ಉತ್ತರ ಪ್ರದೇಶದ ಏಳು ಜಿಲ್ಲೆಗಳು ಮತ್ತು ಮಧ್ಯಪ್ರದೇಶದ ಆರು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಬುಂದೇಲಖಂಡವನ್ನು ಭಾರತದ ಭೌಗೋಳಿಕ ಹೃದಯಭಾಗ ಎಂದೇ ಕರೆಯಲಾಗುತ್ತದೆ. ಇಡೀ ಪ್ರದೇಶದಲ್ಲಿ ನೈಸರ್ಗಿಕ ಸಂಪನ್ಮೂಲಗಳು ಹೇರಳವಾಗಿದ್ದರೂ ಈ ಪ್ರದೇಶಗಳು ದೇಶದ 200 ಅತ್ಯಂತ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿದೆ. ಇದಕ್ಕೆ ಮುಖ್ಯ ಕಾರಣ ಈ ಪ್ರದೇಶಗಳು ದೀರ್ಘಕಾಲದಿಂದ ಎದುರಿಸುತ್ತಿರುವ ನೀರಿನ ಕೊರತೆ.
2005 ಮತ್ತು 2007 ರ ನಡುವೆ ಅಲ್ಲಿ ಸತತ ಬರಗಾಲ ಭಾದಿಸಿದ ನಂತರ ಕೇಂದ್ರದಲ್ಲಿ ಆಗ ಆಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರವು ಯೋಜನಾ ಆಯೋಗದ ನೇತೃತ್ವದಲ್ಲಿ ತಂಡವನ್ನು ರಚಿಸಿ ಬುಂದೇಲ್‌ಖಂಡದ ಪರಿಸ್ಥಿತಿಗಳನ್ನು ಹೇಗೆ ಸುಧಾರಿಸಬಹುದು ಎಂಬುವುದನ್ನು ಅಧ್ಯಯನ ಮಾಡಲು ಸೂಚಿಸಿತ್ತು. ಅದರ ವರದಿಯನ್ನು ಆಧರಿಸಿ, 2009 ರಲ್ಲಿ ಸರ್ಕಾರವು ಈ ಪ್ರದೇಶದಲ್ಲಿ ಬರ ಪರಿಹಾರ ಕಾರ್ಯತಂತ್ರಗಳನ್ನು ಜಾರಿಗೆ ತರಲು ವಿಶೇಷ ಪ್ಯಾಕೇಜ್ ಅನ್ನು ಅನುಮೋದಿಸಿತು, ಇದನ್ನು ಬುಂದೇಲ್‌ಖಂಡ್ ಪ್ಯಾಕೇಜ್ ಎಂದು ಕರೆಯಲಾಯಿತು. 2014 ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಯೋಜನೆಯನ್ನು ಮುಂದುವರೆಸಲಾಯಿತು.
