ಭಾಗ-೨
~ಡಾ. ಜೆ ಎಸ್ ಪಾಟೀಲ
೨೦೧೬ ರಲ್ಲಿ, ಮಾಜಿ ಸಿಎಂ ರಘುವರ್ ದಾಸ್ ನೇತೃತ್ವದ ಬಿಜೆಪಿ ಸರ್ಕಾರವು ಸಿಎನ್‌ಟಿಎ ಮತ್ತು ಎಸ್‌ಪಿಟಿಎಗೆ ಕಲಮ್ ಬದಲಾವಣೆಗೆ ಸುಗ್ರೀವಾಜ್ಞೆ ತಂದಿತ್ತು. ಇವು ಇಂದಿಗೂ ಬುಡಕಟ್ಟು ಜನಾಂಗದ ಭೂಮಿಯನ್ನು ರಕ್ಷಿಸುವ ಬ್ರಿಟಿಷ್ ಕಾಲದ ಕಾನೂನುಗಳು. ಈ ತಿದ್ದುಪಡಿಗಳು ಹಿಡುವಳಿ ಕಾಯಿದೆಯನ್ನು ದುರ್ಬಲಗೊಳಿಸಿ ಅವರ ಭೂಮಿಯನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿತು. ರಸ್ತೆ, ಅಣೆಕಟ್ಟು ಮತ್ತು ಪೈಪ್‌ಲೈನ್‌ಗಳಂತಹ ಸಾರ್ವಜನಿಕ ಹಿತಾಸಕ್ತಿ ಯೋಜನೆಗಳಿಗೆ ಭೂಸ್ವಾಧೀನ ಮಾಡಲು ಇದರಿಂದ ಅನುಕೂಲವಾಯಿತು. ಇದಕ್ಕೆ ಆದಿವಾಸಿಗಳ ವಿರೋಧ ವ್ಯಾಪಕವಾಗಿತ್ತು. ರಾಷ್ಟ್ರಪತಿಗಳಿಗೆ ಮಾಡಿದ ಮನವಿಯಲ್ಲಿ, ಈ ತಿದ್ದುಪಡಿಗಳು ಪರಿಶಿಷ್ಟರು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಭೂಮಿ ಮತ್ತು ಅವರ ಜೀವನೋಪಾಯ ನಾಶಮಾಡುವ ಪರಿಸ್ಥಿತಿಯ ತರುತ್ತದೆ ಎಂದು ಬುಡಕಟ್ಟು ಜನ ಎಚ್ಚರಿಸಿದ್ದರು ಎನ್ನುತ್ತಾರೆ ಲೇಖಕರು.

ಇಂದಿನ ರಾಷ್ಟ್ರಪತಿ ಹಾಗು ಆಗಿನ ಗವರ್ನರ್ ದ್ರೌಪದಿ ಮುರ್ಮು, ಈ ವಿವಾದಾತ್ಮಕ ತಿದ್ದುಪಡಿಗೆ ಮನ್ನಣೆ ನೀಡದಿದ್ದಾಗ ರಾಜ್ಯ ಸರ್ಕಾರವು ಅವುಗಳನ್ನು ಹಿಂತೆಗೆದುಕೊಂಡಿತು. ಆದರೆ ಮಧ್ಯಂತರ ತಿಂಗಳುಗಳಲ್ಲಿ ಪ್ರತಿಭಟನೆಗಳು ಹೆಚ್ಚಾಗಿ, ಪೊಲೀಸ್ ಕ್ರಮ ಮತ್ತು ವೈಯಕ್ತಿಕ ನಷ್ಟ ಮುಂದುವರೆಯಿತು. ಅಕ್ಟೋಬರ್ ೨೦೧೬ ರಲ್ಲಿ, ಖುಂತಿ ಜಿಲ್ಲೆಯ ನೂರಾರು ಗ್ರಾಮಸ್ಥರು ಬಿಜೆಪಿಯ ಸುಗ್ರೀವಾಜ್ಞೆಯನ್ನು ವಿರೋಧಿಸಿ ರಾಂಚಿಯಲ್ಲಿ ಇತರ ಬುಡಕಟ್ಟು ಗುಂಪುಗಳನ್ನು ಸೇರುವುದಕ್ಕೆ ತಡೆಯೊಡ್ಡಲು ಪ್ರಯತ್ನಿಸಿದಾಗ ಪೊಲೀಸರೊಂದಿಗೆ ಘರ್ಷಣೆ ನಡೆಯಿತು. ಆಗ ಪೊಲೀಸರ ಗುಂಡಿಗೆ ಬುಡಕಟ್ಟು ನಾಯಕ ಅಬ್ರಹಾಂ ಮುಂಡಾ ಕೊಲ್ಲಲ್ಪಟ್ಟರು. ಇಂದು, ಖುಂತಿ ಜಿಲ್ಲೆಯ ರುಗ್ಡಿ ಕೋಲ್ಮೆ ಗ್ರಾಮದ ಅಬ್ರಹಾಂ ಚೌಕ್ ಆದಿವಾಸಿಗಳಿಗೆ ತಮ್ಮ ಭೂಮಿಯನ್ನು ಕಾಪಾಡುವ ಅಗತ್ಯವನ್ನು ನಿರಂತರವಾಗಿ ನೆನಪಿಸುತ್ತದೆ. ಈ ಎಲ್ಲಾ ಹಿಂದೆ ನಡೆದ ಘಟನೆಗಳು ಹಾಗು ಸರಕಾರದ ಉದ್ದೇಶಗಳ ಬಗ್ಗೆ ಆದಿವಾಸಿಗಳು ಹುಬ್ಬೇರಿಸುವಂತೆ ಮಾಡಿದೆ ಎನ್ನುವುದು ಲೇಖಕರ ಅಭಿಪ್ರಾಯವಾಗಿದೆ.

“ಭಾರತದಂತಹ ವೈವಿಧ್ಯಮಯ ದೇಶದಲ್ಲಿ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಪರಿಭಾಷೆಯಲ್ಲಿ ತುಂಬಿ ತುಳುಕುತ್ತಿರುವ ಅಸಮಾನತೆಯ ನಡುವೆ, ಸರಕಾರದ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಮಾತನಾಡುವುದು ಸಂಪೂರ್ಣವಾಗಿ ಅರ್ಥಹೀನವಾಗಿದೆ” ಎಂದು ಲಕ್ಷ್ಮಿ ಹೇಳುತ್ತಾರೆ. ಮುಂದಿನ ದಿನಗಳಲ್ಲಿ ರಾಂಚಿ ಮತ್ತೊಮ್ಮೆ ಪ್ರತಿಭಟನೆಯ ಕೇಂದ್ರ ಬಿಂದುವಾಗಿ ಹೊರಹೊಮ್ಮಲಿದೆ. ಜಾರ್ಖಂಡ್‌ನ ಬುಡಕಟ್ಟು ಮುಖಂಡರು ಪಶ್ಚಿಮ ಬಂಗಾಳ, ಒಡಿಶಾ, ಮಧ್ಯಪ್ರದೇಶ, ಬಿಹಾರ ಮತ್ತು ಛತ್ತೀಸ್‌ಗಢದಲ್ಲಿ ಜುಲೈ ೩೦ ರಂದು ರಾಜ್ಯ ರಾಜಧಾನಿಯಲ್ಲಿ ಸಭೆಗೆ ತಮ್ಮ ಸಹವರ್ತಿಗಳನ್ನು ಆಹ್ವಾನಿಸಿದ್ದರು. “ಬುಡಕಟ್ಟು ಸಮಾಜವು ಸಾಂಪ್ರದಾಯಿಕ ಕಾನೂನುಗಳಲ್ಲಿ ಯಾವುದೇ ಬದಲಾವಣೆಯನ್ನು ಸಹಿಸುವುದಿಲ್ಲ. ಯುಸಿಸಿ ನಮ್ಮ ಸಾಮಾಜಿಕ ಸಂರಚನೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಇದು ಸಮಾಜದಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸುತ್ತದೆ ” ಎಂದು ಆದಿವಾಸಿ ಸಮನ್ವಯ ಸಮಿತಿಯ ಸಂಯೋಜಕ ದೇವ್ ಕುಮಾರ್ ಧನ್ ಹೇಳಿರುವುದನ್ನು ಲೇಖಕರು ಉಲ್ಲೇಖಿಸಿದ್ದಾರೆ.
