ಸಿದ್ಧಾರ್ಥ್: ಪೆಗಾಸಸ್ ವ್ಯವಹಾರದ ಒಟ್ಟು ಮೊತ್ತ 2 ಬಿಲಿಯನ್ ಡಾಲರ್ ಆಗಿದೆ ಎಂದು ನೀವು ಹೇಳುತ್ತೀರಿ. ಇದರಲ್ಲಿ ಇಸ್ರೇಲ್ ಮತ್ತು ಭಾರತದ ನಡುವೆ ಅಥವಾ ಎನ್ಎಸ್ಒ ಹಾಗೂ ಭಾರತದ ನಡುವೆ ನಡೆದಿರುವ ವ್ಯವಹಾರದ ಮೊತ್ತ ಎಷ್ಟು ಎಂದು ವಿವರಿಸಬಲ್ಲಿರಾ?
ರೋನನ್: ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪೆಗಾಸಸ್ ಕುರಿತು ನಾವು ಪ್ರಕಟಿಸಿದ ವರದಿ ಇಡೀ ವಿಶ್ವದಲ್ಲಿ ಸಂಚಲನ ಮೂಡಿಸಿದೆ. ಅನೇಕ ದೇಶಗಳಿಂದ ವಿಷಯ ತಿಳಿದುಕೊಳ್ಳಲು ಅನೇಕರು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಇದು ಪೆಗಾಸಸ್ನ ವ್ಯಾಪ್ತಿ ಮತ್ತು ಹರವು ಎಷ್ಟಿದೆ ಎಂಬುದನ್ನು ಸೂಚಿಸುತ್ತದೆ. ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಹಿತಾಸಕ್ತಿ ಇರುವುದೂ ಸ್ಪಷ್ಟ. ಮಿಲಿಟರಿ ಬಂಡವಾಳ ಹೂಡಿಕೆಯಲ್ಲಿ ಭಾರತಕ್ಕೆ ಒಂದು ಹೊಸ ದಿಶೆಯನ್ನು ನೀಡಿದ ಇಸ್ರೇಲ್ ಮತ್ತು ಭಾರತದ ನಡುವೆಯೂ ಇದೇ ಸೂಕ್ಷ್ಮ ಸಂಬಂಧಗಳಿರಲು ಸಾಧ್ಯ. ಈ ವ್ಯವಹಾರದ ಹಲವಾರು ಅಂಶಗಳು ಅತಿ ಸೂಕ್ಷ್ಮತೆಯಿಂದ ಕೂಡಿದ್ದು ಸಂಪೂರ್ಣ ವಿವರಗಳನ್ನು ಹಂಚಿಕೊಳ್ಳಲು ಯೋಚಿಸಬೇಕಾಗುತ್ತದೆ. ನಾವು ವಿವಿಧ ದೇಶಗಳ ಸೈಬರ್ ತಜ್ಞರು, ಮಾನವ ಹಕ್ಕು ಕಾರ್ಯಕರ್ತರು, ರಾಜಕಾರಣಿಗಳು, ಕಾನೂನು ಪಾಲನೆಯ ಸಂಸ್ಥೆಗಳು ಮತ್ತು ನೇತಾರರೊಡನೆ ಸಂಪರ್ಕ ಸಾಧಿಸಿದ್ದೇವೆ. ನಿಮ್ಮ ಪ್ರಶ್ನೆಗೆ ಉತ್ತರಿಸುವುದಾದರೆ, ಭಾರತದ ವ್ಯವಹಾರದ ಮೊತ್ತ ಕೆಲವು ದಶಲಕ್ಷ ಡಾಲರ್ಗಳಷ್ಟಾಗಬಹುದು. ಇದು ಅತಿ ದುಬಾರಿ ಕೂಡ ಹೌದು.
ಭಾರತಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಈ ವಿಶಿಷ್ಟವಾದ ತಂತ್ರಾಂಶವನ್ನು ಭಾರತ ಬೇರೆ ಯಾವುದೇ ಮೂಲದಿಂದ ಖರೀದಿಸಲಾಗುವುದಿಲ್ಲ. ಯಾರ ಬಳಿಯೂ ಈ ತಂತ್ರಜ್ಞಾನ ಲಭ್ಯವಿಲ್ಲದಿರುವುದರಿಂದ ಭಾರತಕ್ಕೆ ಮಾರಾಟ ಮಾಡುವುದೂ ಸಾಧ್ಯವಾಗುವುದಿಲ್ಲ. ಹಾಗಾಗಿ ಭಾರತದ ನಾಯಕತ್ವ ಇಸ್ರೇಲ್ನ ನಾಯಕತ್ವದಿಂದ ಈ ನಿರ್ದಿಷ್ಟ ಪರವಾನಗಿ ಪಡೆಯುವುದರಲ್ಲಿ ವಿಶೇಷವಾದ ಹಿತಾಸಕ್ತಿ ಅಡಗಿದೆ ಎಂದೇ ಹೇಳಬಹುದು.
