G20 ವಿದೇಶಾಂಗ ಮಂತ್ರಿಗಳ ಸಭೆಯ ಹೊರತಾಗಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ನಡುವಿನ ಮೊದಲ ಸಭೆಯಲ್ಲಿ ನಿನ್ನೆ ಗಡಿ ನಿಯಂತ್ರಣ ರೇಖೆ (ಲೈನ್ ಆಫ್ ಆಕ್ಚುವಲ್ ಕಂಟ್ರೊಲ್) ಬಗ್ಗೆ ಚರ್ಚಿಸಲಾಯಿತು.
ಮೇ 2020 ರಿಂದಲೂ ಪೂರ್ವ ಲಡಾಖ್ನ ಅನೇಕ ಕಡೆಗಳಲ್ಲಿ ಭಾರತೀಯ ಮತ್ತು ಚೀನಾದ ಪಡೆಗಳು ನಿರಂತರವಾಗಿ ಬಿಕ್ಕಟ್ಟು ಸೃಷ್ಟಿಸುತ್ತಿವೆ. ಇದು ಗಡಿಯಲ್ಲಿ ಅನೇಕ ಸಾವುನೋವುಗಳಿಗೆ ಕಾರಣವಾಗುತ್ತಿದೆ. ಹಲವಾರು ಸುತ್ತಿನ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳು ನಡೆದರೂ ಅವು ಗಡಿ ಘರ್ಷಣೆಗಳನ್ನು ತಡೆಯುವಲ್ಲಿ ಸಫಲವಾಗಿರಲಿಲ್ಲ.

2020ರಲ್ಲಿ ಸಂಘರ್ಷ ಆರಂಭವಾದ ನಂತರ ಚೀನಾದ ವಿದೇಶಾಂಗ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ. ಕಳೆದ ವರ್ಷ,ಚೀನಾದ ಮಾಜಿ ವಿದೇಶಾಂಗ ಮಂತ್ರಿ ವಾಂಗ್ ಯಿ ನವದೆಹಲಿಗೆ ಪ್ರಯಾಣಿಸಿದ್ದರು, ಆದರೆ ಆ ಭೇಟಿಯೂ ಫಲಪ್ರದವಾಗಿರಲಿಲ್ಲ.
ವಾಂಗ್ ಯಿ ಅವರು ಈಗ ಚೀನಾದ ವಿದೇಶಾಂಗ ಸಚಿವಾಲಯದ ಪಾಲಿಟ್ ಬ್ಯೂರೋಗೆ ಬಡ್ತಿ ಪಡೆದಿದ್ದು ಅವರ ಸ್ಥಾನವನ್ನು ಕ್ವಿನ್ ಗ್ಯಾಂಗ್ ಪಡೆದುಕೊಂಡಿದ್ದಾರೆ. ಕ್ವಿನ್ ಗ್ಯಾಂಗ್ ಕರೀರ್ ಡಿಪ್ಲೊಮ್ಯಾಟ್ ಆಗಿದ್ದು ಯುನೈಟೆಡ್ ಸ್ಟೇಟ್ಸ್ ಗೆ ಬೀಜಿಂಗ್ನ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಪರಿಣತಿ ಮತ್ತು ಅನುಭವವನ್ನು ಗಣನೆಗೆ ತೆಗೆದುಕೊಂಡಿರುವ ಜಗತ್ತು ಇನ್ನಾದರೂ ಅಂತರರಾಷ್ಟ್ರೀಯವಾಗಿ ಚೀನಾದ ಸಂಬಂಧಗಳು ಸುಧಾರಿಸಬಹುದು ಎಂಬ ಆಶಾವಾದ ವ್ಯಕ್ತಪಡಿಸುತ್ತಿದೆ.
ಜಿ 20 ಸಚಿವರ ಸಭೆಯಲ್ಲಿ ಭಾಗವಹಿಸಲು ವಿಶ್ವದಾದ್ಯಂತದ ವಿದೇಶಾಂಗ ಸಚಿವರು ಸೇರಿರುವ ರಾಷ್ಟ್ರಪತಿ ಭವನದಲ್ಲೇ ಈ ಸಭೆಯು ನಡೆದಿದ್ದು ಟ್ವಿಟರ್’ನಲ್ಲಿ ಸಭೆಯ ಬಗ್ಗೆ ಹೇಳಿಕೆ ನೀಡಿರುವ ಜೈ ಶಂಕರ್ “ಸಭೆಯು ದ್ವಿಪಕ್ಷೀಯ ಸಂಬಂಧಗಳನ್ನು ವೃದ್ದಿಸುವುದರ ಅದರಲ್ಲೂ ಗಡಿ ಪ್ರದೇಶದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡುವುದರ ಬಗ್ಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿತು” ಎಂದು ಹೇಳಿದ್ದಾರೆ.