ಸರಕಾರದ ರಾಜಕೀಯ ಉದ್ದೇಶದ ಕಾನೂನುಗಳಿಗಿಂತ ಆನುವಂಶಿಕತೆಯು ಮುಖ್ಯವಾಗಿದೆ ಎನ್ನುವುದನ್ನು ನಾವು ಗಮನಿಸಬೇಕು. ಮೋದಿ ಸರಕಾರದಿಂದ ಯುಸಿಸಿಯ ಕರಡು ಇನ್ನೂ ಬಿಡುಗಡೆಯಾಗುವ ಮೊದಲೆ ಈ ಎಲ್ಲಾ ಆತಂಕದ ಚರ್ಚೆಗಳು ನಡೆಯುತ್ತಿವೆ. ಭಾರತದಲ್ಲಿನ ಬಹುತೇಕ ಬುಡಕಟ್ಟು ಪದ್ಧತಿಗಳು ೭೦೦ ಕ್ಕೂ ಹೆಚ್ಚು ಸಮುದಾಯಗಳ ತಲೆತಿರುಗುವ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತವೆ ಎಂಬುದು ಈ ಚರ್ಚೆಯನ್ನು ಸಂಕೀರ್ಣಗೊಳಿಸಿದೆ. ಇದರಲ್ಲಿ ಸಣ್ಣದೊಂದು ಬದಲಾವಣೆಯು ಕೂಡ ಗೊಂದಲಮಯ ಮತ್ತು ಆತಂಕವನ್ನು ತೀವ್ರಗೊಳಿಸುವ ಇಂಧನವಾಗಿ ಪರಿಣಮಿಸುತ್ತದೆ. ಈ ಕಾನೂನು ಅಂಗೀಕರಿಸುವ ಮೊದಲು ವ್ಯಾಪಕವಾದ ರಾಜಕೀಯ ಮತ್ತು ಸಾಮಾಜಿಕ ಒಮ್ಮತಾಭಿಪ್ರಾಯದ ವಾತಾವರಣ ನಿರ್ಮಿಸುವ ಪ್ರಯತ್ನಗಳು ಮಾಡದಿದ್ದರೆ, ಇದು ಬುಡಕಟ್ಟು ರಾಜ್ಯಗಳಲ್ಲಿ ತೀವ್ರವಾದ ಹಾಗು ಪ್ರಕ್ಷುಬ್ಧವಾದ ಸಮಸ್ಯೆಯಾಗಿ ಬದಲಾಗಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿರುವ ಬಗ್ಗೆ ಲೇಖಕರು ವಿವರವಾದ ಉಲ್ಲೇಖವನ್ನು ಮಾಡಿದ್ದಾರೆ.