ಸಿದ್ದಾರ್ಥ್: ಈ ಮಾತುಕತೆಗಳು ಯಾವ ಹಂತಕ್ಕೆ ತಲುಪಿರಬಹುದು? ಏಕೆಂದರೆ 2017 ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ಗೆ ಪ್ರಥಮ ಚಾರಿತ್ರಿಕ ಭೇಟಿ ನೀಡುವುದಕ್ಕೂ ಮುನ್ನ ಮಾರ್ಚ್ ತಿಂಗಳಲ್ಲಿ ಭಾರತದ ರಾಷ್ಟೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಇಸ್ರೇಲ್ಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳೊಡನೆ ಸಮಾಲೋಚನೆ ನಡೆಸುತ್ತಾರೆ. ಪ್ರಧಾನಿ ಮೋದಿ ಜುಲೈ ತಿಂಗಳಲ್ಲಿ ಇಸ್ರೇಲ್ಗೆ ಭೇಟಿ ನೀಡುತ್ತಾರೆ. ಏತನ್ಮಧ್ಯೆ ಏಪ್ರಿಲ್ 2017ರಲ್ಲಿ ಭಾರತ ಮತ್ತು ಇಸ್ರೇಲ್ ನಡುವೆ 2 ಬಿಲಿಯನ್ ಡಾಲರ್ ಮೌಲ್ಯದ ಕ್ಷಿಪಣಿ ಖರೀದಿ ವ್ಯವಹಾರ ಕುದುರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪೆಗಾಸಸ್ ಕುರಿತ ಮಾತುಕತೆಗಳು ಯಾವ ಹಂತದಲ್ಲಿ ನಡೆದಿರಬಹುದು?
ರೋನನ್ : ಇಲ್ಲಿಯೂ ಸಹ ನಾನು ಕೊಂಚ ಸೂಕ್ಷ್ಮಮವಾಗಿಯೇ ಪ್ರತಿಕ್ರಯಿಸುವೆ. ಏಕೆಂದರೆ ಕೆಲವು ಸೂಕ್ಷ್ಮಮಗಳು ಬಯಲಾದರೆ ನಮ್ಮ ಸುದ್ದಿಮೂಲಗಳಿಗೆ ಧಕ್ಕೆ ಉಂಟಾಗುತ್ತದೆ. ಒಂದು ವಾಸ್ತವಾಂಶ ಏನೆಂದರೆ ಯಾವುದೇ ಒಂದು ಗುಪ್ತಚರ ಇಲಾಖೆ ಪೆಗಾಸಸ್ ಖರೀದಿಸಿ ಅದನ್ನು ಅಳವಡಿಸಿ ಆನ್ಲೈನ್ ಕಾರ್ಯನಿರ್ವಹಿಸುವಂತೆ ಮಾಡಬೇಕೆಂದರೆ ಅದನ್ನು ಇಸ್ರೇಲಿನ ಉನ್ನತ ಅಧಿಕಾರಿಗಳೇ ನಿರ್ವಹಿಸಬೇಕು. ಹಾಗಾಗಿ ರಕ್ಷಣಾ ಸಚಿವಾಲಯದ ಉನ್ನತ ಅಧಿಕಾರಿಗಳೇ ಪರವಾನಗಿಗೆ ಸಹಿ ಹಾಕಬೇಕು ಮತ್ತು ವಿದೇಶಾಂಗ ಸಚಿವಾಲಯ ವಿವೇಚನೆಯ ಅಧಿಕಾರವನ್ನು ಬಳಸದೆಯೇ ಇಸ್ರೇಲ್ ಪ್ರಧಾನಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನೊಳಗೊಂಡಂತೆಯೇ ಸಹಿ ಹಾಕಿರಬೇಕು. ಈ ತಂತ್ರಜ್ಞಾನವನ್ನು ಖಾಸಗಿ ಕಂಪನಿಯು ರವಾನೆ ಮಾಡಿದ ನಂತರ ಎನ್ಎಸ್ಒ ತಂತ್ರಜ್ಞರು ಈ ತಂತ್ರಜ್ಞಾನವನ್ನು ಅಳವಡಿಸುವ ಸ್ಥಳದಲ್ಲಿ ಹಾಜರಿದ್ದು, ಪರೀಕ್ಷೆಗಳನ್ನು ನಡೆಸಿ, ಆಗಾಗ್ಗೆ ಅದರ ನಿರ್ವಹಣೆಯನ್ನೂ ಮಾಡುತ್ತಿರುವುದು ಅತ್ಯವಶ್ಯ. ಈ ರಹಸ್ಯ ಬೇಹುಗಾರಿಕೆ ತಂತ್ರಜ್ಞಾನವನ್ನು ನಿರ್ವಹಿಸುವ ಸಂದರ್ಭದಲ್ಲೂ ಭಾರತೀಯ ಗುಪ್ತಚರ ಇಲಾಖೆ ಮತ್ತು ಎನ್ಎಸ್ಒ ಕಂಪನಿಯ ತಾಂತ್ರಿಕ ಅಧಿಕಾರಿಗಳ ನಡುವೆ ಸಹಯೋಗ ಇರಲೇಬೇಕಾಗುತ್ತದೆ. ಅಂದರೆ ಇಸ್ರೇಲ್ನ ರಕ್ಷಣಾ ವ್ಯವಸ್ಥೆಯ ಎಲ್ಲ ವಿಭಾಗಗಳು ಮತ್ತು ಭಾರತದ ಗುಪ್ತಚರ ಇಲಾಖೆಯ ಉನ್ನತ ಅಧಿಕಾರಿಗಳು ಈ ಪ್ರಕ್ರಿಯೆಯಲ್ಲಿ ಒಟ್ಟಾಗಿಯೇ ಇರಬೇಕಾಗುತ್ತದೆ.