ಆರಂಭದಲ್ಲಿ 7,466 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ಯಾಕೇಜ್‌ಗೆ ಅನುಮೋದನೆ ನೀಡಲಾಗಿತ್ತು. ನಂತರ ಕೇಂದ್ರವು 12ನೇ ಯೋಜನಾ ಅವಧಿಯಲ್ಲಿ (2012-2017) ಹಿಂದುಳಿದ ಪ್ರದೇಶಗಳ ಅನುದಾನ ನಿಧಿಯ ಅಡಿಯಲ್ಲಿ ರೂ 4,400 ಕೋಟಿಗಳ ಆರ್ಥಿಕ ವೆಚ್ಚದೊಂದಿಗೆ ಪ್ಯಾಕೇಜ್‌ನ ಮುಂದುವರಿಕೆಗೆ ಅನುಮೋದನೆ ನೀಡಿತಯ. ಇಡೀ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಉದ್ದೇಶಿಸಲಾದ ಈ ಹಣವನ್ನು ಪ್ರಾಥಮಿಕವಾಗಿ ನೀರಾವರಿ, ಕುಡಿಯುವ ನೀರು, ಕೃಷಿ, ಪಶುಸಂಗೋಪನೆ, ಪರಿಸರ ಮತ್ತು ಉದ್ಯೋಗದ ಯೋಜನೆಗಳಿಗೆ ನಿಗದಿಪಡಿಸಲಾಗಿದೆ. ಈ ನಿಧಿಯಲ್ಲಿ ಹೆಚ್ಚಿನ ಹಣವನ್ನು ಈ ಪ್ರದೇಶದ ನೀರಿನ ಕೊರತೆಯ ಸಮಸ್ಯೆಗಳನ್ನು ಪರಿಹರಿಸಲು ಬಳಸಿಕೊಳ್ಳಲಾಗಿದೆ. ನಿಗದಿಪಡಿಸಲಾದ ನಿಧಿಯಲ್ಲಿ ಮಧ್ಯಪ್ರದೇಶವು 73% ಮತ್ತು ಉತ್ತರ ಪ್ರದೇಶವು 66% ರಷ್ಟನ್ನು ನೀರಿಗಾಗಿ ಖರ್ಚು ಮಾಡಿದೆ. ಪ್ರಮುಖವಾಗಿ ಸಣ್ಣ ನೀರಾವರಿ ಯೋಜನೆಗಳ ಅನುಷ್ಠಾನ, ಹೊಸ ಬಾವಿಗಳ ನಿರ್ಮಾಣ, ಅಸ್ತಿತ್ವದಲ್ಲಿರುವ ಬಾವಿಗಳ ಆಳಗೊಳಿಸುವಿಕೆ ಅಥವಾ ಮರುಪೂರಣ, ಟ್ಯಾಂಕ್‌ಗಳು ಮತ್ತು ಕೊಳಗಳ ನಿರ್ವಹಣೆ, ಬಾವಿಗಳಿಂದ ನೀರು ಸೇದಲು ಹೆಚ್ಚಿನ ಸಾಂದ್ರತೆಯ ಪಾಲಿಥೀನ್ (HDPE) ಪೈಪ್‌ಗಳ ವಿತರಣೆ , ಕೊಳವೆ ಬಾವಿಗಳ ಅಳವಡಿಕೆ, ಚೆಕ್ ಡ್ಯಾಂಗಳ ನಿರ್ಮಾಣ ಮತ್ತು ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಕ್ರಮ ಕೈಗೊಳ್ಳುವುದು ಮುಂತಾದವುಗಳು ಯೋಜನೆಯ ಅಂಶಗಳಾಗಿವೆ.

ಆದರೆ ಇಷ್ಟು ದೊಡ್ಡ ಯೋಜನೆಯನ್ನು ರೂಪಿಸಿದ ಮೇಲೂ, ಅದಕ್ಕಾಗಿ ಇಷ್ಟೊಂದು ಹಣವನ್ನು ವ್ಯಯಿಸಿದ ಮೇಲೂ ಬುಂದೇಲ್‌ಖಂಡದ ನೀರಿನ ಬವಣೆ ತೀರಿಲ್ಲ. ಆಡಳಿತವು ಬಾವಿ ಎಂದು ಕರೆಯುವುದನ್ನು ಊರವರು ಹಳ್ಳ ಎನ್ನುತ್ತಾರೆ. ಅದರಲ್ಲಿ ಮಕ್ಕಳು ಆಟವಾಡುತ್ತಿದ್ದು, ಮಳೆ ಬಂದು ನೀರು ಸಂಗ್ರಹವಾದಾಗ ಮೀನು ಹಿಡಿಯುತ್ತಾರೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬಾವಿ ನಿರ್ಮಿಸಿದರೂ ಸುತ್ತುಗೋಡೆ ನಿರ್ಮಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಪರಿಣಾಮವಾಗಿ, ಮಳೆಯಾದಾಗ ಮಣ್ಣು ಅದರೊಳಗೆ ಹರಿಯುತ್ತದೆ ಮತ್ತು ಕೆಳಭಾಗದಲ್ಲಿ ಸಂಗ್ರಹವಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ” ಈ ಪ್ರದೇಶಕ್ಕೆ ಪ್ರಸ್ತಾಪಿಸಲಾದ ವಿವಿಧ ಯೋಜನೆಗಳಿಗೆ ಸಾಕಷ್ಟು ಹಣ ಬಿಡುಗಡೆಯಾಗುತ್ತದೆ, ಆದರೆ ಅದು ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳ ಜೇಬು ಸೇರುತ್ತಿದೆ. ಹಾಗಾಗಿಯೇ ಬುಂದೇಲ್‌ಖಂಡದ ಸ್ಥಿತಿ ಸುಧಾರಿಸುತ್ತಿಲ್ಲ” ಎನ್ನುತ್ತಾರೆ ಸ್ಥಳೀಯರು.
