ಭಾರತ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದೆ. ಕೆಲವೇ ಗಂಟೆಗಳಲ್ಲಿ ಭಾರತದಲ್ಲಿ ಧ್ವಜಾರೋಹಣ ಭರಾಟೆ ಶುರುವಾಗಲಿದೆ. ಕೆಲವು ಕಡೆಗಳಲ್ಲಿ ಭಾರತದಲ್ಲಿ ನಡೆಯಬೇಕಿರುವುದು 76ನೇ ವರ್ಷದ ಸ್ವಾತಂತ್ರ್ಯ ಸಂಭ್ರಮವೋ..? 77ನೇ ವರ್ಷದ ಸ್ವಾತಂತ್ರ್ಯ ಸಂಭ್ರಮವೋ ಅನ್ನೋ ಗೊಂದಲ ಮನೆ ಮಾಡಿದೆ.
ಇದಕ್ಕೆ ಪ್ರಮುಖ ಕಾರಣ ಅಂದರೆ ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತೆಗೆದುಕೊಂಡ ನಿಲುವು ಮತ್ತು ಆಚರಣೆ. ಕಳೆದ ವರ್ಷ 75 ವರ್ಷದ ಅಮೃತ ಮಹೋತ್ಸವ ಆಚರಣೆ ನಡೆದ ಮೇಲೆ ಈ ಬಾರಿ 76ನೇ ಸ್ವಾತಂತ್ರ್ಯ ಸಂಭ್ರಮ ಆಗಬೇಕು ಅಲ್ಲವೇ ಎನ್ನುವುದು ಬಹುತೇಕ ಜನರ ಪ್ರಶ್ನೆಯಾಗಿದೆ. ಆದರೆ ಈ ವರ್ಷ ಆಚರಣೆ ಮಾಡುತ್ತಿರುವುದು 77ನೇ ಸ್ವಾತಂತ್ರ್ಯ ಸಂಭ್ರಮ.
76ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ ಸರಿಯಾಗಿದೆ..!
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಅಮೃತ ಮಹೋತ್ಸವ ಆಚರಣೆ ಮಾಡಿತ್ತು. 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಆಚರಣೆ ಮಾಡಿದ್ದರಿಂದ 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮ ಎಂದು ಎಲ್ಲಾ ಕಡೆಯಲ್ಲೂ ಹೇಳಲಾಗಿತ್ತು. ಆದರೆ ಈ ವರ್ಷ 77 ವರ್ಷದ ಸ್ವಾತಂತ್ರ ಸಂಭ್ರಮ ಹೇಗೆ..? 76ನೇ ವರ್ಷದ ಸ್ವಾತಂತ್ರ್ಯ ಸಂಭ್ರಮಾಚರಣೆ ಅಲ್ಲವೇ ಎನ್ನುವುದು ಜನಸಾಮಾನ್ಯರ ಪ್ರಶ್ನೆ. 75ನೇ ವರ್ಷ ಪೂರೈಸಿದ ಬಳಿಕ ಅಮೃತ ಮಹೋತ್ಸವ ಆಚರಣೆ ಮಾಡಲಾಗಿತ್ತು. ಅಂದರೆ 76ನೇ ಸ್ವಾತಂತ್ರ್ಯ ಸಂಭ್ರಮದ ವೇಳೆ ಅಮೃತ ಮಹೋತ್ಸವ ಆಚರಣೆ ಮಾಡಲಾಗಿತ್ತು. ಆದರೆ ಎಲ್ಲಾ ಕಡೆಯಲ್ಲೂ 75ನೇ ವರ್ಷದ ಪ್ರಯುಕ್ತ ಅಮೃತ ಮಹೋತ್ಸವ ಎಂದಿದ್ದು ಗೊಂದಲಕ್ಕೆ ಕಾರಣವಾಗಿದೆ.
2023 ರಲ್ಲಿ 1947 ನ್ನು ಕಳೆದಾಗಲೂ 76 ಬರುತ್ತಲ್ಲಾ..?
ಹೌದು, 2023ರಿಂದ 1947ನ್ನು ಕಳೆದಾಗಲೂ 76 ವರ್ಷ ಎಂದು ಬರುತ್ತದೆ. ಆದರೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಾಗಲು ಧ್ವಜಾರೋಹಣ ಮಾಡಲಾಗಿತ್ತು. ಅಂದರೆ 77ನೇ ಸ್ವಾತಂತ್ರ್ಯೋತ್ಸವ.. 76ನೇ ವರ್ಷದ ಸ್ವಾತಂತ್ರ್ಯೋತ್ಸವ. ಒಂದು ವರ್ಷದ ಬಳಿಕ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಹುಟ್ಟಿದ ದಿನವನ್ನೂ ಲೆಕ್ಕ ಹಾಕಿದರೆ ಹುಟ್ಟಿದ ದಿನವನ್ನು ಲೆಕ್ಕ ಹಾಕಿದರೆ ಒಂದು ವರ್ಷ ಮುಂದಕ್ಕೆ ಹೋಗುತ್ತದೆ. 2000ನೇ ಇಸವಿಯಲ್ಲಿ ಹುಟ್ಟಿದವರಿಗೆ ಈಗ 23 ವರ್ಷ. ಆದರೆ 2000ನೇ ಇಸವಿಯಲ್ಲಿ ಹುಟ್ಟಿದ ದಿನವನ್ನೂ ಲೆಕ್ಕ ಹಾಕಿಕೊಂಡರೆ 24 ವರ್ಷ ಆಗುತ್ತದೆ. ಇದೇ ರೀತಿ ವರ್ಷಾಚರಣೆ ರೀತಿಯಲ್ಲಿ ಲೆಕ್ಕ ಹಾಕಿದಾಗ 76ನೇ ವರ್ಷದ ಸ್ವಾತಂತ್ರ್ಯ ಸಂಭ್ರಮ. ಸ್ವಾತಂತ್ರ್ಯೋತ್ಸವ ಲೆಕ್ಕ ಹಾಕಿಕೊಂಡರೆ 77ನೇ ಸ್ವಾತಂತ್ರ್ಯೋತ್ಸವ ಆಗುತ್ತದೆ.
Press Information Bureau (PIB) ಇದರ ಬಗ್ಗೆ ಸ್ಪಷ್ಟನೆ ನೀಡಿದ್ದು, ಈ ವರ್ಷವನ್ನು 77ನೇ ಸ್ವಾತಂತ್ರ್ಯ ಸಂಭ್ರಮ ಎಂದೇ ಆಚರಣೆ ಮಾಡುವಂತೆ ತಿಳಿಸಿದೆ. ಆನಿವರ್ಸರಿ ರೀತಿಯಲ್ಲಿ ಲೆಕ್ಕ ಹಾಕಿದಾಗ 76ನೇ ವರ್ಷದ ಸ್ವಾತಂತ್ರ್ಯೋತ್ಸವ ಆಗುತ್ತದೆ. ಆದರೆ 77ನೇ ಸ್ವಾತಂತ್ರ್ಯ ಸಂಭ್ರಮ ಆಚರಣೆ ಮಾಡಬೇಕಿದೆ ಎಂದು ಖಚಿತಪಡಿಸಿದೆ.
ಕೃಷ್ಣಮಣಿ