ಬಿಜೆಪಿ ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸಿಎಎ ಮತ್ತು ಎನ್ಆರ್ ಸಿ ವಿರುದ್ಧ ಪ್ರತಿಭಟನೆ ನಡೆಸಿದವರ ಹಕ್ಕನ್ನು ಕಿತ್ತುಕೊಂಡಾಯ್ತು. ದೇಶದ ಪ್ರತಿಷ್ಠಿತ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಪ್ರವೇಶ ಮಾಡುವಂತೆ ಮಾಡಿ ಅಲ್ಲಿ ಅಲ್ಲೋಲಕಲ್ಲೋಲದ ವಾತಾವರಣವನ್ನೇ ನಿರ್ಮಾಣ ಮಾಡಿ, ವಿದ್ಯಾರ್ಥಿಗಳು, ಬೋಧಕ -ಬೋಧಕೇತರ ಸಿಬ್ಬಂದಿ ಸೇರಿದಂತೆ ಪ್ರಾಣವನ್ನು ಕೈಲಿಡಿದು ವಿವಿಯೊಳಗೆ ಪ್ರವೇಶ ಮಾಡುವಂತಹ ವಾತಾವರಣ ನಿರ್ಮಾಣ ಮಾಡಿದೆ.
ಇನ್ನು ಇತ್ತೀಚೆಗೆ ಮತ್ತೊಂದು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ (ಜೆಎಂಐ) ಆವರಣದೊಳಗೆ ಪೊಲೀಸರನ್ನು ನುಗ್ಗಿಸಿ ದಾಂಧಲೆ ಮಾಡಿದ್ದಲ್ಲದೇ, ಓದುತ್ತಾ ಕುಳಿತ್ತಿದ್ದ ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ದೌರ್ಜನ್ಯ ನಡೆಯುವಂತೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ನೋಡಿಕೊಂಡಿತ್ತು.
ಕಳೆದ ಹಲವು ದಿನಗಳಿಂದ ಇಲ್ಲಿನ ವಿದ್ಯಾರ್ಥಿಗಳು ಪೊಲೀಸರು ತಮ್ಮ ಮೇಲೆ ನಡೆಸಿದ ದೌರ್ಜನ್ಯ ಮತ್ತು ಸಿಎಎ-ಎನ್ಆರ್ ಸಿ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಇಲ್ಲಿಯೂ ತನ್ನ ಅಧಿಕಾರವನ್ನು ಬಳಸುತ್ತಿರುವ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಪ್ರತಿಭಟನೆಯ ಹಕ್ಕನ್ನು ಕಿತ್ತುಕೊಳ್ಳಲು ಹೊರಟಿದೆ.
ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮೂಲಕ ಸರ್ಕಾರ ವಿವಿ ಆವರಣದೊಳಗೆ ಯಾವುದೇ ಪ್ರತಿಭಟನೆ, ವಿದ್ಯಾರ್ಥಿ ಸಮುದಾಯದ ಸಭೆಗಳನ್ನು ನಡೆಸುವುದನ್ನು ನಿಷೇಧಿಸಿದೆ. ಒಂದು ವೇಳೆ ಹಾಗೇನಾದರೂ ಸಭೆ ಅಥವಾ ಪ್ರತಿಭಟನೆಯನ್ನು ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿ ಸುತ್ತೋಲೆ ಹೊರಡಿಸಿರುವ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯವು, “ಯಾವುದೇ ರೀತಿಯ ಪ್ರತಿಭಟನೆ, ಹೋರಾಟ, ಸಭೆ, ಭಾಷಣ ಅಥವಾ ವಿದ್ಯಾರ್ಥಿಗಳು ಗುಂಪು ಕಟ್ಟಿಕೊಂಡು ಚರ್ಚೆ ನಡೆಸುವುದನ್ನು ನಿಷೇಧಿಸಲಾಗಿದೆ. ಇಂತಹ ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು. ಒಂದು ವೇಳೆ ಪಾಲ್ಗೊಂಡಿದ್ದೇ ಆದಲ್ಲಿ ನಿಮ್ಮ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಕೆಯನ್ನು ನೀಡಿದೆ.