ಸಿದ್ಧಾರ್ಥ್: ಫೆಬ್ರವರಿ ಮಾರ್ಚ್ 2017 ರಲ್ಲಿ ಅಜಿತ್ ದೋವಲ್ ಇಸ್ರೇಲ್ಗೆ ಭೇಟಿ ನೀಡಿರುವುದನ್ನು ಗಮನಿಸಿದಾಗ ಅದರ ಉದ್ದೇಶ ಇದೇ ಆಗಿರಬಹುದು. ನಿಮ್ಮ ತನಿಖೆಯ ಸಂದರ್ಭದಲ್ಲಿ ಭಾರತದಲ್ಲಿ ಈ ತಂತ್ರಾಂಶವನ್ನು ಖರೀದಿಸಿದ ಏಜೆನ್ಸಿಯ ಬಗ್ಗೆ ಮಾಹಿತಿ ಲಭ್ಯವಾಗಿದೆಯೇ? ಏಕೆಂದರೆ ನಾವು ಲೀಕ್ ಆಗಿರುವ ಮಾಹಿತಿಯನ್ನು ಪರಿಶೀಲಿಸಿದಾಗ ತಿಳಿದುಬಂದ ಸಂಗತಿ ಎಂದರೆ ಪೆಗಾಸಸ್ನ ಗುರಿ ವಿದೇಶಿ ರಾಜಭಾರಿಗಳು, ಪಾಕಿಸ್ತಾನದಲ್ಲಿರುವವರು ಮತ್ತು ಸ್ಥಳೀಯ ರಾಜಕಾರಣಿಗಳು, ಪತ್ರಕರ್ತರು, ಮಾನವ ಹಕ್ಕು ಕಾರ್ಯಕರ್ತರು ಮುಂತಾದವರಿದ್ದಾರೆ. ಸಿಟಿಜನ್ ಲ್ಯಾಬ್ ವರದಿಯ ಅನುಸಾರ ಭಾರತದಲ್ಲಿ ಎನ್ಎಸ್ಒ ಎರಡು ಸರ್ವರ್ಗಳನ್ನು ಬಳಸುತ್ತಿದ್ದು ಒಂದನ್ನು ಸ್ಥಳೀಯರ ವಿರುದ್ಧ ಮತ್ತೊಂದನ್ನು ವಿದೇಶೀಯರ ವಿರುದ್ಧ ಬಳಸಲಾಗುತ್ತಿದೆ ಎಂದು ಹೇಳಲಾಗಿದೆ. ಭಾರತದಲ್ಲಿ ನಿಮಗೆ ಯಾವುದಾದರೂ ನಿರ್ದಿಷ್ಟ ಏಜೆನ್ಸಿಗಳು ಪೆಗಾಸಸ್ ಸಂಪರ್ಕ ಹೊಂದಿರುವುದು ಕಂಡುಬಂದಿದೆಯೇ?
