ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ದೆಹಲಿ ಪೊಲೀಸರೊಂದಿಗೆ, ಸ್ವತಂತ್ರ ಪೊಲೀಸ್ ಪಡೆ ಇಲ್ಲದ ಆ ರಾಜ್ಯದ ಸರ್ಕಾರಗಳು ಕೆಲಸ ಮಾಡಲೇಬೇಕು. ಈ ವಿಚಾರವನ್ನು ಹಿನ್ನಲೆಯಾಗಿಟ್ಟುಕೊಂಡು ಕೇಂದ್ರ ಸರ್ಕಾರ ತನಗೆ ಬೇಕಾದವರನ್ನು ಪೊಲೀಸ್ ಮುಖ್ಯಸ್ಥರನ್ನಾಗಿಸಿ ನೇಮಕ ಮಾಡುವ ರಾಜಕಾರಣ ನಡೆಯುತ್ತಾ ಬಂದಿದೆ. ಇದೀಗ ಗುಜತಾತ್ ಕೇಡಾರ್ಗೆ ಸೇರಿರುವ ರಾಕೇಶ್ ಅಸ್ಥಾನಾ ಅವರನ್ನು ಕೇಂದ್ರ ಸರ್ಕಾರ ದೆಹಲಿಯ ಪೊಲೀಸ್ ಮುಖ್ಯಸ್ಥರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಶಾಸಕರ ಮೇಲೆ ದಾಖಲಾಗಿರುವ ದೂರು , 2020ರ ಗಲಭೆ, ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧದ ರೈತರ ಆಂದೋಲನ ಎಲ್ಲವೂ ಅವರ ನೇತೃತ್ವದಲ್ಲಿ ತನಿಖೆಗೆ ಒಳಪಡಲಿದೆ.
ಈ ಹಿನ್ನೆಲೆಯಲ್ಲಿ ಎಎಪಿ ಸರ್ಕಾರವು ದೆಹಲಿ ಪೊಲೀಸ್ ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ರಾಕೇಶ್ ಅಸ್ಥಾನಾ ಅವರನ್ನು ನೇಮಕ ಮಾಡಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಅಸ್ಥಾನ ಅವರು ನರೇಂದ್ರ ಮೋದಿಯವರ ಆಪ್ತರಾಗಿದ್ದು ಉದ್ದೇಶಪೂರ್ವಕವಾಗಿಯೇ ಅವರನ್ನು ದೆಹಲಿಗೆ ಕಳುಹಿಸಲಾಗಿದೆ ಮತ್ತು ಈ ಬಗ್ಗೆ ತನಗೆ ಆತಂಕವಿದೆ ಎಂದು ಆಪ್ ಬಹಿರಂಗವಾಗಿ ಹೇಳಿದೆ.
ಪ್ರಸ್ತುತ ದೆಹಲಿ ವಿಧಾನಸಭೆ ಅಧಿವೇಶನದ ಮೊದಲ ದಿನವಾದ ಗುರುವಾರ ವಿಧಾನಸೌಧವು ದೆಹಲಿ ಪೊಲೀಸ್ ಆಯುಕ್ತರಾಗಿ ಅಸ್ಥಾನಾ ಅವರನ್ನು ನೇಮಿಸುವುದರ ವಿರುದ್ಧ ನಿರ್ಣಯವನ್ನು ಅಂಗೀಕರಿಸಿತು ಮತ್ತು ಕೇಂದ್ರ ಗೃಹ ಸಚಿವಾಲಯದ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಕೇಳಿಕೊಂಡಿದೆ. ಈ ಹಿಂದೆ ಸಿಬಿಐ ನಿರ್ದೇಶಕರ ಹುದ್ದೆಯಲ್ಲಿದ್ದ ಅಸ್ಥಾನಾ ಅವರನ್ನು ಗಡಿ ಭದ್ರತಾ ಪಡೆಯ ಮಹಾನಿರ್ದೇಶಕರಾಗಿ ನಿವೃತ್ತಿಯಾಗುವ ಮೂರು ದಿನಗಳ ಮೊದಲು ದೆಹಲಿ ಪೊಲೀಸ್ ಮುಖ್ಯಸ್ಥರಾಗಿ ನೇಮಿಸಲಾಯಿತು.
ಡಿಜಿ ಮಟ್ಟದಲ್ಲಿ ಯಾವುದೇ ಅಧಿಕಾರಿಯನ್ನು ನೇಮಕ ಮಾಡುವಾಗ ಕನಿಷ್ಠ ಆರು ತಿಂಗಳ ಅಧಿಕಾರಾವಧಿ ಬಾಕಿ ಇರಬೇಕು ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ವಿರುದ್ಧವಾಗಿ ನೇಮಕಾತಿಯಾಗಿದೆ ಎಂದು ಎಎಪ್ ಆರೋಪಿಸುತ್ತಿದೆ.
