ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಬ್ಬರದಲ್ಲಿ ಬಿಜೆಪಿ ಹಾಗು ಜೆಡಿಎಸ್ ಕೊಚ್ಚಿ ಹೋಗಿವೆ. 224 ಕ್ಷೇತ್ರಗಳ ಪೈಕಿ 135 ಸ್ಥಾನಗಳಲ್ಲಿ ಗೆದ್ದು ಕಾಂಗ್ರೆಸ್ ಅಧಿಕಾರ ಹಿಡಿದರೆ, 66 ಸ್ಥಾನಗಳನ್ನು ಗೆದ್ದು ವಿರೋಧ ಪಕ್ಷವಾಗಿ ಗುರುತಿಸಿಕೊಂಡಿದೆ. ಆದರೆ ಕೇವಲ 19 ಸ್ಥಾನಗಳಲ್ಲಿ ಗೆದ್ದು ಹೀನಾಯ ಸ್ಥಿತಿ ತಲುಪಿರುವ ಜೆಡಿಎಸ್, ಮುಂದಿನ ಚುನಾವಣೆ ಹಾಗು ಮುಂದಿನ 5 ವರ್ಷಗಳ ಕಾಲ ಪಕ್ಷವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಕುಮಾರಸ್ವಾಮಿ ಮೇಲಿದೆ. ಇದೀಗ ಪಕ್ಷವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಹೊತ್ತಿರುವ ಕುಮಾರಸ್ವಾಮಿ ಅಮಿತ್ ಷಾ ಭೇಟಿ ಮಾಡಲಿದ್ದಾರೆ ಎನ್ನೋ ಸುದ್ದಿ ಹೊರಬಿದ್ದಿದೆ.
ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ..!

ಕಳೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಹಾಗು ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿತ್ತು. ಅಂದು ಕಾಂಗ್ರೆಸ್ ಹಾಗು ಜೆಡಿಎಸ್ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಎದುರಿಸಿದ್ದವು. ಆದರೆ ಕಾಲ ಬದಲಾಗಿದೆ. ಇದೀಗ ಕರ್ನಾಟಕದಲ್ಲಿ ಕಾಂಗ್ರೆಸ್ ಬಲಾಢ್ಯವಾಗಿದೆ. ಇದೀಗ ಜೆಡಿಎಸ್ ಅನಿವಾರ್ಯತೆ ಕಾಂಗ್ರೆಸ್ಗೆ ಬೇಕಿಲ್ಲ, ಆದರೆ ಬಿಜೆಪಿಗೆ ಜೆಡಿಎಸ್ ಬೆಂಬಲ ಬೇಕು. ಅದೇ ರೀತಿ ಜೆಡಿಎಸ್ಗೂ ಕೂಡ ಆರ್ಥಿಕ ಸಹಕಾರ ಬೇಕಿದೆ. ಇಲ್ಲದಿದ್ರೆ ಜೆಡಿಎಸ್ ಪಕ್ಷವೇ ಮುಳುಗಿ ಹೋಗುವ ಸಂಭವ ಇರುತ್ತದೆ. ಹೀಗಾಗಿ ಅಮಿತ್ ಷಾ ಅವರನ್ನು ಭೇಟಿ ಮಾಡಿ ಚುನಾವಣೆ ಮೈತ್ರಿ ಬಗ್ಗೆ ಚರ್ಚೆ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಕಟ್ಟಿ ಹಾಕಲು ಸಜ್ಜಾಗುತ್ತಿದೆ ವೇದಿಕೆ..!

ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳಲ್ಲಿ ಗೆದ್ದು ಬೀಗಿದ್ದ ಬಿಜೆಪಿ ಈ ಬಾರಿ ಅಷ್ಟೂ ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಕಷ್ಟ ಎನ್ನಲಾಗ್ತಿದೆ. ಬಹುತೇಕ ಸ್ಥಾನಗಳನ್ನು ಕಳೆದುಕೊಳ್ಳುವ ಭೀತಿ ಹೆಚ್ಚಾಗಿದ್ದು, ಹೇಗಾದರೂ ಮಾಡಿ ಇರುವ ಸ್ಥಾನಗಳನ್ನು ಉಳಿಸಿಕೊಳ್ಳಲು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳು ಮುಂದಾಗಿದೆ ಎನ್ನಲಾಗ್ತಿದೆ. ಈಗಾಗಲೇ ಬಿಬಿಎಂಪಿ ಚುನಾವಣೆ ಜೊತೆಗೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪೂರ್ವ ತಯಾರಿ ಮಾಡಿಕೊಳ್ತಿದ್ದು, ಈಗಾಗಲೇ ಜಾರಿ ಮಾಡುತ್ತಿರುವ 5 ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ಗೆ ಲಾಭ ತಂದುಕೊಡುವ ಲೆಕ್ಕಾಚಾರ ಶುರುವಾಗಿದೆ. ಈಗಾಗಲೇ ಚುನಾವಣೆಗೆ ವೇಗ ಕೊಡಲು ಮುಂದಾಗಿರುವ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್, ಚುನಾವಣೆ ಗೆಲ್ಲುವ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ.
ಜೆಡಿಎಸ್ ಕೈ ಹಿಡಿಯದ ಮುಸ್ಲಿಮರು, ಕಾಂಗ್ರೆಸ್ಗೆ ಜೈಕಾರ..!

ಬಿಜೆಪಿ ಕೋಮುಭಾವನೆ ಕೆರಳಿಸುವ ಮೂಲಕ ಮತ ಸೆಳೆಯುವ ಕೆಲಸ ಮಾಡುತ್ತದೆ ಎಂದು ಕಾಂಗ್ರೆಸ್ – ಜೆಡಿಎಸ್ ಸದಾ ಕಾಲ ಆರೋಪ ಮಾಡುತ್ತಿದ್ದವು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯಾತೀತ ಜನತಾದಳವನ್ನು ಮುಸ್ಲಿಂ ಸಮುದಾಯ ಕೈ ಹಿಡಿಯಲಿಲ್ಲ. ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಆಶಯದ ಜೊತೆಗೆ ಪಂಚರತ್ನ ಯೋಜನೆಗಳನ್ನು ರಾಜ್ಯದ ಜನರ ಮುಂದಿಟ್ಟರೂ ಜನರು ಜೆಡಿಎಸ್ ಕೈ ಹಿಡಿಯಲಿಲ್ಲ ಎನ್ನುವ ಕಾರಣದಿಂದ ಭಾರತೀಯ ಜನತಾ ಪಾರ್ಟಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಲೋಕಸಭಾ ಚುನಾವಣೆ ಸ್ಪರ್ಧೆ ಮಾಡುವ ತಯಾರಿ ನಡೀತಿದೆ ಎನ್ನಲಾಗಿದೆ.
ಹಳೇ ಮೈಸೂರು ಭಾಗದಲ್ಲಿ ಸೋಲಿಸಿದ್ದೇ ಬಿಜೆಪಿ..!

ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಹೀನಾಯ ಸೋಲು ಕಾಣಲು ಕಾಂಗ್ರೆಸ್ ಅಬ್ಬರದ ಜೊತೆಗೆ ಬಿಜೆಪಿ ಸೆಳೆದ ಮತಗಳ ಸಂಖ್ಯೆಯೂ ಕೂಡ ಕಾರಣ. ಪ್ರಧಾನಿ ನರೇಂದ್ರ ಮೋದಿ ಹಾಗು ಅಮಿತ್ ಷಾ ಅಬ್ಬರದ ಪ್ರಚಾರ ಮಾಡುವ ಮೂಲಕ ನಾಲ್ಕೈದು ಸಾವಿರ ಮತಗಳನ್ನು ಸೆಳೆದಿದ್ದರಿಂದ ಜೆಡಿಎಸ್ ಹಲವು ಕ್ಷೇತ್ರಗಳಲ್ಲಿ ಸೋಲುಂಡಿತ್ತು. ಆದರೆ ಕಾಲಚಕ್ರ ತಿರುಗಿದಂತೆ ಕೆಲವೇ ದಿನಗಳಲ್ಲಿ ಎದುರಾಳಿಗಳೇ ಬಾಂಧವ್ಯ ಬೆಸೆಯುವ ಲಕ್ಷಣಗಳು ಗೋಚರ ಆಗುತ್ತಿವೆ. ಜೆಡಿಎಸ್ಗೂ ಕೂಡ ಇದು ಅನಿವಾರ್ಯ ಆಗಿದ್ದು, ಕೇಸರಿ ಪಾಳಯದ ಕಡೆಗೆ ಆಸೆಗಣ್ಣುಗಳಿಂದ ನೋಡುವಂತಾಗಿದೆ.
ಕೃಷ್ಣಮಣಿ