ರೋನನ್: ಹೌದು, ಆದರೂ ಆಗಲೇ ಹೇಳಿದಂತೆ ನಾನು ಸಂಪೂರ್ಣ ವಿವರಗಳನ್ನು ನೀಡಲಾಗುವುದಿಲ್ಲ. ಏಕೆಂದರೆ ನಮ್ಮ ಮೂಲಗಳಲ್ಲಿ ಉಲ್ಲೇಖಿಸಲಾಗಿರುವ ವಿವರಗಳನ್ನು ಬಹಳ ಸೂಕ್ಷ್ಮಮವಾಗಿ ಪರಿಶೀಲಿಸಲಾಗುತ್ತಿದೆ. ಸಾಮಾನ್ಯವಾಗಿ ಹೇಳುವುದಾದರೆ, ಯುಎಇ, ಮೆಕ್ಸಿಕೋ ಮುಂತಾದ ದೇಶಗಳು ಈ ತಂತ್ರಜ್ಞಾನದ ಯಂತ್ರದ ಬಗ್ಗೆ ಅಸಮಧಾನ ಹೊಂದಿದ್ದವು. ಹಾಗಾಗಿ ನೂತನ ಪ್ರತ್ಯೇಕವಾದ ಯಂತ್ರಗಳನ್ನು ಖರೀದಿಸಲಾಗಿತ್ತು. ಹಾಗಾಗಿ ನಿಮ್ಮ ವರದಿಯಲ್ಲಿ ಹೇಳಿರುವಂತೆ ವಿವಿಧ ಗುರಿಗಳನ್ನು ತಲುಪಲು ವಿವಿಧ ಯಂತ್ರಗಳನ್ನು ಖರೀದಿಸಲಾಗಿತ್ತು ಎನ್ನುವುದನ್ನು ಸಂಪೂರ್ಣವಾಗಿ ಒಪ್ಪಲಾಗುವುದಿಲ್ಲ. ಆದರೆ ಒಂದು ಮಾತು ಸ್ಪಷ್ಟ. ಭಾರತಕ್ಕೆ ಮಾರಾಟ ಮಾಡಲಾದ ಯಂತ್ರದ ಮೌಲ್ಯವನ್ನು ಪರಿಗಣಿಸಿದಾಗ ಅದಕ್ಕೆ ನಿರ್ದಿಷ್ಟ ಸಾಮರ್ಥ್ಯ ಇರುವುದು, ಬ್ಯಾಂಡ್ವಿಡ್ತ್ ಇರುವುದು ಸ್ಪಷ್ಟ. ಈ ದೃಷ್ಟಿಯಿಂದಲೇ ಬೆಲೆ ನಿಗದಿಪಡಿಸಲಾಗುತ್ತದೆ. ಇದನ್ನೇ ಪರವಾನಗಿ ಎನ್ನಲಾಗುತ್ತದೆ. ಇದು ರಕ್ಷಣಾ ಸಚಿವಾಲಯ ನೀಡುವ ಪರವಾನಗಿ ಅಲ್ಲ. ವಿದೇಶಾಂಗ ಸಚಿವಾಲಯವು ಪೆಗಾಸಸ್ ಯಂತ್ರವನ್ನು ಮಾರಾಟ ಮಾಡಲು ಪರವಾನಗಿ ನೀಡುತ್ತದೆ ಅಷ್ಟೆ.
ಇಲ್ಲಿ ಪರವಾನಗಿ ಎಂದರೆ ಒಂದು ನಿರ್ದಿಷ್ಟ ಸಂದರ್ಭದಲ್ಲಿ ಒಂದು ಯಂತ್ರವನ್ನು ನಿರ್ವಹಣೆ ಮಾಡಲು ಅಗತ್ಯವಾದ ಸಾಮರ್ಥ್ಯ. ಭಾರತಕ್ಕೆ ಈ ರೀತಿಯ ಎಷ್ಟು ಯಂತ್ರಗಳ ಮಾರಾಟವಾಗಿದೆ ಎಂದು ಹೇಳುವುದು ಕಷ್ಟ. 10 ರಿಂದ 50 ಯಂತ್ರಗಳಿರಬಹುದು, ಪ್ರತಿಯೊಂದು ಯಂತ್ರವೂ 10 ರಿಂದ 50 ದೂರವಾಣಿಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದನ್ನು ಒಮ್ಮೆಲೆ ಮಾಡುವುದೂ ಸಾಧ್ಯ. ಇದು ಮುಂಗಡ ಪಾವತಿ ಮಾಡಿದಂತೆ ಅಲ್ಲ, ಮುಂಚಿತವಾಗಿಯೇ ಪರವಾನಗಿ ನೀಡಿದಂತೆ. ಒಂದು ವರ್ಷದ ಮುಂಚೆಯೇ ಒಪ್ಪಂದದಂತೆ ಶುಲ್ಕ ಪಾವತಿ ಮಾಡಲಾಗಿರುತ್ತದೆ. ಒಮ್ಮೆ ನಿಗದಿತ ಮೊತ್ತ ಮೀರಿದರೆ ನಿರ್ವಹಣೆ ಮಾಡುವವರು ದೂರವಾಣಿ ನಿರ್ವಹಣೆಯನ್ನು ಸ್ಥಗಿತಗೊಳಿಸುತ್ತಾರೆ.
ಸಿದ್ಧಾರ್ಥ್: ನೀವು ಒಂದು ವರ್ಷದ ಒಪ್ಪಂದ ಎಂದು ಹೇಳಿದ್ದೀರಿ. ಆದರೆ ನಮಗೆ ತಿಳಿದಂತೆ 2017ರ ಒಪ್ಪಂದವು ಹಲವು ವರ್ಷಗಳಿಗೆ ವ್ಯಾಪಿಸುತ್ತದೆ ಅಥವಾ ಪ್ರತಿವರ್ಷ ನವೀಕರಿಸಬೇಕಾಗುವುದೇ?
ರೋನನ್: ಈ ವಿವರಗಳನ್ನು ನಾನು ಇನ್ನೂ ಪರಿಶೀಲಿಸಬೇಕಿದೆ. ಇದು ಬಹುವರ್ಷಗಳ ಒಪ್ಪಂದವೇ ಇರಬಹುದು. ನವೀಕರಣ ಅವಶ್ಯಕ ಇರಬಹುದು. ಒಪ್ಪಂದದ ಬಹುಮುಖ್ಯ ಅಂಶ ಎಂದರೆ ಎನ್ಎಸ್ಒ ಮುಖ್ಯ ಕಚೇರಿಯು ತಾಂತ್ರಿಕ ಅಂಶಗಳನ್ನೂ ಒಳಗೊಂಡಂತೆ ಎಲ್ಲವನ್ನೂ ಕೇಂದ್ರದಿಂದಲೇ ನಿಯಂತ್ರಿಸುತ್ತದೆ. ಪೆಗಾಸಸ್ ಮತ್ತು ಇತರ ಎಲ್ಲ ಬೇಹುಗಾರಿಕೆ ಯಂತ್ರಗಳೂ ಅದರಲ್ಲಿ ಅಳವಡಿಸಲಾಗಿರುವ ಒಂದು ಕೋಡ್ ಅಲ್ಲ. ಮೆಸೇಜ್ ಕಂಪನಿಗಳು ಮತ್ತು ಮೊಬೈಲ್ ಕಂಪನಿಗಳು ಇದರ ದೌರ್ಬಲ್ಯಗಳನ್ನು ಬಳಸಿಕೊಂಡು ಸ್ಥಗಿತಗೊಳಿಸುವ ಸಾಧ್ಯತೆಗಳೂ ಇರುವುದರಿಂದ, ಎನ್ಎಸ್ಒ ಪ್ರತಿಬಾರಿಯೂ ಹೊಸ ತಂತ್ರಾಂಶಗಳನ್ನು ಬಳಸುತ್ತಿರುತ್ತದೆ. ಇದು ರಹಸ್ಯವಾಗಿಯೂ ಇರುತ್ತದೆ. ಹಾಗಾಗಿಯೇ ಎನ್ಎಸ್ಒ ಅತ್ಯಂತ ಯಶಸ್ವಿ ಬೇಹುಗಾರಿಕೆ ತಂತ್ರಾಂಶವಾಗಿದೆ.
ಸಿದ್ಧಾರ್ಥ್: ಮೆಕ್ಸಿಕೋ ಮತ್ತು ಎನ್ಎಸ್ಒ ಮಾತುಕತೆಗಳಲ್ಲಿರುವಂತೆಯೇ, ಎನ್ಎಸ್ಒ ಇಸ್ರೇಲ್ ಸರ್ಕಾರದೊಡನೆ ಮಾತುಕತೆ ನಡೆಸಿ ಅನುಮತಿ ಪಡೆದುಕೊಂಡಿತ್ತು. ಕೆಲವು ಒಪ್ಪಂದಗಳು ಹೀಗೂ ಆಗುವುದುಂಟೇ? ಭಾರತ ಇಸ್ರೇಲಿನ ವಿದೇಶಾಂಗ ಸಚಿವಾಲಯದೊಡನೆಯೇ ಒಪ್ಪಂದ ಮಾಡಿಕೊಂಡಿರುವ ಸಾಧ್ಯತೆಗಳಿವೆಯೇ?
