ಜಿ.ಬಿ. ಪಾಟೀಲ್ : ಬರಹಗಾರರು..

ಮಧ್ಯಪ್ರಾಚ್ಯದಲ್ಲಿ ಯುದ್ಧದ ತೀವ್ರತೆ ದಿನಕಳೆಂದತೆ ಹೆಚ್ಚಾಗುತ್ತಿದೆ. ಈಗಾಗಲೇ ಅಂದುಕೊಂಡಂತೆ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯನ್ನು ಅಮೆರಿಕ ಹಾಗೂ ಇಸ್ರೇಲ್ ಹೊಡೆದುರುಳಿಸಿವೆ. ಈಗ ಸದ್ಯ ಈ ಯುದ್ಧದ ಕಿಚ್ಚು ಇಡೀ ಗಲ್ಫ್ ದೇಶಗಳಿಗೆ ಹಬ್ಬಿದ್ದು, ಇದರ ಪರಿಣಾಮ ವಿಶ್ವದ ಹಲವು ದೇಶಗಳ ಮೇಲೆ ಬೀಳುವ ದಿನಗಳು ಆರಂಭವಾಗಿವೆ. ಈ ಎಲ್ಲದರ ಕುರಿತು ಬರಹಗಾರರಾದ ಜಿ.ಬಿ. ಪಾಟೀಲ್ ಅವರ ವಿಶೇಷ ಲೇಖನ ಇಲ್ಲಿದೆ…
“ಇರಾನ್ ತನ್ನ ಅಣ್ವಸ್ತ್ರ ತಯಾರಿಸುವ ಕಾರ್ಯಕ್ರಮವನ್ನು ಮತ್ತೆ ಆರಂಭಿಸಿತ್ತು. ಕೆಲವೇ ತಿಂಗಳುಗಳಲ್ಲಿ ಆ ಕಾರ್ಯ ಪೂರ್ಣಗೊಳ್ಳುತ್ತಿತ್ತು. ಆ ಬಳಿಕ ಅದರ ವಿರುದ್ಧ ಕ್ರಮ ಕೈಗೊಳ್ಳುವುದು ಕಷ್ಟವಾಗುತ್ತಿತ್ತು. ಈ ಕಾರಣಕ್ಕೆ ಇರಾನ್ ಮೇಲೆ ನಾವು ದಾಳಿ ನಡೆಸಿದೆವು” ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಮಂಗಳವಾರದಂದು ಫಾಕ್ಸ್ ನ್ಯೂಸ್‌ನೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಸರಿ, ಇವರು ಮಾತನಾಡಿದ್ದು ಮಾನವ ಕುಲಕ್ಕೆ ಮಾಡಿದ ದೊಡ್ಡ ಉಪಕಾರದಂತೆ ಭಾಸವಾಗುತ್ತಿದೆ. ಪರಮಾಣು ಅಸ್ತ್ರಗಳು ಮಾನವ ಕುಲದ ಸರ್ವನಾಶಕ್ಕೆ, ಜಗತ್ತಿನ ಜೀವ-ಜಲರಾಶಿಗಳ ಅಂತ್ಯಕ್ಕೆ ಕಾರಣ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಈ ಮಾತುಗಳನ್ನು ಹೇಳಿದ ನೆತನ್ಯಾಹು ಸ್ವತಃ ಪರಮಾಣು ಅಸ್ತ್ರಗಳನ್ನು ಹೊಂದಿರುವ ರಾಷ್ಟ್ರದ ಅಧಿಪತಿ! ತಾನು ಅಂತಹ ಅಸ್ತ್ರಗಳನ್ನು ಹೊಂದುವಾಗ ಎಲ್ಲಿತ್ತು ಇವರ ಮಾನವ ಪ್ರೇಮ? ತಾನು ಮಾತ್ರ ವಿಧ್ವಂಸಕ ಆಯುಧಗಳನ್ನು ಹೊಂದಬಹುದು, ಆದರೆ ನೆರೆಹೊರೆಯವರು ಅದನ್ನು ಬಯಸಲೂ ಬಾರದು ಎಂಬ ಇವರ ನಿಲುವು “ತಾನು ಮಾತ್ರ ಉಣ್ಣಬೇಕು, ಬೇರೆಯವರು ಉಂಡರೆ ತನಗೆ ಇನ್ನದ ಕೊರತೆಯಾಗುತ್ತದೆ” ಎನ್ನುವ ಸ್ವಾರ್ಥದಂತಿದೆ.
