ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆಯ ವಿಚಾರ ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಎಲ್ಲೋ ಒಂದು ಕಡೆ ತೆರೆಗೆ ಸರಿದಿದೆ ಎನ್ನಲಾಗಿತ್ತು. ಆದರೆ ನಾಯಕತ್ವ ಅಥವಾ ಪವರ್ ಶೇರಿಂಗ್ ವಿಚಾರ ಇನ್ನೂ ಕಾಂಗ್ರೆಸ್ ಪಕ್ಷದಲ್ಲಿ ಜೀವಂತವಿಡುವ ಪ್ರಯತ್ನಗಳು ನಡೆಯುತ್ತಿವೆ. ಈ ಒಂದು ಪ್ರಶ್ನೆಗೆ ಕಾರಣವಾಗಿರೋದು ಸಿಎಂ ಸಿದ್ದರಾಮಯ್ಯ (Siddaramaiah) ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ( Yathindra Siddaramaiah) ನೀಡಿರುವ ಹೇಳಿಕೆ.

ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನದ ಮೊದಲ ದಿನವೇ, ಮಾತನಾಡಿದ್ದ ಯತೀಂದ್ರ, ʼಐದು ವರ್ಷ ಕಾಲ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಇರಲಿದ್ದಾರೆ. ಡಿಕೆ ಶಿವಕುಮಾರ್(D. K Shivakumar) ಅವರು ಅವಕಾಶ ಕೊಡಿ ಎಂದು ಕೇಳಿದ್ದರು. ಆದರೆ ಸದ್ಯಕ್ಕೆ ನಾಯಕತ್ವ ಬದಲಾವಣೆ ಪರಿಸ್ಥಿತಿ ಇಲ್ಲ ಎಂದು ಹೈಕಮಾಂಡ್ ಹೇಳಿದೆ ಎಂದು ಹೇಳಿದ್ದರುʼ ಎಂಬ ಮಾತೇ ಇದೀಗ ಮತ್ತೆ ಕೈ ಪಾಳಯದಲ್ಲಿ ಕಿಡಿ ಹೊತ್ತಿಸಿದೆ.

ಅಧಿವೇಶನದಲ್ಲಿ ರಾಜ್ಯದ ಅಭಿವೃದ್ದಿಯ ಬಗ್ಗೆ ಚರ್ಚೆ ಮಾಡಬೇಕಾಗಿದ್ದ ಶಾಸಕರು, ಸಚಿವರು ಯತೀಂದ್ರ ಹೇಳಿಕೆಗೆ ತಮ್ಮದೇ ಆದ ವ್ಯಾಖ್ಯಾನ ನೀಡುತ್ತಿದ್ದಾರೆ. ಈ ಮೂಲಕ ಅಧಿವೇಶನದ ಹೊತ್ತಲೇ ಮತ್ತೆ ಕುರ್ಚಿ ಕದನ ಮುನ್ನೆಲೆಗೆ ಬಂದಿದೆ. ಇಷ್ಟು ದಿನಗಳ ಕಾಲ ಕದನ ವಿರಾಮವಿದ್ದಂತೆ ಕಂಡುಬಂದರೂ, ಯತೀಂದ್ರ ಕದನ ವಿರಾಮ ಉಲ್ಲಂಘನೆ ಮಾಡಿರುವುದು ಪರ – ವಿರೋಧದ ಚರ್ಚೆಗೆ ವೇದಿಕೆಯಾಗಿದೆ.

ಆದರೆ ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ʼನನ್ನ ಹಾಗೂ ಸಿಎಂ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಯತೀಂದ್ರ ಸಿದ್ದರಾಮಯ್ಯ ಏನು ಹೇಳಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ. ನಾನು ಯತೀಂದ್ರ ಜೊತೆ ಮಾತನಾಡುತ್ತೇನೆ. ಅಲ್ಲದೆ, ಹೈಕಮಾಂಡ್ ಯಾವಾಗ ಬರಲು ಹೇಳಿದೆ ಎಂಬುದನ್ನು ಬಹಿರಂಗಪಡಿಸುವುದಿಲ್ಲ. ಆದರೆ ನಾನು ಸಿಎಂ ಇಬ್ಬರೂ ತಿಳಿಯಾಗಿದ್ದೇವೆʼ ಎಂದು ಸಮಾಧಾನದಿಂದಲೇ ಡಿಸಿಎಂ ಹೇಳಿದ್ದಾರೆ.

ಇನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇಬ್ಬರೂ ಒಂದಾಗಿದ್ದಾರೆ. ಅವರಲ್ಲಿ ಯಾವುದೇ ಗೊಂದಲವಿಲ್ಲ. ಇಬ್ಬರೂ ನಾಯಕರು ಹೈಕಮಾಂಡ್ ಆದೇಶಕ್ಕೆ ಬದ್ಧರಾಗಿದ್ದೇವೆ ಅಂತ ಹೇಳುತ್ತಲೇ ಇದ್ದಾರೆ. ಆದರೆ ಈ ರೀತಿಯ ಗೊಂದಲ ಮೂಡಿಸುವ ಹೇಳಿಕೆಗಳು ನಿಲ್ಲಲಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪರೋಕ್ಷವಾಗಿ ಸಿಎಂ ಪುತ್ರನಿಗೆ ಸಲಹೆ ನೀಡಿದ್ದಾರೆ.
ಅಲ್ಲದೇ ಈ ನಡುವೆಯೇ ಸಚಿವೆ ಹೆಬ್ಬಾಳ್ಕರ್ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಚೆನ್ನರಾಜ್ ಹಟ್ಟಿಹೊಳಿ ಕೂಡ ಡಿಕೆ ಶಿವಕುಮಾರ್ ರಾಜ್ಯದ ಸಿಎಂ ಆಗಲಿ ಎಂದು ಡಿಸಿಎಂ ಪರ ಬ್ಯಾಟ್ ಬೀಸಿದ್ದಾರೆ. ಅಲ್ಲದೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಡಿಕೆ ಶಿವಕುಮಾರ್ ಸಿಎಂ ಎಂದು ಪೋಸ್ಟ್ ಮಾಡಿದ್ದರು. ಬಳಿಕ ಎಚ್ಚೆತ್ತು ಅದೊಂದು ಅಚಾತುರ್ಯದಿಂದ ತಪ್ಪಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಡಿಕೆಶಿ ಅವರಿಗೆ ಸಿಎಂ ಆಗುವ ಅವಕಾಶ ಬರಲಿ ಎಂದಿದ್ದಾರೆ.

ಈ ಎಲ್ಲದರ ನಡುವೆಯೇ ಕಳೆದೆರಡು ದಿನಗಳಿಂದ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯು ಕಾಂಗ್ರೆಸ್‌ನಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಆದರೆ ತಮ್ಮ ಹೇಳಿಕೆಯನ್ನು ಮತ್ತೆ ಪರಿಷತ್ ಸದಸ್ಯ ಸಮರ್ಥನೆ ಮಾಡಿಕೊಂಡಿದ್ದಾರೆ. ನಾನು ಏನ್ನನ್ನು ಹೇಳಬೇಕೋ ಅದನ್ನು ಎಲ್ಲವನ್ನೂ ಹೇಳಿದ್ದೇನೆ. ಮತ್ತೆ ಪದೇ ಪದೇ ಆ ವಿಷಯದ ಬಗ್ಗೆ ಮಾತನಾಡುವಂತಹದ್ದು ಏನೂ ಇಲ್ಲ. ಯಾರು ಏನಾದರೂ ಹೇಳಲಿ, ನಾನು ಹೇಳಬೇಕಾಗಿದ್ದನ್ನು ಹೇಳಿದ್ದೇನೆ. ನಾನು ಮತ್ತೆ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಯತೀಂದ್ರ ಹೇಳಿದ್ದಾರೆ.

ಒಂದೆಡೆ ಅಧಿವೇಶನ ಅಥವಾ ಬಜೆಟ್ ಬಳಿಕ ನಾಯಕತ್ವ ಬದಲಾವಣೆಯ ಪ್ರಕ್ರಿಯೆಗಳು ನಡೆಯಬಹುದು. ಹೀಗೆಂಬ ಚರ್ಚೆಗಳ ನಡುವೆಯೇ ಯತೀಂದ್ರ ನೀಡಿರುವ ಹೇಳಿಕೆಯು ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಂದು ಕಲಹಕ್ಕೆ ನಾಂದಿ ಹಾಡಿದಂತಾಗಿದೆ. ಆದರೆ ಈ ಹಿಂದೆ ಡಿಕೆ ಶಿವಕುಮಾರ್ ಪರವಾಗಿ ಹೇಳಿಕೆ ನೀಡಿದ್ದ ಶಾಸಕರಿಗೆ ಪಕ್ಷ ನೋಟಿಸ್ ನೀಡಿತ್ತು. ಇದೀಗ ತಂದೆಯ ಪರವಾಗಿ ಮೇಲಿಂದ ಮೇಲೆ ಹೇಳಿಕೆ ನೀಡುತ್ತಿರುವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡುತ್ತಾ ಎನ್ನುವುದು ಡಿಕೆಶಿ ಬಣದ ಕುತೂಹಲವಾಗಿದೆ.