ಆರ್‌ಟಿಐ ಕಾಯಿದೆಯಡಿಯಲ್ಲಿ ಲಭ್ಯವಾದ ದಾಖಲೆಗಳ ಪ್ರಕಾರ, ಉತ್ತರ ಪ್ರದೇಶದ ಬುಂದೇಲ್‌ಖಂಡ್ ಪ್ರದೇಶದಲ್ಲಿ ಯೋಜನೆಯ ಮೊದಲ ಹಂತದಲ್ಲಿ 156.78 ಕೋಟಿ ರೂ. ವೆಚ್ಚದಲ್ಲಿ ಒಟ್ಟು 8,098 ಬಾವಿಗಳನ್ನು ನಿರ್ಮಿಸಲಾಗಿದೆ. ಇದರೊಂದಿಗೆ ಪಂಪ್ ಸೆಟ್ ಮತ್ತು ಎಚ್‌ಡಿಪಿಇ ಪೈಪ್‌ಗಳ ವಿತರಣೆಗೆ 65 ಕೋಟಿ ರೂ ಬಳಸಲಾಗಿದೆ. ಒಟ್ಟಾರೆ ಒಂದು ಬಾವಿ ನಿರ್ಮಾಣಕ್ಕೆ ಸುಮಾರು 2.5 ಲಕ್ಷ ರೂ ವ್ಯಯಿಸಲಾಗಿದೆ.
ಆದರೆ ಅಧಿಕಾರಿಗಳು ಅಂತರ್ಜಲ ಇಲ್ಲದ ಜಾಗದಲ್ಲಿ ಬಾವಿ ನಿರ್ಮಿಸಿದ್ದಾರೆ. ಪರಿಣಾಮವಾಗಿ, ಬಾವಿಗಳು ವರ್ಷದ ಬಹುತೇಕ ಭಾಗ ಒಣಗಿರುತ್ತವೆ. ಮಳೆ ಬಂದು ವಬಾವಿಗಳಲ್ಲಿ ನೀರು ಸಂಗ್ರಹವಾದರೂ ಕೆಲವೇ ದಿನಗಳಲ್ಲಿ ಆರಿ ಹೋಗುತ್ತದೆ ಎಂದು ದೂರುತ್ತಾರೆ ಗ್ರಾಮಸ್ಥರು. ಝಾನ್ಸಿ ಮತ್ತು ಲಲಿತ್‌ಪುರದ ಅನೇಕ ಸ್ಥಳಗಳಲ್ಲಿ ನೀರಿನಲ್ಲಿ ಹೆಚ್ಚಿನ ನೈಟ್ರೇಟ್ ಅಂಶಗಳು ಇರುವ ಬಗ್ಗೆ ವರದಿಗಳಿವೆ, ಬಾವಿಗಳನ್ನು ಅಗೆಯುವಾಗ ಅಥವಾ ಆಳವಾಗಿಸುವಾಗ ಅಧಿಕಾರಿಗಳು ಈ ಮಾಹಿತಿಗೆ ಗಮನ ಕೊಡಲಿಲ್ಲ ಎನ್ನುತ್ತಾರೆ ಅವರು. ಉತ್ತರ ಪ್ರದೇಶ ಸರ್ಕಾರವು ಮಂಜೂರಾದ ಮೊತ್ತದ 18% ಅನ್ನು ಬಾವಿಗಳ ನಿರ್ಮಾಣ ಮತ್ತು ಆಳಗೊಳಿಸುವಿಕೆಗೆ ಮಾತ್ರ ಖರ್ಚು ಮಾಡಿದರೂ ಪರಿಸ್ಥಿತಿ ಬದಲಾಗಲಿಲ್ಲ.

