
2019ರಲ್ಲಿ ಶುರುವಾದ ಕೋವಿಡ್ ವೈರಾಣು ಇಡೀ ವಿಶ್ವವನ್ನೇ ಅಲುಗಾಡಿಸಿತ್ತು. ಕೋವಿಡ್ ವ್ಯಾಕ್ಸಿನ್ ತೆಗೆದುಕೊಂಡ ನಂತರ 2022ರಲ್ಲಿ ಕೋವಿಡ್ ವೈರಾಣು ತನ್ನ ಪ್ರಾಬಲ್ಯ ಕಳೆದುಕೊಂಡಿತ್ತು. ಇದೀಗ ಎಲ್ಲವೂ ಸರಿ ದಾರಿಗೆ ಬಂತು ಎನ್ನುತ್ತಿರುವಾಗ ಮತ್ತೆ ಕೋವಿಡ್ ಸೋಂಕು ಅಬ್ಬರಿಸುವ ಮುನ್ಸೂಚನೆ ಕೊಟ್ಟಿದೆ. ಇದು ಹೊಸ ಪ್ರಭೇದದ ವೈರಾಣು ಎಂದು ಹೇಳಲಾಗುತ್ತಿದೆ. ಇದು ಮಕ್ಕಳು ಹಾಗು ಹಿರಿಯರು ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಮೊದಲಿಗೆ ಕೋವಿಡ್ ಸೋಂಕಿನ ಬಗ್ಗೆಯೂ ವೈದ್ಯಕೀಯ ಲೋಕ ಇದೇ ರೀತಿ ಹೇಳಿತ್ತು. ಇದೀಗ ಮತ್ತೆ ಕೋವಿಡ್ ಸೋಂಕು ಉಲ್ಬಣ ಆಯ್ತಾ ಎನ್ನುವಂತಾಗಿದೆ.
ಚೀನಾದಲ್ಲಿ ಕೊವಿಡ್ ಆತಂಕ ಎದುರಾಗಿರುವ ಬಗ್ಗೆ ಮಂಡ್ಯ ಶಾಸಕ ರವಿ ಗಣಿಗ ಹೇಳಿಕೆ ನೀಡಿದ್ದಾರೆ. ಚೀನಾ ಪ್ರವಾಸ ಮುಗಿಸಿ ವಾಪಸ್ ಆಗಿರುವ ಶಾಸಕ ರವಿ ಗಣಿಗ, ನಾಲ್ಕು ದಿನಗಳ ಚೀನಾ ಪ್ರವಾಸ ಮುಗಿಸಿ ವಾಪಸ್ ಬಂದಿದ್ದೇನೆ. ಚೀನಾದಲ್ಲಿ ಈಗಾಗಲೇ ಕೋವಿಡ್ ಪರಿಸ್ಥಿತಿ ಎದುರಾಗಿದೆ ಎಂದಿದ್ದಾರೆ. ಚೀನಾ ಪರಿಸ್ಥಿತಿಯ ಬಗ್ಗೆ ವಿವರಸಿರುವ ರವಿ ಗಣಿಗ, ಚೀನಾದಲ್ಲಿ ಶೇಕಡ 80 ರಷ್ಟು ಜನ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾರೆ. ಮಕ್ಕಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಟೆಸ್ಟ್ ಮಾಡುತ್ತಿದ್ದಾರೆ ಎಂದಿದ್ದಾರೆ.

ಯಾವುದೋ ವೈರಸ್ ಅಥವಾ ಕೋವಿಡ್ ರೀತಿಯ ವೈರಸ್ ಬಂದಿರಬಹುದು. ಹಾಗಾಗಿ ಮುಂಜಾಗ್ರತೆ ಕ್ರಮವಾಗಿ ಮಾಸ್ಕ್ ಹಾಕಿಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಹಾಂಗ್‌ಕಾಂಗ್ ಏರ್ಪೊರ್ಟ್‌ನಲ್ಲೂ ಮಾಸ್ಕ್ ಧರಿಸಿದ್ದರು. ಕೋವಿಡ್ ರೀತಿಯ ಹೊಸ ವೈರಸ್ ಬಂದಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆರ ಮಂಡ್ಯ ಶಾಸಕ ರವಿಗಣಿಗ. ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟರೈಸ್ ಕೂಡ ಇಡಲಾಗಿದೆ. ಹೀಗಾಗಿ ಕೋವಿಡ್ 19 ಸೋಂಕಿನ ಬದಲಿ ಪ್ರಭೇದ ಇರಬಹುದು ಎಂದು ಶಂಕೆ ವ್ಯಕ್ತವಾಗಿದೆ.