“ಆದಿವಾಸಿಗಳು ಬುಡಕಟ್ಟು ಜನಾಂಗದವರಲ್ಲದವರನ್ನು ಬಹಳ ಅನುಮಾನದಿಂದ ನೋಡುತ್ತಾರೆ. ಏಕೆಂದರೆ, ಅವರ ಪಾತ್ರವು ಈ ಹಿಂದೆ ಅನಾಹುತಕಾರಿ ಹಾಗು ಹಾನಿಕಾರಕವಾಗಿತ್ತು, ”ಎಂದು ಜೈಪಾಲ್ ಸಿಂಗ್ ಮುಂಡಾ ಅವರು ೧೬ ಡಿಸೆಂಬರ್ ೧೯೪೬ ರಂದು ಸಂವಿಧಾನ ಸಭೆಯ ಚರ್ಚೆಯಲ್ಲಿ ಹೇಳಿದ್ದರು. ಅವರು ತಾನು ಜಂಗ್ಲಿ ಎಂದು ಕರೆಸಿಕೊಳ್ಳಲು ಹೆಮ್ಮೆಪಡುತ್ತೇನೆಂದು ಘೋಷಿಸಿದ್ದರು. “ಜಂಗ್ಲಿಯಾಗಿ, ಆದಿವಾಸಿಯಾಗಿ, ನಾನು ಈ ಕಾನೂನುಗಳ ಜಟಿಲತೆಗಳನ್ನು ಅರ್ಥಮಾಡಿಕೊಳ್ಳಲಾರೆ. ನೀವು ಬುಡಕಟ್ಟು ಜನರಿಗೆ ಪ್ರಜಾಪ್ರಭುತ್ವವನ್ನು ಕಲಿಸಲು ಸಾಧ್ಯವಿಲ್ಲ; ನೀವು ಅವರಿಂದ ಪ್ರಜಾಪ್ರಭುತ್ವದ ಮಾರ್ಗಗಳನ್ನು ಕಲಿಯಬೇಕು. ಅವರು ಭೂಮಿಯ ಮೇಲಿನ ಅತ್ಯಂತ ಪ್ರಜಾಪ್ರಭುತ್ವದ ಜನರು. ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿಯ ಫೆಲೊ ಹಾಗು ಹಿರಿಯ ನಿವಾಸಿ ಅಲೋಕ್ ಪ್ರಸನ್ನ ಕುಮಾರ್, “ಆದಿವಾಸಿಗಳಿಗೆ ಹಿಂದೂ ಕಾನೂನುಗಳು ಅನ್ವಯಿಸುವುದಿಲ್ಲ ಅಥವಾ ಅವರ ಆಚರಣೆಗಳನ್ನು ಕ್ರೋಡೀಕರಿಸಲಾಗಿಲ್ಲ ಎಂದು ತಿಳಿಸಿದರುವುದು ಲೇಖಕರು ಉಲ್ಲೇಖಿಸಿದ್ದಾರೆ.
ಬುಡಕಟ್ಟು ಗುಂಪುಗಳಲ್ಲಿ ಉತ್ತರಾಧಿಕಾರ ಪದ್ಧತಿಗಳಲ್ಲಿ ಏಕರೂಪತೆ ಇಲ್ಲ. ಕೆಲವರು ಈಶಾನ್ಯ ರಾಜ್ಯಗಳಲ್ಲಿ ಮಾತೃವಂಶೀಯ ಪದ್ಧತಿಗಳನ್ನು ಅನುಸರಿಸುತ್ತಾರೆ, ಆದರೆ ಆಸ್ತಿಯನ್ನು ಜಾರ್ಖಂಡ್‌ನಲ್ಲಿ ಪುರುಷ ವಾರಸುದಾರರಿಗೆ ವರ್ಗಾಯಿಸಲಾಗುತ್ತದೆ. ಯುಸಿಸಿಯು ಮಹಿಳೆಯರ ಉತ್ತರಾಧಿಕಾರ ಹಕ್ಕುಗಳ ಪ್ರಶ್ನೆಯ ಸುತ್ತ ರೂಪುಗೊಂಡರೆ, ಅದು ಮುಂಡಾ ಬುಡಕಟ್ಟುಗಳ ಹಳೆಯ ಆಚರಣೆಗೆ ವಿರುದ್ಧವಾಗುತ್ತದೆ. ಇಲ್ಲಿ ಹೆಣ್ಣುಮಕ್ಕಳಿಗೆ ಮದುವೆಯ ನಂತರ ತಂದೆಯ ಆಸ್ತಿಯಲ್ಲಿ ಹಕ್ಕಿಲ್ಲ. ಮದುವೆಗೂ ಮುನ್ನ ಮಹಿಳೆಯರು ಸಮಾನ ಹಕ್ಕುಗಳನ್ನು ಅನುಭವಿಸುತ್ತಾರೆ ಎಂದು ಹೇಳಿದರು. ಮದುವೆಯ ನಂತರ ಒಬ್ಬ ಮಹಿಳೆ ತನ್ನ ತಂದೆಯ ಮನೆಗೆ ಹಿಂದಿರುಗಿದರೆ, ಅವಳು ತನ್ನ ತಂದೆಯ ಆಸ್ತಿಯ ಒಂದು ಭಾಗಕ್ಕೆ ಹಕ್ಕನ್ನು ಹೊಂದುತ್ತಾಳೆ, ಆದರೆ ಅವಳು ಅದನ್ನು ಮಾರುವಂತಿಲ್ಲವಂತೆ. ಪೂರ್ವಜರ ಭೂಮಿಯನ್ನು ಒಂದು ಕಿಲಿ ಅಥವಾ ಕುಲದೊಳಗೆ ಮಾತ್ರ ಇರುವ ನಿಯಮ ಇದೆ ಎಂದು ಬುಡಕಟ್ಟು ಕಾನೂನು ತಜ್ಞ ರಾಮಚಂದ್ರ ಓರಾನ್ ಹೇಳಿರುವ ಕುರಿತು ಲೇಖಕರು ಉಲ್ಲೇಖಿಸಿದ್ದಾರೆ.
