ಬೆಂಗಳೂರು:ಮಾ.29: ಯಡಿಯೂರಪ್ಪ ಹಾಗು ವಿಜಯೇಂದ್ರ ಬಗ್ಗೆ ಬಿಜೆಪಿಯಲ್ಲಿ ಭಾರೀ ಗೌರವಾಧರಗಳನ್ನು ನೀಡಲಾಗ್ತಿದೆ. ಯಡಿಯೂರಪ್ಪ ಮುಂದಾಳತ್ವದಲ್ಲೇ ನಾವು ಚುನಾವಣೆ ಮಾಡುತ್ತೇವೆ. ಯಡಿಯೂರಪ್ಪ ಅವರನ್ನು ನಿರ್ಲಕ್ಷ್ಯ ಮಾಡುವ ವಿಚಾರವೇ ಇಲ್ಲ, ಎಂದು ನಾಯಕರು ಬೊಬ್ಬೆ ಹಾಕುತ್ತಿದ್ದಾರೆ. ಆದರೆ ಈ ಗೌರವ ಮೇಲ್ನೋಟಕ್ಕೆ ಕಾಣಿಸುವ ಗೌರವ ಎನ್ನುವ ಆರೋಪವೂ ಕೇಳಿಬರುತ್ತಿದೆ. ಯಡಿಯೂರಪ್ಪ ಅಂಡ್ ಸನ್ಸ್ ಬಿಜೆಪಿ ವಿರುದ್ಧ ಮಾತನಾಡಿದರೆ ಕಾನೂನು ಸಂಕಷ್ಟಕ್ಕೆ ಸಿಲುಕಿಸುವ ಭೀತಿ ಸೃಷ್ಟಿಸಲಾಗಿದೆ ಎನ್ನುವುದು ಅಲ್ಲಲ್ಲಿ ಕೇಳಿ ಬರುತ್ತಿರುವ ಗಂಭೀರ ಆರೋಪ. ಯಡಿಯೂರಪ್ಪ ಅಥವಾ ಬಿ.ವೈ ರಾಘವೇಂದ್ರ, ಬಿ.ವೈ ವಿಜಯೇಂದ್ರ ಪಕ್ಷಕ್ಕೆ ಹಾನಿಯಾಗುವ ರೀತಿಯ ಹೇಳಿಕೆ ಅಥವಾ ಕೆಲಸ ಮಾಡಿದರೆ ಕಾನೂನು ಅಸ್ತ್ರ ಪಯೋಗ ಆಗಲಿದೆ ಎನ್ನುವ ಮಾತುಗಳಿವೆ. ಇದೇ ಕಾರಣದಿಂದ ಯಡಿಯೂರಪ್ಪ ಅವರ ಆಪ್ತ ಬಳಗದ ನಾಯಕರನ್ನು ಸದೆ ಬಡಿಯುವ ಕೆಲಸ ನಡೆಯುತ್ತಿದೆ ಎನ್ನಲಾಗಿದೆ.

ಯಡಿಯೂರಪ್ಪ ಅವರನ್ನು ಒಂಟಿ ಮಾಡುವ ಯತ್ನ..!

