ಗತ ಚರಿತ್ರೆಯ ವ್ಯಕ್ತಿತ್ವಗಳನ್ನು ಈ ಕ್ಷಣದ ವಾಸ್ತವಗಳಲ್ಲಿಟ್ಟು ಅಳೆಯುವುದು ಅನಿವಾರ್ಯವೇ ?
-ನಾ ದಿವಾಕರ
ಯಾವುದೇ ದೇಶದ ಚರಿತ್ರೆಯಲ್ಲಿ ವಿಭಿನ್ನ ಕಾಲಘಟ್ಟಗಳಲ್ಲಿ ಸಂಭವಿಸಿದ ಘಟನೆಗಳು, ಆಗಿಹೋದ ವಿದ್ಯಮಾನಗಳು ಅಥವಾ ಪ್ರಭಾವಶಾಲಿಯಾಗಿ ಬದುಕಿ ನಿರ್ಗಮಿಸುವ ಚಾರಿತ್ರಿಕ ವ್ಯಕ್ತಿಗಳು ಶಾಶ್ವತವಾಗಿ ಜನಮಾನಸದ ಸಂಕಥನಗಳಲ್ಲಿ ಉಳಿದುಬಿಡುವುದು ಸಹಜ. ಭಾರತವೂ ಇದಕ್ಕೆ ಹೊರತಾದುದಲ್ಲ. ಆದರೆ ಅನ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇಂತಹ ಸಂಕಥನಗಳು ಅನೇಕ ರೀತಿಯ ಸಿಕ್ಕುಗಳಲ್ಲಿ ಸಿಲುಕಿರುತ್ತವೆ. ವಸಾಹತು ಕಾಲದ ಭಾರತದಲ್ಲಿ ಉಗಮಿಸಿದ ಚಿಂತನಾವಾಹಿನಿಗಳು ಭಾರತದ ಬಹುತ್ವ ಸಂಸ್ಕೃತಿಗೆ ಅನುಗುಣವಾಗಿಯೇ ವೈವಿಧ್ಯತೆಯಿಂದ ಕೂಡಿರುವುದು ಒಂದು ವೈಶಿಷ್ಟ್ಯ ಎನ್ನಬಹುದಾದರೂ, ಈ ವಿಶಿಷ್ಟ ವಿದ್ಯಮಾನದ ನಡುವೆಯೇ ಸಾಂಪ್ರದಾಯಿಕ ಭಾರತೀಯ ಸಮಾಜದ ಸಾಂಸ್ಕೃತಿಕ ನೆಲೆಗಳು ಈ ಚಿಂತನೆಗಳನ್ನು ಜಾತಿ-ಮತ-ಧರ್ಮ-ಪಂಥ ಮುಂತಾದ ಅಸ್ಮಿತೆಗಳ ಚೌಕಟ್ಟುಗಳಲ್ಲಿ ಬಂಧಿಸಿಬಿಡುತ್ತವೆ. ಸ್ವಾತಂತ್ರ್ಯಾನಂತರದ ಭಾರತದಲ್ಲಿನ ಸಂಕಥನಗಳು ಇದೇ ಅಸ್ಮಿತೆಗಳ ನೆಲೆಯಲ್ಲೇ ಚಾರಿತ್ರಿಕ ವ್ಯಕ್ತಿಗಳನ್ನು ಅವರ ಚಿಂತನೆಗಳನ್ನು ಮತ್ತಷ್ಟು ವಿಸ್ತರಿಸಲು ಮುಂದಾಗುತ್ತವೆ.

