ಈ ದುನಿಯಾನೇ ಹಾಗೆ. ಯಾವಾಗ ಏನು ಬೇಕಾದರೂ ಆಗುತ್ತೆ. ಅಷ್ಟೇ ಯಾಕೆ, ಅದೃಷ್ಟ ಯಾವಾಗ ಬೇಕಾದರೂ ಹುಡುಕಿ ಬರುತ್ತೆ ಅನ್ನುವುಕ್ಕೆ ಈ ಸುದ್ದಿ ಉದಾಹರಣೆ. ಹೌದು, ಇಲ್ಲೊಂದು ಸಿನಿಮಾ ಒಂಬತ್ತು ವರ್ಷಗಳ ಹಿಂದೆ ರಿಲೀಸ್ ಆಗಿತ್ತು. ಆಗ ಆ ಚಿತ್ರ ಪ್ಲಾಫ್ ಆಗಿತ್ತು. ಆದರೆ, ಯುಟ್ಯೂಬ್‌ನಲ್ಲಿ ಅಪ್ ಲೋಡ್ ಆಗಿದ್ದ ಚಿತ್ರ ನೂರು ಕೋಟಿ ವೀಕ್ಷಣೆ ಕಂಡಿದೆ. ಅಷ್ಟೇ ಅಲ್ಲ, ಕೋಟಿ ಕೋಟಿ ಹಣವನ್ನೂ ಗಳಿಸಿದೆ.

ಅಂದಹಾಗೆ, ಆ ಸಿನಿಮಾದ ಹೆಸರು ʼಜಯ ಜಾನಕಿ ನಾಯಕʼ. ಇದು ಹೊಸ ದಾಖಲೆ ಬರೆದ ಕೀರ್ತಿಗೆ ಕಾರಣವಾಗಿದೆ. ಈ ಸಿನಿಮಾದಲ್ಲಿ ರಕುಲ್ ಪ್ರೀತ್ ಸಿಂಗ್ ಮತ್ತು ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಕಾಣಿಸಿಕೊಂಡಿದ್ದಾರೆ. ಯೂಟ್ಯೂಬ್‌ನಲ್ಲಿ ನೂರು ಕೋಟಿ ವೀಕ್ಷಣೆ ಕಂಡ ವಿಶ್ವದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಸೈ ಅವರ ‘ಗಂಗ್ನಮ್ ಸ್ಟೈಲ್’ ಮ್ಯೂಸಿಕ್ ವಿಡಿಯೋ ಈ ದಾಖಲೆ ಮೀರಿದ ಮೊದಲನೆಯದು ಎಂಬುದು ಗಮನಿಸಬೇಕಾದ ಸಂಗತಿ. ಆದರೆ, ಸಿನಿಮಾಗಳ ವಿಷಯಕ್ಕೆ ಬಂದರೆ, ‘ಜಯ ಜಾನಕಿ ನಾಯಕ’ ದಾಖಲೆ ಹೊಂದಿದೆ. ಈ ಚಿತ್ರವು 2017 ರಲ್ಲಿ ರಿಲೀಸ್ ಆಗಿತ್ತು. ಆದರೆ ಬಾಕ್ಸ್ ಆಫೀಸ್ ನಲ್ಲಿ ಮಾತ್ರ ಗಳಿಕೆ ಮಾಡದೆ ಸೋಲು ಕಂಡಿತ್ತು.

ಮಾಹಿತಿ ಪ್ರಕಾರ 40 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿತ್ತು ಎನ್ನಲಾಗಿದೆ. ಆಗ ವಿಶ್ವಾದ್ಯಂತ ಕೇವಲ 20 ಕೋಟಿ ಮಾತ್ರ ಗಳಿಸಿತ್ತು ಎಂದು ಹೇಳಲಾಗಿದೆ. ಈ ಚಿತ್ರದ ವಿಮರ್ಶೆಗಳು ಕೂಡ ಅಷ್ಟಾಗಿ ಚೆನ್ನಾಗಿರಲಿಲ್ಲ. ಆದರೆ, ಸಿನಿಮಾ ಸೋಲು ಅನುಭವಿಸಿದ್ದರಿಂದ ಅದನ್ನು ಯೂಟ್ಯೂಬ್‌ನಲ್ಲಿ ಹಾಕಲಾಗಿತ್ತು. ಅದು ಸಿಕ್ಕಾಪಟ್ಟೆ ವೀಕ್ಷಕರ ಮೆಚ್ಚುಗೆ ಗಳಿಸಿತ್ತು. ಅಲ್ಲಿ ದೊಡ್ಡ ಯಶಸ್ಸು ಪಡೆದುಕೊಂಡಿತು.

ಅಂದಾಜಿನ ಪ್ರಕಾರ ಯೂಟ್ಯೂಬ್‌ನಿಂದಲೇ 20 ಕೋಟಿ ರೂ. ಹಣ ಗಳಿಸಿದೆ ಎನ್ನಲಾಗಿದೆ. ಚಿತ್ರದ ತೆಲುಗು ಆವೃತ್ತಿಗೆ ‘ಜಯ ಜಾನಕಿ ನಾಯಕ’ ಎಂದು ಹೆಸರಿಡಲಾಗಿತ್ತು. ಹಿಂದಿ ಭಾಷೆಯಲ್ಲಿ ಡಬ್ಬಿಂಗ್ ಆಗಿ ತಯಾರಾಗಿದ್ದ ಈ ಸಿನಿಮಾಗೆ ‘ಖುಂಖರ್’ ಎಂದು ಹೆಸರಿಡಲಾಗಿತ್ತು. ಏಳು ವರ್ಷಗಳ ಹಿಂದೆ ಹಿಂದಿ ಡಬ್ಬಿಂಗ್ ಆಗಿ ರಿಲೀಸ್ ಮಾಡಲಾಗಿತ್ತು. ಈ ಚಿತ್ರವನ್ನು ಬೋಯಪತಿ ಶ್ರೀನು ನಿರ್ದೇಶನ ಮಾಡಿದ್ದಾರೆ.

ನಿರ್ದೇಶಕ ಬೋಯಪತಿ ಶ್ರೀನು, ತಮ್ಮ ಸಿನಿಮಾ ದಾಖಲೆ ಮಾಡಿದ್ದರಿಂದ ಖುಷಿಗೊಂಡಿದ್ದಾರೆ. ಅದಷ್ಟೇ ಅಲ್ಲ, ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ನೂರು ಕೋಟಿ ವೀಕ್ಷಣೆ. ಕೋಟ್ಯಂತರ ಹೃದಯಗಳು. ಒಂದು ಬಿಲಿಯನ್ ಭಾವನೆಗಳು. ಒಂದು ಚಿತ್ರ. ಈ ಮೈಲಿಗಲ್ಲು ಸಾಧಿಸಿದ ಮೊದಲ ಚಿತ್ರ. ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು’ ಎಂದು ಅವರು ಬರೆದುಕೊಂಡು ಸಂತಸ ಪಟ್ಟಿದ್ದಾರೆ.