ಅಸ್ಥಾನ ಅವರನ್ನು ಒಂದು “ವಿಶೇಷ ಮಿಷನ್” ಗಾಗಿ ಗೆಹಲಿಗೆ ನಿಯೋಜಿಸಲಾಗಿದೆ ಎಂದ ಎಎಪಿ ವಿಧಾನ ಸಭೆಯಲ್ಲಿ ನಿರ್ಣಯ ಅಂಗೀಕರಿಸುವ ಮುನ್ನ ಮಾತನಾಡುತ್ತಾ, ಕೇಂದ್ರ ಸರ್ಕಾರವು ಆಸ್ಥಾನಾ ಅವರ ನೇಮಕಾತಿಯಲ್ಲಿ ನಿಯಮಗಳನ್ನು ಏಕೆ ಉಲ್ಲಂಘಿಸಿದೆ ಎಂದು ಕೇಳಿದೆ. ಇದು ಕೇಜ್ರಿವಾಲ್ ಸರ್ಕಾರ ಮತ್ತು ಎಎಪಿ ಶಾಸಕರ ವಿರುದ್ಧ ದಬ್ಬಾಳಿಕೆ ನಡೆಸಲು ಮತ್ತು ಅವರ ಮೇಲೆ ಕಣ್ಗಾವಲು ಇಡಲು ಕೈಗೊಂಡ ಕ್ರಮ ಎಂದೂ ಆರೋಪಿಸಿದೆ.
ಆಡಳಿತಾರೂಢ ಎಎಪಿ ಶಾಸಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲು ದೆಹಲಿ ಪೊಲೀಸರನ್ನು ಮೋದಿ ಆಡಳಿತ ದುರ್ಬಳಕೆ ಮಾಡಿಕೊಂಡಿದೆ ಎಂದು ಕೇಜ್ರಿವಾಲ್ ಸರ್ಕಾರ ಆರೋಪಿಸಿದೆ. ಇತ್ತೀಚೆಗೆ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಅಥವಾ ರೈತರ ಆಂದೋಲನಕ್ಕೆ ಸಂಬಂಧಿಸಿದಂತೆ ಪೊಲೀಸರು ಕೈಗೊಂಡ ಕ್ರಮದಲ್ಲಿ ಬಿಜೆಪಿಯ ಹಸ್ತಕ್ಷೇಪವಿದೆ ಮತ್ತು ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಗಾಗಿ ದೆಹಲಿ ಪೋಲಿಸರೇ ಕಾರಣ ಎಂದು ಟೀಕಿಸಿದೆ.
ದೆಹಲಿ ರಾಜ್ಯ ಸರ್ಕಾರವು ಫೆಬ್ರವರಿ 2020 ರ ಗಲಭೆಯಲ್ಲಿ ದೆಹಲಿ ಪೊಲೀಸರ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ ಮತ್ತು ನ್ಯಾಯಾಲಯದಲ್ಲಿ ಗಲಭೆ ಪ್ರಕರಣಗಳಿಗಾಗಿ ಪೊಲೀಸ್ ಪಡೆ ಆಯ್ಕೆ ಮಾಡಿದ ಪ್ರಾಸಿಕ್ಯೂಟರ್ಗಳ ಸಮಿತಿಯನ್ನು ಅನುಮೋದಿಸಲು ನಿರಾಕರಿಸಿದೆ. ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ದೆಹಲಿಯಲ್ಲಿ ಬಂದಿಳಿದ ರೈತರಿಗೆ ರಾಜಧಾನಿಯಲ್ಲಿ ಸ್ಟೇಡಿಯಾವನ್ನು ತಾತ್ಕಾಲಿಕ ಜೈಲುಗಳಾಗಿ ಪರಿವರ್ತಿಸುವ ಪ್ರಸ್ತಾಪವನ್ನು ಅದು ತಿರಸ್ಕರಿಸಿತ್ತು. ತೀರಾ ಇತ್ತೀಚೆಗೆ, ರೈತರ ಆಂದೋಲನಕ್ಕೆ ಸಂಬಂಧಿಸಿದಂತೆ ದಾಖಲಾದ ಪ್ರಕರಣಗಳಿಗಾಗಿ ಪೊಲೀಸರು ಪ್ರಸ್ತಾಪಿಸಿದ ವಕೀಲರ ಸಮಿತಿಯನ್ನು ಅನುಮೋದಿಸಲು ಅದು ನಿರಾಕರಿಸಿದೆ.
ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ಮುಖ್ಯಸ್ಥರಾಗಿ ಅಸ್ಥಾನಾ ಅವರ ನೇಮಕಾತಿಯು ಹೆಚ್ಚುವರಿ ಮಹತ್ವವನ್ನು ಪಡೆಯುತ್ತದೆ ಮತ್ತು ಅವರ ನಿರ್ಧಾರಗಳು ತೀವ್ರವಾಗಿ ರಾಷ್ಟ್ರ ರಾಜಧಾನಿಯ ರಾಜಕಾರಣವನ್ನು ನಿಯಂತ್ರಿಸಲಿದೆ ಎಂದು ನಂಬಲಾಗಿದೆ.