ಈ ಸುತ್ತೋಲೆಯನ್ನು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಹೊರಡಿಸಿದ್ದು, ಇದಕ್ಕೆ ವಿದ್ಯಾರ್ಥಿ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ವಿಶ್ವವಿದ್ಯಾಲಯದ ದೈನಂದಿನ ಚಟುವಟಿಕೆಗಳು, ಶೈಕ್ಷಣಿಕ ಚಟುವಟಿಕೆಗಳು ಸೇರಿದಂತೆ ಇನ್ನಿತರೆ ಚಟುವಟಿಕೆಗಳಿಗೆ ತೊಂದರೆಯಾಗುವ ಕಾರಣದಿಂದ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಅಥವಾ ವಿವಿಗೆ ಸಂಬಂಧಿಸಿದ ಯಾವುದೇ ಸ್ಥಳದಲ್ಲಿ ವಿದ್ಯಾರ್ಥಿಗಳು ಗುಂಪು ಕಟ್ಟಿಕೊಂಡು ನಿಲ್ಲುವುದು, ಸಭೆಗಳನ್ನು ನಡೆಸುವುದು, ಭಾಷಣ ಮಾಡುವುದು, ಪ್ರತಿಭಟನೆ ಮಾಡುವುದು ಸೇರಿದಂತೆ ಇನ್ನಿತರೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಒಂದು ವೇಳೆ ಈ ರೀತಿಯ ಚಟುವಟಿಕೆಗಳನ್ನು ನಡೆಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಪಠ್ಯ ಚಟುವಟಿಕೆಗಳು ಸುಗಮವಾಗಿ ನಡೆಯುವ ರೀತಿಯಲ್ಲಿ ವಿದ್ಯಾರ್ಥಿ ಸಮುದಾಯ ಸಹಕರಿಸಬೇಕು. ಸದ್ಯದಲ್ಲೆ ಪರೀಕ್ಷೆಗಳು ನಡೆಯುತ್ತಿದ್ದು, ಅವುಗಳಿಗೆ ಪೂರಕವಾಗಿ ವಿದ್ಯಾರ್ಥಿಗಳಿಂದ ನೆರವು ಇರಬೇಕು ಮತ್ತು ತರಗತಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಬೆಂಬಲ ನೀಡಬೇಕೆಂದು ಅವರು ಕೋರಿದ್ದಾರೆ.
ಪರೀಕ್ಷೆಗಳು ಮತ್ತು ತರಗತಿಗಳು ಸುಗಮವಾಗಿ ನಡೆಯುವಂತೆ ವಿದ್ಯಾರ್ಥಿಗಳು ಸಹಕರಿಸುತ್ತಾರೆ ಎಂಬ ನಿರೀಕ್ಷೆಯನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಹೊಂದಿದೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಯಾವುದೇ ದುಷ್ಟಶಕ್ತಿಗಳು ಹರಡುವ ವದಂತಿಗಳಿಗೆ ಕಿವಿಗೊಡಬಾರದು. ಅಲ್ಲದೇ, ವಿಶ್ವವಿದ್ಯಾಲಯದ ಕ್ಯಾಂಪಸ್ ನೊಳಗೆ ಹೊರಗಿವರು/ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.
ಒಂದು ವೇಳೆ ಇಂತಹ ಯಾವುದೇ ಚಟುವಟಿಕೆಗಳಲ್ಲಿ ತೊಡಗಿದರೆ ಅಥವಾ ಇಂತಹ ಚಟುವಟಿಕೆಗಳಿಗೆ ಬೆಂಬಲ ನೀಡುವುದು ಕಂಡುಬಂದರೆ ಅಂತಹವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಿಜಿಸ್ಟ್ರಾರ್ ತಿಳಿಸಿದ್ದಾರೆ.
