ಜಮ್ಮು ಮತ್ತು ಕಾಶ್ಮೀರದ ಆಡಳಿತವು 34 ಪತ್ರಿಕೆಗಳನ್ನು ಮಾಧ್ಯಮ ಪಟ್ಟಿಯಿಂದ ತೆಗೆದು ಹಾಕಿದೆ ಮತ್ತು 13 ಪ್ರಕಟಣೆಗಳಿಗೆ ಜಾಹೀರಾತುಗಳನ್ನು ನೀಡುವುದನ್ನು ಅಮಾನತುಗೊಳಿಸಿದೆ. ಕೃತಿಚೌರ್ಯ ಮತ್ತು ಕಳಪೆ ವಿಷಯ ಪ್ರಕಟಣೆಗಾಗಿ 17 ಇತರ ಸುದ್ದಿ ಪ್ರಕಟಣೆಗಳಿಗೆ ನೋಟಿಸ್ ನೀಡಲಾಗಿದೆ. ಸರ್ಕಾರಿ ಅಧಿಕಾರಿಗಳ ಪ್ರಕಾರ ಈ ಕೇಂದ್ರಾಡಳಿತ ಪ್ರದೇಶದಲ್ಲಿನ ಎಲ್ಲ ಪತ್ರಿಕೆಗಳ ಕಾರ್ಯವೈಖರಿಯನ್ನು ಪರೀಕ್ಷಿಸಲು ನಾಲ್ಕು ತಿಂಗಳ ಕಾಲ ಪರಿಶೀಲಿಸಿದ ನಂತರ ಡಿಸೆಂಬರ್ 7 ರಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅನೇಕ ಮಾಧ್ಯಮ ಸಂಸ್ಥೆಗಳ ವಿರುದ್ಧ ದುಷ್ಕೃತ್ಯ ಮತ್ತು ಜಾಹೀರಾತು ನೀತಿಯ ಉಲ್ಲಂಘನೆಯ ದೂರುಗಳು ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಡಳಿತ ಹೇಳಿದೆ. ಕಳೆದ ಜೂನ್ 2020 ರಲ್ಲಿ ಜಾರಿಗೆ ತಂದ ಹೊಸ ಮಾಧ್ಯಮ ನೀತಿಯ ಮಾನದಂಡವನ್ನು ಪಾಲಿಸುವಂತೆ 17 ಮುದ್ರಣ, ಎಲೆಕ್ಟ್ರಾನಿಕ್ ಸುದ್ದಿ ಸಂಸ್ಥೆಗಳಿಗೆ ಆಡಳಿತವು ಸೂಚಿಸಿತ್ತು. ಅದರಲ್ಲಿ ನಕಲಿ ಸುದ್ದಿ, ಕೃತಿಚೌರ್ಯ , ಅನೈತಿಕ ಮತ್ತು ರಾಷ್ಟ್ರ ವಿರೋಧಿ ಸುದ್ದಿ ಪ್ರಕಟಿಸದಂತೆ ಸೂಚಿಸಲಾಗಿತ್ತು.
