ಮೈಸೂರು: ಬೆಂಗಳೂರಿನ ನಂತರ ಅತ್ಯಂತ ಸೂಕ್ಷ್ಮ ಜಿಲ್ಲೆಗಳ ಪೈಕಿ ಸಾಂಸ್ಕೃತಿಕ ನಗರಿ ಮೈಸೂರು ಕೂಡ ಒಂದಾಗಿದೆ. ಈಗಾಗಲೇ ಮೈಸೂರಲ್ಲಿ ವಿಧಾನಸಭಾ ಚುನಾವಣಾ ಸಿದ್ಧತೆ ಆರಂಭಗೊಂಡಿದ್ದು, ಪೊಲೀಸ್ ಇಲಾಖೆ ಕೂಡ ಅಲರ್ಟ್ ಆಗಿದೆ. ನಗರದ ಪೊಲೀಸರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಮಂಗಳವಾರ ಬೆಳ್ಳಂಬೆಳಿಗ್ಗೆ ಮೈಸೂರಿನ ಹೆಬ್ಬಾಳು ಪೊಲೀಸ್ ಠಾಣೆ ಆವರಣದಲ್ಲಿ ರೌಡಿಶೀಟರ್’ಗಳ ಪರೇಡ್ ನಡೆಸಲಾಗಿದ್ದು, ವಿವಿಧ ಪೊಲೀಸ್ ಠಾಣೆಗಳ 76 ರೌಡಿಶೀಟರ್’ಗಳು ಪರೇಡ್’ನಲ್ಲಿ ಭಾಗಿಯಾಗಿದ್ದಾರೆ.
ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾದರೆ ಮೈಸೂರಿನಿಂದ ಗಡಿಪಾರು ಮಾಡುವುದಾಗಿ ಎಚ್ಚರಿಕೆ ರೌಡಿ ಸೀಟರ್’ಗಳಿಗೆ ಮೈಸೂರು ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಎಚ್ಚರಿಕೆ ನೀಡಿದ್ದಾರೆ.
ರೌಡಿಶೀಟರ್’ಗಳ ಪರೇಡ್ ವೇಳೆ ಡಿಸಿಪಿಗಳಾದ ಮುತ್ತುರಾಜ್, ಜಾನವಿ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.

15 ಕ್ಕೂ ಹೆಚ್ಚು ರೌಡಿಗಳ ಗಡಿಪಾರಿಗೆ ಸಿದ್ದತೆ
2 ತಿಂಗಳಲ್ಲಿ 2 ಬಾರಿ ರೌಡಿ ಶೀಟರ್’ಗಳ ಪರೇಡ್ ನಡೆಸಲಾಗಿದೆ. ಮಂಗಳವಾರ 76 ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ಯಾವುದೇ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿಲ್ಲ. ಈಗಾಗಲೇ 7 ಮಂದಿ ರೌಡಿಗಳನ್ನ ಗಡಿಪಾರು ಮಾಡಲಾಗಿದ್ದು , 15 ಕ್ಕೂ ಹೆಚ್ಚು ನಟೋರಿಯಸ್ ರೌಡಿಗಳ ಗಡಿಪಾರಿಗೆ ಸಿದ್ಧತೆ ನಡೆಸಲಾಗಿದೆ.
ಸಮಾಜಘಾತುಕ ಶಕ್ತಿಗಳ ಹೆಡೆಮುರಿ ಕಟ್ಟಿ ಶಾಂತಿ ನಿರ್ಮಾಣ ಮಾಡುವುದೇ ಉದ್ದೇಶವಾಗಿದೆ ಎಂದು ಕಮಿಷನರ್ ರಮೇಶ್ ಬಾನೋತ್ ತಿಳಿಸಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ರೌಡಿಗಳು ಅನೇಕ ದುಷ್ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದ್ದು, ಮೈಸೂರು ನಗರದ ಎಲ್ಲಾ ಬಡಾವಣೆಗಳಲ್ಲಿನ ರೌಡಿಗಳ ಲಿಸ್ಟ್ ತಯಾರು ಮಾಡಿಕೊಳ್ಳಲಾಗಿದೆ. ವಿಶೇಷ ನಿಗಾ ವಹಿಸಲು ಆಯಾ ಸರಹದ್ದಿನ ಠಾಣಾ ಇನ್ಸ್’ಪೆಕ್ಟರ್’ಗಳಿಗೆ ಕಮಿಷನರ್ ಸೂಚನೆ ನೀಡಿದ್ದಾರೆ.
ಟ್ರಾಫಿಕ್ ಫೈನ್ ಕಟ್ಟಲು ಸಮಯ ವಿಸ್ತರಣೆ
ಸಂಚಾರ ನಿಯಮ ಉಲ್ಲಂಘನೆಯ ಶೇ.50 ರಿಯಾಯಿತಿಯನ್ನು ಮತ್ತೆ ಎರಡು ವಾರ ವಿಸ್ತರಣೆ ಮಾಡುವ ಸಾಧ್ಯತೆ ಇದ್ದು, ಈ ಬಗ್ಗೆ ಮಂಗಳವಾರ ಅಧಿಕೃತ ಘೋಷಣೆ ಹೊರ ಬೀಳಲಿದೆ. ಟ್ರಾಫಿಕ್ ಫೈನ್ ಶೇ. 50 ರಷ್ಟು ವಸೂಲಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆ ಫೆಬ್ರವರಿ 14ರಿಂದ 28ರವರೆಗೆ ವಿಸ್ತರಣೆಗೆ ತೀರ್ಮಾನಿಸಲಾಗಿದೆ.
ಉಳಿದಂತೆ ಮೈಸೂರಿನಲ್ಲಿ 9 ದಿನದಲ್ಲಿ ಒಟ್ಟು 12 ಕೋಟಿ 30 ಲಕ್ಷ 58 ಸಾವಿರದ 650 ರೂ. ದಂಡ ವಸೂಲಿಯಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಪ್ರಕಟಣೆ ಹೊರಡಿಸಿದ್ದಾರೆ.






