ಅಂತೂ ಜನವರಿ 5 ರ ಸಂಜೆ ಜೆಎನ್ ಯು ವಿಶ್ವವಿದ್ಯಾಲಯದ ಸಾಬರಮತಿ ಹಾಸ್ಟೆಲ್ ಮೇಲಿನ ದಾಳಿ ಮತ್ತು ವಿದ್ಯಾರ್ಥಿಗಳ ಮೇಲೆ ನಡೆದ ಮಾರಣಾಂತಿಕ ಹಲ್ಲೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಮಧ್ಯಪ್ರವೇಶಿಸಿದೆ.
ಜನವರಿ 5 ರಂದು ಘಟನೆಗೆ ಸಂಬಂಧಿಸಿದಂತೆ ಎರಡು ವಾಟ್ಸಪ್ ಗ್ರೂಪ್ ಗಳಲ್ಲಿ ನಡೆದಿರುವ ಸಂಭಾಷಣೆಗಳು, ಹಂಚಿಕೆಯಾಗಿರುವ ಫೋಟೋಗಳು, ವಿಡೀಯೋಗಳೆಲ್ಲವನ್ನೂ ರಕ್ಷಿಸಿಡುವಂತೆ ದೆಹಲಿ ಹೈಕೋರ್ಟ್ ದೆಹಲಿ ಪೊಲೀಸರಿಗೆ ಕಟ್ಟಪ್ಪಣೆ ಮಾಡಿದೆ.
ಜೆಎನ್ ಯು ಪ್ರೊಫೆಸರ್ ಗಳಾದ ಅಮಿತ್ ಪರಮೇಶ್ವರನ್, ಅತುಲ್ ಸೂದ್ ಮತ್ತು ಶುಕ್ಲಾ ವಿನಾಯಕ್ ಸಾವಂತ್ ಅವರು, ಹೈಕೋರ್ಟಿಗೆ ಅರ್ಜಿ ಸಲ್ಲಿಸಿ ಜೆಎನ್ ಯುನಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕುವಂತೆ ದೆಹಲಿ ಪೊಲೀಸರಿಗೆ ಮತ್ತು ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿಕೊಂಡಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, ಪ್ರಕರಣದ ಗಂಭೀರತೆಯನ್ನು ಅರಿತು ಜೆಎನ್ ಯು ಕ್ಯಾಂಪಸ್ ನಲ್ಲಿರುವ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿರುವ ಎಲ್ಲಾ ದೃಶ್ಯಗಳನ್ನು ಸಂರಕ್ಷಿಸಿ ಇಡಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದೆ.
ನ್ಯಾಯಮೂರ್ತಿ ಬ್ರಿಜೇಶ್ ಸೇಥಿ ಅವರು ಈ ಅರ್ಜಿಯ ವಿಚಾರಣೆ ನಡೆಸಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಜೆಎನ್ ಯು ಆಡಳಿತ ಮಂಡಳಿಯಿಂದ ಇದುವರೆಗೆ ಪೊಲೀಸರಿಗೆ ಮಾಹಿತಿ ಏಕೆ ಬಂದಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಇದಕ್ಕೆ ಉತ್ತರಿಸಿರುವ ದೆಹಲಿ ಸರ್ಕಾರದ ಪರ ವಕೀಲ ರಾಹುಲ್ ಮೆಹ್ರಾ, ದೆಹಲಿ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಎಲ್ಲಾ ವಾಟ್ಸಪ್ ಸಂದೇಶಗಳು, ಫೋಟೋಗಳು ಮತ್ತು ವಿಡೀಯೋ ದೃಶ್ಯಾವಳಿಗಳನ್ನು ಸಂರಕ್ಷಿಸಿ ಇಡುವಂತೆ ವಾಟ್ಸಪ್ ಸಂಸ್ಥೆಗೆ ಪತ್ರ ಬರೆದಿದ್ದಾರೆ. ವಿಶೇಷವಾಗಿ ಎರಡು ವಾಟ್ಸಪ್ ಗುಂಪುಗಳಾದ ‘Unity Against Left’ ಮತ್ತು ‘Friends of RSS’ ಗಳಲ್ಲಿ ಶೇರ್ ಮಾಡಲಾಗಿರುವ ಸಂದೇಶಗಳು, ವಿಡೀಯೋ ದೃಶ್ಯಾವಳಿಗಳನ್ನು ಸಂಗ್ರಹಿಸಿಡಬೇಕೆಂದು ವಾಟ್ಸಪ್ ಕಂಪನಿಗೆ ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಜನವರಿ 5 ರಂದು ಸಂಜೆ ಕೆಲವು ಕಿಡಿಗೇಡಿಗಳು ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶ್ ಘೋಷ್ ಸೇರಿದಂತೆ ಹಲವಾರು ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಅಲ್ಲದೇ, ಹಾಸ್ಟೆಲ್ ಗೆ ನುಗ್ಗಿ ದಾಂಧಲೆ ನಡೆಸಿ ಅಲ್ಲಿದ್ದ ವಸ್ತುಗಳನ್ನು ನಾಶಗೊಳಿಸಿದ್ದರು. ಈ ಘಟನೆ ದೇಶಾದ್ಯಂತ ವಿದ್ಯಾರ್ಥಿ ಸಮೂಹದಲ್ಲಿ ತಲ್ಲಣ ಮೂಡಿಸಿತ್ತು. ಅಲ್ಲದೇ, ವಿಶ್ವದಾದ್ಯಂತ ತೀವ್ರ ಟೀಕೆಗೆ ಗುರಿಯಾಗಿತ್ತು.
ಆರಂಭದಲ್ಲಿ ಈ ದುಷ್ಕೃತ್ಯವನ್ನು ಸಂಘಪರಿವಾರದ ಅಂಗಸಂಸ್ಥೆಯಾದ ಎಬಿವಿಪಿ ನಡೆಸಿದೆ ಎಂದು ವಿದ್ಯಾರ್ಥಿ ಸಂಘ ಮತ್ತು ಇತರೆ ಸಂಘಟನೆಗಳು ಆರೋಪಿಸಿದ್ದರೆ, ಎಡಪಕ್ಷಗಳ ಕಾರ್ಯಕರ್ತರೇ ಈ ಕೃತ್ಯವೆಸಗಿದ್ದಾರೆ ಎಂದು ಎಬಿವಿಪಿ ಆರೋಪಿಸಿತ್ತು. ಈ ಮಧ್ಯೆ, ಹಿಂದೂ ಸಂಘಟನೆಯೊಂದು ಇದರ ಜವಾಬ್ದಾರಿ ವಹಿಸಿಕೊಂಡಿತ್ತು. ಆದರೆ, ಅಂತಿಮವಾಗಿ ಎಬಿವಿಪಿಯ ಇಬ್ಬರು ಕಾರ್ಯಕರ್ತರು ಈ ಕೃತ್ಯವನ್ನು ನಾವೇ ನಡೆಸಿದ್ದಾಗಿ ಖಾಸಗಿ ಟಿವಿ ಚಾನೆಲ್ ವೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಒಪ್ಪಿಕೊಂಡಿದ್ದರು.
ಘಟನೆ ನಡೆದು ನಾಲ್ಕೈದು ದಿನಗಳಾದರೂ ದೆಹಲಿ ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಾಗಲಿ ಅಥವಾ ಅವರ ವಿರುದ್ಧ ದೂರು ಸಲ್ಲಿಸುವ ಪ್ರಯತ್ನವನ್ನೇ ಮಾಡಿರಲಿಲ್ಲ. ಈ ಬಗ್ಗೆ ದೇಶವಿಡೀ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ನಾಮಕೇವಾಸ್ಥೆಗೆಂಬಂತೆ ಎಫ್ಐಆರ್ ದಾಖಲಿಸಿದ್ದಾರಾದರೂ ಯಾವುದೇ ಆರೋಪಿಯನ್ನು ಗುರಿಯಾಗಿರಿಸಿ ಎಫ್ಐಆರ್ ದಾಖಲಿಸಿಲ್ಲ.