ಮಾರ್ಚ್ 2020 ರಿಂದ ಕೋವಿಡ್ -19 ಸಾಂಕ್ರಾಮಿಕ ಕಾರಣದಿಂದ ತಮ್ಮ ಪ್ರಕಟಣೆಗಳನ್ನು ನಿಯಮಿತವಾಗಿ ಪ್ರಕಟಿಸಲು ಸಾಧ್ಯವಾಗದ ಪತ್ರಿಕೆಗಳ ಬಗ್ಗೆ ಜಮ್ಮು ಕಾಶ್ಮೀರ ಆಡಳಿತ ಮೃದುವಾದ ಧೋರಣೆಯನ್ನು ಹೊಂದಿದೆ ಎಂದು ಅಧಿಕೃತ ದಾಖಲೆಗಳು ತೋರಿಸುತ್ತವೆ. ಈ ಕುರಿತು ಅನಾಮಧೇಯವಾಗಿ ಮಾತನಾಡಿದ ಸರ್ಕಾರೀ ಅಧಿಕಾರಿಯೊಬ್ಬರು ಅನೇಕ ಸುದ್ದಿ ಮಾಧ್ಯಮಗಳು ದುಷ್ಕೃತ್ಯದಲ್ಲಿ ತೊಡಗಿದ್ದವು ಮತ್ತು ಅವುಗಳ ಪ್ರಸರಣದ ಬಗ್ಗೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದವು. ಹೀಗಾಗಿ ಸರ್ಕಾರವು ರಚಿಸಿದ ಸಮಿತಿಯು ನಾಲ್ಕು ತಿಂಗಳ ಸುದೀರ್ಘ ಅಧ್ಯಯನವನ್ನು ನಡೆಸಿದ ನಂತರವೇ ನಿಯಮ ಉಲ್ಲಂಘಿಸಿದ ಮಾಧ್ಯಮಗಳ ವಿರುದ್ದ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈ ಪ್ರಕಟಣೆಗಳು, 2017-18 ರಿಂದ, ಜಾಹೀರಾತು ನೀತಿಯನ್ನು ಸ್ಪಷ್ಟವಾಗಿ ಉಲ್ಲಂಘಿಸಿವೆ ಮತ್ತು ಅವುಗಳ ಪ್ರಸಾರ, ಮಾಲೀಕತ್ವ ಮತ್ತು ಪ್ರಕಟಣೆಗಳ ಗುಣಮಟ್ಟದಿಂದಲೂ ಅಧಿಕಾರಿಗಳನ್ನು ಮೋಸಗೊಳಿಸಲು ಪ್ರಯತ್ನಿಸಿವೆ ಎಂದು ಅಧಿಕಾರಿ ಹೇಳಿದರು.

ಸರ್ಕಾರದಿಂದ ಕ್ರಮಕ್ಕೆ ಒಳಗಾಗಿರುವ ಪ್ರಕಟಣೆಗಳಲ್ಲಿ ರೈಸಿಂಗ್ ಕಾಶ್ಮೀರ, ಗ್ಯಾಲಕ್ಸಿ ನ್ಯೂಸ್, ಕಾಶ್ಮೀರ ಇಮೇಜಸ್ ಮತ್ತು ಅಪ್ನಾ ಜಮ್ಮು ಸೇರಿವೆ. 15 ಮೇ 2020 ರಂದು ರಚಿಸಲಾದ ಮತ್ತು ಹಣಕಾಸು ಇಲಾಖೆ ಮತ್ತು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸರ್ಕಾರದ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ.ಈ ಕುರಿತು ಮಾತನಾಡಿದ ಅಧಿಕಾರಿಯೊಬ್ಬರು ನಿಯಮಗಳ ಉಲ್ಲಂಘನೆಯ ಕುರಿತು ಮಾತ್ರ ಕ್ರಮ ಕೈಗೊಳ್ಳಲಾಗಿದ್ದು ಸರ್ಕಾರದ ಕ್ರಮವು ಪತ್ರಿಕೆಗಳ ಗಾತ್ರ ಅಥವಾ ಹೆಸರನ್ನು ಆಧರಿಸಿಲ್ಲ ಎಂದು ಹೇಳಿದರು. ಪತ್ರಿಕೆಯು ಚಲಾವಣೆಯಲ್ಲಿರುವ ಬಗ್ಗೆ ತಪ್ಪು ಮಾಹಿತಿ ನೀಡುವುದು, ನೈಜ ಮಾಲೀಕತ್ವ ಮತ್ತು ಪ್ರಸರಣಾ ಸಂಖ್ಯೆಯ ಬಗ್ಗೆ ತಪ್ಪು ಮಾಹಿತಿ ನೀಡುವುದು, ಕಾಗದದ ಗುಣಮಟ್ಟ , (ಬಣ್ಣದ ಕಾಗದ ಬಳಸುವ ಪತ್ರಿಕೆಗಳಿಗೆ ಹೆಚ್ಚಿನ ಅನುದಾನ ಇದೆ) ಅಂತರ್ಜಾಲ ಅಥವಾ ಇತರ ಪತ್ರಿಕೆಗಳಿಂದ ಸುದ್ದಿಗಳ ಕೃತಿಚೌರ್ಯದ ವಿಷಯವು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಿದರು.
