ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ದೊಡ್ಡ ಅಲೆ ಎಂಬಂತೆ ನಟ ಸುದೀಪ್ ಬಿಜೆಪಿಯ ಸ್ಟಾರ್ ಪ್ರಚಾರಕ ಎಂದು ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ನಾನು ರಾಜಕೀಯಕ್ಕೆ ಪ್ರವೇಶಿಸೋದಿಲ್ಲ. ಬಿಜೆಪಿಗೂ ಸೇರ್ಪಡೆಯಾಗೋದಿಲ್ಲ. ಆದರೆ ಸಿಎಂ ಬೊಮ್ಮಾಯಿ ಪರವಾಗಿ ನಾನು ಪ್ರಚಾರ ಮಾಡುತ್ತೇನೆ ಎಂದು ಬಹಿರಂಗವಾಗಿ ಹೇಳಿದ್ದರು. ಈ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಪ್ರಚಾರದ ಕಣಕ್ಕೆ ಇಳಿಯುವ ಬಗ್ಗೆ ಖುದ್ದು ಸುದೀಪ್ ಮಾಹಿತಿ ನೀಡಿದ್ದರು.
ಸುದೀಪ್ ಬಿಜೆಪಿಯ ಸ್ಟಾರ್ ಪ್ರಚಾರಕನಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಚುನಾವಣೆ ಪೂರ್ಣಗೊಳ್ಳುವವರೆಗೂ ನಟ ಸುದೀಪ್ ನಟನೆಯ ಯಾವುದೇ ಸಿನಿಮಾ, ಜಾಹೀರಾತು, ಪೋಸ್ಟರ್ ಹಾಗೂ ಯಾವುದೇ ಶೋಗಳನ್ನು ಪ್ರಸಾರ ಮಾಡುವಂತಿಲ್ಲ. ಇವುಗಳಿಂದ ಮತದಾರರು ಪ್ರಭಾವಕ್ಕೆ ಒಳಗಾಗುತ್ತಾರೆ. ಹೀಗಾಗಿ ನೀತಿ ಸಂಹಿತೆ ಜಾರಿ ಇರುವವರೆಗೂ ಸುದೀಪ್ ತೆರೆಯ ಮೇಲೆ ಕಾಣಿಸಿಕೊಳ್ಳುವುದಕ್ಕೆ ತಡೆ ಹಿಡಿಯಬೇಕೆಂದು ಕೋರಿ ಮುಖ್ಯ ಚುನಾವಣಾಧಿಕಾರಿಗಳಿಗೆ ಜೆಡಿಎಸ್ ಪತ್ರ ಬರೆದಿದೆ.
ಈ ಬಾರಿ ಕಿಚ್ಚ ಸುದೀಪ್ ಸಕ್ರಿಯ ರಾಜಕಾರಣಕ್ಕೆ ಧುಮುಕುತ್ತಾರೆ ಎಂದೇ ಹೇಳಲಾಗಿತ್ತು. ಬಿಜೆಪಿಯಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂದೂ ಊಹಿಸಲಾಗಿತ್ತು. ಆದರೆ ಸುದ್ದಿಗೋಷ್ಠಿ ನಡೆಸಿ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದ ನಟ ಸುದೀಪ ನಾನು ರಾಜಕೀಯಕ್ಕೆ ಧುಮುಕುತ್ತಿಲ್ಲ ಆದರೆ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದರು. ಇದಾದ ಬಳಿಕ ಕಾಂಗ್ರೆಸ್ ಇದೇ ವಿಚಾರವನ್ನು ಇಟ್ಟುಕೊಂಡು ಬಿಜೆಪಿಯ ಕಾಲೆಳೆಯುವ ಕೆಲಸ ಮಾಡುತ್ತಲೇ ಬಂದಿತ್ತು. ಇದೀಗ ಈ ಸಾಲಿಗೆ ಜೆಡಿಎಸ್ ಕೂಡ ಸೇರಿಕೊಂಡಿದ್ದು ಚುನಾವಾಣಾಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ತನ್ನ ಆಕ್ರೋಶ ಹೊರ ಹಾಕಿದಂತೆ ಕಾಣುತ್ತಿದೆ.