ಕೊರೊನಾ ಸೋಂಕಿಗೆ ಒಳಪಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜ್ಞಾನಿ ಹಾಗೂ ಸಿಪಿಐ(ಎಂ) ಪಕ್ಷದ ಹಿರಿಯ ಸದಸ್ಯ ಮಹಾವೀರ್ ನರ್ವಾಲ್ ಅವರು ಭಾನುವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮಹಾವೀರ್ ನರ್ವಾಲ್ ಅವರ ಮಗಳಾದ ನತಾಶಾ ನರ್ವಾಲ್ ರನ್ನು ಕಳೆದ ಒಂದು ವರ್ಷದಿಂದ ಯಾವುದೇ ವಿಚಾರಣೆ ಇಲ್ಲದೆ ಜೈಲಿನಲ್ಲಿ ಇರಿಸಿದರ ಬಗ್ಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಮತ್ತು ಅವರ ಕುಟುಂಬ ಬೇಸರ ವ್ಯಕ್ತಪಡಿಸಿದೆ. ಹಾಗೆಯೇ ಹಲವು ನಾಯಕರು ಮಹಾವೀರ್ ನರ್ವಾಲ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಮಹಾವೀರ್ ನರ್ವಾಲ್ ಅವರ ಮಗಳು ನತಾಶಾ ನರ್ವಾಲ್ ಅವರನ್ನು ಕಳೆದ ವರ್ಷ ಬಂಧಿಸಲಾಗಿದೆ. ಕೂನೆಗೂ ಆಕೆಯ ತಂದೆಯನ್ನು ಆಕೆಗೆ ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂಬುದು ಮೋದಿ ಸರ್ಕಾರದ ಅಪರಾಧ ಕೃತ್ಯ” ಎಂದು ಕಮ್ಯುನಿಸ್ಟ್ ಪಾರ್ಟಿ ದೂರಿದೆ.
ಕಳೆದ ಒಂದು ವರ್ಷ ತಿಹಾರ್ ಜೈಲಿನಲ್ಲಿ ಬಂಧನಕ್ಕೊಳಗಾಗಿರುವ ನತಾಶಾ, ದೆಹಲಿಯಲ್ಲಿ ಸಿಎಎ ಪ್ರತಿಭಟನೆಯಲ್ಲಿ ಕೋಮು ಹಿಂಸಾಚಾರವನ್ನು ಹುಟ್ಟುಹಾಕುವ ಪಿತೂರಿ ನಡೆಸಿದ ಆರೋಪದ ಮೇಲೆ ಪೊಲೀಸರು ಹಲವಾರು ಪ್ರತಿಭಟನಾಕಾರರ ಜೊತೆ ನತಾಶಾ ನರ್ವಾಲ್ ಅವರನ್ನು ಬಂಧಿಸಿದ್ದರು. ಇದೆ ಸಮಯದಲ್ಲಿ ಪಿಂಜ್ರಾ ಟೋಡ್ ಕಾರ್ಯಕರ್ತೆ ದೇವಂಗನಾ ಕಾಳಿತಾ ಅವರನ್ನೂ ಜೈಲಿನಲ್ಲಿರಿಸಲಾಗಿತ್ತು.
ತಿಹಾರ್ ಜೈಲಿನಲ್ಲಿದ್ದ ಪುತ್ರಿ ನತಾಶಾಳ ಜತೆ ಮಹಾವೀರ್ ನರ್ವಾಲ್ ಅವರಿಗೆ ಕೊನೆಯ ದಿನಗಳಲ್ಲಿ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಕುಟುಂಬದ ಮೂಲಗಳು ಹೇಳಿವೆ. ನರ್ವಾಲ್ ಅವರ ಪುತ್ರ ಆಕಾಶ್ ಕೂಡಾ ಕೋವಿಡ್ 19 ಸೋಂಕಿಗೆ ತುತ್ತಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಕಳೆದ ವರ್ಷ ಪೊಲೀಸರು ನತಾಶಾಳನ್ನು ಬಂಧಿಸಿದ ನಂತರ ಅನೇಕ ಮಾಧ್ಯಮ ಸಂದರ್ಶನಗಳಲ್ಲಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಮಹಾವೀರ್ ನರ್ವಾಲ್ ತಮ್ಮ ಮಗಳ ಬಗ್ಗೆ ಅಪಾರ ಹೆಮ್ಮೆ ಮತ್ತು ಅವರ ಧೈರ್ಯದ ಬಗ್ಗೆ ಮಾತನಾಡಿದ್ದರು.
ಕಳೆದ ನವೆಂಬರ್ ನಲ್ಲಿ ನಡೆದ ಸಾಲಿಡಾರಿಟಿ ಸಭೆಯಲ್ಲಿ ಮಾತನಾಡಿದ ಮಹಾವೀರ್ ನರ್ವಾಲ್, ತಮ್ಮ ಮಗಳಿಂದ ಕಲಿಯುವುದು ತುಂಬಾ ಇದೆ, ಆಕೆ ವಾಸ್ತವವಾಗಿ ಜೈಲುವಾಸ ಅನುಭವಿಸುತ್ತಿಲ್ಲ, ಅವಳು ಇತರರಂತೆ ಎಲ್ಲರ ಜೊತೆ ಇದ್ದಾಳೆ. ಜೈಲಿನಲ್ಲಿರುವವರಂತೆ ಹೊರಗಿನವರು ಸಹ ಬಳಲುತ್ತಿದ್ದಾರೆ. ಆಗಾಗಿ ನನ್ನ ಕುಟುಂಬದಲ್ಲಿ ಯಾರೂ ನಿರಾಶೆಗೆಳಗಾಗುವುದಿಲ್ಲ ಮತ್ತು ಬೆದರುವುದಿಲ್ಲ. ನಾವು ಕೂಡ ನಿನ್ನ ಪ್ರತಿರೋಧದ ಭಾಗಿಯಾಗಿದ್ದೇವೇ. ಅವಳು ಜೈಲಿನಿಂದ ಹೊರಬರುವುದು ಮಾತ್ರವಲ್ಲ ಜೊತೆಗೆ ಸತ್ಯವನ್ನು ಎತ್ತಿಹಿಡಿದಿರುತ್ತಾಳೆ ಎಂದು ಹೇಳಿದ್ದರು.
ದೇಶದಲ್ಲಿ ಕೋವಿಡ್ 19 ಸೋಂಕು ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಕೈದಿಗಳನ್ನು ಕೂಡಲೇ ಜೈಲಿನಿಂದ ಬಿಡುಗಡೆಗೊಳಿಸುವಂತೆ ಎಡಪಕ್ಷದ ಕಾರ್ಯಕರ್ತರು ಹಾಗೂ ಮಾನವಹಕ್ಕು ಕಾರ್ಯಕರ್ತರು ಇತ್ತೀಚೆಗೆ ಆಗ್ರಹಿಸಿದ್ದರು.