ಇದೇ ಜುಲೈ ೧೬ ರ ‘ದಿ ವೈರ್’ ವೆಬ್ ಜರ್ನಲ್ಲಿನಲ್ಲಿ ಹಿರಿಯ ಅಂಕಣಕಾರ ಪ್ರೇಮ್ ಶಂಕರ್ ಝಾ ಅವರು ಮೋದಿ ಸರಕಾರದ ಅಗ್ನಿಪತ್ ಯೋಜನೆಯ ಗುಪ್ತ ಕಾರ್ಯಸೂಚಿಯನ್ನು ಹೊರಗೆಡವಿದ್ದಾರೆ. ರಕ್ಷಣಾ ಇಲಾಖೆಯ ಈ ಹೊಸ ನೇಮಕಾತಿ ಯೋಜನೆಯು ನಮ್ಮ ಸೇನೆಯ ಸ್ವರೂಪವನ್ನು ನಿಧಾನವಾಗಿ ಹಾಗು ಆಮೂಗ್ರಹವಾಗಿ ಬದಲಾಯಿಸಿ ಇಂದಿನ ಆಡಳಿತ ಪಕ್ಷವನ್ನು ನಿಯಂತ್ರಿಸುವ ವೈದಿಕಶಾಹಿ ಪರಿವಾರದ ರಾಜಕೀಯ ಕಾರ್ಯಸೂಚಿಯನ್ನು ಮತ್ತಷ್ಟು ವಿಸ್ತರಿಸಲು ಸುಶಿಕ್ಷಿತ ‘ರಾಜ್ಯೇತರ ನಟರನ್ನು’ ಒದಗಿಸುತ್ತದೆ ಎಂದು ಝಾ ಅವರು ಅಭಿಪ್ರಾಯ ಪಟ್ಟಿದ್ದಾರೆ. ಇಡೀ ಯೋಜನೆಯ ಒಳಸುಳಿಗಳನ್ನು ಹಾಗು ದೇಶದ ರಕ್ಷಣಾ ವ್ಯವಸ್ಥೆಯನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಳ್ಳುವ ಸಂಘದ ಗುಪ್ತ ಅಜೆಂಡಾಗಳನ್ನು ಝಾ ಅವರು ಬಿಚ್ಚಿಟ್ಟಿದ್ದಾರೆ. ಮೋದಿಯವರು ತಮ್ಮ ಆಡಳಿತಾವಧಿಯಲ್ಲಿ ಎಸಗಿದ ಅನೇಕ ಅವಘಡಗಳನ್ನು ಝಾ ಅವರು ವಿಶ್ಲೇಷಿಸಿದ್ದಾರೆ.
ಎಂಟು ವರ್ಷಗಳ ಸುದೀರ್ಘ ಆಡಳಿತಾವಧಿಯಲ್ಲಿ ನರೇಂದ್ರ ಮೋದಿ ಅವರು ಅಧಿಕಾರದ ಮೇಲಿನ ತಮ್ಮ ಕಪಿಹಿಡಿತವನ್ನು ಬಲಪಡಿಸಲು ನೆಚ್ಚಿನ ಸಾಧನವಾಗಿ ಇಂತಹ ಅನೇಕ ಅಚ್ಚರಿಯ ನಿರ್ಧಾರಗಳನ್ನು ಘೋಸಿಸುತ್ತಿದ್ದಾರೆ. ಸೆಪ್ಟೆಂಬರ್ ೨೦೨೦ ರಲ್ಲಿ ಕೃಷಿ ಕಾನೂನಿಗೆ ತಿದ್ದುಪಡಿ ಮಾಡುವ ಮೂಲಕ ದೇಶದ ಬೃಹತ್ ಆಹಾರಧಾನ್ಯಗಳ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿರುವ ಕಳ್ಳೋದ್ಯಮಿಗಳಿಗೆ ಸಹಾಯ ಮಾಡಲು ಹೊಂಚು ಹಾಕಿದ್ದರು. ಈಗ ಅಗ್ನಿಪಥ್ ಯೋಜನೆ ಘೋಷಿಸುವ ಮೂಲಕ ಮತ್ತೆ ಅಂತದೆ ಒಂದು ಹುನ್ನಾರವನ್ನು ಹೊರಗೆಡವಿದ್ದಾರೆ. ಇದು ರಕ್ಷಣಾ ಕ್ಷೆತ್ರದ ಗುಣಾತ್ಮಕ ಸುಧಾರಣಾ ಕ್ರಮವೆಂದು ಮೋದಿ ಸರಕಾರ ಹೇಳಿಕೊಳ್ಳುತ್ತಿದೆ. ದೇಶದ ರಕ್ಷಣಾ ಕ್ಷೇತ್ರವು ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಲು ಅಡಚಣಿಯಾಗಿರುವ ಸೈನಿಕರ ದುಬಾರಿ ಪಿಂಚಣಿ ಸೌಲಭ್ಯವನ್ನು ಮಿತಿಗೊಳಿಸುವುದು ಅಗತ್ಯವಾಗಿದೆ ಎಂದು ಮೋದಿ ಬೆಂಬಲಿಗರು ಹೇಳುತ್ತಿದ್ದಾರೆ. ೭೫% ಅಗ್ನಿವೀರರು ತಮ್ಮ ಸೇವೆಯ ನಂತರ ಶಿಸ್ತು ಮತ್ತು ರಾಷ್ಟ್ರೀಯ ಉದ್ದೇಶದ ಪ್ರಜ್ಞೆಯಿಂದ ನಾಗರಿಕ ಜೀವನಕ್ಕೆ ಮರಳುತ್ತಾರೆˌ ಇದರಿಂದ ದೇಶಕ್ಕೆ ಲಾಭವಾಗಲಿದೆ ಎಂಬ ಬಿಜೆಪಿಯ ವಾದವನ್ನು ಝಾ ಅವರು ವಿವರಿದ್ದಾರೆ.
ಹಾಗಿದ್ದಲ್ಲಿ, ದೇಶದ ಯುವಶಕ್ತಿಯ ಪ್ರತಿಭಟನೆಯ ಬಿರುಗಾಳಿ ಏಕೆ ಹುಟ್ಟಿಕೊಂಡಿತು? ಯೋಜನೆಯ ಲಾಭ ಪಡೆಯಬೇಕಾದ ದೇಶದ ಯುವಕರೇಕೆ ಅದನ್ನು ವಿರೋಧಿಸುತ್ತಿದ್ದಾರೆ? ಬಿಹಾರ, ಯುಪಿ, ಮಧ್ಯಪ್ರದೇಶ, ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ನಿರಂತರವಾದ ಪ್ರತಿಭಟನೆಯು ಏಕೆ ಹೆಚ್ಚು ಉಗ್ರವಾಗಿದೆ? ಈ ಪ್ರತಿಭಟನೆಯು ನಿಖರವಾಗಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೇ ಏಕೆ ಕಾಣಿಸಿಕೊಂಡಿದೆ ಎಂದು ಝಾ ಅವರು ಪ್ರಶ್ನಿಸಿದ್ದಾರೆ. ಸರಕಾರವು ಕ್ಷಿಪ್ರ ಅನುಕ್ರಮವಾಗಿ, ಈ ವರ್ಷ ೪೬,೦೦೦ ಅಗ್ನಿವೀರರನ್ನು ಸೈನ್ಯಕ್ಕೆ ತಕ್ಷಣಕ್ಕೆ ಸೇರ್ಪಡೆ ಮಾಡಲಿದ್ದು ಈ ಕ್ರಮವನ್ನು ನೌಕಾಪಡೆ ಮತ್ತು ವಾಯುಪಡೆಗಳಿಗೂ ವಿಸ್ತರಿಸುವುದಾಗಿ ಘೋಷಿಸಿದೆ. ಆನಂತರ ಇದನ್ನು ಕೇಂದ್ರ ಸಶಸ್ತ್ರ ಪಡೆಗಳಾದ ಗಡಿಭದ್ರತಾ ಪಡೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳಿಗೂ ವಿಸ್ತರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸಶಸ್ತ್ರ ಪಡೆಗಳಲ್ಲಿ ಇದರಿಂದ ಅಗ್ನಿವೀರರ ವಾರ್ಷಿಕ ನೇಮಕಾತಿ ದ್ವಿಗುಣಗೊಳ್ಳತ್ತದೆ ಎನ್ನುವ ಬಗ್ಗೆ ಝಾ ಅವರು ಗಮನ ಸೆಳೆದಿದ್ದಾರೆ.
