ಬೆಂಗಳೂರು : ಟಿಕೆಟ್ ಕೈ ತಪ್ಪಿದ ಬಳಿಕ ಬಂಡಾಯದ ಬೇಗುದಿಯಲ್ಲಿ ಬೇಯುತ್ತಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಳಿಕ ಶೆಟ್ಟರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶೆಟ್ಟರ್ ನಿಮಗೆ ಟಿಕೆಟ್ ಸಿಗೋದಿಲ್ಲ ಅಂತಾ ಬಿಜೆಪಿ ವರಿಷ್ಠರು 15 ದಿನಗಳ ಮುಂಚೆಯೇ ನನಗೆ ಹೇಳಬಹುದಿತ್ತು. ಆದರೆ ಕೊನೆ ಕ್ಷಣದಲ್ಲಿ ಈ ರೀತಿ ನಡೆಸಿಕೊಳ್ಳಬಾರದಿತ್ತು. ಕಳೆದ ಆರು ತಿಂಗಳಿನಿಂದ ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿತ್ತು ಎಂದು ಅಸಮಾಧಾನ ಹೊರಹಾಕಿದ್ರು.
ನಾನು ಕಟ್ಟಿ ಬೆಳೆಸಿದ ಪಕ್ಷದಿಂದ ನನ್ನನ್ನೇ ಹೊರಹಾಕುವಂತೆ ಮಾಡಿದ್ದಾರೆ. ಬಿಜೆಪಿಯಲ್ಲಿ ನಡೆದ ಈ ಎಲ್ಲಾ ಬೆಳವಣಿಗೆಗಳಿಂದ ನಾನು ನೊಂದು ಹೋಗಿದ್ದೇನೆ. ನನ್ನ ಬೆಂಬಲಿಗರು ಎರಡನೇ ಪಟ್ಟಿಯಲ್ಲಿಯೂ ನನ್ನ ಹೆಸರು ಇಲ್ಲದ್ದನ್ನು ನೋಡಿ ನನ್ನ ಬಳಿ ಬೇಸರ ತೋಡಿಕೊಂಡರು ಎಂದು ಹೇಳಿದ್ದಾರೆ.