ್ಪಿಗೆ ಪಡೆದ ಲಸಿಕೆಗಳಿಗೆ ಭಾರತದಲ್ಲಿ ಬ್ರಿಡ್ಜ್ ಪ್ರಯೋಗ ನಡೆಸದೇ, ಒಪ್ಪಿಗೆ ನೀಡಲಾಗುವುದು ಎಂದು ಡಿಸಿಜಿಐ ಈ ಹಿಂದೆ ಆದೇಶ ಹೊರಡಿಸಿತ್ತು. ಹಾಗಾಗಿ, ಎರಡೇ ದಿನದಲ್ಲಿ ಜಾನ್ಸನ್ ಕಂಪೆನಿ ಲಸಿಕೆ ಭಾರತದಲ್ಲಿ ಒಪ್ಪಿಗೆ ದೊರೆತಿದೆ.
‘‘ಭಾರತದ ಕರೋನಾ ಲಸಿಕೆಯ ಬಾಸ್ಕೆಟ್ ವಿಸ್ತರಣೆಗೊಂಡಿದೆ. ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಸಿಂಗಲ್ ಡೋಸ್ ಲಸಿಕೆಗೆ ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ಈಗ ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆಗೊಂಡ ಐದು ಲಸಿಕೆಗಳಿವೆ. ಇದರಿಂದ ಕರೋನಾ ವೈರಸ್ ವಿರುದ್ಧದ ನಮ್ಮ ಸಾಮೂಹಿಕ ಹೋರಾಟಕ್ಕೆ ಮತ್ತಷ್ಟು ಬಲ ಸಿಗಲಿದೆ” ಎಂದು ಕೇಂದ್ರದ ಆರೋಗ್ಯ ಸಚಿವ ಮನಸುಖ್ ಮಾಂಡವೀಯಾ ಟ್ವೀಟ್ ಮಾಡಿದ್ದಾರೆ.
ಆಮೆರಿಕಾದ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯು ಭಾರತದ ಹೈದರಾಬಾದ್‌ನ ಬಯೋಲಾಜಿಕಲ್ ಇ ಕಂಪನಿಯೊಂದಿಗೆ ತನ್ನ ಜಾನಸಿನ್ ಸಿಂಗಲ್ ಡೋಸ್ ಲಸಿಕೆಯ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿದ್ದು, ಬಯೋಲಾಜಿಕಲ್ ಇ ಕಂಪನಿಯು ಭಾರತದಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಜಾನಸಿನ್ ಲಸಿಕೆಯನ್ನು ಉತ್ಪಾದಿಸಲಿದೆ.
ಜಾನಸಿನ್ ಸಿಂಗಲ್ ಡೋಸ್ ಕರೊನಾ ಲಸಿಕೆಗೆ ಈ ವರ್ಷದ ಫೆಬ್ರವರಿ ತಿಂಗಳಲ್ಲೇ ಆಮೆರಿಕಾದ ಎಫ್.ಡಿ.ಎ ತುರ್ತು ಬಳಕೆಗೆ ಒಪ್ಪಿಗೆ ನೀಡಿತ್ತು. ಯೂರೋಪಿಯನ್ ಮೆಡಿಕಲ್ ಏಜೆನ್ಸಿಯು ಈ ವರ್ಷದ ಮಾರ್ಚ್ ತಿಂಗಳಲ್ಲಿ ಜಾನಸಿನ್ ಸಿಂಗಲ್ ಡೋಸ್ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ನೀಡಿತ್ತು.
ಅಲ್ಲದೆ, ಅಮೆರಿಕಾದ ಸಿಡಿಸಿ ಕೂಡ ಜಾನಸಿನ್ ಲಸಿಕೆಯು ಕರೊನಾದಿಂದ ಉಂಟಾಗುವ ಸಾವು, ಆಸ್ಪತ್ರೆಗೆ ದಾಖಲಾಗುವುದರ ವಿರುದ್ಧ ಹೆಚ್ಚಿನ ಪರಿಣಾಮಕಾರಿ ಎಂದು ಹೇಳಿದೆ. ಜಾನಸಿನ್ ಲಸಿಕೆಯು ಲಕ್ಷಣ ರಹಿತ ಕರೊನಾ ರೋಗಿಗಳಿಗೂ ರಕ್ಷಣೆ ನೀಡುತ್ತೆ ಎಂದು ಸಿಡಿಸಿ ಹೇಳಿದೆ.
ಭಾರತದಲ್ಲಿ ಈಗಾಗಲೇ ಕೊವಿಶೀಲ್ಡ್, ಕೊವ್ಯಾಕ್ಸಿನ್, ರಷ್ಯಾದ ಸ್ಪುಟ್ನಿಕ್, ಆಮೆರಿಕಾದ ಮಾಡೆರ್ನಾ ಕಂಪನಿಯ ಲಸಿಕೆಗಳಿಗೆ ತುರ್ತು ಬಳಕೆಗೆ ಒಪ್ಪಿಗೆ ನೀಡಲಾಗಿದೆ. ಈಗ ಐದನೇ ಲಸಿಕೆಯಾಗಿ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಜಾನಸಿನ್ ಲಸಿಕೆಗೆ ತುರ್ತು ಬಳಕೆಗೆ ಒಪ್ಪಿಗೆ ಸಿಕ್ಕಿದೆ.