ತೀವ್ರ ವಿವಾದಕ್ಕೆ ಗುರಿಯಾಗಿ ವಿಶ್ವದ ಗಮನ ಸೆಳೆದಿರುವ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿರುದ್ಧ ಬೋಧಕ ಸಿಬ್ಬಂದಿ ತಿರುಗಿ ಬೀಳಲಾರಂಭಿಸಿದ್ದಾರೆ. ವಿವಿಯಲ್ಲಿ ತಮಗೆ ರಕ್ಷಣೆ ದೊರೆಯುತ್ತಿಲ್ಲ. ನಮಗೆ ರಕ್ಷಣೆ ಕೊಡಿಸುವ ಭರವಸೆಯನ್ನು ವಿವಿಯ ಉಪಕುಲಪತಿ ಎಂ.ಜಗದೀಶ್ ಕುಮಾರ್ ನೀಡುತ್ತಿಲ್ಲ ಎಂದು ಆರೋಪಿಸಿ ಕೆಲವು ಪ್ರೊಫೆಸರ್ ಗಳು ವಿವಿಯನ್ನೇ ತೊರೆಯಲು ನಿರ್ಧರಿಸಿದ್ದಾರೆ. ಅಲ್ಲದೇ, ಜಗದೀಶ್ ಕುಮಾರ್ ಮೇಲೆ ಅವಿಶ್ವಾಸ ಹೊಂದುವ ಮೂಲಕ ತಮ್ಮ ಆತಂಕವನ್ನು ಹೊರ ಹಾಕುತ್ತಿದ್ದಾರೆ.
ಹೀಗೆ ಜೆಎನ್ ಯು ತೊರೆಯಲು ಮುಂದಾಗುವ ಉಪನ್ಯಾಸಕರು, ಪ್ರೊಫೆಸರ್ ಗಳಿಗೆ ಅವಕಾಶ ಕಲ್ಪಿಸುವಂತೆ ಐಐಟಿ ದೆಹಲಿ ಮತ್ತು ಇನ್ನಿತರೆ ಸಂಸ್ಥೆಗಳಿಗೆ ಜೆಎನ್ ಯು ವಿವಿಯ ಉನ್ನತ ಮಟ್ಟದ ಬೋಧಕ ಸಿಬ್ಬಂದಿ ಮನವಿ ಮಾಡಿದ್ದಾರೆ.
ಐಐಟಿ ದೆಹಲಿಯ ನಿರ್ದೇಶಕ ವಿ.ರಾಮಗೋಪಾಲ ರಾವ್ ಅವರು ಕಳೆದ ತಿಂಗಳ 19 ರಂದು ತಮ್ಮ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರಿಗೆ ಮತ್ತು ಸಹೋದ್ಯೋಗಿಗಳಿಗೆ ಇಮೇಲ್ ಮಾಡಿ ಜೆಎನ್ ಯು ತೊರೆದು ಬರುವ ಬೋಧಕ ಸಿಬ್ಬಂದಿಗೆ ನೇಮಕ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಅವರ ಇಮೇಲ್ ಸಂದೇಶ ಹೀಗಿದೆ:- ಜೆಎನ್ ಯು ತೊರೆದು ಐಐಟಿ ದೆಹಲಿಗೆ ಸೇರ್ಪಡೆಯಾಗುವ ಕುರಿತು ಜೆಎನ್ ಯು ಬೋಧಕ ಸಿಬ್ಬಂದಿ ಆಸಕ್ತಿ ತೋರಿಸುತ್ತಿದ್ದಾರೆ. ಜೆಎನ್ ಯು ನಲ್ಲಿ ನಡೆಯುತ್ತಿರುವ ತ್ವೇಷಮಯ ವಾತಾವರಣವನ್ನು ಪರಿಗಣಿಸಬೇಕಾಗಿದೆ. ಐಐಟಿ ದೆಹಲಿಯಲ್ಲಿ ಉನ್ನತ ಮಟ್ಟದ ಹುದ್ದೆಗಳ ಮೇಲೆ ಯಾವುದೇ ತಾರತಮ್ಯಗಳಿರುವುದಿಲ್ಲ ಎಂಬ ಭಾವನೆ ನಮಗಿದೆ ಮತ್ತು ಈ ಬಗ್ಗೆ ಹಲವಾರು ಸಂಸ್ಥೆಗಳು ನಮಗೆ ಮನವರಿಕೆ ಮಾಡಿಕೊಟ್ಟಿವೆ ಎಂದು ಅವರು ತಿಳಿಸಿದ್ದಾರೆ. ಒಂದು ವೇಳೆ ನಾವು ಇಂತಹ ಅತ್ಯುತ್ತಮವಾದ ಶಿಕ್ಷಕರನ್ನು ಕಳೆದುಕೊಂಡರೆ ದುರದೃಷ್ಟಕರ ಎನಿಸುತ್ತದೆ. ಈ ಹಿನ್ನೆಲೆಯಲ್ಲಿ ಜೆಎನ್ ಯು ಶಿಕ್ಷಕರಿಗೆ ಇಲ್ಲಿ ನೇಮಕಾತಿ ಮಾಡಿಕೊಳ್ಳುವ ವಿಚಾರದಲ್ಲಿ ನೀವು ಉತ್ತಮ ನಿರ್ಧಾರ ಕೈಗೊಳ್ಳುತ್ತೀರಿ ಎಂದು ಭಾವಿಸಿದ್ದೇನೆ. ಇದೇ ವೇಳೆ, ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮವಾದ ಸಾಧನೆ ಮಾಡಿದ ಉಪನ್ಯಾಸಕರು ಅಥವಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ನಮ್ಮ ಸಂಸ್ಥೆ ಮುಕ್ತವಾಗಿದೆ.
