ಹುಬ್ಬಳ್ಳಿ-ಧಾರವಾಡ ಕೇಂದ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಇಂದು, ಗೂಂಡಾ ಕಾಯ್ದೆಯಡಿ ಬಂಧಿತನಾಗಿರುವ ಹುಬ್ಬಳಿ-ಧಾರವಾಡ ಪಾಲಿಕೆಯ ಪಕ್ಷೇತರ ಸದಸ್ಯ ಹಾಗೂ ರೌಡಿಶೀಟರ್ ಚೇತನ್ ಹಿರೇಕೆರೂರ್ ಮನೆಗೆ ಭೇಟಿ ನೀಡಿದರು. ಕೋಟೆಲಿಂಗೇಶ್ವರ ನಗರದಲ್ಲಿರೋ ಚೇತನ್ ಹಿರೇಕೆರೂರ್ ಮನೆಯಲ್ಲಿ ಕುಟುಂಬಸ್ಥರೊಂದಿಗೆ ಶೆಟ್ಟರ್ ಕೆಲ ಕಾಲ ಮಾತುಕತೆ ನಡೆಸಿ ಹೊರಟರು. ಜಗದೀಶ್ ಶೆಟ್ಟರ್ ಅವರ ನಾಮಪತ್ರ ಸಲ್ಲಿಕೆ ರ್ಯಾಲಿಯಲ್ಲಿ ಭಾಗಿಯಾಗಿದ್ದ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಪಕ್ಷೇತರ ಸದಸ್ಯ ಚೇತನ್ ಹಿರೇಕೆರೂರು ಅವರನ್ನು ಗೂಂಡಾ ಕಾಯ್ದೆಯಡಿ ಗುರುವಾರ ಬಂಧಿಸಲಾಗಿತ್ತು.
ವಿವಿಧ ಪೊಲೀಸ್ ಠಾಣೆಗಳಲ್ಲಿ ರೌಡಿಶೀಟರ್ ಆಗಿದ್ದ ಚೇತನ್ ಅನ್ನು ಹುಬ್ಬಳ್ಳಿಯ ಗೋಕುಲ್ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಜಗದೀಶ್ ಶೆಟ್ಟರ್, ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಜೆಪಿ ತೊರೆದು ತದ್ವಿರುದ್ಧ ಸಿದ್ಧಾಂತ ಹೊಂದಿರುವ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದು ಬಿಜೆಪಿ ನಾಯಕರ ಕಣ್ಣುಗಳನ್ನು ಕೆಂಪಗಾಗಿಸಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶೆಟ್ಟರ್ ಸೋಲಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ.
ಕ್ಷೇತ್ರದಲ್ಲಿ ಮಹೇಶ ಟೆಂಗಿನಕಾಯಿ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿರುವ ಬಿಜೆಪಿ, ಶೆಟ್ಟರ್ ಅವರನ್ನು ಸೋಲಿಸಲು ಹಾಗೂ ತಮ್ಮ ಮತಬ್ಯಾಂಕ್ ಅನ್ನು ಭದ್ರವಾಗಿರಿಸಿಕೊಳ್ಳಲು ಆರ್‌ಎಸ್‌ಎಸ್ ಅನ್ನು ಬಳಸಿಕೊಳ್ಳಲು ಮುಂದಾಗಿದೆ. ಅಲ್ಲದೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹುಬ್ಬಳ್ಳಿಗೆ ಭೇಟಿ ನೀಡಿ ಪಕ್ಷದ ಸ್ಥಳೀಯ ಮುಖಂಡರೊಂದಿಗೆ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ನಾಗ್ಪುರದಿಂದ ಸುಮಾರು 50 ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಹುಬ್ಬಳ್ಳಿಗೆ ಕರೆಸಿಕೊಳ್ಳಲಾಗಿದ್ದು, ಅವರಿಗೆ ವಿವಿಧ ಸಂಘಟನಾ ಜವಾಬ್ದಾರಿಗಳನ್ನು ವಹಿಸಲಾಗಿದೆ ಎಂದು ಹೇಳಲಾಗಿದೆ.