ಬೃಹತ್ ಹೆಮ್ಮರವನ್ನು ಕತ್ತರಿಸುವಾಗ ಬುಡ ಕತ್ತರಿಸಿದ ಮಾತ್ರಕ್ಕೆ ಹೆಮ್ಮರವೇ ಕೆಳಕ್ಕೆ ಬೀಳುತ್ತದೆ ಎನ್ನುವುದು ಸುಳ್ಳು. ಹಾಗೆಯೇ ಹಿರಿಯ ನಾಯಕನ ಹಿಡಿತದಿಂದ ಪಕ್ಷವನ್ನು ಬಿಡಿಸುವುದು ಅಷ್ಟು ಸುಲಭದ ಮಾತಲ್ಲ. ಇದೀಗ ಯಡಿಯೂರಪ್ಪ ಹಿಡಿತದಿಂದ ಬಿಜೆಪಿ ಪಕ್ಷವನ್ನು ಬಿಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಬಿಜೆಪಿ ಹೈಕಮಾಂಡ್. ಏಕಾಏಕಿ ಬಿಎಸ್ ಯಡಿಯೂರಪ್ಪ ಹಿಡಿತದಿಂದ ಪಕ್ಷವನ್ನು ಬಿಡಿಸುವ ಯತ್ನವನ್ನು ಹೈಕಮಾಂಡ್ ಮಾಡಿತ್ತಾದರೂ ಪಕ್ಷಕ್ಕೇ ಬಲವಾದ ಹೊಡೆತ ಬೀಳುವ ಮುನ್ಸೂಚನೆ ಸಿಕ್ಕಿದ್ದರಿಂದ ಹೈಕಮಾಂಡ್ ಯೂಟರ್ನ್ ಹೊಡೆದಿದೆ. ಇನ್ನು ಮುಂದಿನ ದಿನಗಳಲ್ಲಿ ಸರ್ಕಾರ ರಚನೆ ಮಾಡುವ ಸಂಭವ ಎದುರಾದಾಗ ಬಿ.ಎಸ್ ಯಡಿಯೂರಪ್ಪ ಷರತ್ತು ಹಾಕಬಾರದು ಅಥವಾ ಸರ್ಕಾರದಲ್ಲಿ ಯಡಿಯೂರಪ್ಪ ಪಾತ್ರ ಇರಬಾರದು ಅನ್ನೋ ಕಾರಣಕ್ಕೆ ಯಡಿಯೂರಪ್ಪ ಸುತ್ತಮುತ್ತ ಸುತ್ತುವ ನಾಯಕರನ್ನು ದೂರ ಮಾಡಲಾಗ್ತಿದೆ. ಕೆಲವರನ್ನು ಕಾನೂನು ಅಸ್ತ್ರದ ಮೂಲಕ ನಿಯಂತ್ರಣ ಮಾಡುವ ಕೆಲಸ ಆಗುತ್ತಿದೆ ಎನ್ನುವುದು ರಾಜಕೀಯ ಪರಿಣಿತರ ಮಾತು.
ಬೆಂಬಲಿಗರಿಂದ ದೂರ ಮಾಡುತ್ತಿದೆ ಹೈಕಮಾಂಡ್..!?

ಒಂದು ಕಾಲದಲ್ಲಿ ಯಡಿಯೂರಪ್ಪ ಮನೆ ಮುಂದೆ ಜನಸಾಗರೇ ಇರುತ್ತಿತ್ತು. ಅದರಲ್ಲೂ ಶೋಭಾ ಕರಂದ್ಲಾಜೆ, ಎಂಪಿ ರೇಣುಕಾಚಾರ್ಯ ಸೇರಿದಂತೆ ಹತ್ತಾರು ಶಾಸಕರು ಯಡಿಯೂರಪ್ಪ ಹಿಂಬಾಲಕರ ರೀತಿಯಲ್ಲಿ ಇದ್ದರು. ಯಡಿಯೂರಪ್ಪ ವಿರುದ್ಧ ಯಾರಾದರೂ ಟೀಕೆ ಮಾಡಿದ್ದರೆ ಯಡಿಯೂರಪ್ಪಗೂ ಮೊದಲು ಹಿಂಬಾಲಕ ಪಡೆ ಎದ್ದು ನಿಲ್ಲುತ್ತಿತ್ತು. ಈಗ ಕಾಲ ಬದಲಾಗಿದೆ. ಯಡಿಯೂರಪ್ಪ ಹಿಂದೆ ಮುಂದೆ ಸುತ್ತುತ್ತಿದ್ದ ನಾಯಕರು ದೂರ ಆಗಿದ್ದಾರೆ. ಇದರ ಹಿಂದೆ ಪಕ್ಷವನ್ನು