ರೋನನ್: ಇಸ್ರೇಲ್ನ ವಿದೇಶಾಂಗ ಸಚಿವಾಲಯ, ಸೈಬರ್ ಅಸ್ತ್ರಗಳ ಮಾರಾಟದ ಬಗ್ಗೆ ಯಾವುದೇ ನೀತಿ ರೂಪಿಸಿಲ್ಲ. ಏಕೆಂದರೆ ಇದು ಹೊಸ ಮಾರುಕಟ್ಟೆ ಮತ್ತು ಎನ್ಎಸ್ಒ ಪ್ರಥಮ ಕಂಪನಿ. ಎನ್ಎಸ್ಒ ಕಂಪನಿ 73ರ ಯುದ್ಧದ ಸಂದರ್ಭದ ಸೇನಾ ಜನರಲ್ ಅವಿಗ್ಡರ್ ಬೆನ್ ಗಾಲ್ ಅವರನ್ನು ಕಂಪನಿಯ ವಕ್ತರಾರನನ್ನಾಗಿ ನೇಮಿಸಿಕೊಂಡಿತ್ತು. ಇವರು ವಿದೇಶಾಂಗ ಸಚಿವಾಲಯದೊಡನೆ ಮಾತುಕತೆ ನಡೆಸಿ, ರಕ್ಷಣಾ ಸರಕುಗಳ ರಫ್ತು ಮಾಡಲು ಅನುಮತಿ ಕೋರಿದ್ದರು. ಈ ಹಿನ್ನೆಲೆಯಲ್ಲೇ ಮೆಕ್ಸಿಕೋಗೆ ಹಿಂದಿನ ದಿನಾಂಕದಿಂದಲೇ ಪರವಾನಗಿ ನೀಡಲಾಗಿತ್ತು. ಎನ್ಎಸ್ಒ ಸಂಸ್ಥೆಗೆ ತನ್ನ ಉತ್ಪನ್ನವನ್ನು ವಿದೇಶಗಳಿಗೆ ಮಾರಾಟ ಮಾಡಲು ಅವಕಾಶ ನೀಡಲಾಯಿತು. ಪರವಾನಗಿ ನೀಡುವಾಗಲೂ ಖರೀದಿಸುವ ದೇಶಕ್ಕೆ ನೀಡುವ ಬದಲು, ಖರೀದಿಸುವ ಏಜೆನ್ಸಿಗೆ ನೀಡಲಾಯಿತು. ಅಂದರೆ ಎನ್ಎಸ್ಒ ಕಂಪನಿಯು ಪೆಗಾಸಸ್ ತಂತ್ರಾಂಶವನ್ನು ಭಾರತದ ಗುಪ್ತಚರ ಇಲಾಖೆಗೆ ಮಾರಾಟ ಮಾಡಬೇಕಾದರೆ ಅದಕ್ಕೆ ವಿದೇಶಾಂಗ ಸಚಿವಾಲಯದಿಂದ ಅನುಮತಿ ಪಡೆಯಬೇಕು ಮತ್ತು ಈ ತಂತ್ರಾಂಶದ ಬಳಕೆಯ ವಿವರಗಳನ್ನೂ ಸಹ ಒದಗಿಸಬೇಕಾಗುತ್ತದೆ. ಮಾರಾಟ ಮಾಡುವ ಪರವಾನಗಿಯನ್ನು ಅಂತಿಮ ಬಳಕೆದಾರ ಸಹಿಯೊಂದಿಗೇ ನೀಡಲಾಗುತ್ತದೆ.

ಈ ಅಂತಿಮ ಬಳಕೆದಾರ ಒಪ್ಪಂದವನ್ನು ವಿದೇಶಾಂಗ ಸಚಿವಾಲಯದೊಡನೆ ಮಾಡಿಕೊಳ್ಳಲಾಗುತ್ತದೆ. ಎನ್ಎಸ್ಒ ಕಂಪನಿಯೊಡನೆ ಅಲ್ಲ. ಆದರೆ ಇದನ್ನು ಎನ್ಎಸ್ಒ ಅಧಿಕಾರಿಯೇ ಕೊಂಡೊಯ್ದು, ಬಳಕೆದಾರರಿಗೆ ನೀಡಿ, ಸಂಬಂಧಪಟ್ಟ ಏಜೆನ್ಸಿಯ ಮುಖ್ಯಸ್ಥರಿಗೆ ತಲುಪಿಸಿ ನಂತರ ಎನ್ಎಸ್ಒಗೆ ತಲುಪಿಸುತ್ತಾರೆ. ವಿದೇಶಾಂಗ ಸಚಿವಾಲಯ ಮತ್ತು ಎನ್ಎಸ್ಒ ನಡುವಿನ ಒಪ್ಪಂದದ ಅನುಸಾರ ಪೆಗಾಸಸ್ ಇಸ್ರೇಲಿ ಸಂಖ್ಯೆಗಳನ್ನು, ಅಮೆರಿಕದ ಸಂಖ್ಯೆಗಳನ್ನು ಗುರಿ ಮಾಡಲಾಗುವುದಿಲ್ಲ. ಈ ರೀತಿಯ ಹಲವು ನಿರ್ಬಂಧಗಳಿರುತ್ತವೆ.
ಸಿದ್ದಾರ್ಥ್: ನಿಮ್ಮ ವರದಿಯಲ್ಲಿ ಮತ್ತು ಎನ್ಎಸ್ಒ ಅಧಿಕಾರಿಗಳು ನೀಡಿರುವ ಹೇಳಿಕೆಗಳಿಂದಲೂ ತಿಳಿದುಬರುವುದೇನೆಂದರೆ; ತಮ್ಮ ಬಳಕೆದಾರರು ಪೆಗಾಸಸ್ ತಂತ್ರಾಂಶವನ್ನು ಹೇಗೆ ಬಳಸುತ್ತಾರೆ ಎಂಬುದರ ಬಗ್ಗೆ ತಮಗೆ ಮಾಹಿತಿ ಇರುವುದಿಲ್ಲ ಎಂದು ಎನ್ಎಸ್ಒ ಹೇಳಿದ್ದರೂ, ಈ ಬೇಹುಗಾರಿಕೆ ತಂತ್ರಾಂಶವನ್ನು ಪರವಾನಗಿಯ ನಿಯಮಗಳಿಗನುಸಾರವಾಗಿ ಬಳಸಲಾಗಿದೆಯೋ ಇಲ್ಲವೋ ಎಂದು ಪರಿಶೀಲಿಸುವ ಅಧಿಕಾರವನ್ನು ಎನ್ಎಸ್ಒ ಹೊಂದಿರುತ್ತದೆ.. ಈ ದಾಖಲೆಗಳ ಪರಿಶೀಲನೆ ಯಾವ ಹಂತದವರೆಗೆ ಸಾಧ್ಯವಾಗಬಹುದು? ಎನ್ಎಸ್ಒ ತನ್ನ ಬಳಕೆದಾರರಿಂದ ಯಾವ ರೀತಿಯ ಮಾಹಿತಿಯನ್ನು ತನ್ನ ಬಳಿಯೇ ಉಳಿಸಿಕೊಳ್ಳುತ್ತದೆ?
