ಭಾರತ ಚಂದ್ರನ ಮೇಲೆ ಕಾಲಿಸಿರುವ ಕನಸು ರೂಪುಗೊಂಡಿದ್ದು ಮೂರು ದಶಕಗಳ ಮುನ್ನ
( ಚಂದ್ರಯಾನದ ಸಂಭ್ರಮವೂ ಚರಿತ್ರೆಯ ಹೆಜ್ಜೆಗಳೂ/ದಾರ್ಶನಿಕ ನಾಯಕತ್ವವೂ ಭಾರತದ ಬಾಹ್ಯಾಕಾಶ ಪಯಣವೂ/ಬಾಹ್ಯಾಕಾಶ ನಡಿಗೆಯೂ – ಮೊದಲ ಹೆಜ್ಜೆಗಳ ನೆನಪುಗಳೂ/ಸ್ವತಂತ್ರ ಭಾರತದ ಮೊದಲ ವೈಜ್ಞಾನಿಕ ತ್ರಿ-ವಿಕ್ರಮ ಹೆಜ್ಜೆಗಳು/ವಸಾಹತು ಕಾಲದಿಂದ ಅಮೃತಕಾಲದತ್ತ ಇಸ್ರೋ ನಡಿಗೆ/ಸಂಕೀರ್ಣ ಸವಾಲುಗಳ ನಡುವೆ ಇಸ್ರೋ ವೈಜ್ಞಾನಿಕ ನಡಿಗೆ —ಈ ಲೇಖನಗಳ ಮುಂದುವರೆದ ಭಾಗ )
ನಾ ದಿವಾಕರ
1960ರ ದಶಕದ ಆರಂಭದಲ್ಲಿ ಜವಹರಲಾಲ್ ನೆಹರೂ , ಹೋಮಿ ಜೆ ಭಾಭಾ ಮತ್ತು ವಿಕ್ರಂ ಸಾರಾಭಾಯ್ ಅವರ ಬಾಹ್ಯಾಕಾಶದ ಕನಸುಗಳು ಗರಿಗೆದರಲು ಆರಂಭಿಸಿದಾಗ ಭಾರತ ವಿಶ್ವ ಭೂಪಟದಲ್ಲಿ ಅಭಿವೃದ್ಧಿಶೀಲ ಎಂಬ ಪಟ್ಟವನ್ನೂ ಪಡೆದಿರಲಿಲ್ಲ. ವಸಾಹತು ದಾಸ್ಯದಿಂದ ವಿಮೋಚನೆ ಪಡೆದು ತನ್ನದೇ ಆದ ಸ್ವತಂತ್ರ ಗಣತಂತ್ರ ಆಳ್ವಿಕೆಯನ್ನು ಆರಂಭಿಸಿದ್ದ ಭಾರತ ಬೃಹತ್ ಬಂಡವಾಳ ಹೂಡಿಕೆಗೆ ಅನ್ಯ ರಾಷ್ಟ್ರಗಳನ್ನು ಆಶ್ರಯಿಸುವಂತೆಯೇ ವಿಜ್ಞಾನ, ತಂತ್ರಜ್ಞಾನದ ಜ್ಞಾನ ಸಂಪತ್ತಿಗೂ ಇತರ ಮುಂದುವರೆದ ದೇಶಗಳನ್ನು ಆಶ್ರಯಿಸಬೇಕಿತ್ತು. ಅಮೆರಿಕ ಮತ್ತು ಸೋವಿಯತ್ ಸಂಘದ ನಡುವೆ ಇದ್ದ ವೈಮನಸ್ಯ ಹಾಗೂ ಎರಡೂ ದೇಶಗಳ ನೇತೃತ್ವದಲ್ಲಿ ರೂಪುಗೊಂಡಿದ್ದ ಮಿತ್ರಕೂಟಗಳ ನಡುವಿನ ಸಾಮ್ರಾಜ್ಯಶಾಹಿ ವಿಸ್ತರಣೆಯ ಸಮರ, ಭಾರತದಂತಹ ಹಲವು ತೃತೀಯ ವಿಶ್ವದ ರಾಷ್ಟ್ರಗಳನ್ನು ಪರಾವಲಂಬಿಗಳನ್ನಾಗಿ ಮಾಡಿದ್ದವು.
ಈ ಪರಾವಲಂಬನೆಯೂ ಸಹ ಸಾಮ್ರಾಜ್ಯಶಾಹಿ ಮಿತ್ರಕೂಟಗಳ ಚೌಕಟ್ಟಿನೊಳಗೇ ಅನುಸರಿಸಬೇಕಾದ ಅನಿವಾರ್ಯತೆಯನ್ನು ಸಹ ಸೃಷ್ಟಿಸಲಾಗಿತ್ತು. ಈ ಸಂದರ್ಭದಲ್ಲಿ ತಮ್ಮ ವೈಜ್ಞಾನಿಕ ಮುನ್ನಡೆ ಹಾಗೂ ಬಾಹ್ಯಾಕಾಶದ ಕನಸುಗಳನ್ನು ರೂಪಿಸಿದ್ದ ನೆಹರೂ ಆಳ್ವಿಕೆಗೆ ಒತ್ತಾಸೆಯಾಗಿ ನಿಂತಿದ್ದು ಹೋಮಿ ಜೆ ಭಾಭಾ, ವಿಕ್ರಂ ಸಾರಾಭಾಯ್ ಮುಂತಾದ ವಿಜ್ಞಾನಿಗಳ ಸಮೂಹ. ಸಾಂಸ್ಥಿಕವಾಗಿ ಭಾರತದ ಬಾಹ್ಯಾಕಾಶ ಸಂಶೋಧನೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿದ್ದರೂ, ತಂತ್ರಜ್ಞಾನದ ಬಳಕೆಗಾಗಿ, ವೈಜ್ಞಾನಿಕ ಸಾಧನಗಳ ಅನ್ವಯಿಕೆಗಾಗಿ ಪಶ್ಚಿಮ ರಾಷ್ಟ್ರಗಳನ್ನು, ಸೋವಿಯತ್ ಸಂಘವನ್ನು ಅವಲಂಬಿಸುವುದು ಅತ್ಯವಶ್ಯವೂ ಆಗಿತ್ತು. ಈ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಅತ್ಯವಶ್ಯವಾಗಿದ್ದ ರಾಜಕೀಯ ಮುತ್ಸದ್ಧಿತನವನ್ನು ನೆಹರೂ ಆಳ್ವಿಕೆಯಲ್ಲಿ, ನಂತರದ ಇಂದಿರಾಗಾಂಧಿ ಆಳ್ವಿಕೆಯಲ್ಲಿ ಸ್ಪಷ್ಟವಾಗಿ ಕಾಣಬಹುದು. ಇಸ್ರೋ ಸಂಸ್ಥೆಯ ಬೆಳವಣಿಗೆ ಮತ್ತು ಭಾರತದ ಬಾಹ್ಯಾಕಾಶ ನಡಿಗೆಯ ಹೆಜ್ಜೆಗಳನ್ನು ಗಮನಿಸಿದರೆ ಇದು ಮತ್ತಷ್ಟು ಸ್ಪಷ್ಟವಾಗುತ್ತದೆ.
ಬಾಹ್ಯಾಕಾಶ ಸಮರದ ನಡುವೆ
ಸಾಮ್ರಾಜ್ಯಶಾಹಿ ಶಕ್ತಿಗಳ ಭೌಗೋಳಿಕ ವಿಸ್ತರಣೆಯ ಸಮರದಲ್ಲಿ ಬಾಹ್ಯಾಕಾಶವನ್ನೂ ಆಕ್ರಮಿಸಿದ್ದ ಅಮೆರಿಕ ಮತ್ತು ಸೋವಿಯತ್ ಸಂಘದ ಮಹತ್ವಾಕಾಂಕ್ಷೆಗಳ ನಡುವೆ ಭಾರತ ತನ್ನ ವೈಜ್ಞಾನಿಕ ನಡಿಗೆಯನ್ನು ರೂಪಿಸಿಕೊಳ್ಳಬೇಕಿತ್ತು. ಈ ಸಂದರ್ಭದಲ್ಲೇ 1971ರಲ್ಲಿ ವಿಕ್ರಂ ಸಾರಾಭಾಯ್ ಅವರ ಹಠಾತ್ ನಿಧನ ಕೊಂಚ ಮಟ್ಟಿಗಾದರೂ ಆತಂಕಗಳನ್ನು ಸೃಷ್ಟಿಸಿತ್ತು. ಆದರೆ ಸಾರಾಭಾಯ್ ಅವರು ಹಾಕಿಕೊಟ್ಟ ಹಾದಿಯಲ್ಲೇ, ಅವರ ತಾತ್ವಿಕ ನಿರ್ದೇಶನಗಳಿಗೆ ಅನುಗುಣವಾಗಿಯೇ ಇಸ್ರೋ ಸಂಸ್ಥೆಯನ್ನು ಮುನ್ನಡೆಸಿದ ಶ್ರೇಯ ಆನಂತರದಲ್ಲಿ ಸಂಸ್ಥೆಯ ಮುಂದಾಳತ್ವ ವಹಿಸಿದ ಪ್ರೊ. ಎಂ.