ಆದರೆ ಈ ಯೋಜನೆಯ ಬಗ್ಗೆ ಯುವಕರ ಮನಸ್ಸಿನಲ್ಲಿ ಎದ್ದಿರುವ ಸಂಶಯದ ಪ್ರಶ್ನೆಗಳಿಗೆ ಸರಕಾರದಿಂದ ಸಮಂಜಸ ಉತ್ತರ ಸಿಕ್ಕಿಲ್ಲ. ಆ ಕಾರಣದಿಂದಲೆ ಪ್ರತಿಭಟನೆಗಳು ಇನ್ನೂ ಮುಂದುವರಿದಿವೆˌ ಏಕೆಂದರೆˌ ಯುವಕರು ತಮ್ಮ ಮುಂದಿನ ಭವಿಷ್ಯ ಏನಾಗುತ್ತದೆ? ಪೋಷಕರು ಎಷ್ಟು ದಿನ ನಮ್ಮನ್ನು ಸಲಹುತ್ತಾರೆ? ತಾವು ಮದುವೆಯಾಗಲು ಸಾಧ್ಯವೆ? ಮತ್ತು ಹೀಗಾದರೆ ತಾವು ಬದುಕುವುದು ಹೇಗೆ ಎಂಬ ಪ್ರಶ್ನೆಗಳನ್ನು ಸರಕಾರದ ಮುಂದಿಟ್ಟಿರುವ ಬಗ್ಗೆ ಝಾ ಅವರು ಚರ್ಚಿಸಿದ್ದಾರೆ. ಅಗ್ನಿಪಥ್ ಯೋಜನೆಯ ಘೋಷಣೆ ಹುಟ್ಟುಹಾಕಿರುವ ಪ್ರತಿಭಟನೆಯು ಯುವಕರಲ್ಲಿನ ಕೋಪದಿಂದ ಹುಟ್ಟಿದ್ದಲ್ಲ ಆದರೆ ಹತಾಶೆಯಿಂದ ಹುಟ್ಟಿದೆ ಎನ್ನುತ್ತಾರೆ ಝಾ ಅವರು. ಯುವಕರ ಹತಾಶೆಯು ಯೋಜನೆಯ ತಾತ್ಕಾಲಿಕತೆಯಿಂದ ಹುಟ್ಟಿಕೊಂಡಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ನೇಮಕಾತಿ ವ್ಯವಸ್ಥೆಯಲ್ಲಿ, ಯುವಕರು ಸೈನ್ಯಕ್ಕೆ ಸೇರಿದರೆ ಸುರಕ್ಷಿತ ಜೀವನೋಪಾಯಕ್ಕೆ ನೆರವಾಗುವುದಲ್ಲದೆ ಆತ ಹಾಗು ಆತನ ಕುಟುಂಬದ ಭವಿಷ್ಯದ ಬಗ್ಗೆ ಆತಂಕ ಕೊನೆಗೊಳ್ಳುತ್ತದೆ. ಅಗ್ನಿಪಥ್ ಯೋಜನೆಯು ಈ ಸುರಕ್ಷಿತ ಭವಿಷ್ಯವನ್ನು ನಾಶಪಡಿಸುವುದಲ್ಲದೆ, ಹೊಸದಾಗಿ ಇನ್ನಷ್ಟು ತೀವ್ರವಾದ ಅಭದ್ರತೆಗೆ ನಾಂದಿಯಾಗಲಿದೆ ಎನ್ನುತ್ತಾರೆ ಝಾ ಅವರು. ನಾಲ್ಕು ವರ್ಷಗಳವರೆಗೆ ತಾತ್ಕಾಲಿಕ ನೇಮಕಾತಿಯು ಪ್ರತಿಯೊಬ್ಬ ಯುವಕರಲ್ಲಿ ನಿಶ್ಯಬ್ದ ಭಯವನ್ನು ಹುಟ್ಟಿಸಿದೆ. ಅಗ್ನಿವೀರರನ್ನು ನಾಲ್ಕು ವರ್ಷಗಳ ನಂತರ ಮನೆಗೆ ಕಳಿಸುವಾಗ ಅವರ ಕೈಗೆ ಸುಮಾರು ೧೫ ಲಕ್ಷ ರೂ.ಗಳ ಪರಿಹಾರ ನೀಡುವುದನ್ನು ಹೊರತುಪಡಿಸಿ ಸರ್ಕಾರವು ಯುವಕರ ಭವಿಷ್ಯದ ಸುರಕ್ಷತೆಗೆ ಯಾವುದೇ ಉತ್ತರವನ್ನು ನೀಡುತ್ತಿಲ್ಲ ಎನ್ನುತ್ತಾರೆ ಝಾ ಅವರು.
