ಕೋವಿಡ್-19 ವೈರಸ್ ಸಾಂಕ್ರಾಮಿಕವಾದಾಗಿನಿಂದ ಕಳೆದ ಎರಡು ವರ್ಷದಲ್ಲಿ ಜನರು ಮಾಸ್ಕ್, ಸ್ಯಾನಿಟೈಸರ್ ಬಳಸಿ ಬೇಸತ್ತಿದ್ದಾರೆ. ಸಾಮಾಜಿಕ ಅಂತರ, ಸೀಮಿತ ಜನರೊಡನೆ ಬೆರೆಯುವಿಕೆ ಮೊದಲಾದವು ಬೇಸರ ತರಿಸಿದೆ. ಲಾಕ್‌ಡೌನ್, ಕರ್ಫ್ಯೂ ಮುಂತಾದ ಕಟ್ಟುನಿಟ್ಟಿನ ಕ್ರಮಗಗಳು ಜನಸಾಮಾನ್ಯನ ಬದುಕನ್ನು ಹೈರಾಣಾಗಿಸಿದೆ. ಒಟ್ಟಾರೆ ಈ ಸಾಂಕ್ರಾಮಿಕದಿಂದ ಬಸವಳಿದಿರುವ ಮಂದಿ ಮಾಸ್ಕ್ ಧರಿಸದೆ ಮುಕ್ತವಾಗಿ ಓಡಾಡುವ ದಿನಕ್ಕೆ ಕಾಯುತ್ತಿದ್ದಾರೆ. ಇದೀಗ ಅಂತಹ ಕಾಯುವಿಕೆಗೆ ಕಾಲ ಬಂದಿದೆಯಾ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ಅಧಿಕೃತವಾಗಿ ಎಲ್ಲಾ ತಜ್ಞರು ಮಾಸ್ಕ್ ಧರಿಸದೆ ಓಡಾಡಲು ಸಲಹೆ ನೀಡದಿದ್ದರು, ಕರೋನಾವನ್ನು ಸಾಮಾನ್ಯ ನೆಗಡಿ ಜ್ವರದಂತೆ ಪರಿಗಣಿಸಿ ಅದರೊಂದಿಗೆ ಸಹಜವಾಗಿ ಬದುಕಬೇಕೆ ಎಂಬ ಪ್ರಶ್ನೆಗಳು ವ್ಯಾಪಕವಾಗುತ್ತಿವೆ. ಮುಖ್ಯವಾಗಿ ಯುರೋಪ್ ನ ಕೆಲವು ದೇಶಗಳು ಕೋವಿಡ್ ಪ್ಯಾಂಡೆಮಿಕ್‌ನಿಂದ ಎಂಡೆಮಿಕ್ ಹಂತಕ್ಕೆ ತಲುಪಿರುವುದಾಗಿ ಹೇಳುತ್ತಿದೆ. ಈ ನಿಟ್ಟಿನಲ್ಲಿ ಸ್ಪೈನ್ ದೇಶದ ನಿಲುವು ಹಾಗೂ ಸ್ಪೈನ್ ಪ್ರಧಾನಿಯ ಇತ್ತೀಚಿನ ಹೇಳಿಕೆಯು ಮಹತ್ತರವಾದದ್ದು.
ಕೋವಿಡ್ ನೂತನ ರೂಪಾಂತರಿ ಒಮೈಕ್ರಾನ್ ಸೋಂಕಿನ ಅಪಾಯದ ತೀವೃತೆ ಕಡಿಮೆಯೂ, ಆಸ್ಪತ್ರೆಗೆ ದಾಖಲಾಗುತ್ತಿರುವ ಸಂಖ್ಯೆಯೂ ಗಣನೀಯ ಇಳಿಕೆಯಾಗಿರುವುದು ಸಾಂಕ್ರಾಮಿಕ ರೋಗದ ಮಾದರಿಯ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದರಿಂದ ಸ್ಪೈನ್ ದೇಶ ಹಿಂಜರಿಯಲು ಪ್ರೇರೇಪಿಸಿದೆ.