ಜಿ.ಕೆ. ಮೆನನ್, ಸತೀಶ್ ಧವನ್ ಮತ್ತು ಯು.ಆರ್. ರಾವ್ ಅವರಿಗೆ ಸಲ್ಲುತ್ತದೆ. ಮುಂದಿನ ಎರಡು ದಶಕಗಳಲ್ಲಿ ಇಸ್ರೋ ರಿಮೋಟ್ ಸೆನ್ಸಿಂಗ್, ಸಂವಹನ, ಪ್ರಸಾರ, ಪವನಶಾಸ್ತ್ರ, ಭೂ ವೀಕ್ಷಣೆ ಹಾಗೂ ಉಪಗ್ರಹ ತಂತ್ರಜ್ಞಾನಗಳಲ್ಲಿ ತನ್ನದೇ ಆದ ಸ್ವಾಯತ್ತೆಯೊಂದಿಗೆ ಬೌದ್ಧಿಕ ಸಾಮರ್ಥ್ಯವನ್ನೂ ಪಡೆದುಕೊಂಡಿತ್ತು. ಸರ್ಕಾರಿ ಸಾಮ್ಯದ ಒಂದು ಸಂಸ್ಥೆಯಾಗಿ, ಸರ್ಕಾರದ ಒಂದು ಇಲಾಖೆಯಾಗಿ ಕಾರ್ಯನಿರ್ವಹಿಸಿದ ಇಸ್ರೋ ಸಂಶೋಧನೆ ಮತ್ತು ವೈಜ್ಞಾನಿಕ ಅನ್ವೇಷಣೆಗಳ ಮಾರ್ಗದಲ್ಲಿ ಸ್ವಾಯತ್ತತೆಯಿಂದ ಕಾರ್ಯನಿರ್ವಹಿಸಿದ್ದು ಸಹ ಈ ಯಶಸ್ಸಿನ ಕಾರಣಗಳಲ್ಲೊಂದು.
1994ರಲ್ಲಿ ಯು.ಅರ್. ರಾವ್ ಇಸ್ರೋ ಅಧ್ಯಕ್ಷ ಪದವಿಯಿಂದ ನಿವೃತ್ತರಾಗುವ ವೇಳೆಗೆ ಸಂಸ್ಥೆಯು ವಿಕ್ರಂ ಸಾರಾಭಾಯ್ ಅವರ ದೂರಗಾಮಿ ಆಲೋಚನೆಗಳನ್ನು ಸಾಕಾರಗೊಳಿಸಿತ್ತು. ಆದರೆ ಮುಂದೇನು ಎಂಬ ಪ್ರಶ್ನೆಯೂ, ಸಾರಾಭಾಯ್ ಅವರ ಪರಂಪರೆಯನ್ನು ಮುಂದೆ ಕೊಂಡೊಯ್ಯುವುದು ಹೇಗೆ ಎಂಬ ಪ್ರಶ್ನೆಯೂ ತಮ್ಮನ್ನು ಗಾಢವಾಗಿ ಕಾಡಿತ್ತು ಎಂದು ಯು.ಆರ್. ರಾವ್ ನಂತರ ಅಧಿಕಾರ ವಹಿಸಿಕೊಂಡ ಕಸ್ತೂರಿ ರಂಗನ್ ನೆನಪಿಸಿಕೊಳ್ಳುತ್ತಾರೆ. ಬಾಹ್ಯಾಕಾಶ ಸಂಶೋಧನೆಯ ಮತ್ತು ಅನ್ವೇಷಣೆಗಳನ್ನು ಕೇವಲ ಭೌಗೋಳಿಕ ಶಕ್ತಿ ಸಾಮರ್ಥ್ಯಗಳ ಪ್ರದರ್ಶನಕ್ಕೆ ಸೀಮಿತಗೊಳಿಸದೆ, ಭಾರತದ ಸಾಮಾನ್ಯ ಜನತೆಗೆ ಉಪಯುಕ್ತವಾಗುವ ರೀತಿಯಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಚಿಂತನೆಗಳು ಸಹ ಚಾಲ್ತಿಯಲ್ಲಿದ್ದವು. ಈ ಸಂದರ್ಭದಲ್ಲೇ ಅನ್ಯ ಗ್ರಹಗಳ ಪರಿಶೋಧನೆ ಮತ್ತು ಚಂದ್ರನನ್ನು ತಲುಪುವ ಮಹತ್ವಾಕಾಂಕ್ಷೆಯ ಯೋಜನೆಗಳೂ ಗರಿಗೆದರಿದ್ದವು.
