ಬಿಜೆಪಿ ಮುಖಂಡರ ಪ್ರವಾಸಕ್ಕೆ ಜನರಿಂದ ಅತ್ಯುತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಫಲಾನುಭವಿಗಳು ಆನಂದದಿಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ.
ಮೈಸೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ಆರಂಭವಾದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ದೇಶ ಮಾತ್ರವಲ್ಲದೆ, ವೀರಶೈವ ಸಮಾಜವನ್ನೂ ಒಡೆಯಲು ಮುಂದಾದ ಪಕ್ಷ ಕಾಂಗ್ರೆಸ್. ಭಾರತದಿಂದ ಓಡಲು ಇಟಲಿಯ ಅಕ್ಕ ದಾರಿ ಹುಡುಕುತ್ತಿದ್ದಾರೆ. ಇದು ಭಾರತ್ ಜೋಡೋ ಅಲ್ಲ. ಇದು ಯಶಸ್ವಿ ಆಗುವುದಿಲ್ಲ ಎಂದು ಟೀಕಿಸಿದರು.
ಭಯೋತ್ಪಾದನೆ, ಭ್ರಷ್ಟಾಚಾರವೇ ಕಾಂಗ್ರೆಸ್ನ ದೊಡ್ಡ ಕೊಡುಗೆ. 6 ದಶಕಗಳ ಕಾಲ ಆಡಳಿತ ಮಾಡಿದ ಕಾಂಗ್ರೆಸ್ ಸದಾ ಕಾಲ ಹಗರಣಗಳನ್ನೇ ಮಾಡಿತು. ಶಾಸ್ತ್ರೀಜಿ ಹೊರತುಪಡಿಸಿ ಉಳಿದೆಲ್ಲ ಪ್ರಧಾನಿಗಳು ಭ್ರಷ್ಟರಾಗಿದ್ದರು. ಕಾಂಗ್ರೆಸ್ ಮುಖಂಡರೆಲ್ಲರೂ ಭ್ರಷ್ಟಾಚಾರ ಮಾಡಿದವರು ಎಂದು ಟೀಕಿಸಿದರು.
ಹಾಸ್ಟೆಲ್, ಹಾಸಿಗೆ, ಸೋಲಾರ್, ಶಾಲಾ ಮೊಟ್ಟೆ, ನೇಮಕಾತಿಯಲ್ಲೂ ಹಗರಣಗಳನ್ನು ಮಾಡಿದ್ದ, ಜಾತಿ- ಜಾತಿಗಳ ನಡುವೆ ಸಂಘರ್ಷ ತಂದಿಟ್ಟ ಸಿದ್ದರಾಮಣ್ಣನ ಕೊಡುಗೆಯನ್ನು ಜನರು ಮರೆತಿಲ್ಲ. ಅರ್ಕಾವತಿ ರೀಡೂ ಹಗರಣದಲ್ಲಿ ಸಿದ್ದರಾಮಣ್ಣ ಎಲ್ಲಿರುತ್ತಾರೆ ಎಂಬುದನ್ನು ಕಾದುನೋಡಿ ಎಂದು ಮುನ್ಸೂಚನೆ ನೀಡಿದರು. ಕಾಂಗ್ರೆಸ್ ಪಕ್ಷದ ಕೇಂದ್ರದ ಹಾಗೂ ರಾಜ್ಯದ ನಾಯಕರು ಜಾಮೀನಿನಡಿ ಇದ್ದಾರೆ ಎಂದು ಅವರು ಪ್ರಸ್ತಾಪಿಸಿದರು.
ಜನರು ಬಿಜೆಪಿ ಕಡೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೋವಿಡ್ ಉಚಿತ ಲಸಿಕೆ ಮೂಲಕ ಮಾಸ್ಕ್ ತೆಗೆದು ಕುಳಿತುಕೊಳ್ಳಲು ಜನಪರ ಕಾಳಜಿ ಉಳ್ಳ ಪ್ರಧಾನಿ ನರೇಂದ್ರ ಮೋದಿಜಿ ಅವರು ಕಾರಣರಾಗಿದ್ದಾರೆ ಎಂದು ಧನ್ಯವಾದ ಸಲ್ಲಿಸಿದರು.
ಇತರ ಪಕ್ಷಗಳ ಹತ್ತಾರು ಶಾಸಕರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಪಕ್ಷದ ಮುಖಂಡರ ಪ್ರವಾಸ ನಡೆಸಲಾಗುತ್ತಿದೆ. ಚುನಾವಣೆಗೆ ಪಕ್ಷ ಸಿದ್ಧತೆ ಮಾಡಿಕೊಂಡಿದೆ. ಇದಕ್ಕೆ ಪೂರಕವಾಗಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಸಲಹೆ ನೀಡಿದರು. ಪ್ರಕಾಶನ ಪ್ರಕೋಷ್ಠದ ವತಿಯಿಂದ ಹೊರತಂದ ಸಮಷ್ಟಿ, ಧ್ಯೇಯಪಥ ಪುಸ್ತಕಗಳನ್ನು ಅವರು ಬಿಡುಗಡೆ ಮಾಡಿದರು.
ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್, ಸಹ ಪ್ರಭಾರಿಗಳಾದ ಶ್ರೀಮತಿ ಡಿ.ಕೆ. ಅರುಣಾ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ ಹಾಗೂ ಕೋರ್ ಕಮಿಟಿ ಸದಸ್ಯರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ, ಭಗವಂತ ಖೂಬಾ, ಕು. ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡ, ಜಗದೀಶ ಶೆಟ್ಟರ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯದ ಸಚಿವರು, ಸಂಸದರು, ಶಾಸಕರು ಮತ್ತು ಪದಾಧಿಕಾರಿಗಳು ಪಾಲ್ಗೊಳ್ಳುತ್ತಿದ್ದಾರೆ.