ಜಮ್ಮು ವಿಭಾಗದಲ್ಲಿ ಮಾಧ್ಯಮ ಪಟ್ಟಿಯಿಂದ ತೆಗೆದು ಹಾಕಿದ ಮಾಧ್ಯಮಗಳಲ್ಲಿ ಹಿಲ್ ಪೀಪಲ್, ನವೀದ್, ದೈನಿಕ್ ಕಾಶ್ಮೀರ ಟೈಮ್ಸ್, ಸ್ವರ್ನ್ ಸಮರಿಕಾ, ನಾಯ್ ರೋಶ್ನಿ, ಹೈಟ್ ಆಫ್ ಲೈಫ್, ಜಮೀರ್-ಎ-ಖಲ್ಕ್, ಗ್ಯಾಲಕ್ಸಿ ನ್ಯೂಸ್, ಅಪ್ನಾ ಜಮ್ಮು, ದಿ ಅರ್ಥ್ ನ್ಯೂಸ್ ಮತ್ತು ಲೋಕ್ ಶಕ್ತಿ ಇವೆ. ಪತ್ರಿಕೆಗಳ ಪ್ರಸರಣವನ್ನು ಪರಿಶೀಲಿಸಲು ಅಧಿಕಾರಿಗಳ ತಂಡವು ನ್ಯೂಸ್ ಸ್ಟ್ಯಾಂಡ್ಗಳು ಮತ್ತು ಮಾರಾಟಗಾರರ ಅಂಗಡಿಗಳಂತಹ ಅನೇಕ ಸ್ಥಳಗಳಲ್ಲಿ ತಪಾಸಣೆ ನಡೆಸಿದವು.
ಆಗ ಅನೇಕ ಪತ್ರಿಕೆಗಳು ಸರ್ಕಾರಿ ದಾಖಲೆಗಳಲ್ಲಿ ಮಾತ್ರ ಅಸ್ತಿತ್ವದಲ್ಲಿವೆ ಎಂದು ತಿಳಿದು ಬಂತು. ಸರ್ಕಾರದ ಪ್ರಚಾರ ಮತ್ತು ಮಾಹಿತಿ ಇಲಾಖೆಗೆ ಕಳುಹಿಸಬೇಕಾದ ಒಂದು ಪ್ರತಿಯನ್ನು ಮಾತ್ರ ಮುದ್ರಿಸಿದ ಪತ್ರಿಕೆಗಳೂ ಇದ್ದವು ಎಂದು ತನಿಖೆ ತಂಡದಲ್ಲಿದ್ದ ಅಧಿಕಾರಿಯೊಬ್ಬರು ಹೇಳಿದರು. ಸರ್ಕಾರೀ ಮಾಹಿತಿಯ ಪ್ರಕಾರ, ಮಾಧ್ಯಮ ಪಟ್ಟಿಯಲ್ಲಿ ಪತ್ರಿಕೆಗಳು, ನಿಯತಕಾಲಿಕೆಗಳು, ವಾರಪತ್ರಿಕೆಗಳು ಮತ್ತು ಹದಿನೈದು ದಿನಗಳ ಪತ್ರಿಕೆಗಳೂ ಸೇರಿದಂತೆ ಕಾಶ್ಮೀರದಲ್ಲಿ ಒಟ್ಟು 164 ಪ್ರಕಟಣಾ ಸಂಸ್ಥೆಗಳಿವೆ. ಇವುಗಳಲ್ಲಿ 41 ಇಂಗ್ಲಿಷ್ ದಿನಪತ್ರಿಕೆಗಳು, 59 ಉರ್ದು ದಿನಪತ್ರಿಕೆಗಳು ಮತ್ತು 56 ಇಂಗ್ಲಿಷ್ ಮತ್ತು ಉರ್ದು ವಾರಪತ್ರಿಕೆಗಳು ಸೇರಿವೆ. ಜಮ್ಮುವಿನಲ್ಲಿ 84 ಇಂಗ್ಲಿಷ್ ದಿನಪತ್ರಿಕೆಗಳು, ಉರ್ದು ಭಾಷೆಯಲ್ಲಿ 31, ಹಿಂದಿಯಲ್ಲಿ 24, ಹಿಂದಿ / ಡೋಗ್ರಿ ಭಾಷೆಯ 14 ವಾರಪತ್ರಿಕೆಗಳು, 37 ಉರ್ದು ವಾರಪತ್ರಿಕೆಗಳು ಮತ್ತು 30 ಇಂಗ್ಲಿಷ್ ವಾರಪತ್ರಿಕೆಗಳು ಸೇರಿದಂತೆ 248 ಮಾಧ್ಯಮ ಪಟ್ಟಿಯಲ್ಲಿವೆ.