ವಿಕ್ರಂ ಸಾರಾಭಾಯ್ ನಿಧನಾನಂತರ ಸತೀಶ್ ಧವನ್ ಮತ್ತು ಯು.ಆರ್. ರಾವ್ ಅವರ ಮುಂದಾಳತ್ವದಲ್ಲಿ ಸಾಗಿದ ಇಸ್ರೋ ಶೀಘ್ರದಲ್ಲೇ ಹೊಸ ಸಂಶೋಧನೆ ಮತ್ತು ಅನ್ವೇಷಣೆಯ ಪ್ರಯತ್ನಗಳಿಗೆ ಮುಂದಾಗಿದ್ದರು. ಸೌಂಡಿಂಗ್ ರಾಕೆಟ್ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡ ನಂತರ ಕಕ್ಷೆಯ ಉಡಾವಣಾ ವಾಹನವನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳಿಗೂ ಇಸ್ರೋ ಮುಂದಾಗಿತ್ತು. 77 ಪೌಂಡ್ (35 ಕಿಲೋ) ದ್ರವ್ಯರಾಶಿಗೆ ಅಗತ್ಯವಾದಷ್ಟು ವೇಗವನ್ನು ಒದಗಿಸುವ ಸಾಮರ್ಥ್ಯವುಳ್ಳ ಲಾಂಚರ್ ಅಭಿವೃದ್ಧಿಪಡಿಸುವುದು ಇಸ್ರೋ ವಿಜ್ಞಾನಿಗಳ ಕಲ್ಪನೆಯಾಗಿತ್ತು. ಈ ಹಾದಿಯಲ್ಲೇ ಕ್ರಮಿಸಿದ ಇಸ್ರೋ ವಿಜ್ಞಾನಿಗಳು ಏಳು ವರ್ಷಗಳ ಅವಧಿಯಲ್ಲಿ 400 ಕಿಲೋಮೀಟರ್ ಕಕ್ಷೆಗೆ 88 ಪೌಂಡ್ ತೂಕದ ಉಪಗ್ರಹ ಉಡಾವಣಾ ವಾಹನವನ್ನು ಅಭಿವೃದ್ಧಿಪಡಿಸಿದ್ದರು. ಈ ಉಡಾವಣಾ ಅಭಿಯಾನಕ್ಕೆ ಪೂರಕವಾಗಿ ASLV ಉಡಾವಣಾ ಪ್ಯಾಡ್, ಗ್ರೌಂಡ್ ಸ್ಟೇಷನ್‌ಗಲೂ, ಟ್ರ್ಯಾಕಿಂಗ್ ನೆಟ್‌ವರ್ಕ್‌ಗಳು, ರಾಡಾರ್‌ಗಳು ಮತ್ತು ಇತರ ಸಂವಹನ ಸಾಧನಗಳನ್ನು ಸ್ಥಾಪಿಸಲಾಗಿತ್ತು.
ASLV-PSLV ಉಡಾವಣೆಯ ಪರ್ವ
ಈ ಪ್ರಯತ್ನಗಳ ಫಲವಾಗಿಯೇ 1979ರಲ್ಲಿ ASLV ಯ ಮೊದಲ ಉಡಾವಣೆಯಲ್ಲಿ ರೋಹಿಣಿ ತಂತ್ರಜ್ಞಾನದ ಪೇಲೋಡನ್ನು ಹೊತ್ತೊಯ್ದಿತ್ತು. ಆದರೆ ಉಪಗ್ರಹವನ್ನು ಕಕ್ಷೆಗೆ ಸೇರಿಸುವುದರಲ್ಲಿ ವಿಫಲವಾಗಿತ್ತು. ಈ ವೈಫಲ್ಯದಿಂದ ಎದೆಗುಂದದ ಇಸ್ರೋ ವಿಜ್ಞಾನಿಗಳ ತಂಡ 1980ರಲ್ಲಿ ರೋಹಿಣಿ ಸರಣಿ-1 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಸೋವಿಯತ್, ಅಮೆರಿಕ, ಫ್ರಾನ್ಸ್, ಬ್ರಿಟನ್, ಚೀನಾ ಮತ್ತ ಜಪಾನ್ ನಂತರ ಭೂಮಿಯ ಕಕ್ಷೆಯನ್ನು ತಲುಪಿದ ಏಳನೆಯ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತ್ತು. ಇದಕ್ಕೂ ಮುನ್ನ 1979ರಲ್ಲಿ ಸೋವಿಯತ್ ಒಕ್ಕೂಟದಿಂದ ಭಾಸ್ಕರ ಉಪಗ್ರಹವನ್ನು ಉಡಾವಣೆ ಮಾಡಿದ್ದುದರಿಂದ RAS-1 ಭಾರತದ ಮೂರನೆಯ ಉಪಗ್ರಹವಾಗಿತ್ತು. ಈ ವೇಳೆಗಾಗಲೇ 1978ರಲ್ಲಿ ಇಸ್ರೋದ ವಿಜ್ಞಾನಿಗಳು 1300 ಪೌಂಡ್ ವರ್ಗದ ಬಾಹ್ಯಾಕಾಶ ನೌಕೆಗಳನ್ನು 620 ಮೈಲಿ ದೂರದ ಸೂರ್ಯ-ಸಿಂಕ್ರೋನಸ್ ಕಕ್ಷೆಗೆ ಸೇರಿಸುವ ಸಾಮರ್ಥ್ಯವನ್ನು ಹೊಂದಿರುವ ಮಧ್ಯಮ ಲಿಫ್ಟ್ ಉಡಾವಣಾ ವಾಹನವನ್ನು ಅಭಿವೃದ್ಧಿಪಡಿಸಲು ಯೋಜನೆಗಳನ್ನು ಹಮ್ಮಿಕೊಂಡಿದ್ದರು. ಈ ಅಡಿಪಾಯದ ಮೇಲೆ ನಂತರದ ದಿನಗಳಲ್ಲಿ PSLV ಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿತ್ತು.
