
ಕೇಂದ್ರ ಬಜೆಟ್‌ನಲ್ಲಿ ಬಿಂಬಿಸಿರುವಂತೆ ಆರ್ಥಿಕತೆಯಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆಯೇ ?
ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳ್ವಿಕೆಯ ಮಾದರಿಗಳನ್ನಾಗಲೀ, ಆಡಳಿತ ನಿರ್ವಹಿಸುವ ಸರ್ಕಾರಗಳನ್ನಾಗಲೀ ಪರಾಮರ್ಶಿಸುವ ಬೌದ್ಧಿಕ ಪ್ರಕ್ರಿಯೆಗಳು ಅರ್ಥಶಾಸ್ತ್ರಜ್ಞರು ಮತ್ತು ಆರ್ಥಿಕ ವಿದ್ವಾಂಸರ ಮೂಲಕ ನಡೆಯುತ್ತವೆ. ಆದರೆ ಆರ್ಥಿಕ ನೀತಿಗಳ ಅನುಸರಣೆಯಲ್ಲಿ ಕಂಡುಬರುವ ಲೋಪಗಳು ಮತ್ತು ಅದರಿಂದ ಉಂಟಾಗುವ ತಳಮಟ್ಟದ ವ್ಯತ್ಯಯಗಳ ಬಗ್ಗೆ ಸರ್ಕಾರಗಳನ್ನು ಎಚ್ಚರಿಸುವ ಕೆಲಸವನ್ನು ವಿದ್ವತ್ ವಲಯದ ಹೊರಗಿನ ಸಮಾಜವೂ ಮಾಡುತ್ತದೆ. ಅದು ಕಾಲಕಾಲಕ್ಕೆ ನಡೆಯುವ ಚುನಾವಣೆಗಳ ಮುಖಾಂತರ. 2024ರ ಲೋಕಸಭಾ ಚುನಾವಣೆಗಳ ಫಲಿತಾಂಶ ಇದನ್ನು ಮತ್ತೊಮ್ಮೆ ನಿರೂಪಿಸಿವೆ. ತಳಮಟ್ಟದ ಸಮಾಜದಲ್ಲಿ ಜನಸಾಮಾನ್ಯರ ಜೀವನ-ಜೀವನೋಪಾಯ ಮಾರ್ಗಗಳನ್ನು ಸುಗಮಗೊಳಿಸದೆ ಹೋದರೆ “ ಕನಿಷ್ಠ ಮಟ್ಟದ ಆಡಳಿತ ಸರ್ಕಾರ ಗರಿಷ್ಠ ಮಟ್ಟದ ಆಳ್ವಿಕೆ ”(Minimum Government & Maximum Governance) ಎಂಬ ಘೋಷಣೆಗಳು ಕೇವಲ ಅಲಂಕಾರಿಕವಾಗಿಬಿಡುತ್ತದೆ.
ಹತ್ತು ವರ್ಷಗಳ ಬಲಿಷ್ಠ ಸರ್ಕಾರದ ಆಡಳಿತ ಪೂರೈಸಿದ ಬಿಜೆಪಿ ಈ ವಾಸ್ತವವನ್ನು ಅರ್ಥಮಾಡಿಕೊಳ್ಳುವಂತೆ ಮಾಡಿರುವುದು ಭಾರತೀಯ ಮತದಾರರ ಹಿರಿಮೆ. ತಳಮಟ್ಟದ ಸಮಾಜಕ್ಕೆ ತಲುಪಬೇಕಾದ ಸಾಂವಿಧಾನಿಕ ಸವಲತ್ತುಗಳು, ಆಡಳಿತ ಆರ್ಥಿಕ ನೀತಿಗಳ ಲಾಭ ಮತ್ತು ಅವಕಾಶಗಳು ಹಾಗೂ ಆರ್ಥಿಕ ಪ್ರಗತಿಯ ಪ್ರತಿಫಲಗಳನ್ನು ಆ ಸಮಾಜಕ್ಕೆ ತಲುಪಿಸದೆ ಹೋದರೆ ಜನತೆ ಮತಪೆಟ್ಟಿಗೆಯ ಮೂಲಕವೇ ತಮ್ಮ ಆಕ್ರೋಶ-ಹತಾಶೆಗಳನ್ನು ವ್ಯಕ್ತಪಡಿಸುತ್ತಾರೆ. ಇದು ಕಳೆದ ಚುನಾವಣೆಗಳ ಸ್ಪಷ್ಟ ಸಂದೇಶ. ಮುಂದಿನ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರವು ಮಾರ್ಗ ಪರಿಷ್ಕರಣೆ (Course Correction) ಮಾಡಿಕೊಳ್ಳುವ ಪ್ರಯತ್ನಗಳನ್ನು ಮುಂದುವರೆಸುವುದು ಅನಿವಾರ್ಯವಾಗಿದೆ. ಇದರ ಸೂಚನೆಯನ್ನು ವಿತ್ತ ಸಚಿವರು 2024-25ರ ವಾರ್ಷಿಕ ಬಜೆಟ್‌ನಲ್ಲಿ ನೀಡಿದ್ದಾರೆ.