ವಿಶ್ವಶಾಂತಿಯ ನೊಬೆಲ್ ಪ್ರಶಸ್ತಿಗಾಗಿ ಹಂಬಲಿಸುತ್ತಿದ್ದ ಮತ್ತೊಬ್ಬ ನಾಯಕ (ಟ್ರಂಪ್) ಇವನ ಜೊತೆಯಾದ. ಜಗತ್ತಿನಲ್ಲಿ ಸುಮಾರು 5,770 ಪರಮಾಣು ಅಸ್ತ್ರಗಳನ್ನು ಹೊಂದಿರುವ ಶಕ್ತಿಶಾಲಿ ದೇಶದ ಅಧ್ಯಕ್ಷ ಇವನು. ‘ಆತ್ಮಸಾಕ್ಷಿ’ ಎಂದರೇನು ಎಂದು ಪ್ರಶ್ನಿಸುವ ಈ ಇಬ್ಬರು ನಾಯಕರು ಇರಾನ್ ಮೇಲೆ ಯುದ್ಧ ಸಾರಿದರು. ಒಂದು ಸಾರ್ವಭೌಮ ರಾಷ್ಟ್ರದ ಪರಮೋಚ್ಚ ನಾಯಕನನ್ನು ಸಂಚಿನಿಂದ ಕೊಂದು ಹಾಕಿದರು.
ಇದನ್ನೂ ಓದಿ : ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..
ಸಮಸ್ಯೆಯ ಪರಿಹಾರಕ್ಕೆ ಯುದ್ಧ ಅಂತಿಮವೇ? ಖಂಡಿತ ಇಲ್ಲ. ಅದು ಸಮಸ್ಯೆಯನ್ನು ಆಳಕ್ಕೆ ಇಳಿಸುವ ಆರಂಭದ ಪ್ರಕ್ರಿಯೆ ಮಾತ್ರ. ಯುದ್ಧವನ್ನು ಆರಂಭಿಸುವುದು ಸುಲಭ, ಆದರೆ ಅದನ್ನು ಗೌರವಯುತವಾಗಿ ಕೊನೆಗೊಳಿಸುವುದು ಅಸಾಧ್ಯದ ಮಾತು. ಸಮುದ್ರದಲ್ಲಿ ಹಡಗುಗಳ ಮೇಲೆ ವಿಮಾನಗಳು ಬಂದವು, ಸರ್ವನಾಶದ ಅಸ್ತ್ರಗಳು ಮೊಳಗಿದವು. ಕ್ಷಣಾರ್ಧದಲ್ಲಿ ಲಕ್ಷಾಂತರ ಕನಸುಗಳು ಮಣ್ಣಲ್ಲಿ ಮಣ್ಣಾದವು. ರಾಜ ಹತನಾದ ನಂತರ ಸೈನಿಕರು ಚಲ್ಲಾಪಿಲ್ಲಿಯಾಗಿ ಓಡಿಹೋಗುವ ದೃಶ್ಯಗಳನ್ನು ನಾವು ಚಲನಚಿತ್ರಗಳಲ್ಲಿ ನೋಡಿರಬಹುದು.
