ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ನಿಧನದ ಹಿನ್ನೆಲೆಯಲ್ಲಿ, ಅವರ ಮೊಮ್ಮಗ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪೆರೋಲ್ಗೆ ಅರ್ಜಿ ಸಲ್ಲಿಸಿಲ್ಲ ಎಂದು ವರದಿಯಾಗಿದೆ.

ಅತ್ಯಾ** ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣಗೆ ಇತರ ಪ್ರಕರಣಗಳು ಟ್ರಯಲ್ನಲ್ಲಿ ಇರುವುದರಿಂದ ಪೆರೋಲ್ ಸಿಗುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅನುಮತಿ ಕೋರಿದ್ದು, ಪ್ರಜ್ವಲ್ ಮನವಿಯನ್ನು ಪರಿಗಣಿಸಿದ ಜೈಲು ಅಧಿಕಾರಿಗಳು, ವಿಡಿಯೋ ಕಾನ್ಫರೆನ್ಸ್ ಮೂಲಕ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅನುಮತಿ ನೀಡಿದ್ದಾರೆ ಎಂದು ಜೈಲು ಮೂಲಗಳು ತಿಳಿಸಿವೆ.

ಇನ್ನು ಹೊಳೆನರಸೀಪುರದ ರೇವಣ್ಣ ನಿವಾಸದಲ್ಲಿ ಚೆನ್ನಮ್ಮ ಅವರ ಧಾರ್ಮಿಕ ವಿಧಿ-ವಿಧಾನಗಳ ಬಳಿಕ ಸಾರ್ವಜನಿಕ ಅಂತಿಮ ದರ್ಶನ ಮುಕ್ತಾಯಗೊಂಡಿದ್ದು, ಸದ್ಯ ಪಾರ್ಥಿವ ಶರೀರವನ್ನು ಊರಿನ ಪ್ರಮುಖ ಬೀದಿಗಳ ಮೂಲಕ ಹರದನಹಳ್ಳಿಗೆ ರವಾನಿಸಲಾಗಿದೆ. ಹಾಗೂ ಸಾರ್ವಜನಿಕರು ಅಂತಿಮ ದರ್ಶನಕ್ಕೆ ಅಲ್ಲಿಗೆ ಬರುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.