ರೋನನ್: ಎನ್ಎಸ್ಒ ಯಾವ ರೀತಿಯ ಮಾಹಿತಿಯನ್ನು ಸಂಗ್ರಹಿಸುತ್ತದೆ ಎನ್ನುವುದು ಇಸ್ರೇಲಿನ ಗುಪ್ತಚರ ಇಲಾಖೆಗೆ ತಿಳಿದಿರುತ್ತದೆ. ಆದರೆ ಎನ್ಎಸ್ಒ ತನ್ನ ಬಳಕೆದಾರರ ಎಲ್ಲ ಚಟುವಟಿಕೆಗಳ ಮೇಲೆ ನಿಗಾವಹಿಸಿ ದಾಖಲೆ ಮಾಡಲು ಮುಂದಾಗುವುದಿಲ್ಲ. ಆದರೂ ಪ್ರತಿಯೊಂದು ಪೆಗಾಸಸ್ ತಂತ್ರಾಂಶವೂ ಗುರಿ ಮಾಡಲಾಗಿರುವ ಎಲ್ಲ ದೂರವಾಣಿ ಸಂಖ್ಯೆಗಳ ಮಾಹಿತಿಯನ್ನೂ ಸಂರಕ್ಷಿಸಿಟ್ಟಿರುತ್ತದೆ. ಇದನ್ನು ಪೆಗಾಸಸ್ ಯಂತ್ರದಲ್ಲೇ ಸಂಗ್ರಹಿಸಿಟ್ಟಿರಲಾಗುತ್ತದೆ. ಎನ್ಎಸ್ಒಗೆ ಯಾವುದಾದರೂ ದೂರು ಸಲ್ಲಿಕೆಯಾದರೆ ಅದನ್ನು ಪರಿಶೀಲಿಸಲು ಮುಂದಾಗುತ್ತದೆ. ಒಂದು ರೀತಿ ಬ್ಯಾಂಕ್ ಲಾಕರ್ ಇದ್ದಂತೆ. ಒಂದು ಕೀಲಿ ಬಳಕೆದಾರರ ಬಳಿ ಒಂದು ಸಂಸ್ಥೆಯ ಬಳಿ ಇರುತ್ತದೆ. ಒಬ್ಬರಿಂದ ತೆರೆಯಲಾಗುವುದಿಲ್ಲ ಒಂದು ವೇಳೆ ಬಳಕೆದಾರರು ಮಾಹಿತಿಯನ್ನು ನಾಶಪಡಿಸಿದಲ್ಲಿ ಅದನ್ನು ಮರಳಿಪಡೆಯುದು ಸಾಧ್ಯವಾಗುವುದೇ ಇಲ್ಲ.
ಸಿದ್ಧಾರ್ಥ್: ನಿಮ್ಮಲ್ಲಿ ಅನೇಕ ಪರಿಹಾರವಾಗದ ಪ್ರಶ್ನೆಗಳಿವೆ. ಮುಂದೆ ಪೆಗಾಸಸ್ ಕುರಿತ ವರದಿಗಾರಿಕೆ ಯಾವ ದಿಕ್ಕಿನಲ್ಲಿ ಸಾಗುತ್ತದೆ?
