ಮುಡಾದಲ್ಲಿ (Muda) ಮುಕ್ಕಿ ತಿಂದಿರುವ ಮಜಾವಾದಿಯ ಸುಳ್ಳುಗಳು ಬಗೆದಷ್ಟು ಹೊರಬರುತ್ತಲೇ ಇದೆ. ಸಿದ್ದರಾಮಯ್ಯ ಅವರೇ (Cm siddaramaiah), ನೀವೇ ಹೇಳಿಕೊಂಡಂತೆ, ದೇವನೂರು 3ನೇ ಹಂತದ ಬಡಾವಣೆಯಲ್ಲಿ ನಿವೇಶನಗಳು ಲಭ್ಯವಿರದ ಕಾರಣಕ್ಕೆ ಸಮಾನಂತರ ಬಡಾವಣೆಯಲ್ಲಿ ನಿವೇಶನಗಳನ್ನು ನೀಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು ಎಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದೀರಿ.ಆ ಸುಳ್ಳಿನಿಂದ ಈಗ ನೀವು ಜನರೆದುರು ಬೆತ್ತಲಾಗಿದ್ದೀರಿ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ದೇವನೂರು 3ನೇ ಹಂತದ ಬಡಾವಣೆಯಲ್ಲಿ ಈಗಲೂ ಇನ್ನೂ 370 ನಿವೇಶನಗಳು (370 sites) ಬಾಕಿ ಇದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವೇ ( 28-01-2025) ರಂದು ಮಾಹಿತಿ ನೀಡಿದೆ.

ತಾವು ರಾಜಕೀಯ ಪ್ರಭಾವ ಬೀರಿ ದೇವನೂರು ಬಡಾವಣೆ ಬದಲಿಗೆ, ಅಭಿವೃದ್ಧಿ ಹೊಂದಿದ ವಿಜಯನಗರ ಬಡಾವಣೆಯಲ್ಲಿ (Vijayanagar layout) 14 ನಿವೇಶನಗಳನ್ನು ಪಡೆದುಕೊಂಡಿದ್ದೀರಿ ಎಂಬುದು ಸತ್ಯವಾಗಿದೆ.
ರಾತ್ರೋರಾತ್ರಿ ಟಾರ್ಚ್ ಬೆಳಕಿನಲ್ಲಿ ವೈಟ್ನರ್ ಹೆಚ್ಚಿದ್ದು ಮಹಾ ಅಪರಾಧ ಕೃತ್ಯ. ವೈಟ್ನರ್ ಹಚ್ಚಿ ಕಪ್ಪು ಚುಕ್ಕೆ ಅಳಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಕಪೋಲಕಲ್ಪಿತ ಕಟ್ಟುಕತೆಗಳ ಸುಳ್ಳು ಮರೆಮಾಚಲು ಮತ್ತೊಂದು ಸುಳ್ಳು ಹೇಳುತ್ತಾ ವಿವೇಕ ಶೂನ್ಯರಾಗಿ ಈಗ ನಾಡಿನ ಜನರ ಮುಂದೆ ಬೆತ್ತಲಾಗಿದ್ದೀರಿ.
ಇನ್ನಾದರೂ ನಿಮ್ಮ ಮೊಂಡುತನ, ಭಂಡತನ ಬಿಟ್ಟು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ ಎಂದು ಸಿದ್ದರಾಮಯ್ಯ ಹಳೆಯ ಟ್ವೀಟ್ ನ ಸ್ಕ್ರೀನ್ ಶಾಟ್ ಸಮೇತ ಜೆಡಿಎಸ್ ಟ್ವೀಟ್ ಮಾಡಿದೆ.











