ಉಪಚುನಾವಣೆಗಳು ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಆಗುವುದಿಲ್ಲ. ಈ ರಾಜ್ಯದ ಜನತೆಗೆ ಆಗಿರುವ ನೋವು ಹೇಳಿಕೊಳ್ಳಲು ಇದು ಒಂದು ಅವಕಾಶ. ಉಪಚುನಾವಣೆಯಲ್ಲಿ ಆಡಳಿತ ಯಂತ್ರ ಬಳಸಿಕೊಳ್ಳುವ ಅವಕಾಶ ಇರುತ್ತದೆ. ಅದು ಬಿಜೆಪಿಯವರಿಗೆ ಚೆನ್ನಾಗಿ ಗೊತ್ತಿದೆ. ಅವರು ಏನೇ ಮಾಡಿದರೂ ಮತದಾರರ ತೀರ್ಪು ಮುಖ್ಯ. ಜನ ತಮ್ಮ ಮತವನ್ನು ಒತ್ತಡ ಮತ್ತಿತರ ವಿಚಾರಕ್ಕೆ ಮಾರಿಕೊಳ್ಳಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅರುಣ್ ಸಿಂಗ್ ಅವರು ಯಡಿಯೂರಪ್ಪ ಅವರು ಪ್ರಾಮಾಣಿಕರು, ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಮಾಡುವುದಿಲ್ಲ ಎಂದಿದ್ದರು. ಆದರೆ ಏನಾಯ್ತು? ಯತ್ನಾಳ್ ಹಾಗೂ ಬೆಲ್ಲದ್ ಅವರು ಏನು ಹೇಳಿದ್ದರು? ಮತ್ತೆ ಕೆಲವರು ಪರೀಕ್ಷೆ ಪಾಸ್ ಮಾಡುವುದಾಗಿ ತಿಳಿಸಿದ್ದರು. ಹೀಗಾಗಿ ಬಿಜೆಪಿ ಅವರ ಮಾತು ನಂಬಲು ಸಾಧ್ಯವಿಲ್ಲ. ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂದು ಹೇಳಿದ್ದಾರೆ.
ಉಪಚುನಾವಣೆಯಲ್ಲಿ ಜೆಡಿಎಸ್ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಿರುವುದು, ಅವರ ರಾಜಕೀಯ ತಂತ್ರಗಾರಿಕೆ. ಅನುಭವಕ್ಕೆ ತಕ್ಕಂತೆ ಅವರು ತಂತ್ರಗಾರಿಕೆ ಮಾಡುತ್ತಾರೆ. ನಮ್ಮ ಪಕ್ಷದ ಸೂಚನೆ ಮೇರೆಗೆ ಸಮ್ಮಿಶ್ರ ಸರ್ಕಾರದಲ್ಲಿ ನಾನು ನನ್ನ ಕರ್ತವ್ಯ ಮಾಡಿದ್ದೆ. ಫಲ ಆ ಭಗವಂತ ನೋಡಿಕೊಳ್ಳಲಿ. ನಾವೇ ಅವರನ್ನು ಸಿಎಂ ಮಾಡಬೇಕು ಅಂತಾ ಹೋಗಿದ್ದು ನಿಜ. ಕೊನೆ ಘಳಿಗೆವರೆಗೂ ಬೆಂಬಲವಾಗಿ ನಿಂತಿದ್ದೆವು. ಮುಂದೆ ರಾಜ್ಯ ಹಾಗೂ ರಾಷ್ಟ್ರಕ್ಕೆ ಒಳ್ಳೆಯದಾಗಲು ಎಲ್ಲ ರೀತಿಯ ಕೆಲಸ ಮಾಡುತ್ತೇವೆ. ದೇಶಕ್ಕೆ ಒಳ್ಳೆಯದಾಗಬೇಕು, ಜಾತ್ಯಾತೀತ ತತ್ವ ಒಂದಾಗಬೇಕು. ಜಿಡಿಎಸ್ ನವರು ಕಾಂಗ್ರೆಸ್ ಸೋಲಿಸಲು ಅಥವಾ ಬಿಜೆಪಿ ಗೆಲ್ಲಿಸಲು ತಮ್ಮ ಅಭ್ಯರ್ಥಿ ಕಣಕ್ಕಿಳಿಸಿದ್ದಾರೋ? ಬಿಜೆಪಿ ಜತೆ ಒಳ ಒಪ್ಪಂದ ಮಾಡಿದ್ದಾರೋ, ಇಲ್ಲವೋ ಎಂಬುದು ನಿಮ್ಮ ವಿಶ್ಲೇಷಣೆಗೆ ಬಿಟ್ಟ ವಿಚಾರ ಎಂದು ಅವರಂದಿದ್ದಾರೆ.