ಸರ್ಕಾರ ನಿರ್ಮಿಸಿರುವ ಚೆಕ್ ಡ್ಯಾಂ ಗಳ ಸ್ಥಿತಿಯೂ ಇದೇ ಆಗಿದ್ದು ಅವುಗಳಲ್ಲಿ ನೀರು ಸಂಗ್ರಹವಾದವು ಆದರೆ ನದಿಯ ನೈಸರ್ಗಿಕ ಮೂಲಗಳು ಮುಚ್ಚಿದವು. ಅತಿ ಕಳಪೆ ಕಾಮಗಾರಿ ಹೊಂದಿದ್ದ ಡ್ಯಾಂ ಬಿರುಕು ಬಿಟ್ಟು ಮುರಿದು ಬಿದ್ದ ನಂತರ ಅಲ್ಲಿನ ಜನರಿಗೆ ಅತ್ತ ನದಿಯ ನೀರೂ ಇಲ್ಲ ಇತ್ತ ಡ್ಯಾಂ ಸಹ ಇಲ್ಲ ಎನ್ನುವಂತಾಯಿತು. NITI ಆಯೋಗವು 2019 ರ ತನ್ನ ವರದಿಯಲ್ಲಿ, ಈ ಚೆಕ್ ಡ್ಯಾಂಗಳಲ್ಲಿ ಅರ್ಧದಷ್ಟು ನೀರನ್ನು ಹೊಂದಿಲ್ಲ ಮತ್ತು ಆದ್ದರಿಂದ ರೈತರು ಇನ್ನೂ ಬೋರ್‌ವೆಲ್ ಅಥವಾ ಬಾವಿಗಳನ್ನು ಅವಲಂಬಿಸಿದ್ದಾರೆ ಎಂದು ಹೇಳಿತ್ತು.
ಉತ್ತರ ಪ್ರದೇಶ ಸರ್ಕಾರವು ಬುಂದೇಲ್‌ಖಂಡ್ ಪ್ಯಾಕೇಜ್‌ನಡಿಯಲ್ಲಿ ಹಂಚಿಕೆಯಾದ 353 ಕೋಟಿ ರೂ.ಗಳಲ್ಲಿ 17% ಕ್ಕಿಂತ ಹೆಚ್ಚು ಇಂತಹ ನೀರಾವರಿ ಯೋಜನೆಗಳಿಗೆ ಖರ್ಚು ಮಾಡಿದೆ. ಈ ಹಣದಲ್ಲಿ ಹೆಚ್ಚಿನ ಹಣವನ್ನು 41 ಕಾಲುವೆ ಸಂಬಂಧಿತ ಕಾಮಗಾರಿಗಳಿಗೆ ಖರ್ಚು ಮಾಡಲಾಗಿದೆ, ಇದರಲ್ಲಿ ನವೀಕರಣ, ಸಾಮರ್ಥ್ಯ ವಿಸ್ತರಣೆಗಾಗಿ ದುರಸ್ತಿ ಮತ್ತು ಅಗತ್ಯವಿರುವಲ್ಲಿ ಪುನರ್ನಿರ್ಮಾಣ ಸೇರಿವೆ. ಉತ್ತರ ಪ್ರದೇಶ ಸರ್ಕಾರ ಈ ಪ್ರದೇಶದಲ್ಲಿ 236 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿದೆ ಎಂದು ಸರ್ಕಾರಿ ದಾಖಲೆಗಳು ತೋರಿಸುತ್ತವೆ. ಇಷ್ಟು ಖರ್ಚು ಮಾಡಿದರೂ ಹಲವು ಕಾಲುವೆಗಳು ಧೂಳಿನಂತೆ ಒಣಗಿವೆ.
