ಮೈಸೂರು:ಮಾ. 26: ಇಂದು ಮೈಸೂರಿನಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ಸಮಾರೋಪ ಸಮಾವೇಶ ನಡೆಯಲಿದೆ. ಇಂದು ಸಂಜೆ 4 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನ ಉತ್ತನಹಳ್ಳಿ ರಿಂಗ್ ರಸ್ತೆ ಬಳಿ ಬೃಹತ್ ಸಮಾರೋಪ ಸಮಾರಂಭ ಆಯೋಜನ ಎ ಮಾಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಸುಮಾರು 10 ಲಕ್ಷ ಜನರು ಕಾರ್ಯಕ್ರಮಕ್ಕೆ ಸಾಕ್ಷಿ ಆಗುವ ನಿರೀಕ್ಷೆ ಇದೆ. ಸಮಾರೋಪ ಸಮಾರಂಭಕ್ಕೂ ಮುನ್ನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ರಿಂಗ್ ರಸ್ತೆಯಿಂದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ತೆರದ ಬಾಹನದಲ್ಲಿ ಮೆರವಣಿಗೆ ಮೂಲಕ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಕರೆದುಕೊಂಡು ಬರಲಾಗುತ್ತದೆ. ಇನ್ನು ಇದೇ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಅವರ ರೈತರ ಬಗೆಗಿನ ಇಚ್ಛಾಶಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಸ್ವರ್ಣಲೇಪಿತ ನೇಗಿಲು ಕೊಟ್ಟು ಇಮ್ಮಡಿ ಪುಲಕೇಶಿ ಮಾದರಿಯ ಕಿರೀಟಧಾರಣೆ ಮಾಡಿ ಗೌರವ ಸಲ್ಲಿಸಲಾಗುತ್ತದೆ.
JDS ‘ಪಂಚರತ್ನ ರಥಯಾತ್ರ’ ಸಾಗಿ ಬಂದ ಹಾದಿ..!
ನವೆಂಬರ್ 18ರಂದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುರುಡುಮಲೆಯಿಂದ ಶುರುವಾದ ಪಂಚರತ್ನ ರಥಯಾತ್ರೆ ಮಾರ್ಚ್ 24 ರವರೆಗೂ ನಡೆದಿದೆ. ಈ ಯಾತ್ರೆ ಸುಮಾರು 90 ದಿನಗಳ ರಾಜ್ಯ ಸಂಚಾರ ಮಾಡಿದ್ದು, ಒಟ್ಟು 88 ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ ಸಾಗಿದೆ. ಮಾಜಿ ಸಿಎಂ H.D ಕುಮಾರಸ್ವಾಮಿ ಮುಂದಾಳತ್ವದಲ್ಲಿ 10 ಸಾವಿರ ಕಿಲೋ ಮೀಟರ್ ಪ್ರಯಾಣ ಪ್ರಚಾರ ಮಾಡಲಾಗಿದೆ. ಸುಮಾರು 5,500ಕ್ಕೂ ಹೆಚ್ಚು ಗ್ರಾಮಗಳಲ್ಲಿ 55 ಲಕ್ಷಕ್ಕೂ ಹೆಚ್ಚು ಜನರನ್ನು ಯಾತ್ರೆ ತಲುಪಿದೆ. ಸಾಮಾಜಿಕ ಜಾಲತಾಣದ ಮೂಲಕ 3 ಕೋಟಿಗೂ ಅಧಿಕ ಜನರನ್ನು ಸಂಪರ್ಕ ಮಾಡಲಾಗಿದೆ ಎನ್ನುವುದು ಜೆಡಿಎಸ್ ಮೂಲಗಳ ಮಾಹಿತಿ. ಇನ್ನು ಕುಮಾರಸ್ವಾಮಿಗೆ ಪ್ರತಿ ಕ್ಷೇತ್ರದಲ್ಲೂ 789 ತರಹೇವಾರಿ ಹಾರಗಳನ್ನು ಹಾಕಿದ ಬೆಂಬಲಿಗರು ಐತಿಹಾಸಿಕ ದಾಖಲೆಯನ್ನೂ ಸೃಷ್ಟಿ ಮಾಡಿದ್ದಾರೆ.
ಪಂಚರತ್ನ ಸಮಾರೋಪ ಕಾರ್ಯಕ್ರಮದ ಸಿದ್ಧತೆ ಹೇಗಿದೆ..!?
ಇಂದು ಸಂಜೆ ನಡೆಯುತ್ತಿರುವ ಪಂಚರತ್ನ ಸಮಾರೋಪ ಸಮಾವೇಶಕ್ಕೆ ಟಿಕೆಟ್ ಘೋಷಣೆ ಆಗಿರುವ ಹಾಗು ಟಿಕೆಟ್ ಆಕಾಂಕ್ಷಿಯಾಗಿರುವ ಎಲ್ಲಾ ಕ್ಷೇತ್ರದ ನಾಯಕರೂ ಭಾಗಿಯಾಗಲಿದ್ದಾರೆ. ಸುಮಾರು 10 ಲಕ್ಷ ಜನರು ಸೇರುವ ನಿರೀಕ್ಷೆ ಇದ್ದು, ರಾಜ್ಯಾದಂತ ಜನರನ್ನು ಕರೆತರಲು 10 ಸಾವಿರ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ವಿಶಿಷ್ಟ ಸ್ಮರಣಿಕೆ ನೀಡಲು ಸ್ವರ್ಣಲೇಪಿತ ನೇಗಿಲು, ಇಮ್ಮಡಿ ಪುಲಕೇಶಿ ಮಾದರಿ ಕಿರೀಟ ಸಜ್ಜಾಗಿದೆ. ಜೆಡಿಎಸ್ ಕಾರ್ಯಕರ್ತ ಸತೀಶ್‌ಗೌಡ ಎಂಬುವರು ದೊಡ್ಡ ಗೌಡರಿಗೆ ಈ ಉಡುಗೊರೆ ನೀಡುತ್ತಿದ್ದಾರೆ. ಕಲಾವಿದ ನಂದನ್ ಸಿಂಗ್ ಈ ಸ್ಮರಣಿಕೆಗಳನ್ನು ತಯಾರಿಸಿದ್ದಾರೆ.
JDS ಸಮಾರೋಪ ಸಮಾರಂಭದ ವೇದಿಕೆ ವಿಶೇಷ
100 ಎಕರೆ ವಿಶಾಲ ಜಾಗದಲ್ಲಿ ಬೃಹತ್ ಸಮಾವೇಶಕ್ಕೆ ತಯಾರಿ ನಡೆದಿದ್ದು, ಸಮಾರೋಪ ಸಮಾರಂಭದ ವೇದಿಕೆಯನ್ನು 100×50 ಅಡಿಯ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿದೆ. ವೇದಿಕೆ ಕಾರ್ಯಕ್ರಮ ಎಲ್ಲರಿಗೂ ವೀಕ್ಷಣೆಗೆ ಅವಕಾಶವಾಗುವಂತೆ LED ಪರದೆ ವ್ಯವಸ್ಥೆ ಮಾಡಲಾಗಿದೆ. ಅದ್ಧೂರಿ ರೋಡ್ ಶೋ ಮೂಲಕ ದೇವೇಗೌಡರ ಎಂಟ್ರಿಯಾದ ಬಳಿಕ ಲಕ್ಷಾಂತರ ಜನರನ್ನು ಉದ್ದೇಶಿಸಿ ಕೆಲವು ನಾಯಕರು ಮಾತನಾಡಲಿದ್ದಾರೆ. ಕಾರ್ಯಕರ್ತರಿಗೆ ಕುರ್ಚಿ, ಭೋಜನ, ಹಲವು ಬಗೆಯ ಸಿಹಿತಿನಿಸು ಸೇರಿದಂತೆ ಈಗಾಗಲೇ ಬಾಣಸಿಗರು ಸಿದ್ಧತೆ ನಡೆಸಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಸಿದ್ದರಾಮೋತ್ಸವಕ್ಕೆ ಜೆಡಿಎಸ್ ಸಡ್ಡು ಹೊಡೆಯುತ್ತಾ..?
ಆಗಸ್ಟ್ 3ರಂದು ನಡೆದಿದ್ದ ಕಾರ್ಯಕ್ರಮದಲ್ಲಿ ಸರಿ ಸುಮಾರು ನಾಲ್ಕೈದು ಲಕ್ಷ ಜನರು ಭಾಗಿಯಾಗಿದ್ದರು ಎನ್ನುವುದು ಮಾಹಿತಿ. ಆ ಬಳಿಕ ದಾವಣಗೆರೆಯಲ್ಲಿ ನಡೆದ ಬಿಜೆಪಿಯ ಮಹಾಸಂಗಮ ಸಮಾವೇಶಕ್ಕೆ 10 ಜನರು ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿತ್ತು. ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗುವ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಕುತೂಹಲವೂ ಇತ್ತು. ಆದರೆ ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ಮಹಾಸಂಗಮ ಮೀರಿಸಲಿಲ್ಲ. ಆದರೆ ಇದೀಗ ಕುಮಾರಸ್ವಾಮಿ ಸಿದ್ದರಾಮಯ್ಯ ಹುಟ್ಟೂರು ಮೈಸೂರಿನಲ್ಲೇ ಈ ಅದ್ಧೂರಿ ಕಾರ್ಯಕ್ರಮ ನಡೆಸುತ್ತಿದ್ದು 10 ಲಕ್ಷ ಜನರನ್ನು ಸೇರಿದಲು 10 ಸಾವಿರ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಸಿದ್ದರಾಮೋತ್ಸವವನ್ನು ಮೀರಿಸುತ್ತಾ ಇಲ್ವಾ ಅನ್ನೋದನ್ನು ಕಾದು ನೋಡಬೇಕಿದೆ.
ಕೃಷ್ಣಮಣಿ