ಸೈನ್ಯದೊಳಗೆ, ಅಗ್ನಿವೀರರನ್ನು ಮಧ್ಯವರ್ತಿಗಳಾಗಿ ಗುರುತಿಸಲಾಗುತ್ತದೆ. ಭಾರತೀಯ ಸೇನೆಯು ನೂರಾರು ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ತಮ್ಮ ಪೂರ್ವಜರ ಸಾಮ್ರಾಜ್ಯಗಳಿಂದ ಗುರುತಿಸುವ ಘಟಕಗಳಿಂದ ಕೂಡಿದೆ ಮತ್ತು ಆ ಘಟಕಗಳ ಮೂಲಕವೆ ಬ್ರಿಟಿಷರು ಭಾರತೀಯ ಸೈನ್ಯವನ್ನು ರಚಿಸಿದ್ದಾರೆ. ಭಾರತದ ಸೈನಿಕರು ಯುದ್ಧಕ್ಕೆ ಹೋದಾಗ ತಾವು ಸೇರಿರುವ ಘಟಕಗಳ ಹೆಸರಿನಲ್ಲಿ ಹೆಮ್ಮೆಯಿಂದ ಗುರುತಿಸಿಕೊಳ್ಳುತ್ತಾರೆ. ಈ ಘಟಕಗಳು ಅವರ ಗುರುತನ್ನು ಪ್ರದರ್ಶಿಸುತ್ತವೆ, ಅವುಗಳಲ್ಲಿ ಹಲವು ಜನಾಂಗೀಯ-ರಾಷ್ಟ್ರೀಯ ಗುಂಪುಗಳಾದ ರಜಪೂತರು, ಸಿಖ್ಖರು, ಮರಾಠರು, ಗೂರ್ಖಾಗಳು, ಜಮ್ಮು ಮತ್ತು ಕಾಶ್ಮೀರ, ಮದರಾಸು ಇತ್ಯಾದಿ ರೆಜಿಮೆಂಟ್ ಗಳೆಂದು ಹೆಸರಾಗಿವೆ. ಮದರಾಸು ರೆಜಿಮೆಂಟ್ ತುಂಬಾ ಹಳೆಯದಾಗಿದ್ದು ಅದು ತನ್ನ ಹೆಸರನ್ನು ಮೀರಿ ಗುರುತಿಸಿಕೊಂಡಿದೆ. ಆದರೆ ಅದರ ಸಂಪ್ರದಾಯಗಳು ಎಷ್ಟು ಪ್ರಬಲವಾಗಿವೆ ಎಂದರೆ ಅದನ್ನು ಬದಲಾಯಿಸಲು ಯಾರೂ ಧೈರ್ಯ ಮಾಡಿಲ್ಲ. ಈಗ ಅಸ್ತಿತ್ವದಲ್ಲಿರುವ ನಮ್ಮ ಹಿರಿಯರು ರೂಪಿಸಿರುವ ನೇಮಕಾತಿ ವ್ಯವಸ್ಥೆಯಲ್ಲಿ ಪ್ರಾಥಮಿಕವಾಗಿ ಪ್ರಾಂತೀಯತೆಯ ಸೊಗಡನ್ನು ಎಚ್ಚರಿಕೆಯಿಂದ ಸಂರಕ್ಷಿಸಿಕೊಂಡು ಬರಲಾಗಿದೆ ಎನ್ನುವುದು ಝಾ ಅವರ ವಾದವಾಗಿದೆ.
ಮೋದಿ ಸರಕಾರ ತರಲು ಹೊರಟಿರುವ ಸೇನಾ ನೇಮಕಾತಿ ವ್ಯವಸ್ಥೆಯ ಬಗ್ಗೆ ಬಿಜೆಪಿ ಬಹಿರಂಗವಾಗಿ ಹೆಮ್ಮೆಪಡುತ್ತದೆ, ಏಕೆಂದರೆ ಅದರ ಅಗ್ನಿವೀರರನ್ನು ಮುಂದೊಂದು ದಿನ ಸಂಘದ ಸ್ವಯಂಸೇವಕರಾಗಿ ಸೇರಿಸಿಕೊಳ್ಳುವ ಸಾಧ್ಯತೆಗಳಿವೆ. ಅದಕ್ಕೆಂದೆ ಈ ಪ್ರಸ್ತಾಪಿತ ನೇಮಕಾತಿಯನ್ನು ನೌಕಾಪಡೆˌ ವಾಯುಪಡೆ ಮತ್ತು ಭೂಸೇನೆಯ ಸೈನಿಕರು ವಿರೋಧಿಸುತ್ತಿದ್ದಾರೆ. ಈಗಿರುವ ಸೈನ್ಯದ ಜವಾನರು ತಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಹೆಚ್ಚು ಪ್ರಜ್ಞಾಪೂರ್ವಕವಾಗಿ ಹೆಮ್ಮೆ ಪಡುತ್ತಾರೆ, ಅವರು ಭವ್ಯವಾದ ಹಾಗು ಅಮೂರ್ತವಾದ “ಭಾರತ” ದ ಕಾವಲುಗಾರರಾಗಿದ್ದಾರೆ. ಅಂತಹ ಸೈನ್ಯಕ್ಕೆ ನರೇಂದ್ರ ಮೋದಿಯವರ ಸರಕಾರವು ಅಗ್ನಿವೀರರನ್ನು ಸೇರಿಸಲು ಬಯಸುತ್ತದೆ. ಇದೊಂದು ಆತ್ಮಹತ್ಯಾಕಾರಕ ನಡೆಯಾಗಿದೆ. ಈ ತಾತ್ಕಾಲಿಕ ಅಗ್ನಿವೀರರನ್ನು ಈಗ ಅಸ್ತಿತ್ವದಲ್ಲಿರುವ ರೆಜಿಮೆಂಟ್ಗಳು ಸುಲಭವಾಗಿ ಸ್ವೀಕರಿಸುವುದಿಲ್ಲ. ಏಕೆಂದರೆ ಈಗಾಗಲೆ ತಾತ್ಕಾಲಿಕ ಅಗ್ನಿವೀರರ ಅಂಗಿಯ ತೋಳುಗಳ ಮೇಲೆ ವಿಶಿಷ್ಟವಾದ ಬ್ಯಾಡ್ಜ್ಗಳನ್ನು ಧರಿಸುವಂತೆ ಮಾಡಲು ಉದ್ದೇಶಿಸಿದೆ. ಆದ್ದರಿಂದ, ನಿವೃತ್ತ ಸೇನಾ ಅಧಿಕಾರಿಗಳು ಈ ಅಘಾತಕಾರಿ ಯೋಜನೆಯನ್ನು ಸರ್ವಾನುಮತದಿಂದ ವಿರೋಧಿಸುತ್ತಿದ್ದಾರೆ ಎನ್ನುತ್ತಾರೆ ಝಾ ಅವರು.