ಸ್ವತಃ ಸ್ಪೈನ್ ಪ್ರಧಾನಿ ಪೆಡ್ರೋ ಸ್ಯಾಂಚೆಝ್ ಇತ್ತೀಚೆಗೆ ನೀಡಿದ ರೇಡಿಯೋ ಸಂದರ್ಶನದಲ್ಲಿ “ಕೋವಿಡ್-19 ಪ್ಯಾಂಡೆಮಿಕ್‌ನಿಂದ ಎಂಡೆಮಿಕ್ ಹಂತಕ್ಕೆ ವಿಕಾಸಗೊಂಡಿರುವುದನ್ನು ನಾವು ಮೌಲ್ಯಮಾಪನಗೊಳಿಸಬೇಕು. ಇದುವರೆಗೂ ನಾವು ಬಳಸಿದ ಪ್ಯಾರಮೀಟರ್‌ಗಳಿಗಿಂತ ಭಿನ್ನವಾಗಿ ಅಳೆಯಬೇಕು” ಎಂದಿದ್ದಾರೆ. (NDTV ವರದಿ) ಸ್ಪೈನ್ ಪ್ರಧಾನಿಯ ಈ ಹೇಳಿಕೆಯ ಬಳಿಕ ಹಲವು ಅಂತರಾಷ್ಟ್ರೀಯ ನಿಯತಕಾಲಿಕೆಗಳು ಮಾಸ್ಕ್ ಇಲ್ಲದೆ ಓಡಾಡಲು ಯುರೋಪ್ ದೇಶಗಳು ಸನ್ನದ್ಧಗೊಳ್ಳೂತ್ತಿದೆಯಾ ಎಂಬ ಆಯಾಮದಲ್ಲಿ ಹಲವು ವರದಿಗಳನ್ನು ಮಾಡಿದೆ. ಆದರೆ, ಇದುವರೆಗೂ ಮುಂದುವರಿದ ರಾಷ್ಟ್ರಗಳು ಮಾಸ್ಕ್ ಧರಿಸಬೇಡಿ ಎಂದು ಅಧಿಕೃತವಾಗಿ ಸೂಚನೆ ನೀಡಿದ್ದು ಇಲ್ಲ, ಬದಲಾಗಿ ಯುರೋಪಿನ ಬಹುತೇಕ ದೇಶಗಳು ಮಾಸ್ಕ್ ಅನ್ನು ಮರಳಿ ಕಡ್ಡಾಯಗೊಳಿಸಿದೆ.
ಅದಾಗ್ಯೂ, ಭಾರತ ಸೇರಿದಂತೆ ವಿಶ್ವದ ಇನ್ನಿತರ ದೇಶದ ತಜ್ಞರು ನಿರಂತರವಾಗಿ ರೂಪಾಂತರಗೊಳ್ಳುತ್ತಿರುವ ಕಾರಣ ಕರೋನಾ ವಿರುದ್ಧದ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಎಚ್ಚರಿಸುತ್ತಲೇ ಇದ್ದಾರೆ. ನಾವು ನಿಜಕ್ಕೂ ಕೋವಿಡ್‌ಅನ್ನು ಸಾಮಾನ್ಯ ಜ್ವರದಂತೆ ಪರಿಗಣಿಸುವ ಹಂತಕ್ಕೆ ತಲುಪಿದ್ದೇವೆಯೇ ಎಂಬುದನ್ನು ವಿವಿಧ ಅಥಾರಿಟಿಗಳು ಇತ್ತೀಚಿಗೆ ನೀಡಿರುವ ಸೂಚನೆಗಳ ಆಧಾರದಲ್ಲಿ ವಿಶ್ಲೇಷಿಸಬಹದು.
ವಿಶ್ವ ಆರೋಗ್ಯ ಸಂಸ್ಥೆಯ ನಿಲುವು
ವಿಶ್ವ ಆರೋಗ್ಯ ಸಂಸ್ಥೆಯನ್ನು ಆಧಾರವಾಗಿಸುವುದಾದರೆ ಕೋವಿಡ್ ಇನ್ನೂ ಎಂಡೆಮಿಕ್ ಹಂತಕ್ಕೆ ವಿಕಾಸಗೊಂಡಿಲ್ಲ. ಪ್ಯಾಂಡೆಮಿಕ್ ಅಲ್ಲದೆ ಎಂಡೆಮಿಕ್ ಮಾದರಿಯಲ್ಲಿ ಪರಿಗಣಿಸುವುದುಕ್ಕೆ WHOದ ಸಂಪೂರ್ಣ ವಿರೋಧವಿದೆ. ಕೋವಿಡ್ ವಿರುದ್ಧದ ನಿರ್ಬಂಧಗಳನ್ನು, ವಿಶೇಷವಾಗಿ ಮಾಸ್ಕ್ ಕಡ್ಡಾಯವನ್ನು ಕೈಬಿಡುವುದರ ವಿರುದ್ಧ WHO ಎಚ್ಚರಿಕೆಯನ್ನು ನೀಡಿದೆ.

ಕರೋನವೈರಸ್ನ ಡೆಲ್ಟಾ ರೂಪಾಂತರಕ್ಕಿಂತ ಓಮಿಕ್ರಾನ್ ತೀವ್ರತೆ ಕಡಿಮೆ ಇದೆ. ಆದರೆ ಒಮೈಕ್ರಾನ್ ಕೂಡಾ ಪರಿಣಾಮ ಬೀರುತ್ತಿದೆ. ಮುಖ್ಯವಾಗಿ ಲಸಿಕೆ ಹಾಕದ ಜನರಲ್ಲಿ ಅಪಾಯವನ್ನುಂಟು ಮಾಡುತ್ತದೆ ಎಂದು ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ (Tedros Adhanom Ghebreyesus) ಇತ್ತೀಚೆಗೆ ಹೇಳಿದ್ದಾರೆ
ತಜ್ಞರ ಅಭಿಪ್ರಾಯಗಳೇನು?