ಇದೇ ಸಂದರ್ಭದಲ್ಲೇ 1985ರಲ್ಲಿ ಇಸ್ರೋ ಸಂಸ್ಥೆಯ ವತಿಯಿಂದ Liquid Propulsion Systems Centre (LPSC) ಸಂಸ್ಥೆಯನ್ನು ಸ್ಥಾಪಿಸಲಾಯಿತು. ಈ ಸಂಸ್ಥೆಯು ಫ್ರಾನ್ಸ್‌ನ ವೈಕಿಂಗ್ ಆಧರಿಸಿದ ವಿಕಾಸ್ ಎಂಬ ಶಕ್ತಿಯುತವಾದ ಇಂಜಿನ್ ಮೂಲಕ ಕೆಲಸ ಮಾಡಲು ಪ್ರಾರಂಭಿಸಿತ್ತು. ಎರಡು ವರ್ಷಗಳ ನಂತರ ದ್ರವ-ಇಂಧನ ರಾಕೆಟ್ ಇಂಜಿನ್ನುಗಳನ್ನು ಪರೀಕ್ಷಿಸುವ ಸೌಲಭ್ಯಗಳನ್ನು ಸ್ಥಾಪಿಸಲಾಯಿತು. ಈ ಸೌಲಭ್ಯಗಳನ್ನು ಆಧರಿಸಿಯೇ ವಿವಿಧ ರಾಕೆಟ್ ಇಂಜಿನ್‌ಗಳ Thruster ಗಳ ಪರೀಕ್ಷೆ ಮತ್ತು ಅಭಿವೃದ್ಧಿ ಪ್ರಕ್ರಿಯೆಯೂ ಆರಂಭವಾಗಿತ್ತು. ಇದೇ ಅವಧಿಯಲ್ಲೇ ASLV-3 ಆಧರಿಸಿದ ಮತ್ತೊಂದು ಘನ ಇಂಧನ ರಾಕೆಟ್ ವರ್ಧಿತ ಉಪಗ್ರಹ ಉಡಾವಣಾ ವಾಹನವನ್ನು ಅಭಿವೃದ್ಧಿ ಪಡಿಸುವ ಕ್ರಿಯೆಗೆ ಚಾಲನೆ ನೀಡಲಾಗಿತ್ತು. ತನ್ಮೂಲಕ ಉಪಗ್ರಹಗಳನ್ನು ಭೂ ಸ್ಥಾಯಿ ಕಕ್ಷೆಗೆ (Geosynchronous Transfer Orbit) ಸೇರಿಸುವ ತಂತ್ರಜ್ಞಾನಗಳ ಅಭಿವೃದ್ಧಿಗೆ ಇಸ್ರೋ ಮುಂದಾಗಿತ್ತು.