ಸ್ವಾತಂತ್ರ್ಯಪೂರ್ವ ಭಾರತದ ರಾಜಕೀಯ ಬೆಳವಣಿಗೆಗಳು ಮತ್ತು ಅದರ ನಡುವೆಯೇ ರೂಪುಗೊಂಡ ಸಾಂಸ್ಕೃತಿಕ ಚಿಂತನೆಗಳು, ಸೈದ್ಧಾಂತಿಕ ಭೂಮಿಕೆಗಳು ಹಾಗೂ ಪಾಶ್ಚಿಮಾತ್ಯ ಚಿಂತನೆಗಳ ನಡುವೆ ನಾವು ಸ್ವಾತಂತ್ರ್ಯ ಸಂಗ್ರಾಮಿಗಳೊಡನೆ ಮುಖಾಮುಖಿಯಾಗುತ್ತಿದ್ದೇವೆ. ಹಾಗೆಯೇ ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿದ್ದರೂ, ದೇಶದ ವಿಮೋಚನೆಯ ಏಕನಿಷ್ಠೆಯಿಂದ ಸಾಂದರ್ಭಿಕವಾಗಿ ಹೆಗಲುಗೂಡಿಸಿದ್ದ ಈ ನಾಯಕರೊಡನೆ ಅನುಸಂಧಾನ ನಡೆಸುವ ಸಂದರ್ಭದಲ್ಲಿ ವರ್ತಮಾನದ ಸಂದರ್ಭದಲ್ಲಿ ಎದುರಾಗುತ್ತಿರುವ ಸಂಕೀರ್ಣ ತಾತ್ವಿಕ ಸಿಕ್ಕುಗಳನ್ನು ಆಶ್ರಯಿಸುತ್ತಿದ್ದೇವೆ. ಹಾಗಾಗಿ ನಮಗೆ ಭವಿಷ್ಯ ಭಾರತದ ದೂರಗಾಮಿ ಆದ್ಯತೆಗಳನ್ನು ನಿಷ್ಕರ್ಷೆ ಮಾಡುವಾಗಲೂ ಸಹ ಸ್ವಾತಂತ್ರ್ಯಪೂರ್ವ ಚಿಂತನಾವಾಹಿನಿಗಳು ಅಪ್ಯಾಯಮಾನವಾಗಿ ಕಾಣುತ್ತವೆ. ಈ ಬೌದ್ಧಿಕ ನೆಲೆಯಲ್ಲೇ ನಾವು ಜವಹರಲಾಲ್ ನೆಹರೂ, ಡಾ. ಬಿ.ಆರ್. ಅಂಬೇಡ್ಕರ್, ಸಾವರ್ಕರ್, ಸುಭಾಷ್ ಬೋಸ್, ಮೊಹಮ್ಮದ್ ಅಲಿ ಜಿನ್ನಾ ಮುಂತಾದ ನಾಯಕರೊಡನೆ ಮುಖಾಮುಖಿಯಾಗಲು ಬಯಸುತ್ತೇವೆ.
ವೈವಿಧ್ಯಮಯ ಚಿಂತನೆಗಳು
ಈ ಎಲ್ಲ ನಾಯಕರ ವೈವಿಧ್ಯಮಯ ಚಿಂತನೆಗಳನ್ನು ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ನೆಲೆಯಲ್ಲಿ ನಿಂತು ನೋಡುವಾಗ ನಮಗೆ ಎದುರಾಗುವುದು ಮಹಾತ್ಮ ಗಾಂಧಿ ಎಂಬ ವಿಶಿಷ್ಟ ವ್ಯಕ್ತಿತ್ವ. ಕಾರಣವೇನೆಂದರೆ ಗಾಂಧಿ ಸ್ವಾತಂತ್ರ್ಯಪೂರ್ವ ಭಾರತದ ರಾಜಕೀಯ-ಸಾಮಾಜಿಕ-ಆರ್ಥಿಕ ಹಾಗೂ ಸಾಂಸ್ಕೃತಿಕ ಚಿಂತನೆಗಳಲ್ಲಿ ಯಾವುದೋ ಒಂದು ರೀತಿಯಲ್ಲಿ ಚರ್ಚೆಗೊಳಗಾಗುತ್ತಾರೆ. ಬ್ರಿಟೀಷ್ ವಸಾಹತು ದಾಸ್ಯದಿಂದ ವಿಮೋಚನೆ ಪಡೆಯುವ ಏಕಮೇವ ಗುರಿ, ಭಾರತೀಯ ಸಮಾಜದ ವರ್ಣಾಶ್ರಮ ಧರ್ಮದ ಸಮರ್ಥನೆ, ಅಸ್ಪೃಶ್ಯತೆಯನ್ನು ವಿರೋಧಿಸುವ ತಾತ್ವಿಕ ನಿಲುವು, ಅಹಿಂಸಾ ಮಾರ್ಗದಿಂದಲೇ ಗುರಿ ಸಾಧಿಸುವ ಹಠಮಾರಿತನ ಹಾಗೂ ಗ್ರಾಮೀಣ ಆರ್ಥಿಕತೆಯೇ ಭವಿಷ್ಯ ಭಾರತದ ಬುನಾದಿಯಾಗಬೇಕು ಎಂಬ ಛಲ ಇವೆಲ್ಲವೂ ಮಹಾತ್ಮ ಗಾಂಧಿಯನ್ನು ಸಮಕಾಲೀನ ಚರಿತ್ರೆಗೆ ಮುಖಾಮುಖಿಯಾಗಿಸುತ್ತದೆ. ಇಷ್ಟರ ನಡುವೆ ಗಾಂಧಿ ಸಂತರ ರೀತಿಯಲ್ಲಿ ಅನುಸರಿಸಿದ ಸರಳ ಬದುಕು ಮತ್ತು ಸತ್ಯಾನ್ವೇಷಣೆಯ ಮಾರ್ಗಗಳು ಸಮಕಾಲೀನ ವಾಸ್ತವತೆಗಳೊಡನೆ ಮುಖಾಮುಖಿಯಾದಾಗ, ಅವರ ತಾತ್ವಿಕ ನಿಲುಮೆಗಳೇ ತೀವ್ರ ಚರ್ಚೆಗೊಳಗಾಗುತ್ತವೆ.
