ನ್ಯಾಷನಲ್ ನೆಟ್ವರ್ಕ ಆಫ್ ಸೆಕ್ಸ್ ವರ್ಕರ್ಸ್ ಸಂಘಟನೆಯ ಅಧ್ಯಕ್ಷರಾದ ಕಿರಣ್ ದೇಶ್ಮುಖ್ ಅವರು ಗಂಗಾ ಜಮುನಾದ ಪ್ರತಿಭಟನಾ ನಿರತ ಲೈಂಗಿಕ ಕಾರ್ಯಕರ್ತೆಯರಿಗೆ ಬೆಂಬಲ ಸೂಚಿಸಲು ಪಶ್ಚಿಮ ಮಹಾರಾಷ್ಟ್ರದಿಂದ ನಾಗಪುರಕ್ಕೆ ಬಂದಿದ್ದರು. ಗಂಗಾ ಜಮುನಾದಲ್ಲಿ ಪೋಲಿಸರು ವೇಶ್ಯಾವಾಟಿಕೆಯನ್ನು ನಿಷೇಧಿಸಿರುವುದರಿಂದ ಅಲ್ಲಿನ ಸುಮಾರು 1500 ಲೈಂಗಿಕ ಕಾರ್ಯಕರ್ತೆಯರ ಹಾಗು 3500-4000 ನಿವಾಸಿಗಳ ಜೀವನ ತತ್ತರಿಸಿಹೋಗಿದೆ. ಈ ಸಂದರ್ಭದಲ್ಲಿ ದೇಶ್ಮುಖ್ ಅವರು ಸೌಮಿತ್ರ ಬೋಸ್ ಅವರೊಡನೆ ಪೋಲೀಸರ ಕ್ರಮದ ಕುರಿತು ಮಾತನಾಡಿದ್ದಾರೆ.
ಅವರ ಸಂವಾದದ ತುಣುಕುಗಳು ಇಲ್ಲಿವೆ:
ಕಿರಣ್ ದೇಶ್ಮುಖ್ ಪ್ರಶ್ನೆ: ಗಂಗಾ ಜಮುನಾ ಪ್ರಕರಣವನ್ನು ನೀವು ಹೇಗೆ ವಿಶ್ಲೇಷಿಸುತ್ತೀರಿ?
ಸೌಮಿತ್ರ ಬೋಸ್ ಉತ್ತರ: ಅದೊಂದು ‘ಸಾರ್ವಜನಿಕ ಸ್ಥಳ’ ಮತ್ತು ಅಲ್ಲಿನ ಅಂತರ ‘200 ಮೀಟರ್ ಗಳು’ ಎಂಬ ಪೋಲೀಸರ ವಾದ ಹಾಸ್ಯಾಸ್ಪದವಾಗಿದೆ. ಆ ಸ್ಥಳ 300 ವರುಷಗಳಷ್ಟು ಹಳೆಯದಾಗಿದ್ದು ಆಗಿನ ಮಹಾರಾಜರೇ ತಮ್ಮ ಸೇನೆಯ ಮನೋರಂಜನೆಗಾಗಿ ಆ ಜಾಗವನ್ನು ಕೊಡುಗೆಯಾಗಿ ಕೊಟ್ಟಿದ್ದರು.
ಗಂಗಾ ಜಮುನಾದಲ್ಲಿನ ‘ಸಾರ್ವಜನಿಕ ಸ್ಥಳಗಳು’ ಅಲ್ಲಿನ ಹಿಂದಿನ ಮತ್ತು ಇಂದಿನ ಕಾರ್ಯಚಟುವಟಿಕೆಗಳನ್ನು ಅರಿತುಕೊಂಡೇ ಉಗಮವಾಗಿವೆ. ಇಲ್ಲಿನ ಪ್ರಶ್ನೆ ಏನೆಂದರೆ ಗಂಗಾ ಜಮುನಾವು ಕೆಂಪುದೀಪ ಪ್ರದೇಶ ಎಂದು ತಿಳಿದಿರುವಾಗ ಶಾಲೆ, ಪೋಲೀಸ್ ಚೌಕಿಯಂತಹ ‘ಸಾರ್ವಜನಿಕ ಸ್ಥಳಗಳನ್ನು’ ಏಕೆ ಸ್ಥಾಪಿಸಿದರು? ಇವುಗಳನ್ನು ಗಂಗಾ ಜಮುನದ ನಿವಾಸಿಗಳ ಹಿತಾಸಕ್ತಿಗಾಗಿ ಸ್ಥಾಪಿಸಲಾಗಿತ್ತು. ಆದರೆ ಈಗ ಇವುಗಳನ್ನೇ ಅಲ್ಲಿನ ನಿವಾಸಿಗಳ ಬದುಕನ್ನು ನಾಶ ಮಾಡಲು ಬಳಸಲಾಗುತ್ತಿದೆ.
