ಸಂಘಟಿತ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 13 ರನ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತ ನೀಡಿ ಐಪಿಎಲ್ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 8 ವಿಕೆಟ್ ಗೆ 173 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ 8 ವಿಕೆಟ್ ಗೆ 160 ರನ್ ಗಳಿಸಲಷ್ಟೇ ಶಕ್ತವಾಯಿತು.
ಕಠಿಣ ಗುರಿ ಬೆಂಬತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಮಧ್ಯಮ ವೇಗಿ ಹರ್ಷಲ್ ಪಟೇಲ್ ಮಾರಕ ದಾಳಿಗೆ ತತ್ತರಿಸಿ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಅನುಭವಿಸಿತು. ಗ್ಲೆನ್ ಮ್ಯಾಕ್ಸ್ ವೆಲ್ 2 ವಿಕೆಟ್ ಪಡೆದು ಉತ್ತಮ ಬೆಂಬಲ ನೀಡಿದರು.

ಚೆನ್ನೈ ತಂಡಕ್ಕೆ ಋತುರಾಜ್ ಗಾಯಕ್ವಾಡ್ (28) ಮತ್ತು ಡೆವೊನ್ ಕಾನ್ವೆ (56) ಮೊದಲ ವಿಕೆಟ್ ಗೆ 56 ರನ್ ಜೊತೆಯಾಟದ ಮೂಲಕ ಉತ್ತಮ ಆರಂಭ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಮೊಯಿನ್ ಅಲಿ (34) ಆಧರಿಸಿದರೂ ನಾಟಕೀಯ ಕುಸಿತ ಅನುಭವಿಸಿತು.
ಈ ಗೆಲುವಿನೊಂದಿಗೆ ಆರ್ ಸಿಬಿ 11 ಪಂದ್ಯಗಳಲ್ಲಿ 6 ಜಯ ಹಾಗೂ 5 ಸೋಲಿನೊಂದಿಗೆ 12 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದರೆ, ಚೆನ್ನೈ ಸೂಪರ್ ಕಿಂಗ್ಸ್ 10 ಪಂದ್ಯಗಳಲ್ಲಿ 3ರಲ್ಲಿ ಜಯ ಹಾಗೂ 7 ಸೋಲಿನೊಂದಿಗೆ 6 ಅಂಕದೊಂದಿಗೆ 9ನೇ ಸ್ಥಾನಕ್ಕೆ ಕುಸಿಯಿತು.