
ಸಂತೋಷ್ ಜೀ ಮಾತು ಕೇಳಿ ಕೆಟ್ಟರಾ ಬಸನಗೌಡ ಪಾಟೀಲ್ ಯತ್ನಾಳ್…? ಎಂದು ಎಕ್ಸ್ ಮೂಲಕ ಕಾಂಗ್ರೆಸ್ ವ್ಯಂಗ್ಯ ಮಾಡಿದೆ. ಈಗ ‘ಸಂತೋಷ’ವಾಯಿತೇ..? ಆ ಜೀ, ಈ ಜೀ ಗಳ ಮಾತುಕೇಳಿ ರಾಜಕೀಯ ಜೀವನ ಹಾಳು ಮಾಡಿಕೊಂಡ ಯತ್ನಾಳ್ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ ಕಾಂಗ್ರೆಸ್. ಅಂದರೆ ಬಿ.ಎಲ್ ಸಂತೋಷ್ ತಾಳಕ್ಕೆ ತಕ್ಕಂತೆ ಕುಣಿದು ರಾಜಕೀಯ ಜೀವನ ಹಾಳು ಮಾಡಿಕೊಂಡರು ಅನ್ನೋ ಅರ್ಥದಲ್ಲಿ ಎಕ್ಸ್ ಪೋಸ್ಟ್ ಮಾಡಿದೆ.

ಯತ್ನಾಳ್ ಉಚ್ಚಾಟನೆ ವಿಚಾರವಾಗಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಅದು ಅವರ ಪಕ್ಷದ ಆಂತರಿಕ ವಿಚಾರ. ನಾನು ಅದರ ಬಗ್ಗೆ ಏನೂ ಹೇಳಲ್ಲ. ಮುತ್ತು ರತ್ನಗಳನ್ನ ಒಳಗಾದರೂ ಇಟ್ಕೊಳ್ಳಲಿ, ಈಚೆಯಾದರೂ ಬೀಸಾಕಲಿ. ಕೆಲವರು ಶೋಭೆಗೆ ಓಲೆ ಹಾಕಿಕೊಳ್ತಾರೆ. ಕೆಲವರು ಶೋಭೆಗೆ ಮೂಗ್ ಬೊಟ್ಟುಹಾಕೊತಾರೆ. ಕೆಲವರು ಶೋಬೆಗೆ ಹಣೆಬೊಟ್ಟು ಇಟ್ಕೊತ್ತಾರೆ. ಹಾಗೆ ಕೆಲವರನ್ನ ಪಕ್ಷದಲ್ಲಿ ಇಟ್ಟುಕೊಂಡಿರೋದೆ ಭೂಷಣ ಎಂದು ವ್ಯಂಗ್ಯವಾಡಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ 6 ವರ್ಷ ಉಚ್ಚಾಟನೆ ವಿಚಾರವಾಗಗಿ ಚಿಕ್ಕಮಗಳೂರಲ್ಲಿ ಬೈರತಿ ಸುರೇಶ್ ಮಾತನಾಡಿದ್ದಾರೆ. ಯತ್ನಾಳ್ ಒಬ್ಬರಿಗೇ ಮಾಡಿಬಿಟ್ರಾ..? ಪಕ್ಷದಿಂದಲೇ ಉಚ್ಚಾಟನೆ ಮಾಡಿಬಿಟ್ರಾ ಎಂದಿದ್ದಾರೆ ಸಚಿವ ಬೈರತಿ ಸುರೇಶ್. ತರೀಕೆರೆ ಪಟ್ಟಣದಲ್ಲಿ ಮಾತನಾಡಿದ ಸುರೇಶ್, ಬಿಜೆಪಿಯೊಳಗೆ ಆಂತರಿಕ ಜಗಳ ಬಹಳ ಇತ್ತು. ಅದರಲ್ಲಿ ಒಂದತ್ತು ಗುಂಪಿತ್ತು. ಹತ್ತು ಗುಂಪಲ್ಲಿ ಯಾರು ಹೋಗ್ತಾರೋ, ಯಾರು ಕೆಳಗಡೆ ಹೋಗ್ತಾರೋ ಆ ದೇವರಿಗೇ ಗೊತ್ತು ಎಂದಿದ್ದಾರೆ.

ಹುಬ್ಬಳ್ಳಿಯಲ್ಲಿ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಮಾತನಾಡಿ, ಯತ್ನಾಳ್ ಉಚ್ಚಾಟನೆ ಎಲ್ಲರಿಗೂ ಎಚ್ಚರಿಕೆಯ ಗಂಟೆ, ಬಿಜೆಪಿ ಎಂದಿಗೂ ಆಶಿಸ್ತನ್ನು ಸಹಿಸಲ್ಲ. ಅಶಿಸ್ತಿನ ಕಾರಣಕ್ಕೆ ಬಸನಗೌಡ ಪಾಟೀಲ ಯತ್ನಾಳ್ ರನ್ನು ಉಚ್ಚಾಟನೆ ಮಾಡಲಾಗಿದೆ. ಹೀಗೆ ಆಗಬಾರದಿತ್ತು, ಆಗಿದೆ. ಇದು ಉಳಿದೆಲ್ಲರಿಗೂ ಪಾಠ. ಇದು ಎಲ್ಲರಿಗೂ ಎಚ್ಚರಿಕೆ ಗಂಟೆ. ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತರ ಅವಶ್ಯಕತೆ ಇದೆ. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ಯತ್ನಳ್ ಪದೇ ಪದೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು. ಪಕ್ಷಕ್ಕೆ ಯಾರೂ ಅನಿವಾರ್ಯ ಅಲ್ಲ ಎಂದಿದ್ದಾರೆ.
ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರಿಗೆ ಗೊತ್ತಿಲ್ಲದೆ ಉಚ್ಚಾಟನೆ ಮಾಡಿದ್ದಾರೆ. ದುಷ್ಟ ಶಕ್ತಿಗಳು ಈ ಕೆಲಸ ಮಾಡಿದ್ದಾರೆ. ಯತ್ನಾಳ್ ಅವರೇ ಮುಂದೆ ರಾಜ್ಯದ ಚುಕ್ಕಾಣಿ ಹಿಡಿಯುತ್ತಾರೆ ಎಂದು ಉಚ್ಚಾಟನೆ ಮಾಡಿದ್ದಾರೆ. ತಮ್ಮ ಕಾಲಿನ ಮೇಲೆ ತಾವೆ ಕಲ್ಲು ಹಾಕಿಕೋಳ್ಳುವ ಕೆಲಸ ಮಾಡಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಿದವರೇ ಹೀಗೆ ಮಾಡಿದ್ದಾರೆ. ದುಷ್ಟರ ವಿರುದ್ಧ ಪ್ರತಿಭಟನೆ ಮಾಡುವಂತೆ ಸ್ವಾಮಿಜಿ ಕರೆ ನೀಡಿದ್ದಾರೆ.