ಅತ್ತ ಕರೋನಾದ ಎರಡನೇ ಅಲೆಯು ಸುನಾಮಿಯಾಗಿ ಅಪ್ಪಳಿಸುತ್ತಿತ್ತು. ಇತ್ತ ಕರೋನಾ ಸುನಾಮಿಯ ತೀವ್ರತೆಯ ಅನುಭವವು ಅರಿವಿಗೆ ಬರುತ್ತಿದ್ದರೂ ಎಗ್ಗಿಲ್ಲದೆ ದೇಶದ ಪಂಚರಾಜ್ಯಗಳ ಬೀದಿ ಬೀದಿಗಳಲ್ಲಿ ಚುನಾವಣೆ ಸಮಾವೇಶಗಳು, ರೋಡ್ ಶೋಗಳು ಗಳು ಎಗ್ಗಿಲ್ಲದೆ ನಡೆಯುತ್ತಿದ್ದವು!
ಮಾತ್ರವಲ್ಲ, ದೇಶದ ಹಲವು ರಾಜ್ಯಗಳಲ್ಲಿ ವಿಧಾನಸಭೆ ಉಪಚುನಾವಣೆ, ಜಿಪಂ, ತಾಪಂ, ಗ್ರಾಪಂಗಳಂಥ ಸ್ಥಳೀಯಾಡಳಿತದ ಸ್ಥಾನಗಳಿಗೂ ಚುನಾವಣೆಯ ಸಡಗರಗಳಲ್ಲಿ ಮಂದಿ ಸಂಭ್ರಮಿಸುತ್ತಿದ್ದರು. ಇನ್ನೊಂದೆಡೆ ದೇಶದ ನಗರ, ಹಳ್ಳಿಗಳಲ್ಲಿ ಕರೋನಾ ಬಾಲ ಬಿಚ್ಚುತ್ತಾ ಅಮಾಯಕರನ್ನು ಬಲಿ ತೆಗೆದುಕೊಳ್ಳುವುದನ್ನು ದಿನೇದಿನೇ ಸದ್ದಿಲ್ಲದೆ ಹೆಚ್ಚಿಸತೊಡಗಿತ್ತು!
ಕೇರಳ, ಪಶ್ವಿಮ ಬಂಗಾಳ, ಅಸ್ಸಾಂ, ತಮಿಳುನಾಡು ಹಾಗೂ ಪುದುಚೆರಿಗಳಲ್ಲಿ ಫೆಬ್ರವರಿ 26ರಂದು ಚುನಾವಣೆ ಘೋಷಣೆ ಮಾಡಿದಾಗ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇತ್ತು ಎಂಬುದು ಚುನಾವಣಾ ಆಯೋಗದ ವಾದ. ಕರೋನಾ ಅದಾಗಲೇ ಮೊದಲ ಅಲೆಯ ಹೆಜ್ಜೆ ಗುರುತು ಅಳಿಸಿದ್ದು ನಿಜವಾದರೂ, ಜಗತ್ತಿನ ಹಲವು ದೇಶಗಳಲ್ಲಿ ಎರಡನೇ ಅಲೆಯ ಅಬ್ಬರಕ್ಕೆ ಆ ದೇಶಗಳು ಕಂಗಾಲಾಗುತ್ತಿರುವ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿತ್ತುದುದೂ ಅಷ್ಟೇ ಸತ್ಯ. ಕೇಂದ್ರ ಸರಕಾರ, ರಾಜ್ಯ ಸರಕಾರಗಳ ಆಡಳಿತ ಪಕ್ಷಗಳ ಒತ್ತಡ ಏನಿದ್ದರೂ ಸ್ವಾಯತ್ತ ಸಂಸ್ಥೆಯಾಗಿರುವ ಭಾರತದ ಚುನಾವಣಾ ಆಯೋಗ ಚುನಾವಣೆ ಪ್ರಕ್ರಿಯೆ ಘೋಷಿಸುವ ಮುನ್ನ ಒಂದಿಷ್ಟು ವಿಚಾರ ಮಾಡಿದ್ದರೆ ಈಗ ಆಗುತ್ತಿರುವ ಅನಾಹುತಗಳನ್ನು ತಪ್ಪಿಸಬಹುದಿತ್ತು. ನಾವು ಚುನಾವಣೆ ಘೋಷಿಸುವಾಗ ಪರಿಸ್ಥಿತಿ ಹೀಗಿರಲಿಲ್ಲ ಎಂದು ಆಯೋಗ ಸಮಜಾಯಿಷಿ ನೀಡುತ್ತಿದೆ. ಆದರೆ ಆಗ ಅರಿವಿಗೆ ಬಾರದಿದ್ದರೂ ಕರೋನಾ ಎರಡನೇ ಅಲೆಯ ರುದ್ರತಾಂಡವ ಕಂಡ ಮೇಲಾದರೂ ಆಯೋಗ ಎಚ್ಚೆತ್ತುಕೊಳ್ಳಬೇಕಿತ್ತು. ಅದೂ ಆಗಲಿಲ್ಲ. ಕರೋನಾ ಸ್ಫೋಟದ ಸುದ್ದಿಗಳು ಪುಂಖಾನಪುಂಖವಾಗಿ ಮಾಧ್ಯಮಗಳಲ್ಲಿ ಬರುತ್ತಿದ್ದರೂ ಅದೇಕೋ ಆಯೋಗ ಎಚ್ಚೆತ್ತುಕೊಳ್ಳಲಿಲ್ಲ. ಅದಕ್ಕೂ ತನಗೂ ಏನೇನೂ ಸಂಬಂಧವಿಲ್ಲವೆಂಬಂತೆ ಚುನಾವಣೆ ಪ್ರಕ್ರಿಯೆಗಳು ಸಾಂಗೋಪಾಂಗವಾಗಿ ನಡೆಯುತ್ತಲೇ ಇದ್ದವು.
ನೀವೇನು ಅನ್ಯಗ್ರಹದಲ್ಲಿದ್ದೀರಾ ಎಂದ ಕೋರ್ಟ್:
ದೇಶವು ಮಾರಕ ಕೋವಿಡ್ 19 ರ ಎರಡನೇ ಅಲೆಯ ವಿರುದ್ಧ ಹೋರಾಡುತ್ತಿದ್ದರೆ, ದೇಶದ ಚುನಾವಣಾ ಆಯೋಗ ರಾಜಕೀಯ ಸಮಾವೇಶಗಳಿಗೆ ಅವಕಾಶ ನೀಡಿದ್ದಕ್ಕೆ ಸುಪ್ರೀಂ ಕೋರ್ಟ್, ದೇಶದ ಹಲವು ಹೈಕೋರ್ಟ್ ಗಳು ಗರಂ ಆದಮೇಲೆ ಇದೀಗ ಭಾರತದ ಚುನಾವಣಾ ಆಯೋಗ ಮೆತ್ತಗಾಗಲಾರಂಭಿಸಿದೆ.
ಮದ್ರಾಸ್ ಹೈಕೋರ್ಟ್ ಅಂತೂ, ಚುನಾವಣಾ ಆಯೋಗವೇ ಜನರ ಸಾವಿಗೆ ಕಾರಣ, ನಿಮ್ಮ ವಿರುದ್ಧ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಬಾರದೇಕೆ ಎಂದು ಆಕ್ರೋಶ ವ್ಯಕ್ತಪಡಿಸಿತ್ತು. ಸ್ಪಷ್ಟೀಕರಣ ನೀಡುವ ಪ್ರಯತ್ನವನ್ನು ಆಯೋಗದ ಪರ ವಕೀಲರು ಮಾಡಿದಾಗ, ಸಾಂಕ್ರಾಮಿಕ ಪಿಡುಗು ಈ ಪರಿ ಕಾಡುತ್ತಿರುವಾಗ ನೀವೇಕೆ ಬಹಿರಂಗ ಚುನಾವಣಾ ಪ್ರಚಾರಕ್ಕೆ ಅನುಮತಿ ನೀಡಿದ್ದಿರಿ? ನೀವೇನು ಅನ್ಯಗ್ರಹದಲ್ಲಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿತ್ತು.
