2024ರ ಲೋಕಸಭಾ ಚುನಾವಣೆ ಕಾವು ಈಗಾಗಲೇ ಶುರುವಾಗಿದೆ. ಅದಕ್ಕೂ ಮೊದಲೇ ಪಂಚರಾಜ್ಯಗಳ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು ರಾಜಕೀಯ ಪಕ್ಷಗಳಿಗೆ ಸುಗ್ಗಿ ಹಬ್ಬ ಶುರುವಾದಂತಾಗಿದೆ. ಐದು ರಾಜ್ಯಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಪಂಚರಾಜ್ಯ ಚುನಾವಣೆ ಮೂಲಕ ಅಧಿಕೃತವಾಗಿ ಹೆಬ್ಬಾಗಿಲು ತೆರೆದಂತಾಗಿದೆ. ಚುನಾವಣೆ ಘೋಷಣೆ ಆಗುತ್ತಿದ್ದ ಹಾಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಮೂಲಕ ಎದುರಾಳಿಗಳಿಗೆ ನಾನು ಸವಾಲಿಗೆ ಸಿದ್ಧ ಎಂದು ಖಚಿತಪಡಿಸಿದೆ. ಆದರೆ ಕಾಂಗ್ರೆಸ್ ಮಾತ್ರ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದ್ದು, ಚುನಾವಣೆ ಘೋಷಣೆ ಆಗುತ್ತಿದ್ದ ಹಾಗೆ ಬಿಜೆಪಿ ಹಾಗು ಮೈತ್ರಿ ಪಕ್ಷಗಳಿಗೆ ಶಾಕ್ ಆಗುವಂತೆ ಕಾಂಗ್ರೆಸ್ ಸವಾಲು ಎಸೆದಿದೆ. ಈ ಆತ್ಮವಿಶ್ವಾಸ ಬಿಜೆಪಿಯನ್ನು ಕುಗ್ಗಿಸುತ್ತಾ..? ಅಥವಾ ಬಿಜೆಪಿಗೆ ಕಿಚ್ಚು ಹಚ್ಚುತ್ತಾ ಅನ್ನೋ ಆಲೋಚನೆ ಸೃಷ್ಟಿಸಿದೆ.
ಯಾವ ರಾಜ್ಯದಲ್ಲಿ ಯಾವತ್ತು ಚುನಾವಣೆ ನಡೆಯಲಿದೆ..?
ಮಧ್ಯಪ್ರದೇಶದಲ್ಲಿ ನವೆಂಬರ್ 17ರಂದು ಮತದಾನ ನಡೆಯುವ ಮೂಲಕ ಚುನಾವಣಾ ಹಬ್ಬಕ್ಕೆ ಮುನ್ನಡಿ ಬರೆಯಲಿದ್ದು, ರಾಜಸ್ತಾನದಲ್ಲಿ ನವೆಂಬರ್ 23, ಛತ್ತೀಸ್ಗಢದಲ್ಲಿ ನವೆಂಬರ್ 7 ಹಾಗು ನವೆಂಬರ್ 17ರಂದು 2 ಹಂತಗಳಲ್ಲಿ ತೆಲಂಗಾಣದಲ್ಲಿ ನವೆಂಬರ್ 30, ಮಿಜೋರಾಂನಲ್ಲಿ ನವೆಂಬರ್ 7ಕ್ಕೆ ಚುನಾವಣೆ ನಡೆಯಲಿದೆ. ಎಲ್ಲಾ ರಾಜ್ಯಗಳ ಫಲಿತಾಂಶ ಡಿಸೆಂಬರ್ 3ರಂದು ಪ್ರಕಟ ಆಗಲಿದ್ದು, ಈ ಪಂಚರಾಜ್ಯಗಳ ಚುನಾವಣೆಯಲ್ಲಿ ಗೆದ್ದವರಿಗೆ ರಾಷ್ಟ್ರ ರಾಜಕಾರಣದ ದಿಕ್ಕು ಸಿಗಲಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಈಗಾಗಲೇ ಶುರುವಾಗಿದೆ. ಈ ಮಾತಿಗೆ ಅನ್ವರ್ಥ ಎನ್ನುವ ರೀತಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘರ್ಜಿಸಿದ್ದಾರೆ. ಬಿಜೆಪಿಯ ಯುಗಾಂತ್ಯ ಆರಂಭ ಎನ್ನುವ ಮೂಲಕ INDIA ಒಕ್ಕೂಟ ಬಿಜೆಪಿಯನ್ನು ಬಗ್ಗಿಬಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಾವ ರಾಜ್ಯದ ಸ್ಥಿತಿ ಹೇಗಿದೆ..? ಕಾಂಗ್ರೆಸ್ ವಿಶ್ವಾಸಕ್ಕೆ ಕಾರಣ ಏನು..?