ASLV ಸೀಮಿತ ಯಶಸ್ಸನ್ನು ಹೊಂದಿದ್ದು, ಹಲವು ಸಂದರ್ಭಗಳಲ್ಲಿ ಉಡಾವಣಾ ವೈಫಲ್ಯಗಳನ್ನೂ ಎದುರಿಸುತ್ತು. ಹಾಗಾಗಿ ಕೆಲವು ಪ್ರಯತ್ನಗಳ ನಂತರ ASLVಯನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಎದೆಗುಂದದೆ ಇಸ್ರೋ ಸಂಸ್ಥೆಯು INSAT ( Indian National Satellite System) ಉಪಗ್ರಹಗಳ ಉಡಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿತ್ತು.. ದೂರಸಂಪರ್ಕ, ಪ್ರಸಾರ, ಹವಾಮಾನ ಮತ್ತು ಪಾರುಗಾಣಿಕಾ ಕಾರ್ಯಾಚರಣೆಗಳನ್ನು (Rescue Operations) ಕೈಗೊಳ್ಳಲು ಈ ಎರಡೂ ಸರಣಿಗಳು ಭೂ ಸ್ಥಿರ ಉಪಗ್ರಹಗಳಾಗಿ (Geostationary Satellites) ಕಾರ್ಯನಿರತವಾಗಿವೆ. 1983ರಲ್ಲಿ ಆರಂಭವಾದ ಈ ಸರಣಿ ಉಪಗ್ರಹಗಳ ಕಾರ್ಯಾಚರಣೆ ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಅತಿ ದೊಡ್ಡ ದೇಶೀಯ ಸಂವಹನ ವ್ಯವಸ್ಥೆಯಾಗಿದೆ. ಬಾಹ್ಯಾಕಾಶ ಇಲಾಖೆ, ದೂರ ಸಂಪರ್ಕ ಇಲಾಖೆ, ಹವಾಮಾನ ಇಲಾಖೆ, ಆಕಾಶವಾಣಿ ಮತ್ತು ದೂರದರ್ಶನದೊಡನೆ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತದೆ. INSAT ಸಮನ್ವಯ ಸಮಿತಿಯು ಇಡೀ ಕಾರ್ಯಾಚರಣೆಯನ್ನು ನಿರ್ವಹಿಸುತ್ತದೆ.
INSAT ಉಪಗ್ರಹದ ಪಯಣ
INSAT ಉಪಗ್ರಹಗಳು ಭಾರತದ ದೂರದರ್ಶನ ಮತ್ತು ಇತರ ಸಂವಹನ ಅಗತ್ಯಗಳನ್ನು ಪೂರೈಸಲು ವಿವಿಧ ಬ್ಯಾಂಡ್‌ಗಳಲ್ಲಿ Transponder ಗಳನ್ನು ಒದಗಿಸುತ್ತದೆ. ಕೆಲವು ಉಪಗ್ರಹಗಳಲ್ಲಿ ಹವಾಮಾನ ಚಿತ್ರಣಕ್ಕಾಗಿ Very High Resolution Radiometer ಗಳನ್ನು ಅಳವಡಿಲಾಗಿದ್ದು CCD ಕ್ಯಾಮರಾಗಳನ್ನು ಸಹ ಹೊಂದಿವೆ. COSPAS-SARSAT ಕಾರ್ಯಕ್ರಮದ ಸದಸ್ಯ ಸಂಸ್ಥೆಯಾಗಿರುವ ಕಾರಣ ಇಸ್ರೋ ದಕ್ಷಿಣ ಏಷ್ಯಾ ಮತ್ತು ಹಿಂದೂ ಮಹಾಸಾಗರದ ವ್ಯಾಪ್ತಿಯಲ್ಲಿ ಶೋಧನೆ ಮತ್ತು ಪಾರುಗಾಣಿಕಾ ಕಾರ್ಯಾಚರಣೆಗಳಿಗಾಗಿ ಎಚ್ಚರಿಕೆಯ ಸಂಕೇತಗಳನ್ನು ಸ್ವೀಕರಿಸುವ ಸಲುವಾಗಿ Transponder ಗಳನ್ನು ಸಂಯೋಜಿಸುತ್ತವೆ. ಹಾಸನ ಮತ್ತು ಭೂಪಾಲ್‌ನಲ್ಲಿರುವ ಮಾಸ್ಟರ್ ಕಂಟ್ರೋಲ್ ಸೌಕರ್ಯಗಳು ಇವುಗಳ ಮೇಲ್ವಿಚಾರಣೆಯನ್ನು ವಹಿಸಿಕೊಂಡಿವೆ. ಇದೇ ಸಂದರ್ಭದಲ್ಲಿ ಇಸ್ರೋ ಅಭಿವೃದ್ಧಿಪಡಿಸಿದ GSAT ( Geosynchronous Satellites Systems) ಉಪಗ್ರಹಗಳು ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಸಂವಹನ ಉಪಗ್ರಹಗಳಾಗಿವೆ. ಈ ಉಪಗ್ರಹಗಳನ್ನು ಡಿಜಿಟಲ್ ಆಡಿಯೋ, ದತ್ತಾಂಶಗಳು ಹಾಗೂ ವಿಡಿಯೋ ಪ್ರದರ್ಶನಗಳಿಗಾಗಿ ಬಳಸಲಾಗುತ್ತದೆ. 2018ರವರೆಗೂ ಇಸ್ರೋ ವತಿಯಿಂದ 20 GSAT ಉಪಗ್ರಹಗಳ ಉಡಾವಣೆ ಮಾಡಲಾಗಿದ್ದು, 14 ಕಾರ್ಯಾಚರಣೆಯಲ್ಲಿವೆ.