ಬಜೆಟ್ ಆಶ್ವಾಸನೆಗಳ ವಾಸ್ತವತೆಗಳು
ಹಾಗಾಗಿಯೇ ಈ ವರ್ಷದ ಬಜೆಟ್‌ನಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಸರ್ಕಾರದ ಪ್ರಥಮ ಆದ್ಯತೆಯಾಗಿ ಕಾಣುತ್ತದೆ. ವಿತ್ತ ಸಚಿವರ ಬಜೆಟ್ ಭಾಷಣದಲ್ಲಿ “ಉದ್ಯೋಗ-ಉದ್ಯೋಗಾವಕಾಶ” ಪದಗಳನ್ನು 23 ಸಲ ಉಚ್ಚರಿಸಿರುವುದು ಇದರ ಸಂಕೇತವಾಗಿದೆ. ಪ್ರಧಾನಿ ಮೋದಿ ತಮ್ಮದೇ ಶೈಲಿಯಲ್ಲಿ ಉದ್ಯೋಗ ಕೇಂದ್ರಿತ ಯೋಜನೆಗಳ ಪ್ಯಾಕೇಜ್‌ಗಳನ್ನೇ ಬಜೆಟ್ ಮೂಲಕ ಜಾರಿಗೊಳಿಸಲು ಮುಂದಾಗಿದ್ದಾರೆ. ಆದರೆ ಎನ್‌ಡಿಎ ಸರ್ಕಾರದ ಸಂಭಾವ್ಯ ಉಪಕ್ರಮಗಳ ಹಿನ್ನೆಲೆಯಲ್ಲೇ ಬಜೆಟ್ ಪೂರ್ವದಲ್ಲಿ ಪ್ರಕಟಿಸಲಾದ ಆರ್ಥಿಕ ಸಮೀಕ್ಷೆಯ ದತ್ತಾಂಶಗಳತ್ತಲೂ ಗಮನಹರಿಸಬೇಕಿದೆ. ಈ ಸಮೀಕ್ಷೆಯ ಅನುಸಾರ 2022-23ರಲ್ಲಿ ಭಾರತದಲ್ಲಿ ದುಡಿಮೆಗಾರರ ಸಂಖ್ಯೆ 56.5 ಕೋಟಿಯಷ್ಟಿತ್ತು. ಇವರ ಪೈಕಿ ಶೇಕಡಾ 45ರಷ್ಟು ಕೃಷಿ ಕ್ಷೇತ್ರದಲ್ಲಿ, ಶೇಕಡಾ 11.4ರಷ್ಟು ಉತ್ಪಾದನಾ ವಲಯದಲ್ಲಿ, ಶೇಕಡಾ 28.9ರಷ್ಟು ಸೇವಾ ಕ್ಷೇತ್ರದಲ್ಲಿ ಮತ್ತು ಶೇಕಡಾ 13ರಷ್ಟು ನಿರ್ಮಾಣ ಕ್ಷೇತ್ರದಲ್ಲಿ ಉದ್ಯೋಗ ಪಡೆದವರಾಗಿದ್ದರು. ಅಧಿಕೃತ ಅಂಕಿ ಅಂಶಗಳ ಅನುಸಾರ ನಿರುದ್ಯೋಗ ಪ್ರಮಾಣ ಈ ಅವಧಿಯಲ್ಲಿ ಶೇಕಡಾ 3.2ರಷ್ಟಿತ್ತು.