ಬುಡಕಟ್ಟು ಜನಾಂಗದವರು ಒಂದೇ ಕಿಲಿಯಲ್ಲಿ ಮದುವೆಯಾಗುವುದು ಅಪರೂಪ. ಯುಸಿಸಿಯು ಮಹಿಳೆಯರಿಗೆ ಭೂಮಿಯ ಉತ್ತರಾಧಿಕಾರದ ಹಕ್ಕುಗಳನ್ನು ಜಾರಿಗೊಳಿಸಿದರೆ, ತಲೆಮಾರುಗಳಿಂದ ರಕ್ಷಿಸಲ್ಪಟ್ಟ ಪೂರ್ವಜರ ಭೂಮಿಯನ್ನು ಅವಳು ಮದುವೆಯಾಗುವ ಕುಲದ ಮೂಲಕ ಹಕ್ಕು ಸಾಧಿಸಬಹುದು ಎಂಬ ಭಯ ಈಗ ಇದೆ. ರಾಂಚಿಯ ನ್ಯಾಷನಲ್ ಯೂನಿವರ್ಸಿಟಿ ಆಫ್ ಸ್ಟಡಿ ಅಂಡ್ ರಿಸರ್ಚ್ ಇನ್ ಲಾ (NUSRL)ನಲ್ಲಿ ಸಹಾಯಕ ಪ್ರಾಧ್ಯಾಪಕರಾದ ಓರಾನ್: “ಒಂದೇ ಕುಲದ ಮಹಿಳೆಯರು ಮತ್ತು ಪುರುಷರು ಸಹೋದರರು ಮತ್ತು ಸಹೋದರಿಯರು ಎಂದು ಅವರ ನಂಬಿಕೆ. ಹಿರಿಯ ಮಗನು ಪೂರ್ವಜರ ಆಸ್ತಿಯಲ್ಲಿ ಹೆಚ್ಚಿನ ಪಾಲನ್ನು ಪಡೆಯುವುದು ಸಂಪ್ರದಾಯವಾಗಿದೆ. ತನ್ನ ಪತಿಯನ್ನು ತೊರೆದು ತಂದೆಯ ಮನೆಗೆ ಹಿಂದಿರುಗಿದರೆ ತನ್ನ ಸಹೋದರಿಗೆ ಆತ ಈ ಭೂಮಿ ನೀಡಬಹುಡು” ಎನ್ನುತ್ತಾರೆ. ಯುಸಿಸಿಯು ಈ ಸಾಮೂಹಿಕ ಜೀವನ ವಿಧಾನಕ್ಕೆ ಬಹುದೊಡ್ಡ ಬೆದರಿಕೆಯೊಡ್ಡಿದೆ ಎನ್ನುತ್ತಾರೆ ಲೇಖಕರು.