‘ಕೊಲೆ ಯತ್ನ’ದ ಮಾತು ಪ್ರಚಾರವಾಗದಂತೆ ತಡೆ ಕೇಳಿದ ಆಯೋಗ:
ಚುನಾವಣೆ ನಡೆದ ರಾಜ್ಯಗಳಲ್ಲಿ ಮತದಾನ ನಡೆಯದ ರಾಜ್ಯಗಳಿಗೆ ಹೋಲಿಸಿದರೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿರುವುದಕ್ಕೆ ಚುನಾವಣಾ ಪ್ರಚಾರಗಳೇ ಕಾರಣ ಎಂಬುದನ್ನು ಯಾವ ಅಂಶವೂ ಸಾಬೀತುಪಡಿಸಿಲ್ಲ ಎಂದು ಮದ್ರಾಸ್ ಹೈಕೋರ್ಟ್ ನಲ್ಲಿ ಚುನಾವಣಾ ಆಯೋಗ ವಾದಿಸಿತ್ತು.
ಈಗಿನ ಎರಡನೇ ಅಲೆಯ ಪರಿಸ್ಥಿತಿಗೆ ನೀವೇ ಹೊಣೆಗಾರರು, ನಿಮ್ಮ ವಿರುದ್ಧ ಕೊಲೆ ಪ್ರಕರಣವೇಕೆ ದಾಖಲಿಸಬಾರದು ಎಂದು ಕೋರ್ಟ್ ಹೇಳಿದ್ದನ್ನು ಮಾಧ್ಯಮಗಳು ವರದಿ ಮಾಡಿದ್ದವು. “ಇದರಿಂದ ಚುನಾವಣಾ ಆಯೋಗದ ಹೆಸರಿಗೆ ಚ್ಯುತಿ ಬಂದಿದೆ. ಹೈಕೋರ್ಟ್ ನ ಈ ಮೌಖಿಕ ವರದಿಯನ್ನು ಮಾಧ್ಯಮಗಳು ಪ್ರಸಾರ ಮಾಡಿದ ನಂತರ, ಪಶ್ಚಿಮ ಬಂಗಾಳದಲ್ಲಿ ಉಪ ಪೊಲೀಸ್ ಆಯುಕ್ತರ ವಿರುದ್ಧ ಪೊಲೀಸ್ ಅಧಿಕಾರಿಯೊಬ್ಬರು ಕೊಲೆ ಆರೋಪದ ದೂರು ದಾಖಲಿಸಿದ್ದಾರೆ” ಎಂದು ಮದ್ರಾಸ್ ಹೈಕೋರ್ಟ್ ನಲ್ಲಿ ಬೇಗುದಿ ತೋಡಿಕೊಂಡಿದ್ದ ಚುನಾವಣಾ ಆಯೋಗ, ಹೈಕೋರ್ಟ್ ನ ಮೌಖಿಕ ವರದಿಗಳನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ನಿರ್ದೇಶನ ನೀಡಬೇಕು ಎಂದು ಕೋರಿಕೊಂಡಿತ್ತು.
ಆದರೆ ಆಯೋಗದ ಪರ ರಾಕೇಶ್ ದ್ವಿವೇದಿ ಸಲ್ಲಿಸಿದ್ದ ಮನವಿಯಲ್ಲಿ, ಯಾವುದನ್ನೂ ಸಂವೇದನಶೀಲಗೊಳಿಸದಂತೆ ಮಾಧ್ಯಮಗಳಿಗೆ ಸೂಚನೆ ನೀಡಬೇಕು ಎಂಬ ಕೋರಿಕೆಯನ್ನು ಸಲ್ಲಿಸಲಾಗಿತ್ತು. ಅದರೆ ಹೈಕೋರ್ಟ್ ಅದನ್ನು ಪುರಸ್ಕರಿಸದೆ, ವಜಾ ಮಾಡಿದೆ.
ಜತೆಗೆ ದೇಶದಲ್ಲಿ ಎರಡನೇ ಕರೋನಾ ಅಲೆ ತಡೆಯಲು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡಿಲ್ಲ ಎಂದು ಅತೃಪ್ತಿಯನ್ನೂ ವ್ಯಕ್ತಪಡಿಸಿದೆ.