ಆದರೆ ಹಲವು ಅರ್ಥಶಾಸ್ತ್ರಜ್ಞರ ಅಭಿಪ್ರಾಯದಲ್ಲಿ ಈ ಅಂಕಿಅಂಶಗಳು ನೆಲದ ವಾಸ್ತವಗಳನ್ನು(Ground realities) ಬಿಂಬಿಸುವುದಿಲ್ಲ. ಏಕೆಂದರೆ ಭಾರತದ ಅರ್ಥವ್ಯವಸ್ಥೆಯಲ್ಲಿ ಪೂರ್ಣ ಪ್ರಮಾಣದ ಉದ್ಯೋಗ ಹೊಂದಿರದ ʼಅಸಂಪೂರ್ಣ ಉದ್ಯೋಗಿಗಳ ʼ (Underemployed) ಸಂಖ್ಯೆ ತುಸು ಹೆಚ್ಚಾಗಿಯೇ ಇದ್ದು, ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಬೇಸಾಯ ಭೂಮಿಯಲ್ಲಿ, ಅಸಂಘಟಿತ ಚಿಲ್ಲರೆವ್ಯಾಪಾರ ವಲಯದಲ್ಲಿ (Retail sector) ದುಡಿಯುತ್ತಿದ್ದು, ಇನ್ನೂ ಹೆಚ್ಚಿನ ಜನರು ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಅರ್ಥಶಾಸ್ತ್ರದ ಅನುಸಾರ ಯಾವುದೇ ಒಬ್ಬ ವ್ಯಕ್ತಿ ಹಿಂದಿನ ವರ್ಷದಲ್ಲಿ ಕನಿಷ್ಠ 30 ದಿನಗಳ ಕಾಲ ಸತತವಾಗಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿದ್ದರೆ ಅಂಥವರನ್ನು ಉದ್ಯೋಗ ಪಡೆದಿರುವವರು ಎಂದು ಗುರುತಿಸಲಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಭಾರತದ ಆರ್ಥಿಕತೆಯಲ್ಲಿ ಅಸಂಪೂರ್ಣ ಉದ್ಯೋಗಿಗಳ ಪ್ರಮಾಣವೇ ಹೆಚ್ಚಾಗಿದೆ.
ಲಭ್ಯ ಮಾಹಿತಿಗಳ ಅನುಸಾರ ಒಟ್ಟು ಉದ್ಯೋಗಿಗಳ ಪೈಕಿ ಐವರಲ್ಲಿ ಒಬ್ಬರು, ಅಂದರೆ ಶೇಕಡಾ 18.3ರಷ್ಟು ಮಹಿಳೆಯರೇ ಇದ್ದಾರೆ. ಈ ಉದ್ಯೋಗಿಗಳು ಶ್ರಮಕ್ಕೆ ಯಾವುದೇ ಕೂಲಿ ಪಡೆಯುವುದಿಲ್ಲ ಏಕೆಂದರೆ, ಇವರು ಕೌಟುಂಬಿಕ ಗೃಹೋದ್ಯಮಗಳಲ್ಲಿ ಕೂಲಿರಹಿತ ದುಡಿಮೆ ಮಾಡುವವರಾಗಿರುತ್ತಾರೆ. 2024ರ ಮಾರ್ಚ್ ಮಾಸಾಂತ್ಯಕ್ಕೆ ನಗರ ನಿರುದ್ಯೋಗದ ಪ್ರಮಾಣ ಶೇಕಡಾ 6.7ರಷ್ಟಿತ್ತು. ಯುವಸಮೂಹದ ನಿರುದ್ಯೋಗ ಪ್ರಮಾಣ 2022-23ರಲ್ಲಿ ಶೇಕಡಾ 10ರಷ್ಟಿತ್ತು. ನಿಯತಕಾಲಿಕ ವೇತನ ಪಡೆಯುವ ದುಡಿಮೆಗಾರರ ಪ್ರಮಾಣವು 2017-18ಋಲ್ಲಿ 22.8ರಷ್ಟಿದ್ದುದು 2023-24ರಲ್ಲಿ ಶೇಕಡಾ 20.9ಕ್ಕೆ ಕುಸಿದಿದೆ. ಕಾರ್ಮಿಕಪಡೆಯನ್ನು ಔಪಚಾರಿಕಗೊಳಿಸುವ ಆಡಳಿತ ನೀತಿಗಳ ಹೊರತಾಗಿಯೂ ಐದು ವರ್ಷಗಳಲ್ಲಿ ಈ ಕುಸಿತ ದಾಖಲಾಗಿದೆ. ಅಷ್ಟೇ ಅಲ್ಲದೆ ಅನೇಕ ರೀತಿಯ ಸಾಮಾಜಿಕ ಸುರಕ್ಷತಾ ಅನುಕೂಲಗಳು ಮತ್ತು ಸಂಪರ್ಕಗಳು ಔಪಚಾರಿಕ ಕಾರ್ಮಿಕ ಎಂದೇ ಗುರುತಿಸಲ್ಪಡುವ ವೇತನ ಪಡೆಯುವವರಿಗೆ ದೊರೆಯುವುದಿಲ್ಲ. ಸರ್ಕಾರವು ಔಪಚಾರಿಕಿಕರಣಗೊಂಡ (Formalisation) ಕಾರ್ಮಿಕರ ಸಂಖ್ಯೆಯನ್ನು ಬಿಂಬಿಸಲು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (EPFO) ಒದಗಿಸುವ ದತ್ತಾಂಶಗಳನ್ನು ಆಧರಿಸುತ್ತದೆ. ಈ ಸಂಸ್ಥೆಯಲ್ಲಿನ ಚಾಲ್ತಿಯಲ್ಲಿರುವ/ನಿಷ್ಕ್ರಿಯವಾದ ಖಾತೆಗಳ ಸಂಖ್ಯೆ 30 ಕೋಟಿ ಇದ್ದರೂ ಸಕ್ರಿಯ ಚಂದಾದಾರರ ಸಂಖ್ಯೆ ಕೇವಲ 7.3ಕೋಟಿಗಳಷ್ಟಿದೆ.
