
ಜನಾರ್ದನ ರೆಡ್ಡಿಗೆ ಜೈಲು ಶಿಕ್ಷೆ ಆದ ಬಗ್ಗೆ ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ ಮಾತನಾಡಿ, ನಾವು ಹಲವು ದಾಖಲಾತಿ ಕಲೆಹಾಕಿ ಸುಪ್ರೀಂ ಕೋರ್ಟ್ ಗೆ ಹೋಗಿದ್ವಿ. ಎಂಥಾ ಕಠಿಣ ಪರಿಸ್ಥಿತಿಯಲ್ಲೂ ನಾವು ಎದೆಗುಂದದೆ ಕೇಸು ನಡೆಸಿದ್ವಿ. ಈಗ ಬಂದಿರುವ ತೀರ್ಪು ಒಂದು ಆಶಾಭಾವನೆ ಮೂಡಿಸಿದೆ ಎಂದಿದ್ದಾರೆ. ನಮ್ಮ ಹೋರಾಟಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ, ಆಂಧ್ರ ಹಾಗೂ ಕರ್ನಾಟಕದಲ್ಲಿ ನಡೆದ ಅತಿ ದೊಡ್ಡ ಹಗರಣ ಇದು. ಭ್ರಷ್ಟಾಚಾರ ವ್ಯಾಪಾಕವಾಗಿ ಹಬ್ಬಿರುವ ಈ ಕಾಲದಲ್ಲಿ ಈ ಆದೇಶ ಸಂತೃಪ್ತಿ ತಂದಿದೆ ಎಂದಿದ್ದಾರೆ.

ಸಿಬಿಐ, ಸುಪ್ರಿಂಕೋರ್ಟ್ ಮೇಲೆ ಈಗ ಭರವಸೆ ಹೆಚ್ಚಾಗಿದೆ. ಹೈ ಕ್ವಾಲಿಟಿ ಅದಿರನ್ನು ಇಲ್ಲಿಂದ ದೋಚಿಕೊಂಡು ಆಂಧ್ರದಿಂದ ತಂದಿದ್ದು ಅಂತ ಹೇಳ್ತಿದ್ರು. ಹಣವಂತರು ರಾಜಕೀಯ ಅಧಿಕಾರವಂತರು ಮಾಡಬಾರದ ಕೆಲಸ ಮಾಡಿದ್ರು. ಜಸ್ಟಿಸ್ ಸಂತೋಷ್ ಹೆಗಡೆ ಶ್ರಮ ಈ ಕ್ಷಣವೂ ನಾವು ಸ್ಮರಿಸಿಕೊಳ್ಳಬೇಕು. ಅಧಿಕಾರಿಗಳೇ ಈ ಪ್ರಕರಣದಲ್ಲಿ ಖುದ್ದು ಭಾಗಿಯಾಗಿದ್ರು. ಬಹಳ ಸುದೀರ್ಘವಾದ ಹೋರಾಟ ಮಾಡಿದ್ದೇವೆ. ಜೀವಕ್ಕೆ ಅಪಾಯ ಅಂತ ಗೊತ್ತಿದ್ರೂ ನಾವು ಹಾಗೂ ನಮ್ಮ ತಂಡದವರು ಛಲ ಬಿಡದೆ ಹೋರಾಟ ಮಾಡಿದ್ದೆವು ಎಂದಿದ್ದಾರೆ.
ಜನಾರ್ದನ ರೆಡ್ಡಿಗೆ ಮತ್ತೆ ಜೈಲು ಶಿಕ್ಷೆ ಆಗಿರುವ ಬಗ್ಗೆ ಮಾಧ್ಯಮಗಳಿಗೆ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದು, ಅಕ್ರಮ ಗಣಿಗಾರಿಕೆ ಪ್ರಕರಣದ ವರದಿಯನ್ನ ಸರ್ಕಾರಕ್ಕೆ ನಾನು ಕೊಟ್ಟಿದ್ದೆ. ಕಾನೂನಿನ ಕಣ್ತಪ್ಪಿಸಿ ಅಕ್ರಮ ಗಣಿಗಾರಿಕೆ ಮಾಡಿದ್ರು. ರಿಪಬ್ಲಿಕ್ ಆಪ್ ಬಳ್ಳಾರಿ ಎನ್ನುವ ಶಬ್ದವನ್ನ ನಾನು ಅಂದಿನ ವರದಿಯಲ್ಲಿ ಉಲ್ಲೇಖಿಸಿದ್ದೆ. ಬಳ್ಳಾರಿಯಲ್ಲಿ ಕೊಲೆ ನಡೆದರೂ ಕೇಸ್ ರಿಜಿಸ್ಟರ್ ಆಗ್ತರಲಿಲ್ಲ. ಬಳ್ಳಾರಿಯ ಜನತೆಗೆ ಸಾಕಷ್ಟು ಅನ್ಯಾಯ ಮಾಡಿದ್ರು. ಕರ್ನಾಟಕದ ಗಡಿಯನ್ನೇ ಬದಲಿಸಿದ್ರು. ಈಗ ಶಿಕ್ಷೆ ಆಗಿರೋದು ಖುಷಿ ತಂದಿದೆ ಎಂದಿದ್ದಾರೆ.

ಆಂಧ್ರ ಪ್ರದೇಶದ ಗಡಿ ಎಂದು ಹೇಳಿ ಕರ್ನಾಟಕದಲ್ಲೇ ಆಕ್ರಮ ಎಸೆಗಿದ್ರು. ಬಳ್ಳಾರಿಯ ಗಡಿಯನ್ನೇ ಧ್ವಂಸ ಮಾಡಿದ್ರು. ಈಗ ಶಿಕ್ಷೆ ಆಗಿರೋದು ಖುಷಿ ತಂದಿದೆ, ಆದರೆ ಕಾನೂನು ಇಷ್ಟೊಂದು ವಿಳಂಬ ಆಗಬಾರದು. ಈಗ ಮತ್ತೆ ಹೈಕೋರ್ಟ್‌ಗೆ ಹೋಗ್ತಾರೆ. ಅಲ್ಲಿ ಕಾಲ ಹರಣ ಆಗುತ್ತದೆ. ಈ ರೀತಿಯ ಕಾನೂನಿನಲ್ಲಿ ಬದಲಾವಣೆ ಆಗಬೇಕು. ಒಂದೆರಡು ವರ್ಷಗಳಲ್ಲಿ ಕೇಸ್ ಇತ್ಯರ್ಥವಾಗಿ ಶಿಕ್ಷೆ ಆಗಬೇಕು. ಜನರು, ವ್ಯವಸ್ಥೆ ಕೂಡ ಬದಲಾಗಬೇಕಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಸಮಾಧಾನ ಹೊರ ಹಾಕಿದ್ದಾರೆ.