ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರದ ಬಗ್ಗೆ ಕೆಲವು ಕಾಂಗ್ರೆಸ್ (Congress) ನಾಯಕರು ಇದೊಂದು ಮುಗಿದ ಹೋದ ಅಧ್ಯಾಯ ಎನ್ನುತ್ತಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ನಾವಿಬ್ಬರೂ ಬದ್ಧರಾಗಿದ್ದೇವೆ, ಬ್ರದರ್ಸ್ ಆಗಿ ಇರುತ್ತೇವೆ. ಹೀಗಂತಾ ಖುದ್ದು ಸಿಎಂ ಸಿದ್ದರಾಮಯ್ಯ(Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಬಹಿರಂಗವಾಗಿಯೇ ಹೇಳಿದ್ದಾರೆ. ಬ್ರೇಕ್ ಫಾಸ್ಟ್ ಮೀಟಿಂಗ್ ತಂತ್ರದ ಮೂಲಕ ಗೊಂದಲಗಳಿಗೆ ಬ್ರೇಕ್ ಹಾಕಲು ಯತ್ನಿಸಿತ್ತು. ಆದರೆ ಅದೂ ಅಷ್ಟೊಂದು ನಿರೀಕ್ಷಿತ ಮಟ್ಟದಲ್ಲಿ ಫಲ ನೀಡಲಿಲ್ಲ.

ಸದ್ಯ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ರಾಜ್ಯದ ಜನರ ಸಮಸ್ಯೆಗಳು, ಅಭಿವೃದ್ದಿಯ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಆದರೆ ಪಟ್ಟದ ಆಟ ಬೆಂಗಳೂರಿನಿಂದ ಬೆಳಗಾವಿಗೆ ಶಿಫ್ಟ್ ಆದಂತೆ ಕಂಡು ಬರುತ್ತಿದೆ. ಇಂದು ಅಧಿವೇಶನದ ನಾಲ್ಕು ದಿನವಾದರೂ ನಾಯಕತ್ವ ಬದಲಾವಣೆಯ ಮಾತುಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಕಳೆದ ನಾಲ್ಕು ದಿನಗಳಲ್ಲಿ ಮೂರು ಬಾರಿ ನಾಯಕತ್ವ ಬದಲಾವಣೆಯ ಕುರಿತು ಸಿಎಂ ಪುತ್ರ ಹಾಗೂ ಪರಿಷತ್ ಸದಸ್ಯ ಡಾ. ಯತೀಂದ್ರ ಹೇಳಿಕೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ಪವರ್ ಶೇರಿಂಗ್ ವಿಚಾರ ಬೂದಿ ಮುಚ್ಚಿದ ಕೆಂಡದಂತಾಗಿದೆ.

ಇನ್ನು ಸಿದ್ದರಾಮಯ್ಯನವರೇ ಪೂರ್ಣಾವಧಿ ಸಿಎಂ ಆಗಿರಲಿದ್ದಾರೆ. ಹೀಗಿರುವಾಗ ಹೈಕಮಾಂಡ್ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಆದರೆ ಯತೀಂದ್ರ ಆಡುತ್ತಿರುವ ಮಾತುಗಳು ಒಂದೊಂದಾಗಿ ಆರಂಭದಲ್ಲಿ ಕಿಡಿ ಹೊತ್ತಿಸಿದ್ದವು, ಇಂದಿನ ಹೇಳಿಕೆಯು ಬೆಂಕಿ ಹೊತ್ತಿಸಿ ತುಪ್ಪ ಸುರಿದಂತಾಗಿದೆ. ಡಿಸಿಎಂ ಅವರಿಗೆ ನಾಯಕತ್ವದ ಬಗ್ಗೆ ಹೈಕಮಾಂಡ್ ಆಲೋಚಿಸಿಲ್ಲ ಎಂದಿರುವುದು ಡಿಕೆ ಶಿವಕುಮಾರ್ ಟೀಂ ಕೊತ ಕೊತ ಕುದಿಯುವಂತೆ ಮಾಡಿದೆ.

