ಇಸ್ರೇಲ್ ದಾಳಿ ತೀವ್ರ: 100ಕ್ಕೂ ಹೆಚ್ಚು ಮಂದಿ ಮಾರಣಹೋಮ
ಗಾಜಾ (Gaza): ಗಾಜಾದ ರಫಾ ಮೇಲೆ ಇಸ್ರೇಲ್ (israel) ನಡೆಸಿದ ವೈಮಾನಿಕ ದಾಳಿಗೆ 100ಕ್ಕೂ ಹೆಚ್ಚು ಪ್ಯಾಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ.
ಇಸ್ರೇಲ್ ದಾಳಿ ಹಿನ್ನೆಲೆ ಗಾಜಾ ಪಟ್ಟಿಯಿಂದ ಲಕ್ಷಾಂತರ ಮಂದಿ ಈಜಿಪ್ಟ್ ಗಡಿಯಲ್ಲಿರುವ ರಫಾಗೆ ವಲಸೆ ಹೋಗಿದ್ದರು. ಈಜಿಪ್ಟ್ ಗಡಿಯಲ್ಲಿರುವ ರಫಾದಲ್ಲಿ ಜನಸಂಖ್ಯೆಯು 1.4 ಮಿಲಿಯನ್ ಇದೆ ಎಂದು ವರದಿ ತಿಳಿಸಿದೆ.
ಅಲ್ಲಿ ನಾಗರಿಕರು ಆಹಾರ, ನೀರು ಮತ್ತು ಔಷಧದ ಕೊರೆತೆಯನ್ನು ಎದುರಿಸುತ್ತಿದ್ದಾರೆ. ಇದೀಗ ಇಸ್ರೇಲ್ ರಫಾದಲ್ಲಿ ನಿರಾಶ್ರಿತರನ್ನೇ ಟಾರ್ಗೆಟ್ ಮಾಡಿ ದಾಳಿಯನ್ನು ನಡೆಸುತ್ತಿದ್ದು, ಪ್ಯಾಲೆಸ್ತೀನ್ ನಾಗರಿಕರನ್ನು ಹತ್ಯೆ ಮಾಡುತ್ತಿದೆ. ಇಸ್ರೇಲ್ ರಫಾವನ್ನು ಕೊನೆಯದಾಗಿ ಉಳಿದಿರುವ ಹಮಾಸ್ನ ಭದ್ರಕೋಟೆ ಎಂದು ಹೇಳಿದೆ.
ಇಸ್ರೇಲ್ ನಡೆಸುತ್ತಿರುವ ಈ ನರಹತ್ಯೆಯನ್ನು ಮಾನವತಾವಾದಿಗಳು ಮತ್ತು ಇಸ್ರೇಲ್ನ ಕೆಲವು ನಿಕಟ ಮಿತ್ರರು ಕೂಡ ತೀವ್ರವಾಗಿ ಟೀಕಿಸಿದ್ದರು. ರಾಫಾದ ಮೇಲೆ ಇಸ್ರೇಲ್ ಆಕ್ರಮಣವು ದುರಂತವಾಗಿದೆ ಮತ್ತು ಅದು ಮುಂದುವರಿಯಬಾರದು ಎಂದು ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ ಹೇಳಿಕೆಯಲ್ಲಿ ತಿಳಿಸಿತ್ತು.
ಗಾಜಾದಲ್ಲಿ ಸುರಕ್ಷಿತವಾದ ಸ್ಥಳವಿಲ್ಲ ಮತ್ತು ಗಾಜಾದ ಜನರಿಗೆ ಅಲ್ಲಿಂದ ನಿರ್ಗಮಿಸಲು ಯಾವುದೇ ಮಾರ್ಗವಿಲ್ಲ ಎಂದು ಹೇಳಿದ್ದಾರೆ. ನಿರಾಶ್ರಿತರ ಶಿಬಿರದ ಮೇಲಿನ ಯಾವುದೇ ಯುದ್ಧವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ನಾರ್ವೇಜಿಯನ್ ನಿರಾಶ್ರಿತರ ಮಂಡಳಿಯ ಪ್ರಧಾನ ಕಾರ್ಯದರ್ಶಿ ಜಾನ್ ಎಗೆಲ್ಯಾಂಡ್ ಕೂಡ ಹೇಳಿದ್ದರು.
ಎಪಿ ವರದಿಯ ಪ್ರಕಾರ, ಗಾಜಾ ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್-ಕಿದ್ರಾ ಅವರು ದಾಳಿಯಲ್ಲಿ ಕನಿಷ್ಠ 67 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಆದರೆ ರಾಫಾದಲ್ಲಿನ ಅಬು ಯೂಸೆಫ್ ಅಲ್-ನಜ್ಜರ್ ಆಸ್ಪತ್ರೆಯಲ್ಲಿ ಪತ್ರಕರ್ತರೊಬ್ಬರು ಕನಿಷ್ಠ 50 ದೇಹಗಳನ್ನು ಎಣಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ರಾಫಾದಲ್ಲಿ ರಾತ್ರಿ ಉಂಟಾಗಿರುವ ಬಾಂಬ್ ಸ್ಫೋಟದಿಂದಾಗಿ ಮನೆಗಳು ಧ್ವಂಸವಾಗಿರುವುದು ಮತ್ತು ರಕ್ತಸಿಕ್ತವಾದ ದೇಹಗಳು ಆಸ್ಪತ್ರೆಗಳಲ್ಲಿ ಬಿದ್ದುಕೊಂಡಿರುವುದು ಕಂಡು ಬಂದಿದೆ. ವರದಿಯ ಪ್ರಕಾರ, ಇಸ್ರೇಲ್ ವಿಶೇಷ ಪಡೆಗಳು ರಾಫಾದಲ್ಲಿ ಎರಡನೇ ಮಹಡಿಯ ಅಪಾರ್ಟ್ಮೆಂಟ್ಗೆ ಮುಂಜಾನೆ 1:49ಕ್ಕೆ ಗುಂಡಿನ ದಾಳಿ ನಡೆಸಿದೆ. ಇದಾದ ಒಂದು ನಿಮಿಷದ ನಂತರ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ವಾಯುದಾಳಿ ನಡೆಸಿದೆ.
ಗಾಜಾದ ಆರೋಗ್ಯ ಸಚಿವಾಲಯದ ಪ್ರಕಾರ ಅ.7ರಂದು ಯುದ್ಧ ಆರಂಭವಾದ ದಿನದಿಂದ ಗಾಜಾದಲ್ಲಿ 27,000ಕ್ಕೂ ಅಧಿಕ ಜನರ ಹತ್ಯೆ ನಡೆದಿದೆ. ಇದರಲ್ಲಿ 12,300ಕ್ಕೂ ಹೆಚ್ಚು ಮಕ್ಕಳು ಮತ್ತು ಹದಿಹರೆಯದವರು ಸೇರಿದ್ದಾರೆ. ಸುಮಾರು 8,400 ಮಹಿಳೆಯರ ಹತ್ಯೆ ನಡೆದಿದೆ. ಗಾಜಾದಲ್ಲಿ ಒಟ್ಟು ಸಾವಿನ ಸಂಖ್ಯೆಯಲ್ಲಿ 43% ರಷ್ಟು ಮಕ್ಕಳು ಮತ್ತು ಹದಿಹರೆಯದವರು ಸೇರಿದ್ದಾರೆ. ಇನ್ನು 60,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಮನೆ-ನಿವಾಸಗಳನ್ನು ಕಳೆದುಕೊಂಡು ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ.
#gaza #israel #israelwar