ಸರ್ಕಾರದ ದಾಖಲೆಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ಮೊದಲ ಹಂತದಲ್ಲಿ 2,725 ಹ್ಯಾಂಡ್ ಪಂಪ್‌ಗಳನ್ನು ಸ್ಥಾಪಿಸಲಾಗಿದೆ, ಇದಕ್ಕಾಗಿ ಸುಮಾರು 92 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಮತ್ತು ಕುಡಿಯುವ ನೀರು ಸರಬರಾಜಿಗಾಗಿ 12 ಪೈಪ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಎರಡನೇ ಹಂತದಲ್ಲಿ, ರಾಜ್ಯ ಸರ್ಕಾರವು ಈ ಕಾಮಗಾರಿಗಳಿಗೆ 234.08 ಕೋಟಿ ರೂ ಅನ್ನು ಬಿಡಿಗಡೆಗೊಳಿಸಿದೆ. ಮತ್ತೊಂದೆಡೆ, ಮಧ್ಯಪ್ರದೇಶದಲ್ಲಿ, ಮೊದಲ ಹಂತದಲ್ಲಿ 1,287 ಅಂತಹ ಯೋಜನೆಗಳನ್ನು 100 ಕೋಟಿ ರೂಪಾಯಿ ವೆಚ್ಚದಲ್ಲಿ ಜಾರಿಗೊಳಿಸಲಾಗಿದೆ, ಅದರಲ್ಲಿ 1,168 ಯೋಜನೆಗಳು ಕೊಳವೆ ಬಾವಿ ಆಧಾರಿತ ಮತ್ತು 119 ಯೋಜನೆಗಳು ಸಾಂಪ್ರದಾಯಿಕ ಬಾವಿಗಳನ್ನು ಒಳಗೊಂಡಿವೆ. ಎರಡನೇ ಹಂತದಲ್ಲಿ, ರಾಜ್ಯವು 252.48 ಕೋಟಿ ವೆಚ್ಚದ ಮೂರು ಯೋಜನೆಗಳಿಗೆ ಅನುಮೋದನೆ ನೀಡಿದೆ ಮತ್ತು ಇದನ್ನು ಸಾಮೂಹಿಕ ನೀರು ಸರಬರಾಜು ಯೋಜನೆ ಎಂದು ಕರೆಯಲಾಗುತ್ತದೆ.

