ಮೈಸೂರು: ಜಯಲಕ್ಷ್ಮಿ ವಿಲಾಸ ಅರಮನೆ ಮಹಾರಾಜರು ಮೈಸೂರು ವಿಶ್ವವಿದ್ಯಾಲಯಕ್ಕೆ ಕೊಟ್ಟಿರುವ ಭಿಕ್ಷೆ. ಯಾರ ಮನೆಯ ಆಸ್ತಿಯನ್ನೂ ಕೇಳುತ್ತಿಲ್ಲ. ಕನ್ನಡದ ಕೆಲಸವಿದು. ಕೆಎಎಸ್ ಅಧಿಕಾರಿ ಅಡ್ವೊಕೇಟ್ ಜನರಲ್ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಮಾನಸಗಂಗೋತ್ರಿಯ ಜಯಲಕ್ಷ್ಮೀವಿಲಾಸ ಅರಮನೆ ಕಟ್ಟಡ ಹಸ್ತಾಂತರ ವಿಷಯಕ್ಕೆ ಸಂಬಂಧಿಸಿದಂತೆ ಮಂಗಳವಾರ ಕ್ರಾಫರ್ಡ್ ಹಾಲ್’ನಲ್ಲಿ ನಡೆದ ಸಭೆಯಲ್ಲಿ ಸಂಸದ ಪ್ರತಾಪ ಸಿಂಹ ಕುಲಸಚಿವೆ ವಿ.ಆರ್.ಶೈಲಜಾ ವಿರುದ್ಧ ಹರಿಹಾಯ್ದರು.
ಜಯಲಕ್ಷ್ಮೀವಿಲಾಸ ಅರಮನೆ ಹಸ್ತಾಂತರಕ್ಕೆ ಮುನ್ನ ಕಾನೂನು ಅಭಿಪ್ರಾಯ ಪಡೆಯಬೇಕು ಎಂದು ಕುಲಸಚಿವೆ ಹೇಳಿದ್ದಕ್ಕೆ ಕೋಪಗೊಂಡ ಪ್ರತಾಪ್ ಸಿಂಹ, ಸರ್ಕಾರವೇ ಅನುಮತಿ ಕೊಟ್ಟಿರುವಾಗ ಮತ್ತ್ಯಾರು ಕೊಡಬೇಕು ಎಂದು ಕಿಡಿಕಾರಿದರು.

ಕಾನೂನು ಅಭಿಪ್ರಾಯ ಪಡೆಯಬೇಕಾದ್ದು ಯಾರ ಜವಾಬ್ದಾರಿ, ಅದನ್ನು ನಾನೇ ಹೇಳಿಕೊಡಬೇಕಾ? ಐಎಎಸ್ ಅಧಿಕಾರಿಗಳ ಬಳಿ ಸಹಿ ಮಾಡಿಸುವುದು ಎಷ್ಟು ಕಷ್ಟ ಎನ್ನುವುದು ನನಗೆ ಗೊತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನೊಬ್ಬ ಕನ್ನಡದ ಬರಹಗಾರ. ಕನ್ನಡದ ಕೆಲಸಕ್ಕಾಗಿ ಶ್ರಮಿಸುತ್ತಿರುವೆ. ಉಮಾಶ್ರೀ ಸಚಿವರಾಗಿದ್ದಾಗ ಕೇಂದ್ರವನ್ನು ಬೆಂಗಳೂರಿಗೆ ಹಸ್ತಾಂತರಿಸಲು ಮುಂದಾದಾಗ ತೀವ್ರ ವಿರೋಧ ವ್ಯಕ್ತವಾದ್ದರಿಂದ ಕೈಬಿಡಲಾಯಿತು. ಸಿ.ಟಿ.ರವಿ ಸಚಿವರಾಗಿದ್ದಾಗ ಮತ್ತೆ ಉಳಿಸಿ ಅನುದಾನ ಕೊಡಿಸಿರುವೆ. ಈಗಿನ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಮುತುವರ್ಜಿ ವಹಿಸಿದ್ದಾರೆ. ಹೀಗಿರುವಾಗ ವಿಳಂಬ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಜಯಲಕ್ಷ್ಮೀವಿಲಾಸ ಅರಮನೆ ಕಟ್ಟಡ ಹಸ್ತಾಂತರ ಸಂಬಂಧ ಚರ್ಚಿಸಿ, 2 ದಿನಗಳಲ್ಲಿ ತೀರ್ಮಾನಿಸುತ್ತೇವೆ. ಕಾನೂನು ತಜ್ಞರ ಅಭಿಪ್ರಾಯ ಪಡೆಯುವುದನ್ನು ತಕ್ಷಣ ಮಾಡುತ್ತೇವೆ. ನಮ್ಮಿಂದ ವಿಳಂಬವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹಂಗಾಮಿ ಕುಲಪತಿ ಪ್ರೊ.ಎಚ್.ರಾಜಶೇಖರ ತಿಳಿಸಿದ್ದಾರೆ.
ಸಭೆಯಲ್ಲಿ ಹಂಗಾಮಿ ಕುಲಪತಿ ಪ್ರೊ.ಎಚ್.ರಾಜಶೇಖರ, ಸಿಂಡಿಕೇಟ್ ಸದಸ್ಯರು ಇದ್ದರು.