ಬಿಜೆಪಿ ಸರಕಾರ ದಿನನಿತ್ಯ ಜನರ ಜೇಬಿಗೆ ಕನ್ನ ಹಾಕಲಾಗುತ್ತಿದೆ. ರೈತರ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಉತ್ತರ ಕರ್ನಾಟಕದ ಬೊಮ್ಮಾಯಿ ಅವರು ಮಹದಾಯಿ ಕೆಲಸ ಆರಂಭಿಸುತ್ತಾರೆ, ಕಾವೇರಿಯ ಮೇಕೆದಾಟು ಯೋಜನೆ ಮಾಡುತ್ತಾರೆ, ಕೃಷ್ಣ ಯೋಜನೆಗೆ ಕ್ರಮ ಕೈಗೊಳ್ಳುತ್ತಾರೆ ಎಂದು ಭಾವಿಸಿದ್ದೆವು. ಆದರೆ ಅವರು ಈ ವಿಚಾರವಾಗಿ ಒಂದು ದಿನವೂ ಉಸಿರೇ ಎತ್ತುತ್ತಿಲ್ಲ. 25 ಸಂಸದರನ್ನು ಕರೆದುಕೊಂಡು ಹೋಗಿ ಪ್ರಧಾನಮಂತ್ರಿಗಳ ಮುಂದೆ ಕೂರಿಸಿ, ನಮ್ಮ ಯೋಜನೆಗಳಿಗೆ ಅನುಮತಿ ನೀಡಿ ಎಂದು ಪಟ್ಟು ಹಿಡಿಯಲಿ. ಸಣ್ಣ ರಾಜ್ಯ ಗೋವಾ ಮುಂದೆ 25 ಸಂಸದರು ಸುಮ್ಮನಿದ್ದಾರೆ. ಜನ ಇವರಿಗೆ ಮತ ಹಾಕಿದ್ದು ಯಾಕೆ? ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಈ ಬಗ್ಗೆ ಮಾತನಾಡುತ್ತಿಲ್ಲ. ನ್ಯಾಯಾಲಯದಲ್ಲಿ ಮಹದಾಯಿ ತೀರ್ಮಾನ ಆಗಿದ್ದರೂ ಯೋಜನೆಗೆ ತಡ ಯಾಕೆ? ಬಿಜೆಪಿಯಿಂದ ಈ ರಾಜ್ಯಕ್ಕೆ ಒಳ್ಳೆಯದಾಗುವುದಿಲ್ಲ. 25 ಸಂಸದರು, ಜತೆಗೆ ರಾಜ್ಯ ಹಾಗೂ ಕೇಂದ್ರದಲ್ಲಿ ಇವರದೇ ಡಬಲ್ ಇಂಜಿನ್ ಸರ್ಕಾರ ಇಟ್ಟುಕೊಂಡು ಎಲ್ಲ ಕೆಲಸ ಮಾಡುತ್ತೇವೆ ಎಂದಿದ್ದರು. ಏನು ಮಾಡಿದ್ದಾರೆ? ಈ ಭಾಗದ ಜನ, ರಾಜ್ಯದ ರೈತರು ಇವರಿಗೆ ಸರಿಯಾದ ಬುದ್ಧಿ ಕಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ,