ಸಮಾಜದ ಗರ್ಭದಲ್ಲೇ ಸಾಹಿತ್ಯದ ಅಂಕುರ ಇರುವಾಗ ಸಾಹಿತ್ಯ ಸಮ್ಮೇಳನ ಯಾರೊಡನೆ ಇರಬೇಕು ?
ಹಾವೇರಿಯಲ್ಲಿ ನಡೆಯುತ್ತಿರುವ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವಿಭಿನ್ನ ಆಯಾಮಗಳ ವಿವಾದಗಳನ್ನು ಹುಟ್ಟುಹಾಕಿದೆ. ಒಂದು ಪ್ರಯೋಗಶೀಲ, ಸೃಜನಶೀಲ, ಚಲನಶೀಲ ಸಮಾಜದಲ್ಲಿ ವಿವಾದ, ಪ್ರತಿರೋಧ ಮತ್ತು ವಾದ-ಸಂವಾದ-ಸಂಕಥನಗಳನ್ನು ಸ್ವಾಗತಿಸಬೇಕಾದ್ದು ಯಾವುದೇ ಪ್ರಜಾಸತ್ತಾತ್ಮಕ ಸಮಾಜದ ಆದ್ಯತೆಯಾಗಬೇಕು. ಇದಮಿತ್ತಂ ಎನ್ನುವಂತೆ ಒಂದು ಪ್ರಬಲ/ಬಲಿಷ್ಠ ವರ್ಗ ಅನುಸರಿಸುವ ಮಾರ್ಗವನ್ನೇ ಇಡೀ ಸಮಾಜವೂ ಒಪ್ಪಿಕೊಂಡು ಅನುಕರಿಸಬೇಕು, ಅನುಸರಿಸಬೇಕು ಎಂಬ ಭಾವನೆಯೇ ನಿರಂಕುಶಾಧಿಕಾರಕ್ಕೆ ಎಡೆಮಾಡಿಕೊಡುತ್ತದೆ. ಕನಿಷ್ಠ ಸಾಹಿತ್ಯ ವಲಯದಲ್ಲಾದರೂ ಈ ಧೋರಣೆಯಿಂದ ದೂರ ಇರಬೇಕಾದ್ದು ಪ್ರಜ್ಞಾವಂತ ಸಮಾಜದ ಕರ್ತವ್ಯ.
ಕನ್ನಡ ಸಾಹಿತ್ಯ ಚರಿತ್ರೆಯನ್ನು ಗಮನಿಸಿದಾಗ ಈ ರೀತಿಯ ಭಿನ್ನಮತದ ವಿಭಿನ್ನ ಆಯಾಮಗಳನ್ನು ಸಮರ್ಪಕವಾಗಿ ಎದುರಿಸುತ್ತಲೇ ಜಗದ್ವಿಖ್ಯಾತ ಸಾಹಿತ್ಯದ ಹೂರಣವನ್ನು ಕನ್ನಡಿಗರ ಮುಂದೆ ಇಟ್ಟಿರುವುದನ್ನು ಕಾಣಬಹುದು. ನವೋದಯ ಕಾಲದಿಂದ ದಲಿತ–ಬಂಡಾಯ ಮತ್ತು ದಲಿತೋತ್ತರ–ಸತ್ಯೋತ್ತರ ಸಾಹಿತ್ಯದವರೆಗೂ ಕಂಡುಬರುವ ಈ ಭಿನ್ನ ವಿಚಾರಧಾರೆಗಳಲ್ಲಿ ಮೂಲತಃ ಅಕ್ಷರ ಲೋಕದ ವಾರಸುದಾರಿಕೆಯನ್ನು ಹೊತ್ತಿರುವ ಸಾಹಿತ್ಯ ವಲಯ ಸಮಾಜವನ್ನು ಹೇಗೆ ನೋಡಬೇಕು, ಯಾವ ರೀತಿಯ ಸಮಾಜವನ್ನು ಅಪೇಕ್ಷಿಸಬೇಕು, ಸಮಾಜದ ಆಂತರ್ಯದಲ್ಲೇ ಬೇರೂರಿರುವ ತರತಮಗಳನ್ನು ಹೇಗೆ ಪರಿಭಾವಿಸಬೇಕು ಮತ್ತು ಢಾಳಾಗಿ ಕಾಣುತ್ತಿರುವ ಅನ್ಯಾಯ, ದೌರ್ಜನ್ಯ ಮತ್ತು ಶೋಷಣೆಯ ವಿಭಿನ್ನ ಮಜಲುಗಳನ್ನು ಹೇಗೆ ಎದುರಿಸಬೇಕು, ಯಾವ ರೀತಿಯ ಪರಿಹಾರ ಮಾರ್ಗಗಳನ್ನು ಸೂಚಿಸಬೇಕು ಇವೇ ಮುಂತಾದ ಹತ್ತು ಹಲವು ಗಹನವಾದ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ಕಾಡಲೇಬೇಕು.
ಸಮ್ಮೇಳನಗಳ ಔಚಿತ್ಯ ಮತ್ತು ಪ್ರಸ್ತುತತೆ
ಈ ಪ್ರಶ್ನೆಗಳಿಗೆ ಒಂದು ಸಾಹಿತ್ಯ ಸಮ್ಮೇಳನ ಅಥವಾ ಸಾಹಿತಿಗಳ ಕೂಟ ನಡೆಸುವ ವಿಚಾರ ಸಂಕಿರಣ ಅಂತಿಮ ಪರಿಹಾರವನ್ನು ಸೂಚಿಸುವುದು ಅಸಾಧ್ಯ ಎಂದು ತಿಳಿದಿದ್ದರೂ, ತಳಮಟ್ಟದ ಜನಸಾಮಾನ್ಯರನ್ನು ತಲುಪುವ ಮೂಲಕ ಸಮಾಜದ ಅಂಚಿಗೆ ದೂಡಲ್ಪಟ್ಟಿರುವ, ಅವಕಾಶವಂಚಿತ–ಶೋಷಿತ ಜನಸಮುದಾಯಗಳ ನಾಡಿಮಿಡಿತವನ್ನು ಗ್ರಹಿಸುವ ನಿಟ್ಟಿನಲ್ಲಾದರೂ ಆಲೋಚನೆ ಮಾಡುವುದು ಸಾಹಿತ್ಯ ವಲಯದ ಆದ್ಯತೆಯಾಗಿರಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತನ್ನ ಸುತ್ತಲಿನ ಸಮಾಜ ಮತ್ತು ಸಂಸ್ಕೃತಿಯ ಅರಿವು ಮೂಡುವುದು ಗ್ರಾಂಥಿಕ ಇತಿಹಾಸದ ಕಥನಗಳಿಂದಲ್ಲ. ಬದಲಾಗಿ ಈ ಇತಿಹಾಸದ ಹಿನ್ನೆಲೆಯಲ್ಲೇ ವರ್ತಮಾನದ ಸಮಾಜವನ್ನು, ಸಮಕಾಲೀನ ಸವಾಲುಗಳನ್ನು ಹಾಗೂ ಭವಿಷ್ಯದ ಗುರಿಯನ್ನು ಅಕ್ಷರಗಳ ಮೂಲಕ, ಅಭಿವ್ಯಕ್ತಿಯ ಮೂಲಕ ದಾಖಲಿಸುವ ಸಾಹಿತ್ಯದ ಮೂಲಕ. ಈ ನಿಟ್ಟಿನಲ್ಲಿ ಲಿಖಿತ ಸಾಹಿತ್ಯದಷ್ಟೇ ರಂಗಭೂಮಿಯೂ ತನ್ನ ಮಹತ್ವದ ಪಾತ್ರ ವಹಿಸುವುದನ್ನು ಅಲ್ಲಗಳೆಯಲಾಗುವುದಿಲ್ಲ.
ಸಮಾಜ ಎನ್ನುವುದು ಒಂದು ಘನಾಕೃತಿಯಂತೆ. ನಾಲ್ಕು ಬದಿಯ ಚೌಕಗಳೂ ಪ್ರತ್ಯೇಕವಾಗಿದ್ದರೂ ಪರಸ್ಪರ ಬೆಸೆದುಕೊಂಡಿರುತ್ತವೆ ಆದರೂ ಪ್ರತಿಯೊಂದೂ ಮತ್ತೊಂದಕ್ಕೆ ವಿರುದ್ಧ ದಿಕ್ಕಿನಲ್ಲಿರುತ್ತದೆ. ಒಂದು ಬದಿಯಲ್ಲಿ ಕಾಣುವ ವಿದ್ಯಮಾನಗಳಿಗೆ ಮತ್ತೊಂದು ಬದಿಯಿಂದ ವಿರೋಧ ವ್ಯಕ್ತವಾಗುವುದು ಸಹಜವಾಗಿಯೇ ಕಾಣಬೇಕಿದೆ. ಈ ವಿರೋಧ–ಪ್ರತಿರೋಧದ ಮೂಲಕವೇ ಒಂದು ಸಮಾಜ ಕಲ್ಪಿತ ಸತ್ಯದಿಂದ ನಿರೂಪಿತ ಸತ್ಯದವರೆಗೆ ಚಲಿಸಲು ಸಾಧ್ಯ. “ ಅಂತಿಮ ಸತ್ಯ ಎನ್ನುವುದು ಯಾವುದೂ ಇಲ್ಲ” ಎಂಬ ಸಾರ್ವತ್ರಿಕ ನಾಣ್ಣುಡಿಯನ್ನು ಒಪ್ಪಿಕೊಂಡೇ ನೋಡುವುದಾದರೆ, ವರ್ತಮಾನದ ಸಮಾಜಕ್ಕೆ ಅವಶ್ಯವಾದ ಒಂದು ಮಾನವೀಯ ವಾತಾವರಣವನ್ನು, ಸ್ನೇಹ–ಪ್ರೀತಿ–ಬಾಂಧವ್ಯಗಳ ಮನುಜ ಸಂಬಂಧಗಳನ್ನು, ದ್ವೇಷಾಸೂಯೆಗಳಿಂದ ಮುಕ್ತವಾದ ಸಮನ್ವಯ ಮತ್ತು ಸೌಹಾರ್ದತೆಯ ಜನಜೀವನವನ್ನು ಸೃಷ್ಟಿಸುವ ಗುರುತರ ಜವಾಬ್ದಾರಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಇರುತ್ತದೆ.
ಈ ಜವಾಬ್ದಾರಿಯನ್ನು ಹಿಂದಿನ ಪೀಳಿಗೆಯವರು ಹೇಗೆ ನಿಭಾಯಿಸಿದ್ದಾರೆ, ಭವಿಷ್ಯದ ಪೀಳಿಗೆ ಹೇಗೆ ನಿರ್ವಹಿಸಬೇಕು ಎಂದು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವ ನೈತಿಕ ಹೊಣೆ ಸಾಹಿತ್ಯ ವಲಯದ ಮೇಲಿರುತ್ತದೆ. ಹಾಗಾಗಿಯೇ ವರ್ತಮಾನದ ಸಾಹಿತ್ಯವು ಮಾನವೀಯ ಸಮಾಜದ ತಳಹದಿಯನ್ನೇ ಅಲುಗಾಡಿಸುವಂತಹ ಯಾವುದೇ ಸಾಮಾಜಿಕ–ಸಾಂಸ್ಕೃತಿಕ–ರಾಜಕೀಯ ಬೆಳವಣಿಗೆಗಳ ವಿರುದ್ಧ ಪ್ರತಿರೋಧದ ಧ್ವನಿ ದಾಖಲಿಸುವುದು ಅನಿವಾರ್ಯವಾಗುತ್ತದೆ. ಭಾರತೀಯ ಸಮಾಜವನ್ನು ಶತಮಾನಗಳಿಂದ ಕಾಡುತ್ತಿರುವ ಜಾತಿ ಶ್ರೇಷ್ಠತೆ, ಊಳಿಗಮಾನ್ಯ ಮೌಲ್ಯಗಳು, ಸ್ವೀಕೃತವೇ ಆಗಿರುವಂತಹ ತಾರತಮ್ಯ ಮತ್ತು ದೌರ್ಜನ್ಯಗಳ ನೆಲೆಗಳ ವಿರುದ್ಧ ಸಾಹಿತ್ಯ ವಲಯ ವಿಭಿನ್ನ ಕಾಲಘಟ್ಟಗಳಲ್ಲಿ ತನ್ನ ಪ್ರತಿರೋಧವನ್ನು ದಾಖಲಿಸುತ್ತಾ ಬಂದಿದೆ. ಈ ಸಾಹಿತ್ಯಕ ಪ್ರಕ್ರಿಯೆಯ ಉಚ್ಛ್ರಾಯ ಹಂತವನ್ನು ಬಂಡಾಯ–ದಲಿತ ಸಾಹಿತ್ಯದ ಉಗಮದಲ್ಲಿ ನಾವು ಕಂಡಿದ್ದೇವೆ.
ಈ ಪ್ರತಿರೋಧದ ನೆಲೆಗಳು ಸಾಂಪ್ರದಾಯಿಕ ಅವೈಚಾರಿಕ ಚಿಂತನೆಗಳನ್ನು ಧಿಕ್ಕರಿಸುತ್ತಾ ಬಂದಿರುವುದೇ ಅಲ್ಲದೆ, ಭಾರತದ ಬಹುತ್ವ ಸಂಸೃತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಮಾಜದ ಎಲ್ಲ ಸ್ತರಗಳಲ್ಲಿ ಕಾಲಕಾಲಕ್ಕೆ ಕಂಡುಬರುವಂತಹ ಭಿನ್ನ ಅಭಿವ್ಯಕ್ತಿಯ ನೆಲೆಗಳನ್ನು ಕಾಪಾಡಿಕೊಂಡೇ ಬಂದಿವೆ. ವರ್ತಮಾನದ ಸಂದರ್ಭದಲ್ಲಿ ದೇಶ ಎದುರಿಸುತ್ತಿರುವ ಸಾಂಸ್ಕೃತಿಕ ಸವಾಲುಗಳು ಮತ್ತು ಸಾಮಾಜಿಕ ಪಲ್ಲಟಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ನಮ್ಮ ಸಮಾಜವು ತನ್ನ ಪ್ರಾಚೀನ ನೆಲೆಗಳಿಗೇ ಮರಳುತ್ತಿರುವ ಸೂಚನೆಗಳು ಢಾಳಾಗಿ ಕಾಣುತ್ತಿವೆ. ಜಾತಿ ದೌರ್ಜನ್ಯ, ಅಸ್ಪೃಶ್ಯತೆ, ಪಿತೃಪ್ರಧಾನ ಧೋರಣೆ, ಮಹಿಳಾ ದೌರ್ಜನ್ಯ ಮತ್ತು ಶೋಷಣೆಯ ನೆಲೆಗಳು ಹಂತಹಂತವಾಗಿ ಸಮಾಜದ ಎಲ್ಲ ಸ್ತರಗಳನ್ನೂ ಆವರಿಸುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಇದರೊಂದಿಗೇ ವಿಭಿನ್ನ ಧಾರ್ಮಿಕ ನಂಬಿಕೆಗಳ ತವರು ಎನ್ನಬಹುದಾದ ಸಮಾಜದಲ್ಲಿ ಈ ನಂಬಿಕೆಗಳನ್ನು ಭಗ್ನಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ತತ್ಪರಿಣಾಮ, ಮತೀಯವಾದ, ಮೂಲಭೂತವಾದ, ಮತಾಂಧತೆ, ಜಾತೀಯತೆ ಸಮಾಜದ ನಾಡಿಗಳಲ್ಲೂ ಪ್ರವಹಿಸುವಂತೆ ತೋರುತ್ತಿದೆ. ಹಾಗಾಗಿಯೇ ದ್ವೇಷ, ಅಸೂಯೆ ಮತ್ತು ಇದರಿಂದ ಉಗಮಿಸುವ ಹಿಂಸೆ ಹಾಗೂ ಕ್ರೌರ್ಯ ನಮ್ಮ ಸುತ್ತಲಿನ ಸಮಾಜದಲ್ಲಿ ವ್ಯಾಪಕವಾಗಿ ಹರಡುತ್ತಿದೆ.
ಹಿಂಸೆ, ದೌರ್ಜನ್ಯ ಮತ್ತು ಕ್ರೌರ್ಯವನ್ನು ಸಮರ್ಥಿಸುವ ಒಂದು ವಲಯ ಯಾವುದೇ ಸಮಾಜದಲ್ಲಿ, ಎಲ್ಲ ಕಾಲಘಟ್ಟಗಳಲ್ಲೂ ಇದ್ದೇ ಇರುತ್ತದೆ. ಭಾರತದಲ್ಲೂ ಇದೆ. ಈ ಸಾಮಾಜಿಕ–ಸಾಂಸ್ಕೃತಿಕ ವಿಕೃತಿಗಳನ್ನು ಎದುರಿಸುವ ಸಾಂಘಿಕ ಪ್ರಯತ್ನಗಳೊಡನೆಯೇ, ಇವುಗಳ ಹಿಂದಿನ ಚಾರಿತ್ರಿಕ ಕಾರಣಗಳನ್ನೂ ಶೋಧಿಸುವುದು ಹಾಗೆಯೇ ವರ್ತಮಾನದ ಸಮಾಜದಲ್ಲಿ ಇವುಗಳನ್ನು ಪ್ರಚೋದಿಸುವ, ಪ್ರೇರೇಪಿಸುವ ಮತ್ತು ಉತ್ತೇಜಿಸುವ ಶಕ್ತಿಗಳ ವಿರುದ್ಧ ಜನಸಾಮಾನ್ಯರಲ್ಲಿ ಅರಿವು, ಪ್ರಜ್ಞೆ ಮೂಡಿಸುವುದು ಅಕ್ಷರ ಕಲಿತ ಸಮಾಜದ ಆದ್ಯತೆಯಾಗಬೇಕಲ್ಲವೇ ? ದುರಂತವೆಂದರೆ ವರ್ತಮಾನದ ಭಾರತದಲ್ಲಿ ನಿರಕ್ಷರಿಗಳಲ್ಲಿ ಕಾಣಬಹುದಾದ ಮಾನವೀಯ ಮೌಲ್ಯಗಳನ್ನು ಅಕ್ಷರ ಲೋಕದ ವಾರಸುದಾರರಲ್ಲಿ ಕಾಣುವುದು ಕಷ್ಟವಾಗಿದೆ. ಈ ಸಂದಿಗ್ಧತೆಯನ್ನು ಮತ್ತು ಸಂಕೀರ್ಣ ಪ್ರಶ್ನೆಯನ್ನು ಅಕ್ಷರ ಲೋಕದ ವಾರಸುದಾರರಾಗಿ ಸಾಹಿತ್ಯ ವಲಯ ಸಮರ್ಪಕವಾಗಿ ಎದುರಿಸಬೇಕಿದೆ. ಈ ಪ್ರಶ್ನೆಗಳಿಗೆ ಉತ್ತರಗಳನ್ನೂ ಶೋಧಿಸಬೇಕಿದೆ.
ಸಾಹಿತ್ಯವಲಯದ ಜವಾಬ್ದಾರಿಗಳು
ಚಾಲ್ತಿಯಲ್ಲಿರುವ ಸಾಹಿತ್ಯ ವಲಯದ ಆಲೋಚನೆಗಳಲ್ಲಿ ಇದರ ಕೊರತೆ ಇರುವುದರಿಂದಲೇ ಪ್ರತಿರೋಧದ ಸಾಹಿತ್ಯಕ ನೆಲೆಗಳೂ ಉದ್ಭವಿಸುತ್ತಲೇ ಇರುವುದನ್ನು ಕಂಡಿದ್ದೇವೆ. ಆದಾಗ್ಯೂ ಕನ್ನಡದ ಸಮೃದ್ಧ ಸಾಹಿತ್ಯ ಕಣಜದಲ್ಲಿ ಈ ಕೊರತೆಯನ್ನು ನೀಗಿಸುವಂತಹ ವಿಪುಲ ಸಾಹಿತ್ಯಾಧ್ಯಯನ ಮತ್ತು ಸಂಶೋಧನೆಗಳು ಇರುವುದನ್ನು ಸಹ ಗುರುತಿಸಬೇಕಿದೆ. ಈ ಗುರುತಿಸುವ ಜವಾಬ್ದಾರಿಯನ್ನು ಕನ್ನಡಿಗರ ಅಕ್ಷರ ಪ್ರತಿನಿಧಿಯಾಗಿ ಕನ್ನಡ ಸಾಹಿತ್ಯ ಪರಿಷತ್ತು ನಿರ್ವಹಿಸಬೇಕಲ್ಲವೇ ? ಈ ಪರಿಷತ್ತು ನಡೆಸುವ ಸಮ್ಮೇಳನಗಳು ಮತ್ತು ವಿಚಾರ ಸಂಕಿರಣಗಳು, ಕಮ್ಮಟಗಳು ಈ ಜವಾಬ್ದಾರಿಯನ್ನು ಅರಿತೇ ನಡೆಯಬೇಕಲ್ಲವೇ ? ವೈವಿಧ್ಯಮಯ ಸಂಸ್ಕೃತಿಗಳನ್ನು ಪ್ರತಿನಿಧಿಸುವ, ವಿಭಿನ್ನ ಮತಧಾರ್ಮಿಕ ಚಿಂತನೆಗಳಿಗೆ ನೆಲೆ ನೀಡಿರುವ ಮತ್ತು ನೂರಾರು ಜಾತಿ ಸಮುದಾಯಗಳೊಂದಿಗೆ ಮುನ್ನಡೆದಿರುವ ಕರ್ನಾಟಕದ ನೆಲದಲ್ಲಿ ಈ ಜವಾಬ್ದಾರಿಯನ್ನು ನಿಭಾಯಿಸಬೇಕಾದರೆ, ಎಲ್ಲ ಭಾಗಿದಾರರಿಗೂ ತಮ್ಮ ಅಭಿವ್ಯಕ್ತಿಯನ್ನು ದಾಖಲಿಸುವಂತಹ ಮುಕ್ತ ವೇದಿಕೆ ಅತ್ಯವಶ್ಯವಾಗಿರುತ್ತದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂತಹ ಒಂದು ವೇದಿಕೆಯಾಗಿರುವುದು ಅತ್ಯವಶ್ಯ.
ಇದನ್ನೇ ಕೇವಲ ಪ್ರಾತಿನಿಧ್ಯದ ನೆಲೆಯಲ್ಲಿ ನೋಡುವಾಗ ನಮ್ಮ ಸಂವಾದಗಳೆಲ್ಲವೂ ಸಂಕುಚಿತವಾಗುತ್ತಾ ಹೋಗುತ್ತವೆ. ಹಾವೇರಿ ಸಮ್ಮೇಳನದ ನಡುವೆ ಎದ್ದಿರುವ ಪ್ರಾತಿನಿಧ್ಯದ ಪ್ರಶ್ನೆಯನ್ನು ಕನ್ನಡದ ಸುದ್ದಿಮನೆಗಳು ಮತ್ತಷ್ಟು ಸಂಕುಚಿತಗೊಳಿಸಿ, ಎಡ–ಬಲದ ಕಲ್ಪಿತ ಚೌಕಟ್ಟು ನಿರ್ಮಿಸಿ, ರೋಚಕವಾದ ಸಂವಾದಗಳನ್ನು ನಡೆಸುತ್ತಿರುವ ಹೊತ್ತಿನಲ್ಲಿ, ಕನ್ನಡದ ವಿದ್ಯಾವಂತ ಮನಸುಗಳು, ಸಂವೇದನಾಶೀಲ ಮನಸುಗಳು ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳತ್ತಲೂ ಗಮನಹರಿಸಬೇಕಲ್ಲವೇ ? 2021-22ರ ಫೆಬ್ರವರಿಯವರೆಗೆ ರಾಜ್ಯದಲ್ಲಿ 5860 ಮಹಿಳಾ ದೌರ್ಜನ್ಯ ಪ್ರಕರಣಗಳು, ರಾಜಧಾನಿಯಲ್ಲೇ 800ಕ್ಕೂ ಹೆಚ್ಚು ಪ್ರಕರಣಗಳು, ಅಧಿಕೃತವಾಗಿ ದಾಖಲಾಗಿವೆ. ಮತಾಂಧತೆ ಮತ್ತು ಮತೀಯವಾದಿಗಳ ದಾಳಿಗಳಿಂದ ಅಮಾಯಕ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರೂ ದಾಳಿಗೊಳಗಾಗಿದ್ದಾರೆ. ಸರ್ಕಾರದ ಆರ್ಥಿಕ ನೀತಿಗಳಿಂದ ಲಕ್ಷಾಂತರ ಜನರು ನಿರುದ್ಯೋಗ, ಬಡತನ, ನಿರ್ಗತಿಕತೆ, ಹಸಿವು, ಅಪೌಷ್ಟಿಕತೆಯನ್ನು ಎದುರಿಸುತ್ತಿದ್ದಾರೆ. ಸಮಾಜವನ್ನು ಸಾಹಿತ್ಯಕ ನೆಲೆಯಲ್ಲಿ ಗ್ರಹಿಸುವ ಮತ್ತು ಸಾಮಾಜಿಕ–ಸಾಂಸ್ಕೃತಿಕ ನೆಲೆಯಲ್ಲಿ ಪರಿಶೋಧಿಸುವ ನೈತಿಕ ಹೊಣೆಗಾರಿಕೆ ಸಾಹಿತ್ಯ ವಲಯದ ಮೇಲಿದೆ ಎನ್ನುವುದಾದರೆ, ಈ ಸಾಹಿತ್ಯ ವಲಯದ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಈ ಸಮಸ್ಯೆಗಳಿಗೆ ಸ್ಪಂದಿಸುವುದು ಅತ್ಯವಶ್ಯ ಅಲ್ಲವೇ ?