ಇಲ್ಲೊಂದು ವಿಚಿತ್ರವೆಂದರೆ ಜೆಎನ್ ಯು ಉಪಕುಲಪತಿ ಸ್ವತಃ ಐಐಟಿ ದೆಹಲಿಯಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದವರಾಗಿದ್ದಾರೆ. ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು 2018 ರಲ್ಲಿ ಐಐಟಿ ದೆಹಲಿಯನ್ನು `ಇನ್ ಸ್ಟಿಟ್ಯೂಟ್ ಆಫ್ ಎಮಿನೆನ್ಸ್’ ಎಂದು ಘೋಷಣೆ ಮಾಡಿದ್ದು, ಅದರ ಸರ್ವಾಂಗೀಣ ಅಭಿವೃದ್ಧಿ, ಸಂಶೋಧನೆಗಳಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲು ಮುಂದಿನ ಐದು ವರ್ಷಗಳಲ್ಲಿ ಒಟ್ಟು 1,000 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಘೋಷಣೆ ಮಾಡಿತ್ತು.
ಜೆಎನ್ ಯು ವಿವಿಯ ಸಾಬರಮತಿ ಹಾಸ್ಟೆಲ್ ಗೆ ನುಗ್ಗಿ ದಾಂಧಲೆ ನಡೆಸಿ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶ್ ಘೋಶ್ ಸೇರಿದಂತೆ ಹಲವಾರು ವಿದ್ಯಾರ್ಥಿಗಳ ಮೇಲೆ ಎಬಿವಿಪಿ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸುವುದಕ್ಕಿಂತ 2 ವಾರ ಮೊದಲೇ ಜೆಎನ್ ಯು ಪ್ರೊಫೆಸರ್ ಗಳು ತಮ್ಮ ಅಸಮಾಧಾನ, ಆತಂಕ, ಭೀತಿಯನ್ನು ತೋಡಿಕೊಂಡು ಐಐಟಿ ದೆಹಲಿಯಲ್ಲಿ ಕೆಲಸ ಕೊಡುವಂತೆ ಮಾಡಿದ್ದರು.
ಈ ಹಲ್ಲೆ ಪ್ರಕರಣ ನಡೆದು ಒಂದು ವಾರ ಕಳೆದರೂ ಜೆಎನ್ ಯುನಲ್ಲಿ ಪರಿಸ್ಥಿತಿ ತಿಳಿಯಾಗಿಲ್ಲ. ವಿವಿಯ ಭದ್ರತಾ ವ್ಯವಸ್ಥೆಯ ಬೆಂಬಲವಿಲ್ಲದೇ ಎಬಿವಿಪಿ ಕಾರ್ಯಕರ್ತರು ಇಷ್ಟೊಂದು ಧೈರ್ಯದಲ್ಲಿ ಗಲಭೆ ನಡೆಸುತ್ತಿರಲಿಲ್ಲ. ಅಲ್ಲದೇ, ಉಪಕುಲಪತಿ ಜಗದೀಶ್ ಕುಮಾರ್ ಸಹ ಬೆಂಬಲವಾಗಿ ನಿಂತಿರುವುದರಿಂದಲೇ ಈ ಕಾರ್ಯಕರ್ತರುವ ವಿವಿಯೊಳಗೆ, ಹಾಸ್ಟೆಲ್ ಗೆ ನುಗ್ಗಿ ದಾಂಧಲೆ ನಡೆಸಲು ಸಾಧ್ಯವಾಗಿದೆ. ಮುಖಕ್ಕೆ ಮುಸುಕು ಹಾಕಿಕೊಂಡು ಬಂದರೂ ಕಾರ್ಯಕರ್ತರನ್ನು ತಡೆಯುವ ಗೋಜಿಗೇ ಹೋಗದ ಭದ್ರತಾ ಸಿಬ್ಬಂದಿ ಮೌನಪ್ರೇಕ್ಷಕರಾಗಿ ನಿಂತಿದ್ದರು ಎಂದರೆ ಅದರ ಹಿಂದಿನ ಉದ್ದೇಶ ಸ್ಪಷ್ಟವಾಗುತ್ತದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಈ ಘಟನೆಯಿಂದಾ ಘಾಸಿಗೊಂಡಿರುವ ಶಿಕ್ಷಕರು ತರಗತಿಗಳನ್ನು ಸ್ಥಗಿತಗೊಳಿಸಿದ್ದಾರೆ. ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಹಾಸ್ಟೆಲ್ ಶುಲ್ಕವನ್ನು ಇಳಿಸುವಂತೆ ಒತ್ತಾಯಿಸುತ್ತಿದ್ದಾರಲ್ಲದೇ, ಮುಂದಿನ ಸೆಮಿಸ್ಟರ್ ಗೆ ನೋಂದಣಿ ಮಾಡಿಸಿಕೊಳ್ಳುತ್ತಿಲ್ಲ.