ಪ.ಬಂಗಾಳದಲ್ಲಿ ಕೊನೆಗಾದರೂ ಎಚ್ಚೆತ್ತುಕೊಳ್ಳಬಹುದಿತ್ತು:
ಸಾಂಕ್ರಾಮಿಕ ಪಿಡುಗಿನ ನಡುವೆ ಪ್ರಾಣಕ್ಕಿಂತ ಬೆಲೆ ಬಾಳುವಂಥದ್ದೇನಿಲ್ಲ ಎಂದು ಗೊತ್ತಿದ್ದರೂ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳ ಚುನಾವಣೆ ಘೋಷಿಸಿತ್ತು. ಇದಕ್ಕೆ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹಿತ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದಾಗ, ಕಳೆದ ವಿಧಾನಸಭೆ ಚುನಾವಣೆ ವೇಳೆ ಅಲ್ಲಿ ಏಳು ಹಂತಗಳ ಚುನಾವಣೆ ನಡೆದಿತ್ತು ಎಂದು ಸಮಜಾಯಿಷಿ ನೀಡಿತ್ತು. ಅಲ್ಲದೆ ಕರೋನಾದ ವಿರುದ್ಧ ಹೋರಾಟಕ್ಕೆ ಚುನಾವಣೆ ಸಿಬ್ಬಂದಿಗೆ ತರಬೇತಿ ನೀಡಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವ ಭರವಸೆ ನೀಡಿತ್ತು.
ಬೇರೆ ಸಂದರ್ಭಗಳಲ್ಲಾದರೆ ಸರಿ ಎನ್ನಬಹುದಿತ್ತೇನೋ. ಕರೋನಾ ಮಾಹಾಮಾರಿ ಎರಡನೇ ಅಲೆಯಾಗಿ ಅಪ್ಪಳಿಸಿ, ಜನರ ಜೀವಗಳನ್ನು ಆಪೋಷನ ತೆಗೆದುಕೊಳ್ಳುತ್ತಿರುವುದನ್ನು ಕಂಡಮೇಲಾದರೂ ಆಯೋಗ ಎಚ್ಚೆತ್ತುಕೊಂಡಿದ್ದರೆ ಉತ್ತಮವಿತ್ತು. ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ, ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ಬಹುತೇಕ ಎಲ್ಲ ಪ್ರತಿಪಕ್ಷಗಳು ಕೊನೆಗೆ ಉಳಿದ ನಾಲ್ಕು ಹಂತಗಳನ್ನಾದರೂ ಒಗ್ಗೂಡಿಸಿ ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಸುವಂತೆ ಒತ್ತಡ ಹೇರಿದ್ದವು. ಆದರೆ ಬಿಜೆಪಿ ಮಾತ್ರ ನಾಲ್ಕೂ ಹಂತಗಳಲ್ಲೇ ನಡೆಯಲಿ ಎಂದು ಪಟ್ಟುಹಿಡಿದಿತ್ತು. ಆಗಲಾದರೂ ಚುನಾವಣಾ ಆಯೋಗ ಎಚ್ಚೆತ್ತುಕೊಂಡಿದ್ದರೆ ದೊಡ್ಡ ಮಟ್ಟದ ಹಾನಿಯನ್ನು ತಡೆಯಲು ಸಾಧ್ಯವಾಗುತ್ತಿತ್ತೇನೋ.
ವಿಜಯೋತ್ಸವಕ್ಕೆ ನಿಷೇಧ ಹೇರಿದ ಆಯೋಗ:
ಇನ್ನೇನು ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೇ 2ರಂದು ಪಂಚ ರಾಜ್ಯಗಳಿಗೆ ನಡೆದ ಮತದಾನದ ಫಲಿತಾಂಶ ಹೊರಬೀಳಲಿದೆ. ಮದ್ರಾಸ್ ಹೈಕೋರ್ಟ್ ನ ಎಚ್ಚರಿಕೆ ಫಲ ನೀಡುತ್ತಿದ್ದು, ಚುನಾವಣಾ ಆಯೋಗ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಫಲಿತಾಂಶದ ಪ್ರಕಟವಾದ ಬಳಿಕ ಗೆಲುವು ಸಾಧಿಸಿದ ಪಕ್ಷಗಳು ವಿಜಯೋತ್ಸವ ಆಚರಿಸುವಂತಿಲ್ಲ. ಗೆದ್ದವರು ಗೆಲುವಿನ ನೆಪ ಇಟ್ಟುಕೊಂಡು ಗುಂಪುಗೂಡುವುದಾಗಲಿ, ಮೆರವಣಿಗೆ ಮಾಡುವುದಾಗಲಿ ಮಾಡುವಂತಿಲ್ಲ ಎಂದು ಆಯೋಗ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ!
ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳು ತಮ್ಮ ಗೆಲುವಿನ ಪ್ರಮಾಣಪತ್ರ ಸ್ವೀಕರಿಸಲು ತೆರಳುವಾಗ ಅವರ ಜತೆ ಇರಲು ಎರಡು ಜನಕ್ಕೆ ಮಾತ್ರ ಅವಕಾಶವಿದೆ ಎಂದು ಆಯೋಗ ಖಡಕ್ಕಾಗಿ ಸೂಚಿಸಿದೆ.
ಶಿಕ್ಷಕರಿಂದ ಮತ ಎಣಿಕೆ ಬಹಿಷ್ಕರಿಸುವ ಬೆದರಿಕೆ!
ಚುನಾವಣೆ ಪ್ರಚಾರಗಳ ವೇಳೆ ವಿವಿಧ ಪಕ್ಷಗಳ ಅನೇಕ ನಾಯಕರು, ಅಭ್ಯರ್ಥಿಗಳು ಕರೋನಾ ಸೋಂಕಿತರಾಗಿ ಆಸ್ಪತ್ರೆ ಸೇರಿದ್ದರು. ಅವರಲ್ಲಿ ಕೆಲವರು ದುರ್ದೈವವಶಾತ್ ಇಹಲೋಕವನ್ನೂ ತ್ಯಜಿಸಿದರು. ಇನ್ನು ಪ್ರಚಾರ ಸಭೆಗಳಲ್ಲಿ ಭಾಗಿಯಾಗಿ ಸೋಂಕಿತರಾದ ನಾನಾ ಪಕ್ಷಗಳ ನೂರಾರು ಕಾರ್ಯಕರ್ತರು, ಬೆಂಬಲಿಗರು, ಜನಸಾಮಾನ್ಯರು ಕೂಡ ಕರೋನಾದ ವಿಕಟ ಅಟ್ಟಹಾಸದಿಂದ ಕಂಗಾಲಾಗಿ ನಲುಗಿದರು.
ಇನ್ನೊಂದೆಡೆ ಮತದಾನ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳಾಗಿ, ಸಿಬ್ಬಂದಿಗಳಾಗಿ ಭಾಗವಹಿಸಿದವರದ್ದು ಮತ್ತೊಂದು ಕತೆ. ಉತ್ತರ ಪ್ರದೇಶದಲ್ಲಿ ನಡೆದ ನಾಲ್ಕನೇ ಹಾಗೂ ಕೊನೆಯ ಹಂತದ ಮತದಾನ ನಡೆಯುವಷ್ಟರಲ್ಲಿ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿದ ಹಲವಾರು ಶಿಕ್ಷಕರು ಕೋವಿಡ್ ಗೆ ಬಲಿಯಾಗಿದ್ದಾರೆ ಎಂದು ಅಲ್ಲಿನ ಶಿಕ್ಷಕರ ಸಂಘ ದೂರಿದೆ. ಅಲ್ಲದೆ, ಮತ ಎಣಿಕೆ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ತಾವು ಕರ್ತವ್ಯಕ್ಕೆ ಹಾಜರಾಗದೆ ಬಹಿಷ್ಕರಿಸುವುದಾಗಿ ಎಚ್ಚರಿಕೆಯನ್ನೂ ನೀಡಿದೆ.