ತನ್ನ ರಕ್ಷಣಾ ವ್ಯವಸ್ಥೆಯಲ್ಲಿ ಮೂಲಭೂತವಾಗಿ ಇಂತಹ ಆಮೂಲಾಗ್ರ ಬದಲಾವಣೆ ತರುವುದರ ಉದ್ದೇಶವೇನು ಎಂದು ಚಿಂತಿಸಿದಾಗ ಅಗ್ನಿಪಥ್ ಯೋಜನೆಯ ಸಮರ್ಥಕರ ಪ್ರಕಾರ, ಏರುತ್ತಿರುವ ಸೇನೆಯ ಪಿಂಚಣಿ ವೆಚ್ಚವನ್ನು ತಗ್ಗಿಸುವುದು ಎನ್ನಲಾಗುತ್ತಿದೆ. ಈಗಿನ ನಿವೃತ್ತ ಸೈನಿಕರ ಪಿಂಚಣಿ ವೆಚ್ಚವು ೨೦೨೨-೨೩ ನೇ ಆರ್ಥಿಕ ವರ್ಷದ ಸಂಪೂರ್ಣ ರಕ್ಷಣಾ ಆಯವ್ಯಯಕ್ಕಿಂತ ಅರ್ಧದಷ್ಟು ಹೆಚ್ಚಾಗಿದೆ ಎನ್ನುತ್ತಾರೆ ಮೋದಿ ಸಮರ್ಥಕ ನಕಲಿ ದೇಶಭಕ್ತರು. ನಿವೃತ್ತ ಸೈನಿಕರ ಪಿಂಚಣಿ ಅಸಮಾನ್ಯವಾಗಿ ಬೆಳೆಯುತ್ತಿವೆಯಂತೆ. ಅದಕ್ಕೆ ಕಾರಣ ಉಳಿದ ನಿವೃತ್ತ ಸರಕಾರಿ ನೌಕರರಂತೆ ಸೇನಾ ಯೋಧರ ಆಯುಷ್ಯ ಕೂಡ ವೃದ್ಧಿಸಿದೆ ಎನ್ನುವುದು ಮೋದಿ ಸಮರ್ಥಕರ ವಾದ. ಆದರೆ ಈ ವಿತಂಡವಾದವು ಅಗ್ನಿಪಥ್ ಸಮರ್ಥನೆಯನ್ನು ಮನವರಿಕೆ ಮಾಡಿಸಲು ಸೋಲುತ್ತಿದೆ. ಸೇನೆಯ ಪಿಂಚಣಿ ಬಜೆಟ್ ೨೦೧೦-೧೧ ಮತ್ತು ೨೦೨೦-೨೧ ರ ನಡುವೆ ಪ್ರಸ್ತುತ ಬೆಲೆಗಳ ಅನುಸಾರ ದೇಶದ ಜಿಡಿಪಿ ಬೆಳವಣಿಗೆಯ ೨.೬೭ ಪಟ್ಟು ಹೆಚ್ಚಳಕ್ಕೆ ವಿರುದ್ಧವಾಗಿ ೩.೩ ಪಟ್ಟು ಹೆಚ್ಚಾಗಿದೆಯಂತೆ. ಸೈನಿಕರ ಈ ಪಿಂಚಣಿ ಭಾರದಿಂದ ದೇಶ ಭರಿಸಲಾಗದ ಅಸಾಹಯಕೆ ಹೊಂದಿದೆ ಎನ್ನುವ ಸಂಗತಿಯೆ ಅಸಂಬದ್ಧವಾಗಿದೆ ಎನ್ನುತ್ತಾರೆ ಝಾ ಅವರು.
ಮುಂದುವರೆಯುವುದು…..