ಆದರೆ ಇದು ಕಲಿಗಾಲ, ಮನೆಗೊಬ್ಬ ನಾಯಕರಿರುವ ಕಾಲ. ಒಬ್ಬ ನಾಯಕ ಹತನಾದ ಕೂಡಲೇ ಮತ್ತೊಬ್ಬ ಎದ್ದು ನಿಂತ – “ಪ್ರತಿಕಾರ ತೀರಿಸಿಯೇ ಸಿದ್ಧ” ಎಂದು ಬಾಂಬ್ ಎಸೆದ. ಈಗ ದೊಡ್ಡಣ್ಣನ ಬಳಿ ರಕ್ಷಾಕವಚಗಳ ಕೊರತೆ ಎದ್ದು ಕಾಣುತ್ತಿದೆ. ಇರಾನ್‌ನ ಬಾಂಬುಗಳು ಒಂಬತ್ತು ರಾಷ್ಟ್ರಗಳ ಬಹುಮಹಡಿ ಕಟ್ಟಡಗಳನ್ನು ನೆಲಸಮ ಮಾಡುತ್ತಿವೆ. ಅರಾಮ್ಕೋ ತೈಲ ಶುದ್ಧೀಕರಣ ಘಟಕಕ್ಕೆ ಸೂಪರ್ ಸಾನಿಕ್ ಬಾಂಬ್ ಬಿದ್ದಿದೆ. ಬೆಂಕಿಯ ಕೆನ್ನಾಲಿಗೆ ಮುಗಿಲು ಮುಟ್ಟುತ್ತಿದೆ. ಗಲ್ಫ್ ರಾಷ್ಟ್ರಗಳು ತಲ್ಲಣಿಸುತ್ತಿವೆ. ಇಸ್ರೇಲ್‌ನ ಹೆಮ್ಮೆಯ ‘ಐರನ್ ಡೋಮ್’ ಕುಸಿದಿದೆ. ರಕ್ತ ಚಿಮ್ಮುತ್ತಿದೆ, ಆರ್ತನಾದ ಮುಗಿಲು ಮುಟ್ಟಿದೆ. ಜಗತ್ತಿನ ಯಾವುದೇ ರಾಷ್ಟ್ರವನ್ನು ನಾನು ಚುಟುಕಿ ಹೊಡೆದಷ್ಟೇ ಸುಲಭವಾಗಿ ಹೊಸಕಿ ಹಾಕಬಲ್ಲೆ ಎಂಬ ಅಹಂಕಾರಕ್ಕೆ ಈಗ ಹುಚ್ಚು ಹಿಡಿದಂತಿದೆ.
ಪರಮಾಣು ಬಾಂಬ್ ಹೊಂದುವುದು ಅಪರಾಧವೆಂದಾದರೆ, ಆ ಅಪರಾಧವನ್ನು ಅಮೆರಿಕ, ರಷ್ಯಾ, ಚೀನಾ, ಬ್ರಿಟನ್, ಫ್ರಾನ್ಸ್, ಭಾರತ, ಪಾಕಿಸ್ತಾನ ಮತ್ತು ಉತ್ತರ ಕೊರಿಯಾಗಳು ಮಾಡಿಲ್ಲವೇ? ಇಸ್ರೇಲ್ ಕೂಡ ಅಷ್ಟೇ ಅಪರಾಧಿಯಲ್ಲವೇ? ಕ್ಷಣಾರ್ಧದಲ್ಲಿ ವಿಶ್ವವನ್ನೇ ಬೂದಿ ಮಾಡುವ ಶಕ್ತಿ ಹೊಂದಿರುವ ನೀವು ಇರಾನಿಗೆ ಯಾವ ನೈತಿಕತೆಯಿಂದ ಬುದ್ಧಿ ಹೇಳುತ್ತಿದ್ದೀರಿ?
ಒಂದು ದೇಶದ ನಾಯಕನ ಆಯ್ಕೆ ಆ ದೇಶದ ನಾಗರಿಕರ ಪರಮಾಧಿಕಾರ. ಅದನ್ನು ಅನ್ಯ ದೇಶದವರು ಪ್ರಶ್ನಿಸಬಾರದು ಅಥವಾ ಹಸ್ತಕ್ಷೇಪ ಮಾಡಬಾರದು ಎಂದು ಅಂತರರಾಷ್ಟ್ರೀಯ ಕಾನೂನು ಹೇಳುತ್ತದೆ. ಆದರೆ ಇಂದು ಆ ಕಾನೂನು ಎಲ್ಲಿದೆ? ‘ಹಲ್ಲಿಲ್ಲದ ಹಾವಾದ’ ವಿಶ್ವಸಂಸ್ಥೆ ಎಲ್ಲಿದೆ? ಶಾಂತಿದೂತರು ಎಲ್ಲಿ ಅಡಗಿದ್ದಾರೆ? ಯುದ್ಧದ ಪರಿಣಾಮ ಘನಘೋರ. ಪೆಟ್ರೋಲ್, ಡೀಸೆಲ್ ಬೆಲೆ ಏರಲಿದೆ, ಅಡುಗೆ ಅನಿಲದ ಕೊರತೆಯಾಗಲಿದೆ, ಆರ್ಥಿಕತೆ ಹಳ್ಳ ಹಿಡಿಯಲಿದೆ. ಈ ಯುದ್ಧದಿಂದ ವಿಶ್ವವು ಅಭಿವೃದ್ಧಿಯಲ್ಲಿ 50 ವರ್ಷಗಳಷ್ಟು ಹಿಂದಕ್ಕೆ ಚಲಿಸಲಿದೆ.