ಈವರೆಗೆ 24 ಸುದ್ದಿ ಪತ್ರಿಕೆಗಳನ್ನು ಜಮ್ಮುವಿನಲ್ಲಿ ಮಾಧ್ಯಮ ಪಟ್ಟಿಯಿಂದ ತೆಗೆದು ಹಾಕಲಾಗಿದೆ. 17 ಪತ್ರಿಕೆಗಳಿಗೆ ಹೊಸ ಮಾಧ್ಯಮ ನೀತಿ 2020 ಅನ್ನು ಅಳವಡಿಸಿಕೊಳ್ಳಲು ನೋಟಿಸ್ ನೀಡಲಾಗಿದೆ ಮತ್ತು ಐದಕ್ಕೆ ಜಾಹೀರಾತುಗಳನ್ನು ಸ್ಥಗಿತಗೊಳಿಸಲಾಗಿದೆ. ಕಾಶ್ಮೀರದಲ್ಲಿ, 10 ಪತ್ರಿಕೆಗಳನ್ನು ಮಾಧ್ಯಮ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇತರ ಎಂಟು ಪತ್ರಿಕೆಗಳಿಗೆ ಜಾಹೀರಾತುಗಳನ್ನು ಸ್ಥಗಿತಗೊಳಿಸಲಾಗಿದೆ.
ಜನವರಿ 2018 ರಿಂದ ಒಂದೇ ಆವೃತ್ತಿಯನ್ನು ಒದಗಿಸದ ಕಾರಣ ಕಾಶ್ಮೀರ ಇಮೇಜಸ್ ನ ಜಮ್ಮು ಆವೃತ್ತಿಯು ಮಾಧ್ಯಮ ಪಟ್ಟಿಯಿಂದ ತೆಗೆದು ಹಾಕಲಾಗಿರುವ ಪ್ರಮುಖ ಪತ್ರಿಕೆ ಆಗಿದೆ. ಅದೇ ರೀತಿ ರೈಸಿಂಗ್ ಕಾಶ್ಮೀರದ ಜಮ್ಮು ಆವೃತ್ತಿಗೆ ಪತ್ರಿಕೆಯ ಮಾಲೀಕತ್ವದ ಮಾಹಿತಿ ನೀಡದ ಕಾರಣ ಜಾಹೀರಾತುಗಳನ್ನು ರದ್ದುಪಡಿಸಲಾಗಿದೆ.
ಜಮ್ಮು ಮೂಲದ ಆಜ್ ಕಿ ಜಂಗ್ನ ಮಾಲೀಕ ಮೊಹಮದ್ ಇಸ್ಮಾಯಿಲ್, 370 ನೇ ವಿಧಿಯನ್ನು ರದ್ದುಗೊಳಿಸುವ ಮುನ್ನ ಮತ್ತು 2020 ರಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಅನೇಕ ಪತ್ರಿಕೆಗಳು ಪ್ರಕಟಣೆ ನಿಲ್ಲಿಸಿದ್ದು ಮುಂದಿನ ದಿನಗಳಲ್ಲಿ ಪ್ರಕಟಣೆ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು .ಡೈಲಿ ಗಡಿಯಾಲ್ ಮಾಲೀಕ ರಸೂಲ್ ಅವರು ಮಾತನಾಡಿ ಕೆಲವು ಉದ್ಯಮಿಗಳು ವೈಯಕ್ತಿಕ ಹಿತಾಸಕ್ತಿಗಾಗಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಕೆಲವು ಜನರ ಕಾರಣದಿಂದಾಗಿ ಕಾಶ್ಮೀರದಲ್ಲಿ ಪತ್ರಿಕೋದ್ಯಮಕ್ಕೆ ಕೆಟ್ಟ ಹೆಸರು ಬಂದಿದೆ. ಅವರ ದುಷ್ಕೃತ್ಯಗಳು ನಮ್ಮ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.