
MDM ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ, ವೃತ್ತಿಜೀವನದಲ್ಲಿ ಐವತ್ತು ವರ್ಷಗಳನ್ನು ಪೂರೈಸಿರುವ ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಹಾಗೂ ರಿಯಲ್ ಸ್ಟಾರ್ ಉಪೇಂದ್ರ – ರಮ್ಯ ಮುಖ್ಯಪಾತ್ರದಲ್ಲಿ ನಟಿಸಿರುವ “ರಕ್ತ ಕಾಶ್ಮೀರ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
ಈ ವರ್ಷ ನನಗೆ ಬಹಳ ವಿಶೇಷ. ನಾನು ನಿರ್ದೇಶಕನಾಗಿ 50 ವರ್ಷಗಳಾಗಿದೆ ಹಾಗೂ ನಾನು ನಿರ್ದೇಶಿಸಿರುವ ಎರಡು ಚಿತ್ರಗಳು ತೆರೆಗೆ ಬರಲು ಸಿದ್ದವಾಗಿದೆ. ಅದರಲ್ಲಿ ಮೊದಲು “ರಕ್ತ ಕಾಶ್ಮೀರ” ಚಿತ್ರ ಬಿಡುಗಡೆಯಾಗುತ್ತಿದೆ. ಶೀರ್ಷಿಕೆಯೇ ತಿಳಿಸುವಂತೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಹಾಗೂ ಭಯೋತ್ಪಾದನೆಯ ವಿರುದ್ಧ ಸಮರ ಸಾರುವ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಪಾಕ್ ಆಕ್ರಮಿತ ಕಾಶ್ಮೀರದ ಹತ್ತಿರ ಸಿಂಧೂ ನದಿ ದಂಡೆಯಲ್ಲೇ ಚಿತ್ರೀಕರಣ ಮಾಡಿದ್ದೇವೆ. ಭಯದ ವಾತವಾರಣವಿದ್ದರೂ ಚಿತ್ರೀಕರಣ ಅಂದುಕೊಂಡ ಹಾಗೆ ಆಯಿತು. ಉಪೇಂದ್ರ ಅವರು ಈ ಚಿತ್ರದಲ್ಲಿ ಎರಡು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ರಮ್ಯ ಅವರು ಆರು ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಾಲ್ಕೈದು ಜನ ಬಾಲ ಕಲಾವಿದರು ಸಹ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಉಪೇಂದ್ರ ಅವರು ಮಕ್ಕಳಿಗೆ ದೇಶದ ಕುರಿತು ಜಾಗೃತಿ ಮೂಡಿಸುತ್ತಾರೆ. ಹಾಗೆ ಅವರ ಮೂಲಕವೇ ಮಹತ್ತರ ಕೆಲಸವನ್ನು ಮಾಡಿಸುತ್ತಾರೆ. ಚಿತ್ರದ ಮತ್ತೊಂದು ವಿಶೇಷ ಎಂದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕನ್ನಡದ ಹದಿನಾಲ್ಕು ಜನಪ್ರಿಯ ನಾಯಕರು ಈ ಚಿತ್ರದ ಹಾಡೊಂದರಲ್ಲಿ ಅಭಿನಯಿಸಿದ್ದಾರೆ. ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಶಿವರಾಜಕುಮಾರ್, ಪುನೀತ್ ರಾಜಕುಮಾರ್, ಜಗ್ಗೇಶ್, ಉಪೇಂದ್ರ, ರಮೇಶ್ ಅರವಿಂದ್, ದರ್ಶನ್, ಜೈ ಜಗದೀಶ್, ಆದಿತ್ಯ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಕನ್ನಡದ ದಿಗ್ಗಜ ನಾಯಕರು ಒಂದೇ ಹಾಡಿನಲ್ಲಿ ಅಭಿನಯಿಸಿರುವುದು ಹಿಂದೆಂದೂ ಆಗಿರದ ಇತಿಹಾಸವೇ ಸರಿ. ನನ್ನ ಮೇಲೆ ಪ್ರೀತಿಯಿಟ್ಟು ಅಭಿನಯಿಸಿದ ಅವರೆಲ್ಲರಿಗೂ ಧನ್ಯವಾದ. ಚಿತ್ರ ಬಿಡುಗಡೆಯ ಹಂತದಲ್ಲಿದೆ. ಇಂದು ಟ್ರೇಲರ್ ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತೇವೆ. ಮಾರ್ಸ್ ಸುರೇಶ್ ಈ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ ಎಂದು ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು ತಿಳಿಸಿದರು.

ನಾನು ಈ ಚಿತ್ರದ ನಿರ್ಮಾಪಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ನಮ್ಮ ತಂದೆ ಅವರು ಹೇಳಿದ ಹಾಗೆ ಕನ್ನಡ ಚಿತ್ರರಂಗದ ಜನಪ್ರಿಯ ನಾಯಕರು ನಮ್ಮ ಚಿತ್ರದಲ್ಲಿ ನಟಿಸಿರುವುದು ನಿಜಕ್ಕೂ ಹೆಮ್ಮೆ. ಆರು ದಿನಗಳ ಕಾಲ ಅಷ್ಟು ಜನ ಕಲಾವಿದರೊಂದಿಗೆ ಕಾಲ ಕಳೆದಿದ್ದು ಮರೆಯಲಾಗದ ಅನುಭವ. ನಮ್ಮ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಆದಿತ್ಯ ಹೇಳಿದರು.

ನಾನು ಈ ಹಿಂದೆ ಬಾಬು ಅವರ ಕೆಲವು ಚಿತ್ರಗಳನ್ನು ಹಂಚಿಕೆ ಮಾಡಿದ್ದೆ. ಆದರೆ ವಿಶಾಲ ಕರ್ನಾಟಕಕ್ಕೆ ಹಂಚಿಕೆ ಮಾಡಯತ್ತಿರುವುದು ಇದೇ ಮೊದಲು ಎಂದು ವಿತರಕ ಮಾರ್ಸ್ ಸುರೇಶ್ ತಿಳಿಸಿದರು.

“ವೀರ ಕಂಬಳ” ಚಿತ್ರದ ನಿರ್ಮಾಪಕ ಅರುಣ್ ರೈ ತೋಡಾರ್ ಹಾಗೂ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.