ಅದೇ ವೇಳೆ, ಯುನೈಟೆಡ್ ಸ್ಟೇಟ್ಸ್ನ ಹಲವಾರು ಆರೋಗ್ಯ ತಜ್ಞರು ವೈರಸ್ ವಿರುದ್ಧ ವ್ಯಾಕ್ಸಿನೇಷನ್ನ ಮೇಲೆ ಗರಿಷ್ಠ ಗಮನಹರಿಸುವ ಮೂಲಕ ಕೋವಿಡ್ ಅನ್ನು ಸಾಮಾನ್ಯ ಜ್ವರದಂತೆ ಚಿಕಿತ್ಸೆ ನೀಡುವ ಆಲೋಚನೆಗಳನ್ನು ಬೆಂಬಲಿಸುತ್ತಿದ್ದಾರೆ.
ಯುನೈಟೆಡ್ ಕಿಂಗ್‌ಡಮ್ ಮಾಜಿ ವ್ಯಾಕ್ಸಿನ್ ಟಾಸ್ಕ್ ಫೋರ್ಸ್ ಮುಖ್ಯಸ್ಥರಾದ ಮೂಲದ ಡಾ. ಕ್ಲೈವ್ ಡಿಕ್ಸ್, ಇದು ಕೋವಿಡ್‌ಅನ್ನು ಪ್ಯಾಂಡೆಮಿಕ್ ಇಂದ ಎಂಡೆಮಿಕ್ ತಲುಪಿದ ಹಂತ ಎಂದು ಪರಿಗಣಿಸುವ ಸಮಯ. ಕರೋನಾವನ್ನು ಸಾಮಾನ್ಯ ಜ್ವರದಂತೆ ಪರಿಗಣಿಸಬೇಕು ಎಂದು ಹೇಳಿಕೆ ನೀಡಿದ್ದಾರೆ.
ಅದಾಗ್ಯೂ, ಕೋವಿಡ್ ಅನ್ನು ಸಾಂಕ್ರಾಮಿಕ ಎಂದು ಪರಿಗಣಿಸದೆ ಎಂಡೆಮಿಕ್ ಎಂದು ಘೋಷಿಸಿದ ಯುರೋಪಿನ ಮೊದಲ ದೇಶ ಸ್ಪೈನ್‌ನಲ್ಲಿಯೇ ಈ ಕುರಿತು ತಜ್ಞರು ವಿಭಿನ್ನ ಅಭಿಪ್ರಾಯಗಳನ್ನು ಪಡುತ್ತಾರೆ.
ಐಸೋಲೇಶನ್ ದಿನಗಳನ್ನು ಕಡಿಮೆಗೊಳಿಸುವುದು ಅಥವಾ ಸಮಸ್ಯೆಗಳನ್ನು ಇಲ್ಲ ಎಂದು ವಾದಿಸುವುದು ತಪ್ಪು, ಸಮಸ್ಯೆ ಇರುವವರೆಗೆ ಅದನ್ನು ಗುರುತಿಸಬೇಕು ಎಂದು WHO ಮಾಜಿ ಡೈರೆಕ್ಟಿವ್, ಸಾಂಕ್ರಾಮಿಕ ರೋಗಗಳ ತಜ್ಞ ಲೋಪೆಝ್ ಅಕುನಾ ಹೇಳಿದ್ದಾರೆ.
ಕೋವಿಡ್ ಅನ್ನು ಎಂಡೆಮಿಕ್ ರೀತಿ ಪರಿಗಣಿಸಿದ ಸ್ಪೇನ್‌ನಲ್ಲಿ ದಿನವೊಂದಕ್ಕೆ 100 ಕ್ಕೂ ಹೆಚ್ಚು ಕೋವಿಡ್ ಸಂಬಂಧಿತ ಸಾವುಗಳು ವರದಿಯಾಗುತ್ತಿದೆ. ಕೋವಿಡ್ ಅನ್ನು ಎಂಡೆಮಿಕ್ ರೀತಿ ಸಾಮಾನ್ಯವೆಂಬಂತೆ ಪರಿಗಣಿಸಲು ಉತ್ಸುಕವಾಗಿರುವ ಯುನೈಟೆಡ್ ಕಿಂಗ್‌ಡಂ ನಲ್ಲೂ ದಿನವೊಂದಕ್ಕೆ ಒಂದು ಲಕ್ಷದಷ್ಟು ಕೋವಿಡ್ ಹೊಸ ಪ್ರಕರಣಗಳು ಹಾಗೂ ದಿನವೊಂದರಲ್ಲಿ 250 ರಷ್ಟು ಕರೋನಾ ಸಂಬಂಧಿತ ಸಾವುಗಳು ವರದಿಯಾಗುತ್ತಿದೆ. ಇದೇ ಆಧಾರದ ಮೇಲೆ, ದಿನವೊಂದಕ್ಕೆ ದೇಶವೊಂದರಲ್ಲಿ ನೂರಿನ್ನೂರು ಸಾವಿಗೆ ಕಾರಣವಾಗುವ ಸೋಂಕನ್ನು ಸಾಮಾನ್ಯ ಜ್ವರ ಎಂಬಂತೆ ಪರಿಗಣಿಸಬಹುದೇ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.