ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ಅಂತೆಲ್ಲಾ ಬೆಳ್ಳಿ ತೆರೆ ಮೇಲೆ ಮಿಂಚುತ್ತಿದ್ದ ನಟ ದರ್ಶನ್(Darshan) ಈಗ ಕತ್ತಲೆ ಕೋಣೆಯಲ್ಲಿ ದಿನ ಕಳೆಯುತ್ತಿದ್ದಾರೆ. ಚಿತ್ರದುರ್ಗದ ಮೆಡಿಕಲ್‌ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ(Renukaswamy) ಎಂಬಾತನ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ಗೆ ಒಂದಾದ ಮೇಲೊಂದು ಹೊಡೆತಗಳು ಬೀಳುತ್ತಲೇ ಇದೆ. ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡು ಜೈಲು ಸೇರಿದರೂ ಕೂಡ ಹೈಕೋರ್ಟ್‌ನಿಂದ ಜಾಮೀನು ಪಡೆದು ಹೊರಬಂದಿದ್ದ ದರ್ಶನ್‌ಗೆ ಸುಪ್ರೀಂ ಕೋರ್ಟ್ ಕೊಟ್ಟ ಹೊಡೆತಕ್ಕೆ ಸದ್ಯಕ್ಕಂತೂ ಬಿಡುಗಡೆ ಭಾಗ್ಯ ಇಲ್ಲದಂತಾಗಿದೆ.

ಅತ್ತ ದರ್ಶನ್ ಜಾಮೀನು..ಪೆಲೋಲ್.. ಬಿಡುಗಡೆ ಅಂತಾ ಕಾಯುತ್ತಿದ್ದರೆ, ಇತ್ತ ಫ್ಯಾನ್ಸ್‌ಗಳಿಗೆ ಹಬ್ಬ ಮಾಡಲು ದರ್ಶನ್ ಅಭಿನಯದ ಬಹು ನಿರೀಕ್ಷಿತ ಡೆವಿಲ್ ಸಿನಿಮಾ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿದೆ. ಈಗಾಗಲೇ ಟೀಸರ್, ಟ್ರೈಲರ್ ಮೂಲಕವೇ ಕ್ರೇಜ್ ಹೆಚ್ಚಿಸಿರುವ ಡೆವಿಲ್ ಸಿನಿಮಾದ ಮೇಲೆಯೂ ಯಾರೋ ಕಾಣದ ಕಣ್ಣುಗಳ ವಕ್ರದೃಷ್ಟಿ ಬಿದ್ದಂತಿದೆ. ದರ್ಶನ್ ಸೆರೆಮನೆ ವಾಸ ಮುಂದಿಟ್ಟುಕೊಂಡು ಡೆವಿಲ್ ಸಿನಿಮಾದ ಮೇಲೆ ಷಡ್ಯಂತ್ರ ನಡೆಯುತ್ತಿದೆಯಾ..? ದರ್ಶನ್ ಅಭಿಮಾನಿಗಳಿಗೆ ಈ ಅನುಮಾನ ಬರಲು ಕಾರಣ ಕೂಡ ಇದೆ.

ಜೈಲಿನಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರಾ ದರ್ಶನ್..?
ಕಳೆದ ಕೆಲ ದಿನಗಳಿಂದ ದರ್ಶನ್ ಜೈಲು ಸೇರುವ ಸಮಯದಲ್ಲಿ ಅವರ ಮನೆಯಲ್ಲಿ ಪತ್ತೆಯಾದ ಹಣದ ಬಗ್ಗೆ ಒಂದಿಷ್ಟು ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ನಿನ್ನೆಯಿಂದ ಏಕಾಏಕಿ ಜೈಲಿನಲ್ಲಿ ದರ್ಶನ್ ವರ್ತನೆಯ ಬಗ್ಗೆ ಮುಖ್ಯವಾದ ಸುದ್ದಿಯೊಂದು ಹರಿದಾಡುತ್ತಿದೆ. ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್(Darshan) ತಮ್ಮ ಸೆಲ್‌ನಲ್ಲಿರುವ ಸಹ ಕೈದಿಗಳಿಗೆ ದೈಹಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಜೈಲಿನಲ್ಲಿ ಕೈದಿಗಳ ಮೋಜು ಮಸ್ತಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈಗ ಪರಪ್ಪನ ಅಗ್ರಹಾರದಲ್ಲಿ ನಿಯಮಗಳು ಕಠಿಣವಾಗಿದ್ದು, ಇದರಿಂದ ದರ್ಶನ್ ಮಾನಸಿಕ ಒತ್ತಡಕ್ಕೆ ಸಿಲುಕಿದ್ದು, ತಮ್ಮ ಸೆಲ್‌ನಲ್ಲಿರುವ ತಮ್ಮದೇ ಕೇಸ್‌ನ ಆರೋಪಿಗಳಾದ ಅನುಕುಮಾರ್, ಜಗ್ಗ ಹಾಗೂ ಲಕ್ಷ್ಮಣ್‌ಗೆ ದರ್ಶನ್ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎನ್ನಲಾಗಿತ್ತು.