Geosynchronous ಉಪಗ್ರಹಗಳ GSAT ಸರಣಿಯು ಪ್ರಸಾರ ಸೇವೆಗಳಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಉದ್ದೇಶದಿಂದ ಇಸ್ರೋ ಅಭಿವೃದ್ಧಿಪಡಿಸಿದ ವ್ಯವಸ್ಥೆಯಾಗಿದೆ. ಸಿ, ವಿಸ್ತರಿತ ಸಿ ಮತ್ತು ಕೆಯು-ಬ್ಯಾಂಡ್‌ಗಳಲ್ಲಿನ 10 ಜಿಸ್ಯಾಟ್ ಉಪಗ್ರಹಗಳ ಸಂಗ್ರಹ, ಒಟ್ಟು 168 Transponder ಗಳನ್ನು ಹೊಂದಿದ್ದು ಅವುಗಳಲ್ಲಿ 95 Transponder ಗಳನ್ನು ಪ್ರಸಾರಕರಿಗೆ ಸೇವೆಗಳನ್ನು ಒದಗಿಸಲು ಗುತ್ತಿಗೆ ನೀಡಲಾಗಿದೆ. ದೂರಸಂಪರ್ಕ, ದೂರದರ್ಶನ ಪ್ರಸಾರ, ಹವಾಮಾನ ಮುನ್ಸೂಚನೆ, ವಿಪತ್ತು ಎಚ್ಚರಿಕೆ ಮತ್ತು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಸೇವೆಗಳನ್ನು ಒದಗಿಸುತ್ತದೆ. ಈ ಬೆಳವಣಿಗೆಯ ನಡುವೆಯೇ 1990ರ ದಶಕದಲ್ಲಿ PSLV ಆಗಮನವಾಗಿತ್ತು. ಇಸ್ರೋ ವಿನ್ಯಾಸಗೊಳಿಸಿದ ಮಧ್ಯಮ ಲಿಫ್ಟ್ ಉಡಾವಣಾ ವಾಹನವಾಗಿರುವ PSLV ಭಾರತದ Remote Sensing ಉಪಗ್ರಹಗಳನ್ನು Solar-Synchronous ಕಕ್ಷೆಗಳಿಗೆ ಉಡಾವಣೆ ಮಾಡಲು ನೆರವಾದವು.
PSLV ಉಡಾವಣೆ ಮಾಡಿದ ಪ್ರಮುಖ Payload ಗಳ ಪೈಕಿ ಮೊದಲ ಚಂದ್ರಶೋಧಕ ಚಂದ್ರಯಾನ-1, ಮೊಟ್ಟಮೊದ ಅಂತರ್‌ಗ್ರಹ ಕಾರ್ಯಾಚರಣೆ, Mars Orbiter Mission (ಮಂಗಳಯಾನ), ದೇಶದ ಪ್ರಪ್ರಥಮ ಬಾಹ್ಯಾಕಾಶ ವೀಕ್ಷಣಾಲಯ, Astrosat ಹಾಗೂ ಭಾರತದ ಪ್ರಪ್ರಥಮ ಸೌರ ಮಿಷನ್ ಆದಿತ್ಯ ಎಲ್-1 ಮುಂತಾದವುಗಳನ್ನು ಹೆಸರಿಸಬಹುದು. 50ಕ್ಕೂ ಹೆಚ್ಚು ಹಾರಾಟ ಸರಣಿಯನ್ನು ಪೂರೈಸಿರುವ PSLV ನೂರಾರು ವಿದೇಶಿ ಉಪಗ್ರಹಗಳ ಉಡಾವಣೆಗೂ ನೆರವಾಗಿದೆ. ಇದರೊಟ್ಟಿಗೆ ಹೊಸ ರಾಕೆಟ್‌ಗಳ ಅಭಿವೃದ್ಧಿ ಮತ್ತು GSLV (Geosynchronous Satellite Launch Vehicle) ಅಭಿವೃದ್ಧಿಪಡಿಸುವಲ್ಲೂ ಮುಂದಾಗಿತ್ತು.