ನೆಹರೂ, ಅಂಬೇಡ್ಕರ್, ಸಾವರ್ಕರ್, ಸುಭಾಷ್ ಬೋಸ್ ಮತ್ತು ಜಿನ್ನಾ ಅವರೊಡನೆ ಗಾಂಧಿಯನ್ನು ಮುಖಾಮುಖಿಯಾಗಿಸುವುದೇ ಆದರೆ ಎರಡು ನೆಲೆಗಳಲ್ಲಿ ಯೋಚಿಸಬೇಕಾಗುತ್ತದೆ. ಮೊದಲನೆಯದು ವಸಾಹತು ಆಳ್ವಿಕೆಯನ್ನು ಕೊನೆಗಾಣಿಸುವ ಉತ್ಕಟ ಆಶಯ ಮತ್ತು ಅದರ ಹಿಂದಿನ ದೇಶಪ್ರೇಮ. 1920ರ ನಂತರದಲ್ಲಿ ಜಿನ್ನಾ ಅವರ ಸೈದ್ಧಾಂತಿಕ ನೆಲೆಗಳು ಭಿನ್ನ ಮಾರ್ಗದಲ್ಲಿ ಸಾಗುತ್ತಾ ದೇಶದ ವಿಭಜನೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿತ್ತು. ಮತ್ತೊಂದೆಡೆ ಸಾವರ್ಕರ್ ತಮ್ಮ ಕ್ರಾಂತಿಕಾರಕ ಮಾರ್ಗವನ್ನು ತೊರೆದು ಹಿಂದುತ್ವದ ನೆಲೆಯಲ್ಲಿ ನಿಂತು ಸ್ವತಂತ್ರ ಭಾರತವನ್ನು ಹಿಂದೂರಾಷ್ಟ್ರವಾಗಿ ಸ್ಥಾಪಿಸುವ ಕನಸು ಕಾಣತೊಡಗಿದ್ದರು. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ದೇಶದ ವಿಮೋಚನೆ ಎಂದರೆ ಕೇವಲ ಭೌಗೋಳಿಕ ಅಥವಾ ರಾಜಕೀಯ ಸ್ವರೂಪದ್ದಾಗಿರಲಿಲ್ಲ. ಸಾಮಾಜಿಕವಾಗಿ ಶತಶತಮಾನಗಳ ಶೋಷಣೆಗೊಳಗಾಗಿದ್ದ ಬಹುಸಂಖ್ಯಾತ ಜನಸಮುದಾಯಗಳ ಸಾಂಸ್ಕೃತಿಕ ವಿಮೋಚನೆ ಅವರ ಆದ್ಯತೆಯಾಗಿತ್ತು. ಸುಭಾಷ್ ಬೋಸ್ ಗಾಂಧಿಯ ಅಹಿಂಸಾ ಮಾರ್ಗದಿಂದ ಭಿನ್ನವಾಗಿ ವಿಮೋಚನೆಯ ಕನಸು ಕಂಡಿದ್ದರು. ಈ ನಾಯಕರ ಪೈಕಿ ನೆಹರೂ, ಬೋಸ್ ಮತ್ತು ಅಂಬೇಡ್ಕರ್ ಅವರ ನಡುವೆ ಕಾಣಬಹುದಾದ ಸಮಾನ ಎಳೆ ಎಂದರೆ ಅವರು ಪ್ರತಿಪಾದಿಸುತ್ತಿದ್ದ ಸಮಾಜವಾದದ ಆಶಯಗಳು.