ಮಲಗಿರುವ ಸಹ ಕೈದಿಗಳನ್ನು ಕಾಲಿನಲ್ಲಿ ಒದ್ದು ಎಬ್ಬಿಸುವುದು, ಅವರಿಗೆ ಅವಾಚ್ಯ ಶಬ್ದಗಳಿಂದ ಬೈದಾಡುವುದು ಹೀಗೆ ದರ್ಶನ್ ಸಹ ಕೈದಿಗಳಿಗೆ ತೊಂದರೆ ಕೊಡುತ್ತಿದ್ದು, ಇದರಿಂದ ದರ್ಶನ್ ಹಾಗೂ ಜಗ್ಗ ಮಧ್ಯೆ ದೊಡ್ಡ ಜಗಳ ನಡೆದಿದೆ ಅಲ್ಲದೇ ದರ್ಶನ್ ಇರುವ ಸೆಲ್‌ನಲ್ಲೇ ಇದ್ದರೆ ನಾನು ಸಾಯುತ್ತೇನೆ ಎಂದು ಆರೋಪಿ ಅನುಕುಮಾರ್ ಬೇಡಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಸದ್ಯ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಇರುವ ಸೆಲ್‌ಗೆ ವಿಶೇಷ ಕಾವಲು ವ್ಯವಸ್ಥೆ ಮಾಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಈ ರೀತಿಯ ಸುದ್ದಿಗಳ ಬಗ್ಗೆ ಅಭಿಮಾನಿಗಳು ಅಸಮಾಧಾನಗೊಂಡಿದ್ದು, ಡೆವಿಲ್ ಸಿನಿಮಾ ಬಿಡುಗಡೆ ಸಮಯದಲ್ಲೇ ದರ್ಶನ್ ಅವರ ಬಗ್ಗೆ ಸುಖಾಸುಮ್ಮನೆ ನೆಗೆಟಿವ್ ಸುದ್ದಿಗಳನ್ನು ಹರಿಬಿಡಲಾಗುತ್ತಿದೆಯೇ ಎನ್ನುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಜೈಲಿನ ಒಳಗೆ ನಡೆಯುವ ಸುದ್ದಿಗಳು ಹೊರಗೆ ಹೇಗೆ ಬರುತ್ತದೆ..? ಸಾಮಾನ್ಯವಾಗಿ ದರ್ಶನ್ ತಮ್ಮ ಜೊತೆಗೆ ಇರುವವರನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಹೀಗಿರುವಾಗ ತಮ್ಮದೇ ಪ್ರಕರಣದಲ್ಲಿ ತಮ್ಮ ಜೊತೆ ಜೈಲು ಸೇರಿರುವವರನ್ನು ದರ್ಶನ್ ಹಿಂಸಿಸುತ್ತಾರಾ..? ದರ್ಶನ್ ಮೇಲೆ ಈವರೆಗೂ ಇರದ ಈ ರೀತಿಯ ದೂರುಗಳು ಡೆವಿಲ್ ರಿಲೀಸ್ ಸಮಯದಲ್ಲೇ ಯಾಕೆ ಹೊರಬಿದ್ದಿದೆ ಎನ್ನುವ ಪ್ರಶ್ನೆಗಳನ್ನು ಫ್ಯಾನ್ಸ್ ಕೇಳುತ್ತಿದ್ದು, ಇದು ಡೆವಿಲ್ ಸಿನಿಮಾದ ಮೇಲೆ ಕಾಣದ ಕೈಗಳು ಮಾಡುತ್ತಿರುವ ಷಡ್ಯಂತ್ರ ಇರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ.