ಯಡಿಯೂರಪ್ಪ ಹಿಡಿತದಿಂದ ವಾಪಸ್ ಬಿಡಿಸಿಕೊಳ್ಳುವ ಹೈಕಮಾಂಡ್ನ ಒಂದು ರಣತಂತ್ರ. ಪಕ್ಷದಲ್ಲಿ ಯಾವುದೇ ಸ್ಥಾನಮಾನ ಇಲ್ಲದಿದ್ದರೂ ಯಡಿಯೂರಪ್ಪ ಮನೆಯಲ್ಲಿ ಕೂರುವಂತಿಲ್ಲ. ಹೈಕಮಾಂಡ್ ನಾಯಕರ ಎದುರು ಕೈಕಟ್ಟಿ ಕೂರುತ್ತ, ಬಿಜೆಪಿಯನ್ನು ಗೆಲ್ಲಿಸಿಕೊಂಡು ಬರಬೇಕು. ಇಲ್ಲದಿದ್ದರೆ ಕಾನೂನು ಅಸ್ತ್ರ ಬೆಂಬಲಿಗರ ಮೇಲಿಂದ ಯಡಿಯೂರಪ್ಪ ಅಂಡ್ ಸನ್ಸ್ ಕಡೆಗೆ ತಿರುಗುವ ಭೀತಿಯಲ್ಲಿ ಯಡಿಯೂರಪ್ಪ ಬಸವನ ರೀತಿ ಕತ್ತು ಅಲುಗಾಡಿಸುತ್ತಾ ಇದ್ದಾರೆ ಎನ್ನುವುದು ಇತ್ತೀಚಿಗೆ ನಡೆಯುತ್ತಿರುವ ಚರ್ಚೆ.
ಕೈ ಕಟ್ಟಿ ಕೂರುವ ಪರಿಸ್ಥಿತಿ ಬಂದಿದ್ದು ಯಾಕೆ..?

ಮಾಡಾಳು ವಿರೂಪಾಕ್ಷಪ್ಪ ಬಂಧನ ಆಗಿದೆ. ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧನ ಮಾಡಲಾಗಿದೆ. ಅದೇ ರೀತಿ ಯಡಿಯೂರಪ್ಪ ಅಧಿಕಾರ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೆಲವು ಪ್ರಕರಣಗಳನ್ನು ಹಿಡಿದುಕೊಂಡು ಯಡಿಯೂರಪ್ಪ ಅವರನ್ನು ಬೆದರಿಸಲಾಗಿದೆ. ಇದೇ ಕಾರಣಕ್ಕೆ ಗುಡುಗುತ್ತಿದ್ದ ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ನಾಯಕರ ಮಾತಿಗೆ ಮೌನವಾಗಿದ್ದಾರೆ ಎನ್ನುವ ಮಾತುಗಳಿವೆ. ಇದರಲ್ಲಿ ಎಷ್ಟು ಸತ್ಯವೋ ಎಷ್ಟು ಸುಳ್ಳು ಅನ್ನೋ ಖಚಿತ ಮಾಹಿತಿ ಸಿಗಲ್ಲ. ಇದೆಲ್ಲಾ ನಮ್ಮ ಕಿವಿಗೆ ಅಲ್ಲಿ ಇಲ್ಲಿ ಕೇಳಿಸಿದ್ದು. ಆದರೆ ಇತ್ತೀಚಿಗೆ ಯಡಿಯೂರಪ್ಪ ಆವಭಾವ ನಡವಳಿಕೆಯನ್ನು ನೋಡಿದಾಗ ಅಭಿಮಾನಿಗಳು, ಬೆಂಬಲಿಗರು ಈ ರೀತಿ ಮಾತನಾಡಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ಯಾರಿಗಾದರೂ ಅನಿಸುತ್ತವೆ ಅಲ್ಲವೇ..? ನಿಮಗೆ ಏನನ್ನಿಸುತ್ತೆ ಅನ್ನೋದನ್ನು ಕಮೆಂಟ್ ಮಾಡಿ ತಿಳಿಸಿ.
ಕೃಷ್ಣಮಣಿ