ರೋನನ್: ನಮ್ಮಲ್ಲಿ ಉದ್ಭವಿಸಿದ ಬಹುಪಾಲು ಪ್ರಶ್ನೆಗಳಿಗೆ ಉತ್ತರ ದೊರೆತಿದೆ. ಈಗ ಸುದ್ದಿಮೂಲಗಳ ಸೂಕ್ಷ್ಮಮತೆಗಳನ್ನು ಗಮನದಲ್ಲಿಟ್ಟುಕೊಂಡು ಸಂಗ್ರಹಿಸಿ, ಅಂತಿಮ ವರದಿ ಸಿದ್ಧಪಡಿಸುವುದು ಮುಖ್ಯ. ಇಲ್ಲಿ ಎನ್ಎಸ್ಒ ಒಂದೇ ಮುಖ್ಯವಲ್ಲ. ನಾಳೆ ಅದು ಮುಚ್ಚಿಹೋಗಬಹುದು. ಆದರೆ ಪೆಗಾಸಸ್ ಬಳಸುವರು ಅಥವಾ ಅಂತಹುದೇ ಅಸ್ತ್ರವನ್ನು ಬಳಸುವವರು ಸಾಕಷ್ಟು ಬಳಕೆದಾರರು ಇರಬಹುದು. ಅವರಲ್ಲಿ ಅನೇಕರಿಗೆ ದುರುದ್ದೇಶಗಳೇ ಹೆಚ್ಚಾಗಿರಬಹುದು. ಪಶ್ಚಿಮ ಯೂರೋಪ್ನಲ್ಲಿರುವಂತೆ ಕೆಲವು ಪೊಲೀಸ್, ಕಾನೂನು ಪಾಲನೆಯ ಸಂಸ್ಥೆಗಳೂ ಇರಲು ಸಾಧ್ಯ. ಈ ಏಜೆನ್ಸಿಗಳು, ಅಮೆರಿಕದ ಮೊಬೈಲ್ ಮತ್ತು ಮೆಸೇಜಿಂಗ್ ಕಂಪನಿಗಳ ವಿರುದ್ಧ ಯಾವುದೇ ರೀತಿಯ ಪಾರದರ್ಶಕತೆಯನ್ನು ಹೊಂದಿಲ್ಲ ಎಂದು ಹುಯಿಲೆಬ್ಬಿಸಬಹುದು. ಎನ್ಎಸ್ಒ ಬಹುಶಃ ಉಳಿಯುವುದಿಲ್ಲ. ಆದರೆ ಈ ಸಮಸ್ಯೆ ಇದ್ದೇ ಇರುತ್ತದೆ.
ಸಿದ್ಧಾರ್ಥ್: ಇಂತಹ ತಂತ್ರಜ್ಞಾನಗಳನ್ನು ಬಳಸುವ ಸರ್ಕಾರಗಳು ಪಾರದರ್ಶಕವಾಗಿ ಇಲ್ಲದಿರುವುದೇ ಬಹುಮುಖ್ಯ ಸಮಸ್ಯೆಯಾಗಿದೆ. ಇವು ಪಾರದರ್ಶಕವಾಗಿದ್ದು ತಮ್ಮ ಕರ್ತವ್ಯವನ್ನು ನಿಭಾಯಿಸಿದರೆ, ಇಂತಹ ಹಗರಣಗಳು ಸಂಭವಿಸುವುದು ಕಡಿಮೆಯಾಗಬಹುದು. ಭಾರತದಲ್ಲಿ ರಾಜಕೀಯ ಮಟ್ಟದಲ್ಲಿ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಸಂಘರ್ಷಕ್ಕಿಳಿದಿವೆ. ಸಂಸತ್ತಿನಲ್ಲಿ ಚರ್ಚೆ ಆಗ್ರಹಿಸುತ್ತಿವೆ. ನ್ಯಾಯಾಂಗದ ಮಟ್ಟದಲ್ಲಿ ಸುಪ್ರೀಂಕೋರ್ಟ್ ತಾಂತ್ರಿಕ ಸಮಿತಿಯೊಂದನ್ನು ರಚಿಸಿದ್ದು, ಸರ್ಕಾರ ಪೆಗಾಸಸ್ ಖರೀದಿಸಿದೆಯೇ, ಇದನ್ನು ಬಳಸಿದೆಯೇ, ಯಾವ ಕಾನೂನಿನ ಅಡಿಯಲ್ಲಿ ಖರೀದಿಸಿ ಬಳಸಲಾಗುತ್ತಿದೆ, ಸರ್ಕಾರ ಯಾರನ್ನು ಗುರಿಯಾಗಿಸಿದೆ ಮುಂತಾದ ಪ್ರಶ್ನೆಗಳಿಗೆ ಉತ್ತರ ಶೋಧಿಸುತ್ತಿದೆ. ಈ ಸಮಿತಿಯಿಂದ ಸತ್ಯ ಹೊರಬರುತ್ತದೆ ಎಂಬ ವಿಶ್ವಾಸ ಇದೆ. ಪೆಗಾಸಸ್ ಬಳಕೆಯು ನಾಗರಿಕ ಸಮಾಜ, ಪ್ರಜಾತಂತ್ರ ಮತ್ತು ಸಾಮಾಜಿಕ ಚೌಕಟ್ಟು ಅಪಮೌಲ್ಯಕ್ಕೊಳಗಾಗಿದೆ. ಇದನ್ನು ನಾವು ಗಂಭೀರವಾಗಿಯೇ ಪರಿಗಣಿಸಬೇಕಿದೆ. ಧನ್ಯವಾದಗಳು.