“ಬುಡಕಟ್ಟು ಸಮಾಜವು ಸಾಮೂಹಿಕ ಹಕ್ಕುಗಳ ಬಗ್ಗೆ ಮಾತನಾಡುತ್ತದೆ, ಆದರೆ ಇತರ ಸಮಾಜಗಳು ವೈಯಕ್ತಿಕ ಹಕ್ಕುಗಳ ಬಗ್ಗೆ ಮಾತನಾಡುತ್ತವೆ. ಯುಸಿಸಿ ಅಂಗೀಕಾರಗೊಂಡರೆ ಸಾಮೂಹಿಕತೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ” ಎಂದು ಸಾಮಾಜಿಕ ಕಾರ್ಯಕರ್ತೆ ದಯಾಮಣಿ ಬಾರ್ಲಾ ಅವರು ರಾಂಚಿಯ ಅಂಗಡಿಯೊಂದರಲ್ಲಿ ಚಾಯ್ ಹೀರುತ್ತಾ ಹೇಳುತ್ತಾರೆ. ಆದಿವಾಸಿಗಳ ಜೀವನ ವಿಧಾನವನ್ನು ದುರ್ಬಲಗೊಳಿಸುವ ಮತ್ತೊಂದು ಪ್ರಯತ್ನವಾಗಿ ಯುಸಿಸಿ ತರಲಾಗುತ್ತಿದೆ ಎನ್ನುವುದು ಆಕೆಯ ಅನಿಸಿಕೆ. ಇದು ಒಂದು ಮಾದರಿ, ಪ್ರತಿ ಸರ್ಕಾರ ಅಥವಾ ಆಡಳಿತಗಾರರು ಶತಮಾನಗಳಿಂದ ಜಾರಿಗೊಳಿಸಲು ಪ್ರಯತ್ನಿಸುತ್ತಿರುವ ಬಾಹ್ಯ ಕಾರ್ಯಸೂಚಿ. ೨೦೧೮ ರಲ್ಲಿ, ೨೧ ನೇ ಕಾನೂನು ಆಯೋಗವು ತನ್ನ ವರದಿಯಲ್ಲಿ ಕ್ರೋಡೀಕರಣವನ್ನು ಸೂಚಿಸಿದೆ, ಆದರೆ ಅದರ ಅನುಷ್ಟಾನದಲ್ಲಿ ಪ್ರಗತಿ ಸಾಧಿಸಲಾಗಿದೆ ಎನ್ನುವುದು ಲೇಖಕರ ಸ್ಪಷ್ಟ ಅಭಿಪ್ರಾಯವಾಗಿದೆ.
ಬುಡಕಟ್ಟು ಕಾನೂನು ತಜ್ಞರು ಮತ್ತು ಕಾರ್ಯಕರ್ತರು ಭಾರತದಾದ್ಯಂತ ಆದಿವಾಸಿ ಸಮುದಾಯಗಳಲ್ಲಿ ಸಾಂಪ್ರದಾಯಿಕ ಕಾನೂನು ಮತ್ತು ಬುಡಕಟ್ಟು ಸಂಶೋಧನಾ ಸಂಸ್ಥೆಗಳನ್ನು ದಾಖಲಿಸುವ ಅಗತ್ಯಕ್ಕಾಗಿ ವಾದಿಸಿದ್ದಾರೆ, ಆನಂತರ ಯುಸಿಸಿ ಇದನ್ನು ಗಣನೆಗೆ ತೆಗೆದುಕೊಳ್ಳಬಹುದು. ಆಯೋಗವು ರಿಫಾರ್ಮ್ ಆಫ್ ಫ್ಯಾಮಿಲಿ ಲಾ ಎಂಬ ಶೀರ್ಷಿಕೆಯ ೧೮೫ ಪುಟಗಳ ವಿವರವಾದ ವರದಿಯನ್ನು ನೀಡಿದ್ದು, ದೇಶದಲ್ಲಿ ಯುಸಿಸಿಯನ್ನು ತರುವುದು “ಈ ಹಂತದಲ್ಲಿ ಅಗತ್ಯವಿಲ್ಲ ಅಥವಾ ಅಪೇಕ್ಷಣೀಯವಲ್ಲ” ಎಂದು ಕರೆಯುವ ಮೂಲಕ ಈ ಬೇಡಿಕೆಯನ್ನು ತಿರಸ್ಕರಿಸಿದೆ. “ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ರಾಜಿ ಮಾಡಿಕೊಳ್ಳಲಾಗುವುದಿಲ್ಲ. ಸಂಪ್ರದಾಯವಾದಿಗಳ ಏಕರೂಪತೆಯ ಒತ್ತಾಯವೇ ರಾಷ್ಟ್ರದ ಪ್ರಾದೇಶಿಕ ಸಮಗ್ರತೆಯ ಬೆದರಿಕೆಗೆ ಕಾರಣವಾಗುತ್ತದೆ” ಎಂದು ೨೧ ನೇ ಕಾನೂನು ಆಯೋಗದ ವರದಿ ಹೇಳುತ್ತದೆ ಎನ್ನುವ ಕುರಿತು ಲೇಖಕರು ವಿವರಿಸಿದ್ದಾರೆ. ಇದು ನಿಜವಾಗಿಯು ಗಮನಿಸಬೇಕಾದ ಅಂಶವಾಗಿದೆ ಎನ್ನುತ್ತಾರೆ ಲೇಖಕರು.