ಬಜೆಟ್ ಪ್ರಸ್ತಾವಿತ ಯೋಜನೆಗಳು
2024-25ರ ಬಜೆಟ್‌ನಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಸಲುವಾಗಿಯೇ ಮೂರು ಪ್ರೋತ್ಸಾಹಕ ಯೋಜನೆಗಳನ್ನು ಘೋಷಿಸಲಾಗಿದೆ. ಮೊದಲನೆ ಯೋಜನೆಯು ಮೊದಲ ಬಾರಿಗೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದನ್ನು ಬೆಂಬಲಿಸುವ ಉದ್ದೇಶವನ್ನು ಹೊಂದಿದ್ದು, ಉದ್ಯೋಗಿಗೆ ಪಾವತಿಸುವ 15,000 ರೂ.ಗಳ ವೇತನದವರೆಗೆ ಸಬ್ಸಿಡಿಯನ್ನು ನೀಡುತ್ತದೆ ಮತ್ತು ಒಂದು ಕೋಟಿ ಜನರನ್ನು ಒಳಗೊಳ್ಳುವ ನಿರೀಕ್ಷೆಯಿದೆ. ಎರಡನೆಯದು ನಿರ್ದಿಷ್ಟವಾಗಿ ಉತ್ಪಾದನಾ ವಲಯದಲ್ಲಿ ಮೊದಲ ಬಾರಿಗೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದನ್ನು ಉತ್ತೇಜಿಸುವ ಸಲುವಾಗಿ ಉದ್ಯೋಗಿಗಳು ಮತ್ತು ಉದ್ಯೋಗದಾತರಿಗೆ ನಾಲ್ಕು ವರ್ಷಗಳವರೆಗೆ ವೇತನ ಸಬ್ಸಿಡಿಗಳನ್ನು ಪಾವತಿಸಲಾಗುತ್ತದೆ. 25,000 ರೂ.ಗಳ ಮಾಸಿಕ ವೇತನದ ಗರಿಷ್ಠ 24% ಪ್ರೋತ್ಸಾಹಕ ಸಬ್ಸಿಡಿ ಒದಗಿಸಲಾಗುತ್ತದೆ. ಮೂರನೇ ಯೋಜನೆಯಡಿ ಉದ್ಯೋಗದಾತರನ್ನು ಉತ್ತೇಜಿಸುವ ಸಲುವಾಗಿ ಅವರ ಮಾಸಿಕ EPFO ಕೊಡುಗೆಯ 3,000 ರೂ.ಗಳವರೆಗೆ ಮರುಪಾವತಿ ಮಾಡಲಾಗುತ್ತದೆ. ತನ್ಮೂಲಕ ಹೊಸ ಕಾರ್ಮಿಕರನ್ನು ನೇಮಿಸಿಕೊಳ್ಳುವ ಉದ್ಯೋಗದಾತರನ್ನು ಬೆಂಬಲಿಸುತ್ತದೆ.
