ಭಾರತೀಯರು ನೀಡಿದ ಅಮೋಘ ಪ್ರದರ್ಶನದಿಂದ ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಂನಲ್ಲಿ ಮುಕ್ತಾಯಗೊಂಡ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 4ನೇ ಸ್ಥಾನದೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿದೆ.
ಕ್ರೀಡಾಕೂಟದ ಅಂತಿಮ ದಿನವಾದ ಸೋಮವಾರ ಭಾರತ ಬ್ಯಾಡ್ಮಿಂಟನ್ ವಿಭಾಗದಲ್ಲಿ ಹ್ಯಾಟ್ರಿಕ್ ಚಿನ್ನದ ಪದಕ ಗೆದ್ದರೆ, ಟೇಬಲ್ ಟೆನಿಸ್ ನಲ್ಲಿ ಅಜಂತಾ ಶರತ್ ಕಮಲ್ 1 ಚಿನ್ನ ಹಾಗೂ ಹಾಕಿಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭರ್ಜರಿಯಾಗಿ ಅಭಿಯಾನ ಅಂತ್ಯಗೊಳಿಸಿದರು. 2002ರಲ್ಲಿ ಇದೇ ಇಂಗ್ಲೆಂಡ್ ನಲ್ಲಿ ನಡೆದ ಟೂರ್ನಿಯಲ್ಲಿ ಭಾರತ 30 ಚಿನ್ನ, 22 ಬೆಳ್ಳಿ, 17 ಕಂಚು ಸೇರಿದಂತೆ 69 ಪದಕದೊಂದಿಗೆ 4ನೇ ಸ್ಥಾನ ಗಳಿಸಿತ್ತು.
ಭಾರತ ಟೂರ್ನಿಯಲ್ಲಿ 22 ಚಿನ್ನ, 16 ಬೆಳ್ಳಿ, 23 ಕಂಚು ಸೇರಿದಂತೆ 61 ಪದಕಗಳೊಂದಿಗೆ 4ನೇ ಸ್ಥಾನ ಪಡೆಯಿತು. ಆಸ್ಟ್ರೇಲಿಯಾ 66 ಚಿನ್ನ, 57 ಬೆಳ್ಳಿ, 54 ಕಂಚು ಸೇರಿದಂತೆ ಒಟ್ಟಾರೆ 177 ಪದಕಗಳೊಂದಿಗೆ ಅಗ್ರಸ್ಥಾನಿಯಾಗಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಆತಿಥೇಯ ಇಂಗ್ಲೆಂಡ್ 56 ಚಿನ್ನ, 64 ಬೆಳ್ಳಿ, 53 ಕಂಚು ಸೇರಿದಂತೆ 173 ಪದಕಗಳೊಂದಿಗೆ 2ನೇ ಸ್ಥಾನ ಅಲಂಕರಿಸಿದರೆ, ಕೆನಡಾ 26 ಚಿನ್ನ, 32 ಬೆಳ್ಳಿ, 34 ಕಂಚು ಸೇರಿದಂತೆ 60 ಪದಕದೊಂದಿಗೆ ಮೂರನೇ ಸ್ಥಾನ ಪಡೆಯಿತು. ನ್ಯೂಜಿಲೆಂಡ್ 20 ಚಿನ್ನ, 12 ಬೆಳ್ಳಿ, 1`7 ಕಂಚು ಒಳಗೊಂಡಂತೆ 49 ಪದಕದೊಂದಿಗೆ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಕಳೆದ ಬಾರಿ ಆಸ್ಟ್ರೇಲಿಯಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತ 26 ಚಿನ್ನ, 20 ಬೆಳ್ಳಿ, 20 ಕಂಚು ಸೇರಿದಂತೆ 66 ಪದಕದೊಂದಿಗೆ 4ನೇ ಸ್ಥಾನ ಗಳಿಸಿತ್ತು. 2014ರ ಆವೃತ್ತಿಯಲ್ಲಿ ಭಾರತ 64 ಪದಕದೊಂದಿಗೆ 5ನೇ ಸ್ಥಾನಕ್ಕೆ ಕುಸಿದಿತ್ತು. 2010ರಲ್ಲಿ ದೆಹಲಿ ಆತಿಥ್ಯದಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ದಾಖಲೆಯ 38 ಚಿನ್ನ, 27 ಬೆಳ್ಳಿ, 36ಕಂಚು ಸೇರಿದಂತೆ 101 ಪದಕದೊಂದಿಗೆ 2ನೇ ಸ್ಥಾನ ಪಡೆದ ಸಾಧನೆ ಮಾಡಿತ್ತು.