ಒಂದು ಪಕ್ಷದಲ್ಲಿ ಲೈಂಗಿಕ ಕಾರ್ಯಕರ್ತರನ್ನು ಮತ್ತೊಂದೆಡೆಗೆ ಸ್ಥಳಾಂತರಿಸಿದರೆ, ಆ ಪ್ರದೇಶವೂ ಸಹಜವಾಗಿಯೇ ಸಾರ್ವಜನಿಕ ಸ್ಥಳವಾಗುತ್ತದೆ.
ಪ್ರಶ್ನೆ : ಗಂಗಾ ಜಮುನಾದಲ್ಲಿ ಅಕ್ರಮ ಚಟುವಟಿಕಗಳು ನಡೆಯುತ್ತಿವೆ ಎಂದು ದೂರು ದಾಖಲಾದ ನಂತರ ಪೋಲಿಸರು ಈ ಕ್ರಮ ತೆಗೆದುಕೊಂಡಿದ್ದಾರೆ. ನೀವು ಅವರನ್ನು ಬೆಂಬಲಿಸುತ್ತಿಲ್ಲವೇ?
ಉತ್ತರ : ಗಂಗಾ ಜಮುನಾದಲ್ಲಿ ಪೋಲೀಸ್ ಚೌಕಿಯಿದೆ ಎಂದಾದರೆ ಅಕ್ರಮ ಚಟುವಟಿಕೆಗಳನ್ನು ಪೋಲೀಸರು ಮುಂಚೆಯೇ ಏಕೆ ನಿಯಂತ್ರಿಸಲಿಲ್ಲ? ಜನಸಾಮಾನ್ಯರು ಪೋಲೀಸ್ ಕಮಿಷನರ್ ಬಳಿ ಮನವಿ ಸಲ್ಲಿಸುವಷ್ಟು ಅಕ್ರಮ ಚಟುವಟಿಕೆಗಳು ಹೆಚ್ಚಾಗಬೇಕಾದರೆ ಪೋಲೀಸರು ಏನು ಮಾಡುತ್ತಿದ್ದರು? ಗಂಗಾ ಜಮುನಾ ಮತ್ತು ಅಲ್ಲಿ ನಡೆಯುವ ಚಟುವಟಿಕೆಗಳು 300 ವರುಷಗಳಿಂದ ನಡೆಯುತ್ತಲೇ ಬಂದಿವೆ ಎಂಬುದು ನಮ್ಮ ಗಮನದಲ್ಲಿರಲಿ. ಮಿಕ್ಕ ನಿವಾಸಿಗಳು ಅದು ಕೆಂಪುದೀಪ ಪ್ರದೇಶ ಎಂದು ತಿಳಿದಿದ್ದ ಮೇಲೂ ಅಲ್ಲೇಕೆ ವಾಸ ಹೂಡಿದರು? ಈಗ ಅಲ್ಲಿನ ಹಳೆಯ ನಿವಾಸಿಗಳನ್ನು ಅಲ್ಲಿಂದ ಹೊರದೂಡಲು ಪ್ರಯತ್ನಿಸುತ್ತಿದ್ದಾರೆ.
ಪ್ರಶ್ನೆ : ಈಗ ಲೈಂಗಿಕ ಕಾರ್ಯಕರ್ತರಿಗೆ ಏನು ಬೇಕಾಗಿದೆ? ಪುನರ್ವಸತಿಯೋ ಅಥವಾ ಅಕ್ರಮ ಚಟುವಟಿಕೆಗಳಿದ್ದರೂ ಲೈಂಗಿಕ ಕಾರ್ಯ ಮುಂದುವರೆಸುವುದೋ?
ಉತ್ತರ : ಪುನರ್ವಸತಿಯ ಹೆಸರಿನಲ್ಲಿ ಪೋಲಿಸರಿಗೆ ಬೇಕಾಗಿರುವುದು ಇಲ್ಲಿನ ಜಾಗ ಖಾಲಿ ಮಾಡಿಸುವುದು ಮತ್ತು ನಮ್ಮ ಸ್ವತ್ತುಗಳನ್ನು ಕಸಿದುಕೊಳ್ಳುವುದು. ಇಲ್ಲಿನ ಕಾರ್ಯಕರ್ತರಗೆ ಪುನರ್ವಸತಿ ಬೇಡ ಎಂದಮೇಲೆ ಅದನ್ನು ಒತ್ತಾಯಿಸುವುದು ಏಕೆ? ಪುನರ್ವಸತಿ ಸ್ವಯಂಪ್ರೇರಿತವಾಗಿರಲಿ. ನಮಗೆ ಮನೆಗಳಿವೆ. ಲೈಂಗಿಕ ಕಾರ್ಯದ ಮೂಲಕ ನಾವು ನಮ್ಮ ಬದುಕನ್ನು ನಿರ್ಮಿಸಿಕೊಳ್ಳುತ್ತಿದ್ದೇವೆ. ನಮ್ಮ ಕುಟುಂಬಗಳನ್ನು ಸಾಕಲು ನಾವು ಸಮರ್ಥರಾಗಿದ್ದೇವೆ.
