ನವದೆಹಲಿ: ಇತ್ತೀಚೆಗೆ ವಿವಾದಕ್ಕೆ ಒಳಗಾಗಿದ್ದ ಬ್ರಿಟಿಷ್ ಬ್ರಾಡ್’ಕಾಸ್ಟಿಂಗ್ ಸರ್ವೀಸ್(ಬಿಬಿಸಿ) ದೆಹಲಿ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ
ಗುಜರಾತ್ ಕೋಮು ಗಲಭೆ ಕುರಿತು ಬಿಬಿಸಿ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಕ್ಕಾಗಿ ವ್ಯಾಪಕ ಚರ್ಚೆಯಾಗಿತ್ತು.
ತೆರಿಗೆಗೆ ಸಂಬಂಧಿಸಿದಂತೆ ಹಾಗೂ ಅಂತರರಾಷ್ಟ್ರೀಯ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ನವದೆಹಲಿಯ ಕಚೇರಿಯಲ್ಲಿ ಈ ತಪಾಸಣೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

ಈ ವೇಳೆ ಐಟಿ ಅಧಿಕಾರಿಗಳು ಬಿಬಿಸಿ ಕಚೇರಿ ಸಿಬ್ಬಂದಿಯ ಮೊಬೈಲ್’ಗಳನ್ನು ವಶಪಡಿಸಿಕೊಂಡಿದ್ದಾರೆ. ನೌಕರರು ಕೂಡ ಕಚೇರಿ ಬಿಟ್ಟು ಬೇಗ ಮನೆಗೆ ತೆರಳುವಂತೆ ತಿಳಿಸಲಾಗಿದೆ. ಕೆಲವು ದಾಖಲೆಗಳ ಪರಿಶೀಲನೆ ನಡೆಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.
ಬಿಬಿಸಿ ಸಿದ್ಧಪಡಿಸಿರುವ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ತಡೆ ಹಿಡಿದಿರುವುದಕ್ಕೆ ಕೇಂದ್ರ ಸರ್ಕಾರ ಉಲ್ಲೇಖಿಸಿರುವ ಯಾವ ಕಾರಣವೂ ಸರಿಯಾಗಿಲ್ಲ, ಸಮಂಜಸವಾಗಿಲ್ಲ ಎಂದು ವಿರೋಧ ಪಕ್ಷಗಳು ಹೇಳಿದ್ದವು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಮಾಹಿತಿ ತಂತ್ರಜ್ಞಾನ ನಿಯಮ– 2021ರ ಅಡಿಯಲ್ಲಿ ವಿಶೇಷ ಅಧಿಕಾರವನ್ನು ಬಳಸಿ, ಈ ಸಾಕ್ಷ್ಯಚಿತ್ರವನ್ನು ತಡೆಹಿಡಿಯುವಂತೆ ಯೂಟ್ಯೂಬ್’ಗೆ, ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ವೆಬ್ ಕೊಂಡಿಗಳನ್ನು ತಡೆಹಿಡಿಯುವಂತೆ ಟ್ವಿಟರ್’ಗೆ ಸೂಚನೆ ರವಾನಿಸಿತ್ತು.