
ಸಚಿವ ಸತೀಶ್ ಜಾರಕಿಹೊಳಿ ಸಿಎಂ ಆಗಲು ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವ್ರು, ಮುಂದೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕರೆ ಜೆಡಿಎಸ್ ಬೆಂಬಲ ಕೇಳಿರಬಹುದು. ಇರುವ 18 ಶಾಸಕರ ಬೆಂಬಲವನ್ನ ಸತೀಶ್ ಜಾರಕಿಹೊಳಿ ಕೇಳಿರಬಹುದು. ರಾಜಕಾರಣದಲ್ಲಿ ಏನುಬೇಕಾದರೂ ಆಗಬಹುದು. ಸದ್ಯದ ಪರಿಸ್ಥಿತಿ ನೋಡಿದ್ರೆ ಅವರು ಬೇರೆ ಕಾರಣಕ್ಕೆ ಕುಮಾರಸ್ವಾಮಿ ಅವರನ್ನ ಭೇಡಿ ಮಾಡಿಲ್ಲ. ಮಾಜಿ ಪ್ರಧಾನಿ, ಕೇಂದ್ರ ಸಚಿವರನ್ನ ಭೇಟಿ ಮಾಡಿದ್ದಾರೆ ಅಂದ್ರೆ ಅದಕ್ಕೆ ಇದೇ ಕಾರಣ ಎಂದು ಹೇಳಿದ್ದಾರೆ.

ಒಂದು ವೇಳೆ ಜೆಡಿಎಸ್ ಪಕ್ಷ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಲು ಬೆಂಬಲ ನೀಡಿದರೂ ನಾನು ತಟಸ್ಥನಾಗಿರುತ್ತೇನೆ. ಈ ವಿಚಾರದಲ್ಲಿ ಮಾತ್ರ ಅಲ್ಲ ನಾನು ತಟಸ್ಥ.. ತಟಸ್ಥ.. ತಟಸ್ಥ ಎಂದಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿರುವ ಜೆಡಿಎಸ್ ಹಿರಿಯ ಶಾಸಕ ಜಿ.ಟಿ ದೇವೇಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ಸ್ಥಾನ ಕೊಡಲಿಲ್ಲ ಎನ್ನುವ ಕಾರಣಕ್ಕೆ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ.

ದೆಹಲಿಯಲ್ಲಿ ಸತೀಶ್ ಜಾರಕಿಹೊಳಿ ಹಾಗೂ ಕುಮಾರಸ್ವಾಮಿ ಭೇಟಿ ವಿಚಾರದ ಬಗ್ಗೆ ಚಿಕ್ಕಮಗಳೂರಿನಲ್ಲಿ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ನಡೆಯುತ್ತಿದೆ.. ಏನೇನೋ ಉದ್ದೇಶ ಇಟ್ಟುಕೊಂಡೇ ಸಚಿವ ಸತೀಶ್ ಜಾರಕಿಹೊಳಿ, ಕುಮಾರಸ್ವಾಮಿ ಹಾಗೂ ಮಾಜಿ ಪ್ರರ್ಧಆನಿ ಹೆಚ್.ಡಿ ದೇವೇಗೌಡರನ್ನು ಭೇಟಿಯಾಗಿದ್ದಾರೆ ಎನ್ನುವ ಮೂಲಕ, ಈ ಭೇಟಿ ಸಾಮಾನ್ಯ ಭೇಟಿಯಲ್ಲ ಅನ್ನೋದನ್ನು ಹೇಳಿದ್ದಾರೆ..
ಚಿಕ್ಕಮಗಳೂರು ನಗರದಲ್ಲಿ ಸಿ.ಟಿ ರವಿ ಮಾತನಾಡಿ ಯಾವ ಕಾರಣಕ್ಕೆ ಭೇಟಿಯಾಗಿದ್ದಾರೆ ಎಂದು ಅವರೇ ಸ್ಪಷ್ಟಪಡಿಸಬೇಕು ಬೇರೆ ಬೇರೆ ರಾಜಕೀಯ ಪಕ್ಷಕ್ಕೆ ಸೇರಿದವರು ಇದ್ದೇವೆ. ನಾವು ಶತ್ರುಗಳಲ್ಲ, ಒಬ್ಬ ರಾಜ್ಯ ಸಂಪುಟದ ಸಚಿವ, ಮತ್ತೊಬ್ಬ ಕೇಂದ್ರ ಸಚಿವರನ್ನ ಭೇಟಿ ಮಾಡೋದು ಎಲ್ಲವನ್ನೂ ರಾಜಕೀಯ ದೃಷ್ಟಿಯಿಂದ ನೋಡಬಾರದು. ರಾಜ್ಯದ ಹಿತ ದೃಷ್ಟಿಯಿಂದಲೂ ನೋಡಬೇಕು. ಅವರ ಭೇಟಿ ರಾಜ್ಯದ ಕಾರಣಕ್ಕೂ ಇರಬಹುದು. ರಾಜಕೀಯ ಕಾರಣಕ್ಕಾಗಿ ಅಂದುಕೊಳ್ಳಬಾರದು. ಯಾವ ಕಾರಣಕ್ಕೆ ಎಂದು ಅವರೇ ಸ್ವಷ್ಟ ಪಡಿಸಿದ್ರೆ ಸ್ಪಷ್ಟವಾಗುತ್ತೆ.

ಸಚಿವ ಸತೀಶ್ ಜಾರಕಿಹೊಳಿ ಹೆಚ್ಡಿಕೆ ಭೇಟಿ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ರಾಜುಗೌಡ, ಸತೀಶ್ ಜಾರಕಿಹೊಳಿ ಸಿಎಂ ಖುರ್ಚಿ ಮೇಲೆ ಕಣ್ಣಿಟ್ಟಿದ್ರೆ 100% ಸಿಎಂ ಆಗ್ತಾರೆ. ಸತೀಶ್ ಜಾರಕಿಹೊಳಿ ಸುಮ್ಮಸುಮ್ಮನೆ ಯಾರನ್ನೂ ಭೇಟಿ ಆಗಲ್ಲ. ಏನೋ ಪ್ಲಾನ್ ಇಟ್ಟಕೊಂಡೇ ಕುಮಾರಣ್ಣನ ಭೇಟಿಯಾಗಿದ್ದಾರೆ. ಸತೀಶ್ ಅವ್ರು ಪ್ಲ್ಯಾನ್ ಹೇಳಲ್ಲ, ಸಕ್ಸಸ್ ಮಾಡಿ ತೋರಿಸ್ತಾರೆ ಅಂತಾ ಹೇಳಿದ್ದಾರೆ.