ಜೆಎನ್ ಯುನಲ್ಲಿ ಆತಂಕವಿದೆ ಎಂಬ ಕಾರಣಕ್ಕೆ ಅಲ್ಲಿಂದ ಐಐಟಿ ದೆಹಲಿಗೆ ವರ್ಗಾವಣೆ ಮಾಡಿದರೆ ಜೆಎನ್ ಯುನಲ್ಲಿ ಬಲಪಂಥೀಯ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಜಗದೀಶ್ ಕುಮಾರ್ ಅವರಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಮತ್ತು ಕೆಲವು ಬಲಪಂಥೀಯ ಶಿಕ್ಷಕರನ್ನು ಐಐಟಿ ದೆಹಲಿಗೆ ಕಳುಹಿಸಿಕೊಡುವ ಅವರ ಪ್ರಯತ್ನ ಸಾಕಾರವಾದಂತಾಗುತ್ತದೆ ಎನ್ನುತ್ತಾರೆ ಹಿರಿಯ ಪ್ರೊಫೆಸರ್ ಒಬ್ಬರು.
ಆದಾಗ್ಯ, ಜಗದೀಶ್ ಕುಮಾರ್ ಆಡಳಿತದಿಂದ ಜೆಎನ್ ಯುನಲ್ಲಿರುವ ಬಲಪಂಥೀಯ ಶಿಕ್ಷಕರು ತುಂಬಾ ಸಂತಸದಿಂದ ಇದ್ದಾರೆ. ಅವರ ಬಲಪಂಥೀಯ ನಿಲುವಿನಿಂದಾಗಿಯೇ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಜಗದೀಶ್ ಕುಮಾರ್ ಅವರನ್ನು ಅಮಾನತು ಮಾಡುವಂತೆ ಹಲವು ಕ್ಷೇತ್ರಗಳಿಂದ ಒತ್ತಡಗಳು ಬಂದಾಗ್ಯೂ ಮಣಿದಿಲ್ಲ.
ವಿಶ್ವದಾದ್ಯಂತ ತನ್ನದೇ ಆದ ಹೆಸರನ್ನು ಗಳಿಸಿರುವ ಜಗದೀಶ್ ಕುಮಾರ್ ಅವರು ಅದಕ್ಕೆ ಧಕ್ಕೆ ತಂದಿದ್ದಾರೆ. ಕೃತಿ ಚೌರ್ಯ, ವಿದ್ಯಾರ್ಥಿಗಳಿಗೆ ಪಿಎಚ್.ಡಿ ಥೀಸಿಸ್ ಸಲ್ಲಿಕೆ ವಿಚಾರದಲ್ಲಿ ಕೆಲವು ಶಿಕ್ಷಕರು ತಾರತಮ್ಯ ಮಾಡುತ್ತಿರುವುದು ಸೇರಿದಂತೆ ಹತ್ತು ಹಲವಾರು ದೂರುಗಳು ಬಂದಾಗ್ಯೂ ಜಗದೀಶ್ ಕುಮಾರ್ ಅವರು ಯಾವುದೇ ನಿರ್ಣಯ ಕೈಗೊಳ್ಳದೇ ವಿವಿಯ ಘನತೆಗೆ ಧಕ್ಕೆ ತಂದಿರುವ ಉದಾಹರಣೆಗಳು ಸಾಕಷ್ಟಿವೆ.
ಕೃಪೆ: ದಿ ವೈರ್