ಬೆಂಗಳೂರು : ಕರ್ನಾಟಕ ಅಭಿವೃದ್ಧಿ ಆಗಬೇಕು ಅಂದರೆ ಮೋದಿ ಆಶೀರ್ವಾದ ಇರಬೇಕು ಎಂಬ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಹೇಳಿಕೆ ತೀವ್ರ ವಿರೋಧಕ್ಕೆ ಗ್ರಾಸವಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಟ್ವೀಟ್ ಮೂಲಕ ಜೆಪಿ ನಡ್ಡಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜೆಪಿ ನಡ್ಡಾ ಅವರೇ, ತೆರಿಗೆ ಹಂಚಿಕೆಯ ತಾರತಮ್ಯ ನೀತಿಯಲ್ಲಿ ಕರ್ನಾಟಕ ಅಂದಾಜು ಒಂದು ಲಕ್ಷ ಕೋಟಿ ರೂಪಾಯಿ ಕಳೆದುಕೊಂಡದ್ದು, ಮೋದಿಯವರ ಆಶೀರ್ವಾದವೇ ಶಾಪವೇ? ಎಂದು ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.
ಕನ್ನಡಿಗರು ಕೇಂದ್ರಕ್ಕೆ ನೀಡುವ ಪ್ರತಿ ಒಂದು ರೂಪಾಯಿ ತೆರಿಗೆಯಲ್ಲಿ ಹದಿನೈದು ಪೈಸೆ ಮಾತ್ರ ವಾಪಸು ನೀಡುವುದು, ಮೋದಿಯವರ ಆಶೀರ್ವಾದವೇ ಶಾಪವೇ? ಕೇಂದ್ರ ಸರ್ಕಾರದ ಅನುದಾನ ಕಡಿತದಿಂದಾಗಿ ರಾಜ್ಯ ಸರ್ಕಾರ ಮಾಡಿಕೊಂಡ ಸಾಲ ರೂ.2.4.0 ಲಕ್ಷ ಕೋಟಿಗಳಿಂದ ರೂ.5.60 ಲಕ್ಷ ಕೋಟಿಗೆ ಏರಿಕೆಯಾಗಿದ್ದು ಮತ್ತು ಪ್ರತಿಯೊಬ್ಬ ಕನ್ನಡಿಗನ ತಲೆಮೇಲೆ ರೂ.86,000 ಸಾಲದ ಹೊರೆ ಬಿದ್ದಿರುವುದು ಮೋದಿ ಆಶೀರ್ವಾದವೇ? ಶಾಪವೇ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.