ಪ್ರಸ್ತುತ, ಗೋವಾ ಮಾತ್ರ ತನ್ನದೇ ಆದ ಸಾಮಾನ್ಯ ನಾಗರಿಕ ಸಂಹಿತೆಯನ್ನು ಹೊಂದಿದೆ. ಆದರೆ ನಾಲ್ಕು ವರ್ಷಗಳ ನಂತರ, ೨೨ ನೇ ಕಾನೂನು ಆಯೋಗವು ಹೊಸ ಶಿಫಾರಸುಗಳನ್ನು ಮಾಡಿದೆ. ಇದುವರೆಗೆ ೫೦ ಲಕ್ಷಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. “ಯುಸಿಸಿಯನ್ನು ದಿಢೀರ್ ಅಂತ ತರುವ ಬದಲಿಗೆ ಹಂತ ಹಂತವಾಗಿ ತರಬೇಕು. ಇಲ್ಲದಿದ್ದರೆ, ಸಂಪೂರ್ಣ ಸಮಾನತೆಯ ಗೊಂದಲಗಳಿಂದ ಸಮಾಜವು ಪ್ರಕ್ಷುಬ್ಧಗೊಳ್ಳುತ್ತದೆ,”ಎಂದು ಓರಾನ್ ಹೇಳುತ್ತಾರೆ. ಅದಕ್ಕೆ ಮೊದಲು ನಾವು ಸಮಾನತೆಯ ವ್ಯಾಖ್ಯಾನವನ್ನು ಅರಿತುಕೊಳ್ಳಬೇಕಿದೆ. ಗ್ರಾಮ ಸಭೆಗಳಲ್ಲಿ ಸಭೆಗಳಲ್ಲಿ, ಎಲ್ಲರೂ ಸಮಾನತೆ ಮತ್ತು ಅದರ ಪರಿಣಾಮಗಳ ಬಗ್ಗೆ ಮಾತನಾಡುತ್ತಾರೆ. ೨೦೧೦-೨೦೧೧ರ ಕೃಷಿ ಜನಗಣತಿಯ ಅಖಿಲ ಭಾರತ ವರದಿಯು ಬುಡಕಟ್ಟು ಪುರುಷರು ಶೇ.೮೮.೭ರಷ್ಟು ಭೂಮಿಯನ್ನು ಹೊಂದಿರುವುದಾಗಿ ಹೇಳಿದೆ. ೨೦೧೫-೧೬ ರ ಕೃಷಿ ವರದಿಯ ಪ್ರಕಾರ ಭೂಮಾಲೀಕ ಎಸ್ಟಿ ಮಹಿಳೆಯರು ಹೊಂದಿರುವ ಜಮೀನಿನ ಪ್ರಮಾಣ ಶೇಕಡಾ ೧೬.೮೭ ಕ್ಕೆ ಸ್ವಲ್ಪಮಟ್ಟಿಗಿನ ಏರಿಕೆ ಕಂಡಿದೆ.
ಮುಂದುವರೆಯುವುದು…