ಆದರೆ, ಈ ಹಿಂದೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಪ್ರಚೋದಿಸಿ ಹಿಂಸಾಚಾರ ಆಗುವಂತೆ ಪೊಲೀಸರು ಮಾಡಿದ್ದರು. ಇಷ್ಟೇ ಅಲ್ಲದೇ, ಯಾವುದೇ ಒಂದು ಶಿಕ್ಷಣ ಸಂಸ್ಥೆಯ ಆವರಣದೊಳಗೆ ಪ್ರವೇಶಿಸುವ ಮುನ್ನ ಆ ಸಂಸ್ಥೆಯ ಅನುಮತಿಯನ್ನು ಪಡೆಯಬೇಕೆಂಬ ಕನಿಷ್ಠ ಪ್ರಜ್ಞೆಯೂ ಇಲ್ಲದೇ ಜಾಮಿಯಾ ವಿವಿ ಆವರಣದೊಳಗೆ ನುಗ್ಗಿ ದಾಂಧಲೆ ಮಾಡಿದ್ದರು. ಹಾಗಾದರೆ, ಯಾವುದೇ ಪೂರ್ವಾನುಮತಿ ಪಡೆಯದೇ ವಿವಿಯೊಳಗೆ ನುಗ್ಗಿದ್ದ ಪೊಲೀಸರು ಸಹ ಅನಧಿಕೃತ ವ್ಯಕ್ತಗಳೇ ಆಗುತ್ತಾರೆ. ಅವರ ವಿರುದ್ಧ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಧ್ವನಿ ಎತ್ತಲಿಲ್ಲ ಏಕೆ?
ತಮ್ಮ ಪಾಡಿಗೆ ತಾವು ಗ್ರಂಥಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳನ್ನು ಹೊರ ಎಳೆದು ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದನ್ನು ಖಂಡಿಸದಿರುವುದಕ್ಕೆ ಏನು ಕಾರಣ? ಪೊಲೀಸರು ದೌರ್ಜನ್ಯ ನಡೆಸಿದ್ದನ್ನು ಮೌನವಾಗಿ ನೋಡಿಕೊಂಡು ಕುಳಿತ್ತಿದ್ದ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಈಗ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿರುವುದನ್ನು ಸಹಿಸಿಕೊಳ್ಳದಿರುವುದು ಏಕೆ? ಕೇಂದ್ರ ಸರ್ಕಾರದ ಮೂಗಿನ ನೇರಕ್ಕೆ ಸುತ್ತೋಲೆ ಹೊರಡಿಸಿ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹತ್ತಿಕ್ಕುವಂತಹ ಪ್ರಯತ್ನವನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮಾಡುತ್ತಿದೆ.
ಕಳೆದ ಒಂದು ತಿಂಗಳಿಂದ ಜಾಮಿಯಾ ವಿವಿಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ವಿವಿ ಆವರಣದ ಹೊರಗೆ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಸಿಎಎ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದು, ದುರುಳನೊಬ್ಬ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿ ಓರ್ವನನ್ನು ಗಾಯಗೊಳಿಸಿದ್ದಾನೆ. ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿದ ದಿನವೇ ಎಚ್ಚರಗೊಳ್ಳಬೇಕಿತ್ತು. ತನ್ನ ವಿವಿಯ ವಿದ್ಯಾರ್ಥಿಗಳಿಗೆ ಸೂಕ್ತ ಭದ್ರತೆ ಒದಗಿಸುವ ಕೆಲಸವನ್ನು ಮಾಡಬೇಕಿತ್ತು. ಆದರೆ, ಆ ಬಗ್ಗೆ ತಲೆ ಕೆಡಿಸಿಕೊಳ್ಳದ ವಿವಿ ಈಗ ವಿದ್ಯಾರ್ಥಿಗಳ ಪ್ರತಿಭಟನೆಯ ಹಕ್ಕನ್ನೇ ಕಿತ್ತುಕೊಳ್ಳಲು ಹೊರಟಿರುವುದು ದುರ್ದೈವದ ಸಂಗತಿ.