ಬೆಂಗಳೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ದೇಶದಾದ್ಯಂತ ಪ್ರತಿಭಟನೆಯ ಕಾವು ಹೆಚ್ಚಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಆಗ್ರಹ ಜೋರಾಗಿದೆ. ಸಿಜೆಪಿ ಹಾಗೂ ವಿದ್ಯಾರ್ಥಿಗಳು ನಡೆಸುತ್ತಿದ್ದ ಈ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಕೂಡ ಕೈ ಜೋಡಿಸಿದ್ದು, ದೆಹಲಿ ಮಾತ್ರವಲ್ಲದೇ ಕರ್ನಾಟಕದಲ್ಲಿಯೂ ಕಾಂಗ್ರೆಸ್‌ನ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್‌ನ ಈ ಹೋರಾಟವನ್ನು ಜೆಡಿಎಸ್ ಟೀಕಿಸಿದ್ದು, 2016ರ ಇತಿಹಾಸವನ್ನು ನೆನಪಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್, ಬೇರೆಯವರ ಕಣ್ಣಿನ ಕಸ ಹುಡುಕುವ ಮುನ್ನ, ನಿಮ್ಮ ಕಣ್ಣಿನ ದಿಮ್ಮಿಯನ್ನು ತೆಗೆಯಿರಿ. ನೀಟ್ ವಿಚಾರವಾಗಿ ರಾಜ್ಯದ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಬಹಿಷ್ಕರಿಸುವಂತೆ ಒತ್ತಡ ಹೇರುತ್ತಿರುವ ಕಾಂಗ್ರೆಸ್ ಶಾಸಕರು, ನಾಯಕರೇ ಒಮ್ಮೆ ನೆನಪಿಸಿಕೊಳಿ.

ನಿಮ್ಮದೆ ಸರ್ಕಾರವಿದ್ದಾಗ 2016ರಲ್ಲಿ ಒಂದಲ್ಲ… ಎರೆಡೆರಡು ಬಾರಿ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಅಂದು ಲಕ್ಷಾಂತರ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಕಲ್ಲು ಹಾಕಿದ್ದು ಮರೆತುಹೋಯಿತೇ ? ಅಂದಿನ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ರಾಜೀನಾಮೆ ಆಗ್ರಹಿಸಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡಿದ್ದರು. ಆಗ ಶಿಕ್ಷಣ ಸಚಿವರು ರಾಜೀನಾಮೆ ಕೊಟ್ಟಿದ್ದರೇ..?

ಈಗ ನೀಟ್ ವಿಚಾರವಾಗಿ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ, ಪ್ರಚೋದನೆ ನೀಡುವ ಮೂಲಕ ವಾಮಮಾರ್ಗದಲ್ಲಿ ಕಾಂಗ್ರೆಸ್ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ನಾಚಿಕೆಗೇಡು! ವಾಲ್ಮೀಕಿ ಹಗರಣ, SCSP/TSP ಹಣ ದುರ್ಬಳಕೆ, ಕೆಪಿಎಸ್ಸಿ (KPSC) ಹಗರಣ, ಗೃಹಲಕ್ಷ್ಮಿ (5000 ಕೋಟಿ ) ಹಗರಣ, ಹೀಗೆ… ಸಾಲು ಸಾಲು ಹಗರಣಗಳಾದಾಗ ಬಾಯಿ ಮುಚ್ಚಿಕೊಳ್ಳುವ ಕಾಂಗ್ರೆಸ್ ನಾಯಕರಿಗೆ, ಈಗ ಮಾತನಾಡಲು ಯಾವ ನೈತಿಕತೆ ಇದೆ ? ಎಂದು ಜೆಡಿಎಸ್ ಪ್ರಶ್ನಿಸಿದೆ.

ಧಾರವಾಡದಲ್ಲಿ ಉದ್ಯೋಗ ನೇಮಕಾತಿಗಾಗಿ ಹೋರಾಡಿದ ವಿದ್ಯಾರ್ಥಿಗಳ ಮೇಲೆ , ನರಗುಂದದಲ್ಲಿ ಕಬ್ಬು ಬೆಳೆಗಾರರ ಮೇಲೆ, ಬಿಡದಿಯಲ್ಲಿ ಭೂಸ್ವಾಧೀನ ವಿರೋಧಿಸುತ್ತಿರುವ ರೈತರ ಮೇಲೆ ಲಾಠಿ ಏಟು ಕೊಟ್ಟ ಜನವಿರೋಧಿ ಸರ್ಕಾರ ನಿಮ್ಮದು. ದಲಿತರ ಮನೆಗೆ ಬೆಂಕಿ ಬಿದ್ದಾಗ, ಹುಬ್ಬಳ್ಳಿಯಲ್ಲಿ ಗಲಭೆಯಾದಾಗ ನಿಮ್ಮ ಬಾಯಿ ಏಕೆ ಮುಚ್ಚಿತ್ತು ಕಾಂಗೆಸ್ಸಿಗರೇ ? ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ನಾಯಕರ ಭ್ರಷ್ಟಾಚಾರ, ಬೂಟಾಟಿಕೆ ಹಾಗೂ ದ್ವಂದ್ವ ನೀತಿಯನ್ನು ರಾಜ್ಯದ ಯುವಜನತೆ ಗಮನಿಸುತ್ತಿದ್ದಾರೆ ಎಂದು ಜೆಡಿಎಸ್ ಕಿಡಿಕಾರಿದೆ.