ವಾಸ್ತವವಾಗಿ ಈ ಮೂರೂ ಯೋಜನೆಗಳು EPFO ದಲ್ಲಿ ನೋಂದಾಯಿಸಲ್ಪಟ್ಟ ಉದ್ಯೋಗಿಗಳ ಮೇಲೆ ಅವಲಂಬಿತವಾಗಿವೆ. ನಾಲ್ಕನೇ ಯೋಜನೆಯು ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವ ಮತ್ತು ಕೌಶಲ್ಯ ಪ್ರಯತ್ನಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. 20 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಇದನ್ನು ಪ್ರಸ್ತಾಪಿಸಲಾಗಿದ್ದು, ಅದರ ಮುಖ್ಯಾಂಶಗಳನ್ನು ಆಧರಿಸಿ ಉದ್ಯೋಗ ಕೌಶಲ್ಯವನ್ನು ಹೆಚ್ಚಿಸುವ ಗುರಿಯೊಂದಿಗೆ ಈ ಯೋಜನೆಯನ್ನು ಘೋಷಿಸಲಾಗಿದೆ. ಒಂದು ಕೋಟಿ ಯುವಕರಿಗೆ ಭಾರತದ ಉನ್ನತ ಕಂಪನಿಗಳಲ್ಲಿ ಇಂಟರ್ನ್‌ಷಿಪ್ ನೀಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿರುವ ಈ ಯೋಜನೆಯಡಿ ಒಂದು ವರ್ಷದ ಅವಧಿಗೆ ಮಾಸಿಕ 5,000 ರೂ.ಗಳ ಭತ್ಯೆಯೊಂದಿಗೆ ಕಂಪನಿಗಳು ತರಬೇತಿ ವೆಚ್ಚ ಮತ್ತು ಶೇಕಡಾ 10ರಷ್ಟು ಭತ್ಯೆಯನ್ನು ಭರಿಸುತ್ತವೆ.
ಅರ್ಥಶಾಸ್ತ್ರಜ್ಞರು ಹಾಗೂ ಸಣ್ಣ ಉದ್ದಿಮೆದಾರರ ಅಭಿಪ್ರಾಯದಲ್ಲಿ ಈ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಅನುಸರಿಸಬೇಕಾದ ಪ್ರಕ್ರಿಯೆಗಳೇ ಪರಿಣಾಮಕಾರಿ ಅನುಷ್ಠಾನಕ್ಕೆ ಅಡೆತಡೆಗಳನ್ನು ಒಡ್ಡುತ್ತವೆ. ಉದಾಹರಣೆಗೆ ಮೊದಲ ಬಾರಿಯ ಉದ್ಯೋಗಿಗಳಿಗೆ ನೀಡಲಾಗುವ 15000 ರೂಗಳ ಉತ್ತೇಜಕ ಸಬ್ಸಿಡಿಯನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಎರಡನೆ ಕಂತು ಪಡೆಯುವ ಮುನ್ನ ಉದ್ಯೋಗಿಯು ಕಡ್ಡಾಯವಾಗಿ ಆನ್‌ಲೈನ್ ಹಣಕಾಸು ಸಾಕ್ಷರತೆ ಕೋರ್ಸ್ ಪೂರ್ಣಗೊಳಿಸಬೇಕಾಗುತ್ತದೆ. ಇದು ಬಹುಪಾಲು ಅಸಂಭವ ಎಂದೇ ತಜ್ಞರು ಹೇಳುತ್ತಾರೆ. ಹಣಕಾಸು ಸಾಕ್ಷರತೆಯ ಕಲಿಗೆ ಅಗತ್ಯವಿಲ್ಲದ ವಲಯಗಳಲ್ಲಿರುವ ಉದ್ಯೋಗಿಗಳಿಗೆ ಇದು ಅನಪೇಕ್ಷಿತವಾಗಿದ್ದು,. ಉತ್ತೇಜಕ ಮೊತ್ತವನ್ನು ಪಡೆಯಲು ಅನಗತ್ಯ ವಲಯಗಳಲ್ಲಿ ಇದನ್ನೇಕೆ ಕಡ್ಡಾಯಗೊಳಿಸಬೇಕು ಎಂದು ಜೆಎನ್‌ಯು ಪ್ರಾಧ್ಯಾಪಕ ಹಿಮಾಂಶು ಪ್ರಶ್ನಿಸುತ್ತಾರೆ.