ಹಲವಾರು ಲೈಂಗಿಕ ಕಾರ್ಯಕರ್ತರು ತಾವಾಗಿಯೇ ತಮ್ಮ ಕಸುಬನ್ನು ನಿಲ್ಲಿಸಿದ್ದಾರೆ. ಗಂಗಾ ಜಮುನಾದ ಒಬ್ಬಾಕೆ ತನ್ನ ಸ್ವಂತ ಊರಿಗೆ ಮರಳಿ ಈ ವೃತ್ತಿಗೆ ಅಂತ್ಯ ಹಾಡಿದ್ದಾರೆ. ಈ ರೀತಿಯ ಸ್ವಯಂಪ್ರೇರಿತ ನಿರ್ಧಾರಗಳನ್ನು ನಾವು ಸ್ವಾಗತಿಸುತ್ತೇವೆ.
ಪ್ರಶ್ನೆ : ಈ ಪ್ರತಿಭಟನೆಯ ಭವಿಷ್ಯದ ಕತೆಯೇನು?
ಉತ್ತರ : ಲೈಂಗಿಕ ಕಾರ್ಯಕರ್ತೆಯರಿಗೆ ಇದು ಅನ್ನಕ್ಕಾಗಿ ಹೋರಾಟ. ಇದೀಗ ಅಸ್ತಿತ್ವದ ಪ್ರಶ್ನೆಯಾಗಿದೆ. ನಾವು ನಮ್ಮ ವೈಯಕ್ತಿಕ ಹಾಗು ಕುಟುಂಬದ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ. ಏನೇ ಆಗಲಿ ನಾವು ಕೊನೆಯ ವರೆಗು ಹೋರಾಡುತ್ತೇವೆ.
ಬಹಳಷ್ಟು ಜನರಿಗೆ ಇದು ಆರ್ಥಿಕ ಪರ್ಯಾಯ. ಅದನ್ನು ನಿಷೇಧಿಸುವ ಯಾವುದೇ ಕಾಯ್ದೆ ಇಲ್ಲದಿದ್ದರೂ, ಅದರ ಸುತ್ತಣ ಹಲವಾರು ಆಯಮಗಳು ಅದನ್ನು ಅಪರಾಧವೆಂಬಂತೆ ಮಾಡಿದೆ. ಹೀಗೆ ನೋಡಿದರೆ ಒಬ್ಬ ವೃದ್ಧ ಪೋಷಕ, ಮಗು, ಪತಿ ಎಲ್ಲರನ್ನೂ ಅಪರಾಧಿಗಳೆಂದು ಪರಿಗಣಿಸಬೇಕಾಗುತ್ತದೆ. ಯಾಕೆಂದರೆ ಅವರೆಲ್ಲರೂ ಲೈಂಗಿಕಕಾರ್ಯದಿಂದ ಬರುವ ಆದಯದಲ್ಲಿ ಜೀವಿಸುತ್ತಿರುತ್ತಾರೆ. ಅಂತಹ ಕಾಯ್ದೆಗಳು ದೇಶದ ಪ್ರತಿ ನಾಗರೀಕನ ಮೂಲಭೂತ ಹಕ್ಕಿಗೆ ವಿರುದ್ಧವಾಗಿ ನಿಲ್ಲುತ್ತವೆ ಎಂಬುದು ಲೈಂಗಿಕ ಕಾರ್ಯಕರ್ತರ ನಿಲುವು. ಪೋಲಿಸರು ಕಾಯ್ದೆಗಳನ್ನು ಮುರಿಯುತ್ತಾರೆ, ನಂತರ ಶ್ರೀಮಂತರ ಬೇಡಿಕೆಗಳನ್ನು ಪೂರೈಸಲು ನೆಪಗಳನ್ನು ನೀಡುತ್ತಾರೆ. ಯಾವುದಾದರೂ ನೆಪ ಯಾವಾಗಲೂ ಇರುತ್ತದೆ.
ಮೂಲ: TOI
ಅನು: ಸೂರ್ಯ ಸಾಥಿ