ಯಾವುದೇ ಲಂಗು ಲಗಾಮುಗಳಿಲ್ಲದೆ ಮನ ಬಂದಂತೆ ಮಾತನಾಡುತ್ತಿರುವ ಯತೀಂದ್ರ ತಾವೊಬ್ಬ ಜವಾಬ್ದಾರಿಯುತ ಶಾಸಕನಾಗಿದ್ದೇನೆ ಎನ್ನುವುದನ್ನು ಮರೆತರಾ? ನಾನು ಸಿಎಂ ಮಗ, ನಾನು ಏನೇ ಹೇಳಿದರೂ ನಡೆಯುತ್ತದೆ ಅನ್ನೋ ಭ್ರಮೆನಾ?. ಕಾಂಗ್ರೆಸ್ ಪಕ್ಷದಲ್ಲಿ ನಾನು ಯಾವುದೇ ರೀತಿಯ ಹೇಳಿಕೆ ನೀಡಿದರೂ ಯಾರೇನು ಮಾಡಲ್ಲ ಎನ್ನುವ ಮನಸ್ಥಿತಿಯಲ್ಲಿದ್ದಾರಾ ಸಿಎಂ ಪುತ್ರ ಎನ್ನುವ ಪ್ರಶ್ನೆ ಮೂಡುತ್ತಿದೆ.

ಅಲ್ಲದೇ ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು ಹೇಳಿಕೆ ನೀಡಿದ್ದ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಕಾಂಗ್ರೆಸ್ ನೋಟಿಸ್ ನೀಡಿತ್ತು. ನಾಯಕತ್ವದ ಬಗ್ಗೆ ಹೇಳಿಕೆ ನೀಡದಂತೆ ತಾಕೀತು ಮಾಡಿತ್ತು. ಆದರೆ ಈಗ ಮೌನ ಮುರಿದಿರುವ ಕೈ ಶಾಸಕ, ನಾವು ಏನಾದರೂ ಮಾತನಾಡಿದರೆ ನೋಟಿಸ್ ಕೊಡುತ್ತಾರೆ. ನಮ್ಮ ಹೈಕಮಾಂಡ್ ಅಷ್ಟೊಂದು ವೀಕ್ ಆಗಿಲ್ಲ, ಬಲಿಷ್ಠವಾಗಿದೆ ಎಂದು ಯತೀಂದ್ರ ಹೇಳಿಕೆಯನ್ನು ಖಂಡಿಸಿದ್ದಾರೆ.

ಸದ್ಯ ನಾಯಕತ್ವದ ವಿಚಾರ ಮತ್ತೆ ಚರ್ಚೆಗೆ ತಂದಿರುವ ಯತೀಂದ್ರ ವಿರುದ್ಧ ಪಕ್ಷ ಯಾವ ಕ್ರಮ ಕೈಗೊಳ್ಳುತ್ತದೆ ಎಂಬ ಪ್ರಶ್ನೆಯು ಉದ್ಭವಿಸಿದೆ. ಶಾಸಕರಿಗೆ ಒಂದು ನ್ಯಾಯ? ಸಿಎಂ ಪುತ್ರನಿಗೆ ಇನ್ನೊಂದು ನ್ಯಾಯನಾ? ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಅಧಿವೇಶನದ ಹೊತ್ತಲ್ಲಿ ರಾಜ್ಯದ ಹಿತ ಚಿಂತನೆ ಮಾಡಬೇಕಾಗಿದ್ದವರು ಹೀಗೆ ಅನವಶ್ಯಕ ಹೇಳಿಕೆಗಳನ್ನು ನೀಡುವ ಮೂಲಕ ಕಾಲ ಹರಣ ಮಾಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಯತೀಂದ್ರ ಹೇಳಿಕೆಗಳು ಕಾಂಗ್ರೆಸ್ ಸರ್ಕಾರದ ಆಪತ್ತಿಗೆ ಕಾರಣವಾದರು ಅಚ್ಚರಿ ಪಡಬೇಕಿಲ್ಲ.