ಅಲ್ಲದೆ ಮೊದಲ ಬಾರಿ ಉದ್ಯೋಗ ಪಡೆಯುವ ಕಾರ್ಮಿಕರು ನೇಮಕಗೊಂಡ ಒಂದು ವರ್ಷದೊಳಗಾಗಿ ನೌಕರಿ ತೊರೆದರೆ ಉದ್ಯೋಗದಾತರು ಸಬ್ಸಿಡಿ ಮೊತ್ತವನ್ನು ಹಿಂತಿರುಗಿಸಬೇಕಾಗುತ್ತದೆ. ಒಂದು ವೇಳೆ ಉದ್ಯೋಗಿಯು ಹತ್ತು ತಿಂಗಳ ನಂತರ ಬೇರೆ ಉದ್ಯೋಗಕ್ಕೆ ಹೋದರೆ ಆತನಿಗೆ/ಆಕೆಗೆ ಸಬ್ಸಿಡಿ ಆವೇಳೆಗಾಗಲೇ ದೊರೆತಿರುವುದರಿಂದ, ಆ ಮೊತ್ತವನ್ನು ಉದ್ಯೋಗದಾತರು ಭರಿಸಬೇಕಾಗುತ್ತದೆ. ಈ ಹೊರೆಯನ್ನು ವಹಿಸಿಕೊಳ್ಳಲು ಸಣ್ಣ ಪ್ರಮಾಣದ ಉದ್ಯೋಗದಾತರು ಮುಂದೆ ಬರುವುದಿಲ್ಲ ಎಂದೇ ತಜ್ಞರು ಹೇಳುತ್ತಾರೆ. ಉತ್ಪಾದಕ ವಲಯದಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆಯಡಿ ಉದ್ಯಮಗಳು ಹಾಲಿ ಉದ್ಯೋಗಿಗಳ ಸಂಖ್ಯೆಯಲ್ಲಿ ಶೇಕಡಾ 25ರಷ್ಟು ಅಥವಾ ಕನಿಷ್ಠ 50 ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಅಲ್ಪ ಲಾಭ ಗಳಿಸುವ ಯಾವುದೇ ಉದ್ದಿಮೆಯಲ್ಲಿ ಒಂದೇ ಬಾರಿಗೆ ಇಷ್ಟು ದೊಡ್ಡ ಸಂಖ್ಯೆ ನೇಮಕಾತಿ ಮಾಡುವುದು ದುಸ್ತರವಾಗುತ್ತದೆ ಎಂದೇ ಆರ್ಥಿಕ ತಜ್ಞರು ಅಭಿಪ್ರಾಯಪಡುತ್ತಾರೆ.
ಹೊಸ ಯೋಜನೆಗಳ ಪ್ರಯೋಜನಗಳೇನು ?
ಈ ಮೂರೂ ಯೋಜನೆಗಳ ಹಿಂದಿನ ಉದ್ದೇಶ ಹೊಸ ಉದ್ಯೋಗಿಗಳ ನೇಮಕಾತಿ ವೆಚ್ಚವನ್ನು ಕಡಿಮೆ ಮಾಡಿ, ನೇಮಕಾತಿಯನ್ನು ಉತ್ತೇಜಿಸುವುದೇ ಆಗಿದೆ. ಆದರೆ ಅರ್ಥಶಾಸ್ತ್ರಜ್ಞರ ಅಭಿಪ್ರಾಯದಲ್ಲಿ ಉದ್ಯೋಗದಾತರು ಹೊಸ ಉದ್ಯೋಗಿಗಳನ್ನು ನೇಮಿಸಲು ಇದೇನೂ ಪ್ರಧಾನವಾದ ಅಡಚಣೆಯಾಗುವುದಿಲ್ಲ. ಕೆಲವು ಅರ್ಥಶಾಸ್ತ್ರಜ್ಞರು ಹೇಳುವಂತೆ ಭಾರತವು ಈಗಾಗಲೇ ಒಂದು ಕಡಿಮೆ ವೇತನ ದರ ಇರುವ ಆರ್ಥಿಕತೆಯಾಗಿ ರೂಪುಗೊಂಡಿದ್ದು, ಬಹುಪಾಲು ಕಾರ್ಮಿಕರಿಗೆ ಕಳೆದ ಐದು ವರ್ಷಗಳಲ್ಲಿ ನೈಜ ಮಾಸಿಕ ಆದಾಯ ಕುಸಿಯುತ್ತಲೇ ಇದೆ. ಹಾಗಾಗಿ ವೇತನದ ವೆಚ್ಚಗಳು ಅನಗತ್ಯವಾದ ನಿರ್ಬಂಧವಾಗಿಯೇ ಕಾಣುತ್ತವೆ. ಕೌಶಲ್ಯದ ಅವಶ್ಯಕತೆ ಇರುವುದಾದರೂ, ನೇಮಕಾತಿಯನ್ನು ಕಡಿಮೆ ಮಾಡಲು ಕೌಶಲ ಒಂದು ಅಡ್ಡಿಯಾಗುವುದಿಲ್ಲ ಎಂದೇ ತಜ್ಞರು ಅಭಿಪ್ರಾಯಪಡುತ್ತಾರೆ.