ಎರಡನೆಯದಾಗಿ ಗಾಂಧಿ ಅನುಸರಿಸಿದ ಹೋರಾಟದ ಮಾರ್ಗ, ಅವರ ಆರ್ಥಿಕ ಚಿಂತನೆಗಳು, ಧಾರ್ಮಿಕ ನಂಬಿಕೆ ಮತ್ತು ಸಾಂಸ್ಕೃತಿಕ ನಿಲುಮೆಗಳು ಈ ಎಲ್ಲ ನಾಯಕರಿಂದಲೂ ಭಿನ್ನವಾಗಿಯೇ ಕಾಣುತ್ತವೆ. ಗಾಂಧಿಯ ಪಟ್ಟ ಶಿಷ್ಯ ಎಂದೇ ಹೇಳಲಾಗುವ ಜವಹರಲಾಲ್ ನೆಹರೂ ಪಾಶ್ಚಿಮಾತ್ಯ ಚಿಂತನೆಗಳಿಂದ ಪ್ರಭಾವಿತರಾಗಿದ್ದು, ಎಡಪಂಥೀಯ ವಿಚಾರಧಾರೆಗಳನ್ನು ಅನುಸರಿಸಿ, ಆಧುನಿಕತೆ ಮತ್ತು ಕೈಗಾರಿಕೀಕರಣದ ಪ್ರತಿಪಾದಕರಾಗಿ ಗಾಂಧಿಗೆ ಮುಖಾಮುಖಿಯಾಗುತ್ತಾರೆ. ಬಹುತ್ವ , ಸಾಂಸ್ಕೃತಿಕ ವೈವಿಧ್ಯಗಳ ನಡುವೆಯೇ ಭಾರತವನ್ನು ಆಧುನೀಕರಣದತ್ತ ಕೊಂಡೊಯ್ಯುವ ನೆಹರೂ ಅವರ ಉತ್ಕಟ ಭಾವನೆಗಳು ಆಧುನಿಕ ಭಾರತದ ನಿರ್ಮಾಣಕ್ಕೆ ಬುನಾದಿಯಾಗಿದ್ದೂ ವಾಸ್ತವ. ಗಾಂಧಿ ಅನುಕರಿಸಲು ಸೂಚಿಸಿದ ಗ್ರಾಮೀಣ ಆರ್ಥಿಕತೆ ಮತ್ತು ಸನಾತನ ಭಾರತದ ಸಾಂಸ್ಕೃತಿಕ ಸಾಂಪ್ರದಾಯಿಕತೆಗೆ ವಿರುದ್ಧವಾಗಿ ನೆಹರೂ ಪಾಶ್ಚಿಮಾತ್ಯ ಭೌತವಾದವನ್ನು ಅನುಕರಿಸಿದ್ದೇ ಅಲ್ಲದೆ, ದೇಶದ ಭವಿಷ್ಯವನ್ನು ಆಧುನಿಕ ಕೈಗಾರಿಕೆಗಳಲ್ಲಿ, ವೈಜ್ಞಾನಿಕ ಚಿಂತನೆಗಳಲ್ಲಿ, ವೈಚಾರಿಕತೆಯಲ್ಲಿ ಕಂಡಿದ್ದರು. ನೆಹರೂ ಅವರ ತಾತ್ವಿಕ ನೆಲೆಗಳ ಯಶಸ್ಸನ್ನು ವರ್ತಮಾನದ ಭಾರತದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.

ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಗಾಂಧಿ ಬಹುಶಃ ಇನ್ನೂ ಹಲವು ಶತಮಾನಗಳ ಕಾಲ ಸಾಂಸ್ಕೃತಿಕ-ಬೌದ್ಧಿಕ ವಲಯದಲ್ಲಿ ಮುಖಾಮುಖಿಯಾಗುತ್ತಲೇ ಇರುತ್ತಾರೆ. ಏಕೆಂದರೆ ಅಂಬೇಡ್ಕರ್ ಪ್ರತಿಪಾದಿಸಿದ ಸಾಮಾಜಿಕ ನ್ಯಾಯ, ವರ್ಣಾಶ್ರಮ ವ್ಯವಸ್ಥೆಯ ವಿರೋಧ, ಜಾತಿ ವಿನಾಶದ ಆಲೋಚನೆಗಳು ಗಾಂಧಿ ಪ್ರತಿಪಾದಿಸಿದ ಸಾಂಪ್ರದಾಯಿಕ ಚಿಂತನೆಗಳಿಗೆ ವಿಮುಖವಾಗಿಯೇ ಸಾಗುತ್ತವೆ. ಗಾಂಧಿಯ ದೃಷ್ಟಿಯಲ್ಲಿ ಭಾರತೀಯ ಸಮಾಜದ ದಾಸ್ಯ ವಸಾಹತು ಆಳ್ವಿಕೆಗೆ ಸೀಮಿತವಾಗಿ ಕಂಡರೆ, ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಭಾರತದ ಕೆಳಸ್ತರದ ಜಾತಿ ಸಮುದಾಯಗಳ, ಅಸ್ಪೃಶ್ಯ ಜನಸಮೂಹಗಳ ಶೋಷಣೆಯ ಇತಿಹಾಸ ಶತಮಾನಗಳಷ್ಟು ಹಿಂದಕ್ಕೆ ಸಾಗುತ್ತದೆ. ಇಡೀ ಭಾರತೀಯ ಸಮಾಜವನ್ನು ಒಂದೇ ಚೌಕಟ್ಟಿನೊಳಗಿಟ್ಟು ನೋಡುವ ಗಾಂಧಿ ಈ ಸಮಾಜದೊಳಗಿನ ತಾರತಮ್ಯಗಳನ್ನು, ಅಸಮಾನತೆಗಳನ್ನು ಹೋಗಲಾಡಿಸಲು ಸಮಾಜ ಸುಧಾರಕ ಮಾರ್ಗವನ್ನು ಅನುಸರಿಸುತ್ತಾರೆ. ಆದರೆ ಸಮಾಜದ ಆಳದಲ್ಲಿ ಬೇರೂರಿರುವ ಶೋಷಣೆ, ದೌರ್ಜನ್ಯ, ತಾರತಮ್ಯ ಮತ್ತು ಅಸಮಾನತೆಗಳನ್ನು ಭಾರತದ ಪಾರಂಪರಿಕ ಜಾತಿ ವ್ಯವಸ್ಥೆಯ ಚೌಕಟ್ಟಿನಲ್ಲೇ ನೋಡುವ ಅಂಬೇಡ್ಕರರಿಗೆ ಶೋಷಿತ ಸಮುದಾಯಗಳು ಸಮಾಜದ ಒಂದು ಪ್ರತ್ಯೇಕ ವರ್ಗವಾಗಿಯೇ ಕಾಣುತ್ತಾರೆ.
ಈ ಅಸ್ಪೃಶ್ಯ-ಶೋಷಿತ-ದಮನಿತ ಜನಸಮುದಾಯಗಳಿಗೆ ಸಾಮಾಜಿಕ-ಆರ್ಥಿಕ ನ್ಯಾಯ ಮತ್ತು ಸಮಾನತೆಯನ್ನು ದೊರಕಿಸುವ ನಿಟ್ಟಿನಲ್ಲಿ ಅಂಬೇಡ್ಕರರಿಗೆ ಬ್ರಿಟೀಷ್ ವಸಾಹತು ಸಾಮ್ರಾಜ್ಯದಷ್ಟೇ ಕಠೋರವಾಗಿ ಕಂಡಿದ್ದು ಭಾರತದ ಜಾತಿ ಶ್ರೇಣೀಕರಣ ಮತ್ತು ಅದರೊಳಗಿನ ತಾರತಮ್ಯಗಳು. ಗಾಂಧಿ ಮತ್ತು ಅಂಬೇಡ್ಕರ್ ಮುಖಾಮುಖಿಯಾಗುವಾಗ ಈ ಜಟಿಲ ಸಮಸ್ಯೆಯೇ ಪ್ರಧಾನವಾಗಿ ಕಾಣುವುದು ಸಹಜ. ಪೂನಾ ಒಪ್ಪಂದದ ಹಿನ್ನೆಲೆಯಲ್ಲಿ ಇಂದಿಗೂ ದಲಿತ ಸಮುದಾಯಗಳ ದೃಷ್ಟಿಯಲ್ಲಿ ಗಾಂಧಿ ವಿರೋಧಿ ನೆಲೆಯಲ್ಲೇ ಕಾಣಲ್ಪಡುತ್ತಿರುವುದನ್ನು ಗಮನಿಸಿದಾಗ, ಈ ಇಬ್ಬರು ದಾರ್ಶನಿಕರನ್ನು ಮುಖಾಮುಖಿಯಾಗಿಸುವಾಗ ನಾವು ವರ್ತಮಾನದ ರಾಜಕೀಯ ವಾಸ್ತವಿಕತೆಗಳನ್ನು ಪರಿಗಣಿಸಬೇಕಾದ ಅಗತ್ಯತೆ ಎದ್ದು ಕಾಣುತ್ತದೆ. ಗಾಂಧಿಗಿಂತಲೂ ಹೆಚ್ಚು ಅಹಿಂಸಾವಾದಿಯಾದ ಅಂಬೇಡ್ಕರ್ ಸಾಂವಿಧಾನಿಕ ಚೌಕಟ್ಟಿನೊಳಗೇ ಜಾತಿ ತಾರತಮ್ಯ-ದೌರ್ಜನ್ಯಗಳನ್ನು ಕೊನೆಗೊಳಿಸಿ ಸಾಮಾಜಿಕ ಸಮಾನತೆ-ನ್ಯಾಯವನ್ನು ಸ್ಥಾಪಿಸಲು ಯೋಚಿಸಿದ್ದರು. ಗಾಂಧಿ ಇದನ್ನು ವ್ಯಕ್ತಿಗತ ನೆಲೆಯಲ್ಲಿ, ಸಾಮಾಜಿಕ ಪರಿಸರದ ನಡುವೆ ಸಾಧಿಸಲು ಯೋಚಿಸುತ್ತಾರೆ. ಆದರೆ ಭಾರತದ ಜಾತಿಶ್ರೇಣಿಯ ವ್ಯವಸ್ಥೆ ಗಾಂಧಿ ಪ್ರತಿಪಾದನೆಯನ್ನು ಸುಳ್ಳಾಗಿಸಿರುವುದು ವಾಸ್ತವ.
ಚಳುವಳಿಯ ಭಿನ್ನ ಮಜಲುಗಳು
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ಗಾಂಧಿ ಪ್ರವೇಶಿಸಿದ ನಂತರ ಸಂಭವಿಸಿದ ಪಲ್ಲಟಗಳಲ್ಲಿ ಪ್ರಮುಖವಾಗಿ ಗುರುತಿಸಬಹುದಾದ ವಿದ್ಯಮಾನಗಳೆಂದರೆ ಜಿನ್ನಾ ಅವರ ಎರಡು ರಾಷ್ಟ್ರಗಳ ಪರಿಕಲ್ಪನೆ ಹಾಗೂ ಸಾವರ್ಕರ್ ಅವರ ಹಿಂದುತ್ವ ಆಧಾರಿತ ಹಿಂದೂ ರಾಷ್ಟ್ರದ ಪ್ರತಿಪಾದನೆ. ಭಾರತದ ಸನಾತನ ಧರ್ಮವನ್ನು ಒಪ್ಪಿಕೊಂಡೇ, ಹಿಂದೂ ಧರ್ಮಕ್ಕೆ ತಾತ್ವಿಕ ನಿಷ್ಠೆಯನ್ನು ಕೊಂಚಲೂ ಸಡಿಲಗೊಳಿಸದೆ ತಮ್ಮ ಸಂತ ಬದುಕನ್ನು ಸವೆಸಿದ ಗಾಂಧಿ ಹಿಂದೂ ಧರ್ಮದ ಒಳಗಿದ್ದುಕೊಂಡೇ ಸುಧಾರಣೆಯ ಮಾರ್ಗಗಳನ್ನು ಹುಡುಕಿದವರು. ಹಾಗಾಗಿಯೇ ತಮ್ಮ ಜೀವಿತದ ಕೊನೆಯ ಘಟ್ಟದಲ್ಲಿ ಅಸ್ಪೃಶ್ಯತೆಯ ವಿರುದ್ಧ ದನಿ ಎತ್ತುವುದೇ ಅಲ್ಲದೆ, ಅಸ್ಪೃಶ್ಯತೆಯ ನಿವಾರಣೆಗಾಗಿ ವಿಶಿಷ್ಟ ಕಾರ್ಯಾಚರಣೆಗಳನ್ನು ಪ್ರಚೋದಿಸಿದರೂ, ಗಾಂಧಿ ಸನಾತನ ಧರ್ಮದ ಮೌಲ್ಯಗಳನ್ನು, ಹಿಂದೂ ಧರ್ಮ ಎತ್ತಿಹಿಡಿಯುವ ವರ್ಣಾಶ್ರಮ ಪದ್ಧತಿಯನ್ನೂ ವಿರೋಧಿಸಲಿಲ್ಲ. ಇದರ ಮತ್ತೊಂದು ಬದಿಯಲ್ಲಿ ಹೊರಹೊಮ್ಮಿದ ಸಾವರ್ಕರ್ ಬ್ರಿಟೀಷರ ವಿರುದ್ಧ ಹೋರಾಡುವುದಕ್ಕಿಂತಲೂ ಪ್ರಧಾನವಾಗಿ ವಿಮೋಚನೆಯ ನಂತರ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಕಾಣುವ ಕನಸು ಕಟ್ಟಿದವರು. ಮೂಲತಃ ನಾಸ್ತಿಕರಾಗಿದ್ದು, ಸನಾತನ ಧರ್ಮ ಬೋಧಿಸುವ ಹಲವು ಮೂಲ ತಾತ್ವಿಕ ನೆಲೆಗಳಿಗೆ ವಿಮುಖರಾಗಿದ್ದರೂ ಸಾವರ್ಕರ್ ಹಿಂದುತ್ವದ ಪರಿಕಲ್ಪನೆಯಲ್ಲಿ ಸಮಸ್ತ ಹಿಂದೂಗಳನ್ನು ಒಂದುಗೂಡಿಸುವ ರಾಜಕೀಯ ಪ್ರಯತ್ನದಲ್ಲಿ ಮುಂದಾಗಿದ್ದರು. ಗಾಂಧಿ ಪ್ರತಿಪಾದಿಸಿದ ಭಾರತೀಯತೆಯಲ್ಲಿ ಹಿಂದೂ ಧರ್ಮವನ್ನೂ ಸೇರಿದಂತೆ ಸಕಲ ಧರ್ಮಗಳೂ ಒಳಗೊಂಡಿದ್ದರೆ, ಸಾವರ್ಕರ್ ಅವರ ಚಿಂತನೆಯಲ್ಲಿ ಹಿಂದೂ ಬಹುಸಂಖ್ಯಾವಾದವನ್ನು ಎತ್ತಿಹಿಡಿಯುವ ಹಿಂದುತ್ವವೇ ಭಾರತೀಯತೆಯ ಅಂತಿಮ ಗುರಿಯಾಗಿತ್ತು.
ಈ ತಾತ್ವಿಕ ಸಂಘರ್ಷಗಳ ನಡುವೆಯೇ ಮೊಹಮ್ಮದ್ ಅಲಿ ಜಿನ್ನಾ ಅವರ ಇಸ್ಲಾಮಿಕ್ ರಾಷ್ಟ್ರದ ಪರಿಕಲ್ಪನೆಯನ್ನೂ ಗಾಂಧಿ ಪ್ರಣೀತ ಭಾರತೀಯತೆಯೊಂದಿಗೆ ಮುಖಾಮುಖಿಯಾಗಿಸಬೇಕಾಗುತ್ತದೆ. ತಮ್ಮ ಕೊನೆಯ ಉಸಿರಿರುವವರೆಗೂ ದೇಶದ ವಿಭಜನೆಯನ್ನು ವಿರೋಧಿಸುತ್ತಲೇ ಬಂದ ಗಾಂಧಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಒಟ್ಟಾಗಿ ಬದುಕಿ ಸುಂದರ ಭಾರತವನ್ನು ನಿರ್ಮಿಸುವ ಕನಸು ಕಂಡಿದ್ದರು. ಸ್ವಾತಂತ್ರ್ಯಪೂರ್ವದ ಕೆಲವು ಘಟನೆಗಳು, ವಿಶೇಷವಾಗಿ ಖಿಲಾಫತ್ ಚಳುವಳಿಯಲ್ಲಿ ನಡೆದ ವಿದ್ಯಮಾನಗಳು, ಎರಡು ರಾಷ್ಟ್ರಗಳ ಪರಿಕಲ್ಪನೆ ಗರಿಗೆದರಲು ಸಾಕಷ್ಟು ಬೌದ್ಧಿಕ ಸರಕುಗಳನ್ನೂ ಒದಗಿಸಿದ್ದವು. ಸ್ವತಃ ನಾಸ್ತಿಕರಾಗಿದ್ದು, ಇಸ್ಲಾಮ್‌ನ ಧಾರ್ಮಿಕ ಆಚರಣೆಗಳಿಗೆ ವಿಮುಖರಾಗಿದ್ದ ಜಿನ್ನಾ ಪ್ರತ್ಯೇಕ ರಾಷ್ಟ್ರಕ್ಕಾಗಿ ಆಗ್ರಹಿಸಿದ್ದು ಒಂದು ಭೌಗೋಳಿಕ ರಾಜಕೀಯ ನಿರ್ಧಾರವಾಗಿತ್ತು. ಗಾಂಧಿ ಬಯಸಿದ ಸೌಹಾರ್ದತೆ-ಸಮನ್ವಯದ ಭಾರತದ ಕಲ್ಪನೆ ಜಿನ್ನಾ ಅವರ ಮುಸ್ಲಿಂ ಅಸ್ಮಿತೆಯ ರಾಜಕಾರಣಕ್ಕೆ ತದ್ವಿರುದ್ಧವಾಗಿದ್ದುದು ವಾಸ್ತವ.

