ಬಿಹಾರದಲ್ಲಿ ಹಿಡಿತ ಸಾಧಿಸಲು ಬಿಜೆಪಿ ಮತ್ತು ಜನಾತದಳ ಸಂಯುಕ್ತ ಮೈತ್ರಿ ನಡುವೆ ಬಿರುಕು ಮೂಡಿಸಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶಾಸಕರ ತುರ್ತು ಸಭೆ ಕರೆದಿದ್ದು, ಬಿಜೆಪಿ ಸಂಬಂಧ ಕಡಿದುಕೊಳ್ಳುವ ಬಗ್ಗೆ ನಾಳೆ ಅಂತಿಮ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ.
ಜನತಾದಳ ಸಂಯುಕ್ತ ಪಕ್ಷದ ಶಾಸಕರೊಬ್ಬರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸಿದೆ ಎಂದು ಹೇಳಲಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಅಧಿಕಾರ ಹಿಡಿಯುವ ಪ್ರಯತ್ನಗಳನ್ನು ಬಿಜೆಪಿ ಆರಂಭಿಸಿದೆ ಎನ್ನಲಾಗಿದೆ.
2017ರಿಂದ ಬಿಜೆಪಿ ಮತ್ತು ನಿತೀಶ್ ಕುಮಾರ್ ಜೊತೆಯಾದ ನಂತರ ಹಲವಾರು ಬಾರಿ ಭಿನ್ನಾಭಿಪ್ರಾಯಗಳು ಆರಂಭವಾಗಿದ್ದವು. ಅದರಲ್ಲೂ ನಿತೀಶ್ ಕುಮಾರ್ ನೇರವಾಗಿ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿ ಮೈತ್ರಿ ಮುರಿದುಕೊಳ್ಳುವ ಎಚ್ಚರಿಕೆ ನೀಡಿದಾಗ ಸ್ವತಃ ಪ್ರಧಾನಿ ನರೇಂದ್ರ ಮೋದಿ ಒಂದೇ ವೇದಿಕೆಯಲ್ಲಿ ನಿತೀಶ್ ಕುಮಾರ್ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಸಂಧಾನ ಮಾಡಿದ್ದರು.
ತಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಪ್ರಯತ್ನ ಅಲ್ಲದೇ ಮುಖ್ಯಮಂತ್ರಿಯಾಗಿ ತಮ್ಮನ್ನು ದುರ್ಬಲಗೊಳಿಸು ಪ್ರಯತ್ನದಲ್ಲಿ ಬಿಜೆಪಿ ತೊಡಗಿದೆ ಎಂದು ನಿತೀಶ್ ಕುಮಾರ್ ಎರಡು ಗಂಭೀರ ಆರೋಪ ಮಾಡಿದ್ದಾರೆ.
2020ರಲ್ಲಿ ನಿತೀಶ್ ಕುಮಾರ್ ಅವರನ್ನು ದುರ್ಬಲಗೊಳಿಸಲು ಬಿಜೆಪಿ ಚಿರಾಗ್ ಮಾದರಿ ರಣತಂತ್ರ ರೂಪಿಸಿದ್ದು, 243 ವಿಧಾನಸಭಾ ಸ್ಥಾನಗಳ ಪೈಕಿ ಜನತಾದಳ ಸಂಯುಕ್ತ ಕೇವಲ 43 ಸ್ಥಾನ ಮಾತ್ರ ಗೆದ್ದುಕೊಂಡಿತ್ತು ಎಂದು ಪಕ್ಷದ ರಾಜ್ಯಾಧ್ಯಕ್ಷ ಲಾಲನ್ ಸಿಂಗ್ ಆರೋಪಿಸಿದ್ದಾರೆ.
ಇತ್ತೀಚೆಗೆ ಬಿಹಾರಕ್ಕೆ ಭೇಟಿ ನೀಡಿದ ವೇಳೆ ಮುಂಬರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಆದರೆ ಮತದಾನದ ನಂತರ ಸಂಖ್ಯೆ ಬಲ ಅನುಸರಿಸಿ ತಂತ್ರಗಾರಿಕೆ ಬದಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.