“ ಭಾರತದ ಆರ್ಥಿಕತೆಯು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವುದರಲ್ಲಿ ವಿಫಲವಾಗಿರುವುದಕ್ಕೆ ಇನ್ನೂ ದೊಡ್ಡ ಸಂರಚನಾತ್ಮಕ ಕಾರಣಗಳಿವೆ. ಅವುಗಳಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆಯ ಕೊರತೆ ಇರುವುದು, ಇದರಿಂದ ಉಂಟಾಗುವ ಬಳಕೆಯ ಕುಸಿತ ಮತ್ತು ಖಾಸಗಿ ಬಂಡವಾಳ ಹೂಡಿಕೆಯ ಕೊರತೆ ಮುಖ್ಯವಾಗಿ ಕಾಣುತ್ತವೆ. ಈ ಮೂರೂ ಅಂಶಗಳಲ್ಲಿ ಸುಧಾರಣೆಯಾದರೆ , ಹೆಚ್ಚಿನ ವೇತನಗಳು ಗಣನೆಗೆ ಬರುವುದಿಲ್ಲ ” ಎಂದು ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಪ್ರೊಫೆಸರ್ ಅಮಿತ್ ಬೋಸ್ಲೆ ಅವರು ಹೇಳುತ್ತಾರೆ. ಇಂತಹ ಅಧಿಕ ವೆಚ್ಚಗಳು ಬಾಧಿಸುವಂತಹ ಪ್ರಮುಖ ಉದ್ಯೋಗದಾತರ ಗುಂಪುಗಳಿಗೆ ಈ ಯೋಜನೆಯನ್ನು ತಲುಪಿಸಬೇಕಿದೆ. ಸಣ್ಣ ಉದ್ದಿಮೆಗಳು, ಕಡಿಮೆ ಲಾಭಾಂಶವಿರುವ ಉದ್ದಿಮೆಗಳು ಇದಕ್ಕೆ ಸೂಕ್ತವಾಗಿ ಕಾಣುತ್ತವೆ. ಸರ್ಕಾರದ ಉದ್ದೇಶವೂ ಇದೇ ಇರಬಹುದು ಎಂದು ಕೆಲವು ತಜ್ಞರು ಅಭಿಪ್ರಾಯಪಡುತ್ತಾರೆ.
ಕಾರ್ಮಿಕ ಸಮೂಹದ ಔಪಚಾರಿಕೀಕರಣಕ್ಕೆ ಸಂಬಂಧಿಸಿದಂತೆ, ದುಡಿಮೆಯ ವಲಯಕ್ಕೆ ಹೊಸಬರ ಪ್ರವೇಶದೊಂದಿಗೇ, ಅಸಂಖ್ಯಾತ ದುಡಿಮೆಗಾರರು ಕೃಷಿ ಕ್ಷೇತ್ರ, ಸಣ್ಣ ವ್ಯಾಪಾರ, ಅಸಂಘಟಿತ ರಿಟೇಲ್ ವಲಯ ಮತ್ತು ಗೃಹ ಸೇವೆಯಿಂದ ನಿರ್ಗಮಿಸುತ್ತಿರುವುದನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸುತ್ತಾರೆ. ಈ ನಿಟ್ಟಿನಲ್ಲಿ ಸರಬರಾಜಿಗೆ ಪೂರಕವಾಗಿ ಔಪಚಾರಿಕ ವಲಯದ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಅವಶ್ಯಕತೆಯನ್ನು ತಜ್ಞರು ಒತ್ತಿ ಹೇಳುತ್ತಾರೆ. ಆದರೆ ಇದು ನಡೆಯುತ್ತಿಲ್ಲ ಎನ್ನುವುದು, ಕಳೆದ ಐದು ವರ್ಷಗಳಲ್ಲಿ ವೇತನ ಪಡೆಯುವ ಕಾರ್ಮಿಕರ ಸಂಖ್ಯೆಯಲ್ಲಿ ಕುಸಿತವಾಗುತ್ತಿರುವುದರಿಂದ ಸಾಬೀತಾಗುತ್ತದೆ. ಉದ್ಯೋಗವಕಾಶಗಳನ್ನು ಯಾವ ಸ್ತರದಲ್ಲಿ, ಯಾವ ಹಂತದಲ್ಲಿ, ಯಾವ ವಲಯದಲ್ಲಿ ಹೆಚ್ಚಿಸಬೇಕು ಎಂಬ ಪ್ರಶ್ನೆ ಸಹಜವಾಗಿ ಎದುರಾಗುತ್ತದೆ. ಅರ್ಥಶಾಸ್ತ್ರಜ್ಞರ ಅಭಿಪ್ರಾಯದಲ್ಲಿ ಬಂಡವಾಳ ತೀವ್ರತೆ(Capital intensive) ಇರುವ ದೊಡ್ಡ 500 ಉದ್ದಿಮೆಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಬೇಕಿಲ್ಲ. ಈ ವಲಯದ ಉದ್ದಿಮೆಗಳಲ್ಲಿ ಯಾಂತ್ರೀಕರಣ ಮತ್ತು ತಂತ್ರಜ್ಞಾನ ಬಳಕೆಯ ಪರಿಣಾಮ ದುಡಿಮೆಗಾರರ ಅವಶ್ಯಕತೆ ಕಡಿಮೆ ಇರುತ್ತದೆ ಬದಲಾಗಿ ಸಣ್ಣ, ಮಧ್ಯಮ ಪ್ರಮಾಣದ ಎಂಎಸ್‌ಎಂಇ (MSME) ವಲಯದಲ್ಲಿ ಉದ್ಯೋಗಗಳು ಸೃಷ್ಟಿಯಾಗಬೇಕಿದೆ. ಸಣ್ಣಪುಟ್ಟಣ ನಗರಗಳಲ್ಲಿ ಕೇಂದ್ರೀಕೃತವಾಗಿರುವ ಈ ಉದ್ದಿಮೆಗಳು ಶ್ರಮ ತೀವ್ರತೆಯ (Labour intensive) ಕೇಂದ್ರಗಳಾಗಿರುತ್ತವೆ. ಹಾಗಾಗಿ ಇಲ್ಲಿ ಹೆಚ್ಚಿನ ಕಾರ್ಮಿಕರ ಅವಶ್ಯಕತೆ ಇರುತ್ತದೆ.
ಈ ವಲಯದಲ್ಲಿ ವೇತನವನ್ನು ಹೆಚ್ಚಿಸುವ ಮೂಲಕ MSME ವಲಯಕ್ಕೆ ಹಣದ ಹರಿವು ಹೆಚ್ಚಿಸಬೇಕಾಗುತ್ತದೆ. ಇದು ಬಹುಆಯಾಮಗಳ ಪರಿಣಾಮಗಳನ್ನು ಬೀರುತ್ತದೆ. ಪ್ರೊಫೆಸರ್ ಹಿಮಾಂಶು ಅವರು ಹೇಳುವಂತೆ ಕೆಳಸ್ತರದಿಂದ ಮೇಲ್ ಚಲನೆಯೆಡೆಗೆ ಸಾಗುವ ಒಂದು ಧೋರಣೆಯನ್ನು ಇಲ್ಲಿ ಅನುಸರಿಸಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಬಳಕೆಯ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಬೇಡಿಕೆಯ ಹೆಚ್ಚಿಸುವುದು ತುರ್ತು ಅವಶ್ಯಕತೆ ಆಗಿದ್ದಲ್ಲಿ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MNREGA) ಅಡಿಯಲ್ಲಿ ನೀಡುವ ವೇತನವನ್ನು ಹೆಚ್ಚಿಸಬೇಕಾಗುತ್ತದೆ. ಇದು ಆರ್ಥಿಕತೆಯಲ್ಲಿ ಬಳಕೆ ಪ್ರಮಾಣವನ್ನು ಹೆಚ್ಚಿಸುವ ನೇರ ಮಾರ್ಗವಾಗಿರುತ್ತದೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ದುರದೃಷ್ಟವಶಾತ್ ಕೇಂದ್ರ ಸರ್ಕಾರವು ನರೇಗಾ ಯೋಜನೆಗೆ ನೀಡುವ ಅನುದಾನವನ್ನು ಕಡಿಮೆ ಮಾಡುತ್ತಲೇ ಇದೆ.
ಈ ವಿಶ್ಲೇಷಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, 2024-25ರ ಬಜೆಟ್ ಆರ್ಥಿಕತೆಯಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಎನ್ನುವ ಭರವಸೆಯು ಎಷ್ಟರ ಮಟ್ಟಿಗೆ ವಾಸ್ತವವಾಗಿ ಈಡೇರುತ್ತದೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಮುಂದಿನ ದಿನಗಳಲ್ಲಿ ಆರ್ಥಿಕತೆಯಲ್ಲುಂಟಾಗಬಹುದಾದ ಬದಲಾವಣೆಗಳಲ್ಲಿ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಾಧ್ಯವೇ ಕಾದುನೋಡಬೇಕಿದೆ.
( ಈ ಲೇಖನದ ಅಂಕಿಅಂಶಗಳು-ಉಲ್ಲೇಖಗಳು ಮತ್ತು ಮಾಹಿತಿಗೆ ಮೂಲ ಆಧಾರ ದ ಹಿಂದೂ ಪತ್ರಿಕೆಯ ಲೇಖನ – Are enough formal jobs being created – Priscila Jebraj 28 July 2024)
-೦-೦-೦-೦-