ವರ್ತಮಾನದಲ್ಲಿ ನಿಂತು ಚರಿತ್ರೆಯತ್ತ ತಿರುಗಿ ನೋಡಿದಾಗ ಸ್ವಾತಂತ್ರ್ಯಪೂರ್ವದ ರಾಜಕೀಯ ಬೆಳವಣಿಗೆಗಳು, ಸಾಂಸ್ಕೃತಿಕ ಪಲ್ಲಟಗಳು, ಸಾಮಾಜಿಕ ವ್ಯತ್ಯಯಗಳು ಹಾಗೂ ಸೈದ್ಧಾಂತಿಕ ಸಂಘರ್ಷಗಳು, ಇವೆಲ್ಲವೂ ಮತ್ತೆ ಮತ್ತೆ ನಮ್ಮನ್ನು ಜಾಗೃತಗೊಳಿಸುವ ವಿದ್ಯಮಾನಗಳಾಗಿಯೇ ಕಾಣುತ್ತವೆ. 1920 ರಿಂದ 1947ರವರೆಗಿನ ರಾಜಕೀಯ ಬೆಳವಣಿಗೆಗಳು, ಸ್ವಾತಂತ್ರ್ಯಾಂದೋಲನದ ವಿಭಿನ್ನ ಛಾಯೆಗಳು, ವೈವಿಧ್ಯಮಯ ಸೈದ್ಧಾಂತಿಕ ಆಶಯಗಳು ಇವೆಲ್ಲವನ್ನೂ ವರ್ತಮಾನದ ರಾಜಕೀಯ-ಸಾಮಾಜಿಕ ಸ್ಥಿತ್ಯಂತರಗಳೊಂದಿಗೆ ಮುಖಾಮುಖಿಯಾಗಿಸಿದಾಗ ನೆಹರೂ, ಅಂಬೇಡ್ಕರ್, ಸುಭಾಷ್ ಬೋಸ್, ಸಾವರ್ಕರ್, ಜಿನ್ನಾ ಮೊದಲಾದ ನಾಯಕರ ನಡುವೆ ಗಾಂಧಿ ವಿಶಿಷ್ಟ ವ್ಯಕ್ತಿತ್ವವಾಗಿ ನಿಲ್ಲುತ್ತಾರೆ. ಈ ಮುಖಾಮುಖಿಯಾಗಿಸುವ ಪ್ರಕ್ರಿಯೆಯಲ್ಲಿ ತಪ್ಪು-ಸರಿ ಎನ್ನುವ ದ್ವಿಮಾನ (Binary) ಮಾದರಿಯನ್ನು ಅನುರಿಸುವುದಕ್ಕಿಂತಲೂ, ವರ್ತಮಾನದ ಭಾರತೀಯ ಸಮಾಜ, ರಾಜಕಾರಣ ಹಾಗೂ ಸಾಂಸ್ಕೃತಿಕ ಬದುಕು ಭವಿಷ್ಯ ಭಾರತದ ದೃಷ್ಟಿಯಿಂದ ಹೇಗೆ ಮುನ್ನಡೆಯಬಹುದು ಎಂಬ ಆಲೋಚನೆಯೊಂದಿಗೆ ಅನುಸಂಧಾನ ಮಾಡುವುದು ಈ ಕಾಲದ ಅನಿವಾರ್ಯತೆಯಾಗಿದೆ.
(ಕೃಪೆ : ಸಮಾಜಮುಖಿ ಮಾಸಪತ್ರಿಕೆ ಅಕ್ಟೋಬರ್ 2023)
-೦-೦-೦-