ಏಪ್ರಿಲ್ 15 ರಿಂದ ಏಪ್ರಿಲ್ 28 ರವರೆಗೆ ರಾಯ್ ಬರೇಲಿ ಜಿಲ್ಲೆಯೊಂದರಲ್ಲೇ ಕೋವಿಡ್ 19 ಗೆ 28 ಶಿಕ್ಷಕ-ಶಿಕ್ಷಕಿಯರು ಬಲಿಯಾಗಿದ್ದಾರೆ. ಏಪ್ರಿಲ್26 ರವರೆಗೆ ಪ್ರತಾಪ್ ಗಢದಲ್ಲಿ 11 ಶಿಕ್ಷಕ-ಶಿಕ್ಷಕಿಯರು, ಅದೇ ರೀತಿ ಪ್ರಯಾಗರಾಜ್ ನಲ್ಲಿ 27 ಶಿಕ್ಷಕ-ಶಿಕ್ಷಕಿಯರ ಪ್ರಾಣವನ್ನು ಕೋವಿಡ್ ಮಾಹಾಮಾರಿ ಕಸಿದುಕೊಂಡಿದೆ ಎಂದು ರಾಷ್ಟ್ರೀಯ ಶಿಕ್ಷಕ ಮಹಾಸಂಘದ ವೀರೇಂದ್ರ ಮಿಶ್ರಾ ಎಂಬವರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಕೋವಿಡ್ ಪಾಸಿಟಿವ್ ಆಗಿರುವ ಕಾರಣಕ್ಕೆ ತಮ್ಮನ್ನು ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಿ ಎಂದು ನಮ್ಮ ಅನೇಕ ಶಿಕ್ಷಕರು ಮನವಿ ಮಾಡಿಕೊಂಡಿದ್ದರು. ಆದರೆ ಯಾರೂ ಕಿವಿಗೊಡಲಿಲ್ಲ. ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವವರಿಗೆ ಕನಿಷ್ಠ ಲಸಿಕೆಯಾದರೂ ಹಾಕಿಸಿ ಎಂದು ಮಾರ್ಚ್ನಲ್ಲೇ ನಾವು ಸರಕಾರಕ್ಕೆ ಮನವಿ ಮಾಡಿದ್ದರೂ ಆದಕ್ಕೂ ಸೊಪ್ಪು ಹಾಕಿರಲಿಲ್ಲ ಎಂದು ರಾಷ್ಟ್ರೀಯ ಶಿಕ್ಷಕ ಸಂಘದ, ಬೇಸಿಕ್ ಟೀಚರ್ಸ್ ಬಣದ ವಕ್ತಾರ ಬ್ರಜೇಶ್ ಶ್ರೀವಾಸ್ತವ ಅವರು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಆದರೆ ಗುರುವಾರ ಮುಕ್ತಾಯಗೊಂಡ ಚುನಾವಣೆಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿಲ್ಲ ಎಂಬ ಶಿಕ್ಷಕರ ಸಂಘದವರ ಆರೋಪವನ್ನು ರಾಜ್ಯ ಚುನಾವಣಾ ಆಯೋಗ ಮತ್ತು ಸರಕಾರ ತಳ್ಳಿ ಹಾಕಿದೆ. ಈ ನಡುವೆ ಮಧ್ಯಪ್ರವೇಶಿಸಿರುವ ಅಲಹಾಬಾದ್ ಹೈಕೋರ್ಟ್ , ಸರಕಾರಕ್ಕೆ ಕೆಲವು ನಿರ್ದೇಶನಗಳನ್ನು ನೀಡಿದೆ. ಅದನ್ನು ಪಾಲಿಸಿರುವ ಅಲ್ಲಿನ ರಾಜ್ಯ ಸರಕಾರ ಚುನಾವಣಾ ಕರ್ತವ್ಯದಿಂದಾಗಿ ಆಗಿದೆ ಎನ್ನಲಾದ ಕೋವಿಡ್ ಸಾವುಗಳ ಬಗ್ಗೆ ಗಮನಹರಿಸಿ ಪರಿಶೀಲಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳಿಗೆ ಸೂಚಿಸಿದೆ.
ಈ ನಡುವೆ ಮೇ 2 ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಎಲ್ಲರ ಗಮನವೂ ಇದೀಗ ಅತ್ತ ತಿರುಗಿದೆ. ಎಲ್ಲರಿಗೂ ಮತ ಎಣಿಕೆ, ಫಲಿತಾಂಶದತ್ತ ಗಮನವಿದೆಯೇ ಹೊರತು, ಅದರಲ್ಲಿ ತೊಡಗಿಸಿಕೊಂಡವರ ಮನೆಗಳಲ್ಲಿನ ಕಣ್ಣೀರು ಕಾಣುತ್ತಿಲ್ಲ.