ಪರಿಷತ್ತು ನಡೆಸುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಈ ಸ್ಪಂದನೆಯ ಛಾಯೆಯಾದರೂ ಇರಬೇಕಾದರೆ, ವಿಭಿನ್ನ ಸಮುದಾಯಗಳ ಪ್ರಾತಿನಿಧ್ಯವೂ ಅಷ್ಟೇ ಮುಖ್ಯವಾಗುತ್ತದೆ. ಈ ಅಕ್ಷರ ಜಾತ್ರೆಯಲ್ಲಿ ನಡೆಯುವ ಚರ್ಚೆಗಳು, ಸಂವಾದಗಳು ಮತ್ತು ಸಮಾರೋಪದಲ್ಲಿ ಕೈಗೊಳ್ಳುವ ನಿರ್ಣಯಗಳು ಗ್ರಾಂಥಿಕವಾಗಿ ಉಳಿಯುವ ಸಾಧ್ಯತೆಗಳೇ ಹೆಚ್ಚಾಗಿದ್ದರೂ, ಇಲ್ಲಿ ಮೂಡುವ ಒಂದು ಧ್ವನಿ ರಾಜ್ಯಾದ್ಯಂತ ಪ್ರತಿಧ್ವನಿಸುತ್ತದೆ. ಹಾಗೆಯೇ ಕನ್ನಡ ಸಾಹಿತ್ಯ ಲೋಕ ತನ್ನ ಸಾಮಾಜಿಕ ಜವಾಬ್ದಾರಿಯಿಂದ ವಿಮುಖವಾಗಿಲ್ಲ ಎಂಬ ಸಂದೇಶವನ್ನೂ ರವಾನಿಸುತ್ತದೆ. ಹಾಗಾಗಿಯೇ ಇಲ್ಲಿ ಸಾಮುದಾಯಿಕ ಪ್ರಾತಿನಿಧ್ಯ ಪ್ರಾಶಸ್ತ್ಯ ಪಡೆಯುತ್ತದೆ. ಇದನ್ನು ನಿರಾಕರಿಸಿ ನಡೆಯುವುದು ಪ್ರಜಾತಂತ್ರ ವಿರೋಧಿ ಎನಿಸುತ್ತದೆ. ಯುವ ಸಮೂಹಕ್ಕೆ ಒಂದು ಸಕಾರಾತ್ಮಕ ಸಂದೇಶವನ್ನು ರವಾನಿಸಲು ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ಮತ್ತಷ್ಟು ಸೃಜನಾತ್ಮಕವಾಗಿ, ಸಂವೇದನಾಶೀಲವಾಗಿ, ಜನಮುಖಿಯಾಗಿ ರೂಪಿಸುವ ಜವಾಬ್ದಾರಿ ಪರಿಷತ್ತಿನ ಮೇಲಿರುತ್ತದೆ.
ಇಲ್ಲಿ ಪ್ರಾತಿನಿಧ್ಯವನ್ನು ವ್ಯಕ್ತಿನಿಷ್ಠ ನೆಲೆಯಲ್ಲಿ ನೋಡದೆ ವಸ್ತುನಿಷ್ಠವಾಗಿ ನೋಡುವುದೂ ಅವಶ್ಯ. ಸಾಮಾಜಿಕ–ಸಾಂಸ್ಕೃತಿಕ ಪರಿಸರದಲ್ಲಿ ಕ್ರಿಯೆ–ಪ್ರತಿಕ್ರಿಯೆಗಳು ಸೃಷ್ಟಿಸುತ್ತಿರುವ ಅಪಾಯಗಳನ್ನು ಎದುರಿಸಲು ಸಾಹಿತ್ಯ ವಲಯ ಸ್ಪಂದನೆ–ಪ್ರತಿಸ್ಪಂದನೆಯ ನೆಲೆಗಳನ್ನು ಶೋಧಿಸುವುದು ವರ್ತಮಾನದ ಅನಿವಾರ್ಯತೆಯೂ ಹೌದು. ಹಾಗಾಗಿ ಸಾಹಿತ್ಯ ಲೋಕ ಹೇಗೆ ಸ್ಪಂದಿಸುತ್ತಿದೆ, ಪ್ರತಿಸ್ಪಂದನೆಯನ್ನು ಹೇಗೆ ಗ್ರಹಿಸುತ್ತಿದೆ ಎನ್ನುವುದನ್ನು ಬಾಹ್ಯ ಸಮಾಜದ ಮುಂದಿಡಲು ಸಾಹಿತ್ಯ ಸಮ್ಮೇಳನ ಒಂದು ಬೌದ್ಧಿಕ ವೇದಿಕೆಯಾಗಿ ರೂಪುಗೊಳ್ಳುವುದು ಅನಿವಾರ್ಯ. ಪ್ರಾತಿನಿಧ್ಯ ಮತ್ತು ಪ್ರತಿರೋಧಗಳಿಗೆ ಸಂಕುಚಿತ ಸೈದ್ಧಾಂತಿಕ–ತಾತ್ವಿಕ ಹೊದಿಕೆಗಳನ್ನು ತೊಡಿಸುವುದು ಆತ್ಮವಂಚಕ ಎನಿಸುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ತನ್ನ ಪಾರಂಪರಿಕ ಊಳಿಗಮಾನ್ಯ ಪೊರೆಯನ್ನು ಕಳಚಿಕೊಂಡು ( ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಅರಮನೆ ದರ್ಬಾರ್ ಮಾದರಿಯ ರಥ– ಜಿಲ್ಲಾ ಕಸಾಪ ಅಧ್ಯಕ್ಷರಿಗೆ ಸಾರೋಟುಗಳ ಸಿರಿವಂತಿಕೆ ಮತ್ತು ಪೂರ್ಣಕುಂಭ ಸ್ವಾಗತದ ವೈಭವ ಇವೆಲ್ಲವೂ ಪಾರಂಪರಿಕ ಊಳಿಗಮಾನ್ಯ ವ್ಯವಸ್ಥೆಯ ಪಳೆಯುಳಿಕೆಗಳು.) ಸಮಾಜದ ಕಟ್ಟಕಡೆಯ ವ್ಯಕ್ತಿಯ ನಾಡಿಮಿಡಿತಕ್ಕೂ ಸ್ಪಂದಿಸುವಂತಹ ಒಂದು ಸಾಹಿತ್ಯಕ ಸಂಸ್ಥೆಯಾಗಬೇಕಿದೆ ತನ್ಮೂಲಕ ಸಾಹಿತ್ಯ ಸಮ್ಮೇಳನಗಳನ್ನು ಈ ಮನುಜ ಸ್ಪಂದನೆಯ ಒಂದು ವೇದಿಕೆಯನ್ನಾಗಿ ಮಾಡಿಕೊಂಡು ಸಮಾಜದಲ್ಲಿ ಸಂಯಮ, ಸೌಜನ್ಯ, ಸಮನ್ವಯ, ಸೌಹಾರ್ದತೆ ಮತ್ತು ಸೋದರತ್ವವನ್ನು ಬೆಳೆಸುವ ಸುಂದರ ತಾಣವನ್ನು ಸೃಷ್ಟಿಸಬೇಕಿದೆ.
ಹಾಗಾದಲ್ಲಿ ಮಾತ್ರ ನಾವು “ ಮನುಷ್ಯ ಜಾತಿ ತಾನೊಂದೇ ವಲಂ” ಎಂಬ ಪಂಪನ ಮಾತುಗಳನ್ನು ಪುನರುಚ್ಚರಿಸಲು ನೈತಿಕ ಅರ್ಹತೆ ಇರಲು ಸಾಧ್ಯ. ಆಗ ಮಾತ್ರ ಕುವೆಂಪು ಬಯಸಿದ “ ಸರ್ವ ಜನಾಂಗದ ಸುಂದರ ತೋಟ ” ನಿರ್ಮಿಸಲು ಸಾಧ್ಯ. ಬೆಂಗಳೂರಿನಲ್ಲಿ ಜನವರಿ 8ರಂದು ನಡೆಯುತ್ತಿರುವ ಜನಸಾಹಿತ್ಯ ಸಮ್ಮೇಳನವನ್ನು ಪ್ರತಿರೋಧ–ಪರ್ಯಾಯ ಎಂಬ ಸಂಕುಚಿತ ಆವರಣಗಳೊಳಗಿಟ್ಟು ನೋಡದೆ, ವರ್ತಮಾನದ ಸಾಮಾಜಿಕ–ಸಾಂಸ್ಕೃತಿಕ ವಾತಾವರಣದಲ್ಲಿನ ಸ್ಪಂದನೆ ಅಥವಾ ಪ್ರತಿಸ್ಪಂದನೆ ಎಂದು ಭಾವಿಸಬೇಕಿದೆ . ಇದು ವರ್ತಮಾನದ ತುರ್ತು ಮತ್ತು ಭವಿಷ್ಯದ ಅವಶ್ಯಕತೆಯೂ ಹೌದು.