ಚಂದ್ರಯಾನದ ಕನಸು
ಭಾರತದ ಚಂದ್ರಯಾನದ ಕನಸು ಗರಿಗೆದರಿದ್ದು ಈ ವೈಜ್ಞಾನಿಕ ಅವಿಷ್ಕಾರ ಹಾಗೂ ದಿಟ್ಟ ಹೆಜ್ಜೆಗಳ ಹಿನ್ನೆಲೆಯಲ್ಲಿ. 1990ರ ದಶಕದಲ್ಲೇ ಇಸ್ರೋ ವಿಜ್ಞಾನಿಗಳು ಮಂಗಳಯಾನ ಮತ್ತು ಚಂದ್ರಯಾನಕ್ಕೆ ಅಗತ್ಯವಾದ ವೈಜ್ಞಾನಿಕ ಶೋಧನೆ ಮತ್ತು ಸಂಶೋಧನೆಗಳಲ್ಲಿ ತೊಡಗಿದ್ದರು. ಇದು ವಿಕ್ರಂ ಸಾರಾಭಾಯ್ ಅವರ ಚಿಂತನೆಗಳ ಮುಂದುವರಿಕೆಯಾಗಿದ್ದು, ಇಸ್ರೋ ಸಂಸ್ಥೆಯಲ್ಲಿ ಅಳವಡಿಸಿಕೊಂಡ ವಿಕ್ರಂ ಸಾರಾಭಾಯ್ ಹುಟ್ಟುಹಾಕಿದ ವೈಜ್ಞಾನಿಕ ಪರಂಪರೆಯ ವಾರಸುದಾರರಾಗಿ ತಾವು ಕಾರ್ಯನಿರ್ವಹಿಸಿದುದಾಗಿ ಕಸ್ತೂರಿ ರಂಗನ್ ಹೆಮ್ಮೆಯಿಂದ ಹೇಳುತ್ತಾರೆ. ತನ್ನ ಆರಂಭಿಕ ದಿನಗಳಲ್ಲೂ ಭಾರತವು ಇತರ ದೇಶಗಳ ಮೇಲೆ ಅವಲಂಬಿತವಾಗುವುದನ್ನು ಸಾರಾಭಾಯ್ ಬಯಸುತ್ತಿರಲಿಲ್ಲ. ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ಅಭಿವೃದ್ಧಿಯ ಉದ್ದೇಶಗಳಿಗಾಗಿ ರೂಪುಗೊಂಡಿರುವುದರಿಂದ ಬಾಹ್ಯಾಕಾಶ ಸಂಶೋಧನೆಯಿಂದ ತಡೆರಹಿತ ಸೇವೆಗಳು ಲಭ್ಯವಾಗುವಂತೆ ಎಚ್ಚರವಹಿಸಬೇಕು ಎಂದು ಸಾರಾಭಾಯ್ ವಾದಿಸುತ್ತಿದ್ದುದನ್ನು ಕಸ್ತೂರಿ ರಂಗನ್ ಉಲ್ಲೇಖಿಸುತ್ತಾರೆ.
ಈ ಆಲೋಚನೆಗಳ ಫಲವಾಗಿಯೇ ಇಸ್ರೋ ಒಂದು ಸ್ವಾಯತ್ತ ಸಂಸ್ಥೆ ಅಲ್ಲದಿದ್ದರೂ, ಎಲ್ಲ ಸರ್ಕಾರಗಳ ಪ್ರೋತ್ಸಾಹದೊಂದಿಗೆ ಚಂದ್ರಯಾನದವರೆಗೂ ತಲುಪಿರುವುದನ್ನು ಗಮನಿಸಬೇಕಿದೆ. ಚಂದ್ರಯಾನದ ಕನಸು ಮೂರು ದಶಕಗಳ ಅವಧಿಯಲ್ಲಿ ನನಸಾಗಿರುವುದು ಇಸ್ರೋ ಸಂಸ್ಥೆಯ ಹಾಗೂ ಅಲ್ಲಿನ ವಿಜ್ಞಾನಿಗಳ, ತಂತ್ರಜ್ಞರ, ಸಿಬ್ಬಂದಿ ವರ್ಗಗಳ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ಚಂದ್ರಯಾನದ ಶ್ರೇಯ ಸಲ್ಲಬೇಕಿರುವುದು ಈ ಅಡಿಪಾಯವನ್ನು ನಿರ್ಮಿಸಿದ ದಾರ್ಶನಿಕ ನಾಯಕರಿಗೆ ಮತ್ತು ಅಸಂಖ್ಯಾತ ವಿಜ್ಞಾನಿಗಳಿಗೆ ಅಲ್ಲವೇ ?
( ಇಸ್ರೋ ವೈಜ್ಞಾನಿಕ ಪಥದಲ್ಲಿ ಮಹಿಳೆಯರ ಪಾತ್ರ – ಮುಂದಿನ ಭಾಗದಲ್ಲಿ )
-೦-೦-೦-೦-