ರಾಜಸ್ತಾನದಲ್ಲಿ ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಅಶೋಕ್ ಗೆಹ್ಲೋಟ್ 3ನೇ ಬಾರಿ ಸಿಎಂ ಆಗಿದ್ದಾರೆ. ಬಿಜೆಪಿಯಲ್ಲೂ ವಸುಂಧರಾ ರಾಜೆ ಕೂಡ ಪ್ರಭಾವಿ ನಾಯಕಿ ಆಗಿದ್ದರೂ ರಾಜಸ್ತಾನದಲ್ಲಿ ಕಾಂಗ್ರೆಸ್ ರೀತಿಯಲ್ಲೇ ಬಿಜೆಪಿ ಕೂಡ ಒಡೆದ ಮನೆಯಾಗಿದ್ದು, ಕಾಂಗ್ರೆಸ್ ಮತ್ತೆ ಗೆದ್ದು ಗದ್ದುಗೆ ಏರುವ ವಿಶ್ವಾಸದಲ್ಲಿದೆ. ಅದೇ ರೀತಿಯಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು ಶಿವರಾಜಸಿಂಗ್ ಚೌವ್ಹಾಣ್ 2ನೇ ಬಾರಿಗೆ ಸಿಎಂ ಆಗಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕೊಟ್ಟು ಗೆದ್ದು ಅಧಿಕಾರದ ಗದ್ದುಗೆ ಏರುತ್ತಿದ್ದ ಹಾಗೆ ಮಧ್ಯಪ್ರದೇಶದಲ್ಲಿ ಮಹಿಳೆಯರಿಗೆ ಸಹಾಯ ಧನ ಯೋಜನೆ ಜಾರಿ ಮಾಡುವ ಮೂಲಕ 3ನೇ ಬಾರಿಗೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಛತ್ತೀಸ್ಗಢದಲ್ಲಿ ಕಾಂಗ್ರೆಸ್ನ ಭೂಪೇಶ್ ಬಘೇಲ್ ಸಿಎಂ ಆಗಿದ್ದಾರೆ. ಮಿಜೋರಾಂನಲ್ಲಿ MNFನ ಝೋರಾಂ ತಾಂಗಾ 5ನೇ ಬಾರಿಗೆ ಸಿಎಂ ಆಗಿದ್ದಾರೆ. ತೆಲಂಗಾಣದಲ್ಲಿ ಬಿಆರ್ಎಸ್ ಪಕ್ಷದ ಕೆ. ಚಂದ್ರಶೇಖರ ರಾವ್ ಸಿಎಂ ಆಗಿದ್ದಾರೆ.
ಕಾಂಗ್ರೆಸ್ ವಿಶ್ವಾಸಕ್ಕೆ ಕಾರಣ INDIA ಒಕ್ಕೂಟದ ಶಕ್ತಿ ಕಾರಣ..!
ಈಗಾಗಲೇ 2 ಬಾರಿ ಕೇಂದ್ರದಲ್ಲಿ ಅಧಿಕಾರ ನಡೆಸಿ ಮೂರನೇ ಬಾರಿಗೆ ಬಿಜೆಪಿ ಹಾಗು ಬಿಜೆಪಿ ಒಕ್ಕೂಟ ದೃಷ್ಟಿ ನೆಟ್ಟಿದೆ. ಆದರೆ ಈ ಬಾರಿ ಬಿಜೆಪಿ ಕೊಂಚ ತಡವರಿಸಿದಂತೆ ಕಾಣಿಸುತ್ತಿದ್ದು, INDIA ಒಕ್ಕೂಟ ಒಗ್ಗಟ್ಟಿನಿಂದ ಕೊಂಚ ಮುನ್ನಡೆ ಕಾಯ್ದುಕೊಳ್ಳುವ ಲೆಕ್ಕಾಚಾರ ಶುರುವಾಗಿದೆ. ಇದೇ ಕಾರಣಕ್ಕೆ ಟ್ವಿಟ್ಟರ್ ಪೋಸ್ಟ್ನಲ್ಲಿ ಎನ್ಡಿಎ ಒಕ್ಕೂಟಕ್ಕೆ ರಣವಿಳ್ಯ ಕೊಟ್ಟಿರುವ ಮಲ್ಲಿಕಾರ್ಜುನ ಖರ್ಗೆ, ಭಾರತೀಯ ಜನತಾ ಪಕ್ಷದ ಹಾಗು NDA ಒಕ್ಕೂಟದ ರಾಜಕೀಯ ಯುಗಾಂತ್ಯ ಶುರು ಎಂದಿದ್ದಾರೆ. ಜನ ಕಲ್ಯಾಣ, ಸಾಮಾಜಿಕ ನ್ಯಾಯ, ಅಭಿವೃದ್ಧಿಯೇ ಕಾಂಗ್ರೆಸ್ ಪಕ್ಷದ ಗ್ಯಾರಂಟಿ, ಕಾಂಗ್ರೆಸ್ ನಾಯಕರು ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನವೇ ನಡೆಯುತ್ತಿರುವ ಸೆಮಿಫೈನಲ್ಸ್ ಸಮರ ಎಂದೇ ಪರಿಗಣಿಸಿರುವ ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗು ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟ ಜಾತಿ ಗಣತಿ ಹಾಗು ಗ್ಯಾರಂಟಿಗಳು ಬ್ರಹ್ಮಾಸ್ತ್ರ ಎನ್ನುವಂತಾಗಿದೆ.-
-ಕೃಷ್ಣಮಣಿ