ಇಷ್ಟೆಲ್ಲಾ ಯೋಜನೆ ಜಾರಿಗೊಳಿಸಿದ ನಂತರವೂ ಈ ಪ್ರದೇಶದ ಜನರ ಕಷ್ಟ ತಪ್ಪಿಲ್ಲ. ಇಲ್ಲಿನವರು ಕುಡಿಯುವ ನೀರಿಗಾಗಿ ಕಿ.ಮೀ ಗಟ್ಟಲೆ ನಡೆಯುವ ಪರಿಸ್ಥಿತಿ ಈಗಲೂ ಇದೆ. ಕೃಷಿ, ಜಾನುವಾರು ಸಹ ನೀರಿಲ್ಲದೆ ಪರಿತಪಿಸುತ್ತಿದೆ. ವಿವಿಧ ಸರ್ಕಾರಗಳು ಯೋಜಿಸಿದ ಯೋಜನೆಗಳು ಸರಿಯಾದ ಅನುಷ್ಠಾನಕ್ಕೆ ಬಂದಿದ್ದರೆ ಅಲ್ಲಿನ ನೀರಿನ ಬವಣೆ ಎಂದೋ ಮುಗಿಯುತ್ತಿತ್ತು. ಸರ್ಕಾರಗಳು ಅಲ್ಲಿನ ಸಮಸ್ಯೆಗೆ ಕಡಿಮೆ ಮಳೆ ಬೀಳುತ್ತಿರುವುದೇ ಕಾರಣ ಎನ್ನುತ್ತಿವೆ. ಆದರೆ ಸರ್ಕಾರಿ ದಾಖಲೆಗಳ ಪ್ರಕಾರವೇ ಬುಂದೇಲ್‌ಖಂಡ ಪ್ರದೇಶದಲ್ಲಿ 2016ರಲ್ಲಿ ವಾಡಿಕೆಗಿಂತ 7% ಅಧಿಕ ಮಳೆಯಾಗಿದೆ, 2018ರಲ್ಲಿ ಸರಾಸರಿ ಮಳೆ ಸುರಿದಿದೆ. 2020ರಲ್ಲೂ ಸರಾಸರಿಗಿಂತ ಹೆಚ್ಚು ಮಳೆಯಾಗಿದೆ.
ಒಂದೆಡೆ ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆ ಉಚಿತ ಸ್ಮಾರ್ಟ್ ಫೋನ್, ಸ್ಕೂಟಿ ನೀಡುವಂತಹ ಭರಪೂರ ಭರವಸೆ ನೀಡುವ ರಾಜಕೀಯ ಪಕ್ಷಗಳು ಮತ್ತೊಂದೆಡೆ ಜನರಿಗೆ ಮೂಲಭೂತ ಅವಶ್ಯಕತೆಗಳನ್ನೇ ಒದಗಿಸಲು ಅಸಮರ್ಥವಾಗುತ್ತಿವೆ. ನಿರಂತರ ಹನ್ನೊಂದು ವರ್ಷಗಳಿಂದ ಜಾರಿಯಲ್ಲಿರುವ ಪ್ಯಾಕೇಜಿಂದ, ಸಾವಿರೂರು ಕೋಟಿ ರೂಪಾಯಿ ವ್ಯಯಿಸಿರುವ ಯೋಜನೆಯಿಂದಲೂ ಜನರಿಗೆ ಉಪಕಾರವಾಗುತ್ತಿಲ್ಲ ಅಂದರೆ ಅದನ್ನು ಸರ್ಕಾರಗಳ ಅಸಮರ್ಥತೆ ಅಂತಲೇ ಹೇಳಬೇಕಾಗುತ್ತದೆ. ಕೋಮು ಧ್ರುವೀಕರಣ, ವಿಭಜನಾ ನೀತಿ, ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟುವುದರಿಂದ ಮತ ಬೇಟೆ ಸಾಧ್ಯ ಎಂದು ನಂಬಿಕೊಂಡಿರುವ ರಾಜಕೀಯ ಪಕ್ಷಗಳು ಇರುವವರೆಗೂ, ಅವರ ನಂಬಿಕೆಗಳನ್ನು ಹುಸಿಗೊಳಿಸದ ಮತದಾರರಿರುವವರೆಗೂ ಅಭಿವೃದ್ಧಿ ಹಿನ್ನೆಲೆಗೆ ಸರಿದು ಧರ್ಮ, ಧಾರ್ಮಿಕತೆಗಳು ಅಧಿಕಾರದೆಡೆಗಿನ ಮೆಟ್ಟಿಲುಗಳಾಗಿಯೇ ಉಳಿದು ಬಿಡುತ್ತವೆ ಎನ್ನುವುದಕ್ಕೆ ಬುಂದೇಲ್‌ಖಂಡವೇ ಸಾಕ್ಷಿ.